ADVERTISEMENT

ಪುಟ್ಟಿಯ ಪ್ರಶ್ನೆ

ಚಂದಪದ್ಯ

ಸುಗ್ಗನಹಳ್ಳಿ ಷಡಕ್ಷರಿ
Published 9 ಮಾರ್ಚ್ 2013, 19:59 IST
Last Updated 9 ಮಾರ್ಚ್ 2013, 19:59 IST

ಬಾನಲಿ ಮೂಡುವ ಕಾಮನ ಬಿಲ್ಲಿಗೆ
ಬಣ್ಣವ ಬಳಿದವರಾರಮ್ಮ
ತೇಲುವ ಮೋಡದ ಕಾಲಿಗೆ ವೇಗವ
ಕಲಿಸಿದ ಗುರುವು ಯಾರಮ್ಮ

ಸೂರ್ಯನು ಮಾಡಿದ ತಪ್ಪೇನಮ್ಮ
ಉರಿಯುವ ಕೆಂಡ ಮೈಯೊಳಗೆ
ಚಂದ್ರನು ಅಂತಹ ಜಾಣನು ಏನು
ತಿಳಿ ಬೆಳದಿಂಗಳು ಅವನೊಳಗೆ

ಹೂವಿನ ದಳದಲಿ ಚಂದವನಿಟ್ಟು
ಕಣ್ಮನ ತಣಿಸಿದ ನೋಡಮ್ಮ
ಸಂಜೆಗೆ ಅಂದವ ಹಿಂದಕೆ ಪಡೆದು
ಬಾಡಿಸಲೇಕೆ ಹೇಳಮ್ಮ

ಹಣ್ಣಿನ ಮೈಯಲಿ ಗಾಯವೆ ಇಲ್ಲ
ರುಚಿ ಒಳಗೆ ಹೋದುದು ಹೇಗಮ್ಮ
ಎಲೆಗಳ ಹಸಿರನು ಒಣಗಿದ ಮೇಲೆ
ಹಿಂದಕೆ ಪಡೆಯುವುದಾರಮ್ಮ

ಹಕ್ಕಿಯ ಕೊರಳಲಿ ಇನಿದನಿ ಉಂಟು
ಹುಲಿ ಸಿಂಹಗಳಿಗೆ ಏಕಿಲ್ಲ
ಕುದುರೆ ಜಿಂಕೆಗಳೋಡುವ ಹಾಗೆ
ಆನೆಗೆ ಏಕೆ ಆಗೊಲ್ಲ

ಹರಿಯುವ ಹೊಳೆಯ ನೀರಿಗೆ ಸಕ್ಕರೆ
ಬೆರೆಸಿದ ಅವನು ಶ್ರೀಮಂತ
ಸಾಗರ ನೀರಲಿ ಉಪ್ಪೇ ತುಂಬಿದೆ
ಕಾರಣ ಹೇಳುವ ಏನಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT