ADVERTISEMENT

ಬಡ್ಡಿ ಬಾವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಬಡ್ಡಿ ಬಾವಿ
ಬಡ್ಡಿ ಬಾವಿ   

ಕೇರಿಯ ಮಕ್ಕಳೆಲ್ಲ ಗುಂಪು ಕಟ್ಟಿಕೊಂಡು ಪುಟ್ಟಜ್ಜಿಯ ಮನೆಗೆ ಬಂದರೆಂದರೆ ಅಜ್ಜಿಗೆ ಏನೋ ಪ್ರಶ್ನೆ ಇದೆ ಎಂದೇ ಅರ್ಥ. ‘ಅಜ್ಜಿ, ಅದು ಏಕೆ ಹಾಗೆ, ಇದು ಏಕೆ ಹೀಗೆ’ ಎಂದು ಮಕ್ಕಳು ಕೇಳಿದರೆ ಅದಕ್ಕೆ ಅಜ್ಜಿ ಉತ್ತರಿಸಬೇಕು. ಆವತ್ತು ಕೂಡ ಹಾಗೇ ಆಯಿತು. ಅಜ್ಜಿಯ ಮನೆಗೆ ಸದಾ ಬರುವ ಸದಾನಂದ, ಗಿರಿಜ, ಮಾಲಿನಿ, ವಿಶ್ವನಾಥ, ರೋಹಿಣಿ, ಅಸಾದುಲ್ಲ ಮೊದಲಾದವರೆಲ್ಲ ಗುಂಪು ಕೂಡಿ ಬಂದರು. ಅಜ್ಜಿ ಬಿಡುವಿನಲ್ಲಿ ಇದ್ದವಳು ‘ಬನ್ನಿ ಬನ್ನಿ’ ಎಂದಳು ಎಂದಿನಂತೆ.

‘ಪುಟ್ಟಜ್ಜಿ, ನೀನು ನಮಗೆ ಬಡ್ಡಿ ಬಾವಿ ಬಗ್ಗೆ ಏನೂ ಹೇಳಿಲ್ಲ’ ಎಂದು ತಕರಾರು ತೆಗದಳು ಮಾಲಿನಿ. ಅವಳ ಮಾತಿಗೆ ರೋಹಿಣಿ ದನಿ ಸೇರಿಸಿದಳು.
‘ನೀವು ಕೇಳಲಿಲ್ಲ, ನಾನು ಹೇಳಲಿಲ್ಲ...’ ಎಂದಳು ಅಜ್ಜಿ. ‘ಹಾಗಾದ್ರೆ ಈಗ ಹೇಳು’ ಎಂದು ಉಳಿದವರು ದನಿ ಸೇರಿಸಿದರು.

‘ಕುತ್ಕೊಳ್ಳಿ ಹಾಗಾದ್ರೆ’ ಎಂದಳು ಅಜ್ಜಿ. ಮಕ್ಕಳು ಅಜ್ಜಿ ಮನೆ ಜಗಲಿಯ ಮೇಲೆ ಕುಳಿತವು. ಅಜ್ಜಿ ಕೂಡ ಅಲ್ಲಿಯೇ ಒಂದು ಕಡೆ ತನಗೆ ಒಂದು ಜಾಗ ಮಾಡಿಕೊಂಡು ಕುಳಿತಳು.

ಸಾಗರ ಅನ್ನುವ ಊರ ನಡುವೆ ಒಂದು ಬಾವಿ ಇತ್ತು. ಜನ ಅದನ್ನ ‘ಬಡ್ಡಿ ಬಾವಿ’, ‘ಬಡ್ಡಿ ಬಾವಿ’ ಎಂದು ಕರೆಯುತ್ತಿದ್ದರು. ಏಕೆ ಹೀಗೆ ಕರೆಯುತ್ತಾರೆ ಅನ್ನುವುದು ಬಹಳ ಜನಕ್ಕೆ ಗೊತ್ತಿರಲಿಲ್ಲ. ಮಕ್ಕಳು ಈ ಬಗ್ಗೆ ಪುಟ್ಟಜ್ಜಿಗೆ ಕೇಳಿದರು. ಪುಟ್ಟಜ್ಜಿ ಉತ್ಸಾಹದಿಂದ ಕತೆ ಹೇಳಲು ಕುಳಿತಳು.
‘ಶರಾವತಿಯಿಂದ ಮೊದಲ ಬಾರಿ ಕರೆಂಟು ತಯಾರು ಮಾಡಿದ್ದು ಎಲ್ಲಿ ಹೇಳಿ?’ ಎಂದು ಕೇಳಿದಳು ಅಜ್ಜಿ.

‘ಜೋಗದಲ್ಲಿ...’ ಎಲ್ಲ ಮಕ್ಕಳೂ ಒಂದೇ ದನಿಯಲ್ಲಿ ಉತ್ತರಿಸಿದರು.
‘ಸರಿಯಾಗಿ ಹೇಳಿದಿರಿ... ಈಗ ಬಡ್ಡಿ ಬಾವಿ ಕತೆ ಕೇಳಿ’ ಎಂದು ಅಜ್ಜಿ ತನ್ನ ದನಿ ಬದಲಿಸಿ ರಾಗವಾಗಿ ಕತೆ ಹೇಳತೊಡಗಿದಳು.
    
‘‘ಮೈಸೂರರಸರು ದೇಶವನ್ನು ಆಳುತ್ತಿದ್ದರು ಆಗ
ವಿದ್ಯುತ್ ಶಕ್ತಿಯು ಎಲ್ಲ ಕೆಲಸಕೂ ಬೇಕಾಗಿತ್ತಾಗ
ಶಿವನ ಸಮುದ್ರದಲಿ ಮೊದಲ ಜಲಚಕ್ರವು ತಿರುಗೆ
ಶರಾವತಿಯ ಕಡೆ ತಿರುಗಿ ಸರಕಾರವು ತಾ ನೋಡೆ.

ಕಣಿವೆಯಲಿ ಜಲ ಚಕ್ರಗಳ ಸಾಲು ಸಾಲಾಗಿ ಇರಿಸಿ
ನೀರನು ಹಾಯಿಸಿ ಚಕ್ರವ ತಿರುಗಿಸಿ ಕರೆಂಟು ಉತ್ಪಾದಿಸಿ
ಜೋಗದಲ್ಲಿಯೂ ವಿದ್ಯುತ ಶಕ್ತಿಯು ಹುಟ್ಟಿಕೊಂಡಿತಣ್ಣ
ಕೆಲಸ ನೋಡಲು ಬಂದನಿಲ್ಲಿಗೆ ಮೈಸೂರಿನ ದೊರೆ ಕೃಷ್ಣ’’

ಪುಟ್ಟಜ್ಜಿ ಹಾಡು ನಿಲ್ಲಿಸಿ ನುಡಿದಳು: ‘ಆವತ್ತು ಒಂದು ಪದ್ಧತಿ ಇತ್ತು. ದೊರೆ ಎಲ್ಲಿಗಾದರೂ ಹೊರಟಾಗ ಅವನ ಖಜಾನೆ ದೊರೆಯ ಸಂಗಡ ಹೋಗುತ್ತಿತ್ತು. ಹುಜೂರು ಖಜಾನೆ ಅಂತ ಅದನ್ನ ಕರೆಯುತ್ತಿದ್ದರು. ದೊರೆ ಅವನ ಪರಿವಾರದ ಖರ್ಚಿಗೆ ಹಣ ಈ ತಿಜೋರಿಯಿಂದ ದೊರೆಯುತ್ತಿತ್ತು’.

ADVERTISEMENT

‘‘ಎರಡು ಕುದುರೆಗಳು ಎಳೆಯುವಂತಹಾ ಒಂದು ಗಾಡಿ
ನಡುವೆ ಕೂತಿರುತಿತ್ತು ಕಬ್ಭಿಣದ ಒಂದು ಗಟ್ಟಿ ತಿಜೋರಿ
ಹಿಂದೆ ಮುಂದೆ ಕಾವಲು ಪಡೆಯ ಆಶ್ವಾರೋಹಿಗಳು
ಹಣವನು ಕಾಯುವ ಮೈಸೂರರಸರ ಕಾವಲು ಪಡೆಯು.

ದಾರಿಯಲ್ಲಿ ಕುದುರೆ ಸಾರೋಟಿಗೆ ಏನೋ ಅವಘಡವಾಗೆ
ತಿಜೋರಿ ಉಳಿಯಿತು ದಾರಿಯಲ್ಲಿ ದೊರೆ ಮುಂದೆ ಸಾಗೆ
ಸಾಗರ ತಲುಪಿದ ದೊರೆ ಬರಿಗೈಯಲಿ ಉಳಿದನು ಪಾಪ
ಹಾಲು ಮಜ್ಜಿಗೆಗೂ ಕಾಸಿಲ್ಲ ಯಾರಿಗು ಬೇಡ ಈ ಸಂಕಟ

ಸಾಗರ ಊರಿನ ಶ್ರೀಮಂತನೋರ್ವ ಬಂದನು ಮುಂದೆ
ದೊರೆಗೇ ಹಣವನು ನೀಡಿ ಗೌರವವನ್ನ ಕಾಪಾಡಿ
ಖಜಾನೆ ಬರುವವರೆಗೂ ದೊರೆಯನು ಕಾದನು ಈತ
ಇವನ ಉಪಕಾರ ಗುಣಕೆ ದೊರೆ ಆದನು ಸಂಪ್ರೀತ.

ಖಜಾನೆ ಗಾಡಿಯು ಬಂದಿತು ಕೆಲ ದಿನ ಕಳೆಯುತ್ತಿರಲು
ದೊರೆ ಕರೆ ನೀಡಿದನು ಹಣ ನೀಡಿದ  ಶ್ರೀಮಂತನಿಗೆ
ನೀವು ನೀಡಿದ ಸಹಾಯ ಹಸ್ತಕೆ ಏನು ಬೇಕು ಕೇಳಿ
ವಜ್ರ ವೈಢೂರ್ಯ ರಾಶಿ ರಾಶಿ ಹಣ ಕೊಡುವೆ ಕೇಳಿ’’

ಅಜ್ಜಿ ಕತೆಯನ್ನ ಮುಂದುವರೆಸಿದಳು. ‘ದೊರೆ ಏನು ಬೇಕು ಕೇಳು ಎಂದಾಗ ಸಾಗರದ ಶ್ರೀಮಂತ ಯೋಚನೆ ಮಾಡಿದ. ಹಣ ತನ್ನಲ್ಲಿದೆ. ವಜ್ರ ವೈಢೂರ್ಯ ತನ್ನಲ್ಲಿದೆ. ಬಂಗಾರದ ನಾಣ್ಯ ಬೆಳ್ಳಿ ನಾಣ್ಯವಿದೆ. ಊರಿನಲ್ಲಿ ಒಂದು ನೀರಿನ ಬಾವಿ ಇಲ್ಲ. ಜನ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಶ್ರೀಮಂತ ಕೇಳಿದ:

‘‘ಊರ ಜನ ನೀರಿಲ್ಲದೆ ಬವಣೆ ಪಡುವುದುಂಟು ದೊರೆಯೆ
ಊರ ನಡುವೆ ಬಾವಿಯೊಂದ ತೆಗೆಸಿ ಕೊಡಿ ದೊರೆಯೆ
ಹೊರಗಿನಿಂದ ಕೆಲಸಗಾರರನ್ನ ಕರೆಸಿ ಬಾವಿ ತೋಡಿಸಿ
ಊರ ಜನರ ನೀರ ಬವಣೆಯನು ದೂರ ಮಾಡಿಸಿ.

ಜೋಗಕ್ಕೆ ಕರೆಂಟು ಬಂತು ಅನ್ನುವಾಗಲೇ
ಬಾವಿಯಲ್ಲಿ ಜುಳುಜುಳು ಎಂದು ನೀರು ಬಂದಿತಣ್ಣ
ಊರ ಜನ ಕರೆದರದನು ‘ಬಡ್ಡಿ ಬಾವಿ’ ಎಂದು
ಕೊಟ್ಟ ಸಾಲಕೆ ಬಡ್ಡಿಯಂತೆ ಬಂದ ಬಾವಿಯನ್ನ’’

ಅಜ್ಜಿ ಹೇಳಿದ ಕತೆ ಕೇಳಿದ ಮಕ್ಕಳು ಸಂತಸ ಪಟ್ಟವು. ಊರಿನ ಒಂದು ರಹಸ್ಯ ಬಯಲಾದದ್ದು ಅವರಿಗೆ ಸಂತಸ ತಂದಿತು. ಸಂಭ್ರಮದಿಂದ ಎದ್ದು ‘ಅಜ್ಜಿ ಬರತೇವೆ, ಅಜ್ಜಿ ಬರತೇವೆ’ ಎಂದು ಹೇಳಿ ಮಕ್ಕಳೆಲ್ಲ ತಂತಮ್ಮ ಮನೆಗಳಿಗೆ ಹಿಂತಿರುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.