ADVERTISEMENT

ಬಾಯಾರಿದ ಬಯಲಿನ ಕನಸುಗಾರ

ಕೆ.ನರಸಿಂಹ ಮೂರ್ತಿ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಕಳೆದ ಒಂದೂವರೆ ದಶಕದಿಂದ ರಾಜ್ಯದ ಬಯಲುಸೀಮೆ ಜಿಲ್ಲೆಗಳು ಮತ್ತು ಪಶ್ಚಿಮಘಟ್ಟದ ಜಿಲ್ಲೆಗಳ ಜನರ ಬಾಯಲ್ಲಿ ಅದೆಷ್ಟು ಬಾರಿ ಜಿ.ಎಸ್‌. ಪರಮಶಿವಯ್ಯ ಅವರ ಹೆಸರು ಬಂದುಹೋಗಿದೆಯೋ ಲೆಕ್ಕ ಮಾಡುವುದು ಕಷ್ಟ. ಬಾಯಾರಿದ ಬಯಲು ಸೀಮೆಯ ಜನರ ಪ್ರೀತಿ, ಒತ್ತಾಸೆ ಹಾಗೂ ವಿರೋಧ ಮತ್ತು ಸಾಕಷ್ಟು ನೀರುಳ್ಳ ಪಶ್ಚಿಮಘಟ್ಟದ ಜನರ ಸಿಟ್ಟು–ಸೆಡವುಗಳಿಗೆ ಈ ಜೀವ ಏಕಕಾಲದಲ್ಲಿ ಗುರಿಯಾಗಿತ್ತು.

ಶಾಶ್ವತ ನೀರಾವರಿ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದವರು ಯಾರು ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಮಳೆ, ನೀರಿನ ಕೊರತೆಯಿಂದ ನಿರಂತರ ಬರಗಾಲಕ್ಕೆ ತುತ್ತಾದ ಬಯಲುಸೀಮೆ ಜಿಲ್ಲೆಗಳಿಗೆ ತಮಗೇನು ಬೇಕು ಎನ್ನುವುದನ್ನು ಸ್ಪಷ್ಟಪಡಿಸಿದವರು ಪರಮಶಿವಯ್ಯ. ಶಾಶ್ವತ ನೀರಾವರಿ ಎಂದರೆ ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವುದು ಎನ್ನುವುದೇ ಈ ಜಿಲ್ಲೆಗಳ ಬಹುತೇಕರ ಗ್ರಹಿಕೆ. ಅದಕ್ಕೆ ಪರ್ಯಾಯವೇ ಇಲ್ಲ ಎನ್ನುವ ರೀತಿಯಲ್ಲಿ ಈ ಜಿಲ್ಲೆಗಳಲ್ಲಿ, ವರದಿ ಜಾರಿಗಾಗಿ ಆಗ್ರಹಿಸಿ ಒಂದೂವರೆ ದಶಕದಿಂದ ಹೋರಾಟಗಳು, ಬೆಂಗಳೂರಿಗೆ ಕಾಲ್ನಡಿಗೆ ಜಾಥಾಗಳು, ರಸ್ತೆ ತಡೆ, ಬಂದ್‌ನಂಥ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಪರಮಶಿವಯ್ಯ ವರದಿಯ ಒಂದು ಭಾಗವೇ ಆಗಿರುವ ಎತ್ತಿನಹೊಳೆ ಯೋಜನೆಯು ಪ್ರಬಲ ವಿರೋಧದ ನಡುವೆಯೂ ಚಿಕ್ಕಬಳ್ಳಾಪುರದಲ್ಲಿ ಉದ್ಘಾಟನೆಯಾಗಿದೆ. ‘ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ತರುವವರೆಗೂ ಸಾಯುವುದಿಲ್ಲ’ ಎಂಬ ಸಂಕಲ್ಪದ ಮಾತುಗಳನ್ನು ಪ್ರತಿ ಕಾರ್ಯಕ್ರಮ, ಸಭೆಗಳಲ್ಲಿ ಪದೇ ಪದೇ ಹೇಳುತ್ತಿದ್ದ ಪರಮಶಿವಯ್ಯ ಏಕಕಾಲಕ್ಕೆ ಯುವಕರನ್ನು ಮತ್ತು ನಿವೃತ್ತರನ್ನು ನಾಚಿಸುವಷ್ಟು ಚಟುವಟಿಕೆ ಮತ್ತು ಶಿಸ್ತಿನಿಂದ ಜೀವನ ನಡೆಸಿದವರು. ಅಂಥ 97ರ ಹಿರಿಯಜ್ಜನ ಸಂಕಲ್ಪಬಲವು ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಮುಂದೆ ಸೋಲು ಒಪ್ಪಿಕೊಂಡಿದೆ.

ತಮ್ಮ ಹೋರಾಟಗಳಿಗೆ ನೈತಿಕ ಶಕ್ತಿ ಎಂಬಂತೆ ಹೋರಾಟಗಾರರು ಪರಮಶಿವಯ್ಯನವರನ್ನು ಕಲ್ಪಿಸಿಕೊಳ್ಳುತ್ತಿದ್ದರು. ಹೋರಾಟಗಳಲ್ಲಿ ಭೌತಿಕವಾಗಿ ಪರಮಶಿವಯ್ಯ ಇಲ್ಲದಿದ್ದರೂ, ಹೋರಾಟಗಾರರ ಭಾವಕೋಶಗಳಲ್ಲಿ ಅವರು ಸದಾ ಕಾಲ ಮಿಡಿಯುವ ಪ್ರಾಣವಾಗಿದ್ದರು. ಈಗಲೂ ಇದ್ದಾರೆ ಎಂಬುದೇ ಹಲವರ ಬಲವಾದ ನಂಬಿಕೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಹುಟ್ಟಿದರೂ ತಮ್ಮ ವರದಿಯಿಂದ ಇಡೀ ರಾಜ್ಯದ ಜನರ ಆಲೋಚನೆಗಳನ್ನು ಪ್ರಭಾವಿಸಿದ ಈ ‘ನೀರಾವರಿ ತಜ್ಞ’ ರಾಜ್ಯದ ಮುಖ್ಯ ಎಂಜಿನಿಯರ್‌ ಆಗಿ ನಿವೃತ್ತಗೊಂಡ ಬಳಿಕ ಮೂರು ದಶಕಗಳ ಕಾಲ ನೀರು ತರುವ ಪ್ರಯತ್ನದಲ್ಲೇ ಜೀವ ಸವೆಸಿದರು. ನಿವೃತ್ತರಾದ ಬಳಿಕ ಮನೆ ಸೇರುವ, ಮೊಮ್ಮಕ್ಕಳೊಡನೆ ಕಾಲ ಕಳೆಯುವ ಆರಾಮ ಕುರ್ಚಿ ಶೈಲಿಯ ಜೀವನದೆಡೆಗೆ ಸುಮ್ಮನೇ ನಡೆದು ಬಿಡುವ ಹಿರಿಯ ನಾಗರಿಕರಿಗೂ ಪರಮಶಿವಯ್ಯ ದೊಡ್ಡಪಾಠದಂತೆ ಬದುಕಿದವರು.

ಯಾವುದೇ ವೃತ್ತಿಪರರು ಎಂದಿಗೂ ನಿವೃತ್ತರಾಗುವುದಿಲ್ಲ ಎಂಬ ಮಾತಿನಂತೆ ಬದುಕಿದ ಕಾರಣಕ್ಕೇ ಅವರು ವಿಶಿಷ್ಟವಾದ ವರದಿಯೊಂದನ್ನು ಬಯಲು ಸೀಮೆಯ ಜಿಲ್ಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲು ಸಾಧ್ಯವಾಯಿತು. ವೃತ್ತಿಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ, ‘ಪನಿಶ್‌ಮೆಂಟ್ ಟ್ರಾನ್ಸ್‌ಫರ್‌’ ಆದೇಶದಂತೆ ಮಂಗಳೂರಿಗೆ ಹೋಗದೇ ಇದ್ದಿದ್ದರೆ ತಾವು ವರದಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರೇ ಒಮ್ಮೆ ನಗುತ್ತಾ ಹೇಳಿದ್ದರು.

ವರ್ಗಾವಣೆಯನ್ನು ಸಕಾರಾತ್ಮಕವಾಗಿ ಪರಿಭಾವಿಸಿದ್ದು ಮತ್ತು ಎಲ್ಲಿ ನಿಂತರೂ, ತನ್ನ ನೆಲದ ಸಮಸ್ಯೆಗಳ ಬಗ್ಗೆ ಕಾಳಜಿಯಿಂದ ಯೋಚಿಸುವುದನ್ನು ವೃತ್ತಿಯಲ್ಲಿ ರೂಢಿಸಿಕೊಂಡಿದ್ದು ಅವರ ವ್ಯಕ್ತಿತ್ವದ ಅನನ್ಯತೆ ಎಂದೇ ಹೇಳಬೇಕು. ಪ್ರಯಾಣದ ಕಷ್ಟವನ್ನು ತಪ್ಪಿಸಿಕೊಳ್ಳಲು ಮತ್ತು ಆರಾಮವಾಗಿರಲೆಂದು ತವರು ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ನಿರಂತರ ಪರದಾಡುವ ಬಹುತೇಕ ಸರ್ಕಾರಿ ಅಧಿಕಾರಿ–ನೌಕರರು ಪರಮಶಿವಯ್ಯ ಅವರಿಂದ ಕಲಿಯಬೇಕಾದ್ದು ಬಹಳ ಇದೆ.

ವಿಪರ್ಯಾಸ ಎಂದರೆ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಬೆಂಗಳೂರಿನಿಂದ ನಿತ್ಯವೂ ಪ್ರಯಾಣಿಸುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಅವರು ವಾಸವಿರುವಂತೆ ಮಾಡುವ ಪ್ರಯತ್ನಗಳು ಮಾತ್ರ ಸಫಲವಾಗಿಲ್ಲ.
ಈ ಅಜ್ಜನಿಗೇನು ಗೊತ್ತು?

ಪರಮಶಿವಯ್ಯನವರ ವರದಿ ಜಾರಿಯ ವಿಚಾರದಲ್ಲಿ, ಇದುವರೆಗಿನ ಆಡಳಿತಾರೂಢ ಸರ್ಕಾರಗಳು, ಜಿಲ್ಲೆಗಳ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ಇದ್ದ ಮತ್ತು ಈಗಲೂ ಇರುವ ಕಷ್ಟ ಏನೆಂದರೆ– ವರದಿಯ ಪರವಾಗಿ ಮಾತನಾಡಬೇಕೋ ಅಥವಾ ವಿರುದ್ಧವಾಗಿ ಮಾತನಾಡಬೇಕೋ ಎನ್ನುವುದು. ಏಕೆಂದರೆ, ಹೇಗೆ ಮಾತನಾಡಿದರೆ ಓಟುಗಳು ದೊರಕಬಹುದು ಅಥವಾ ಕೈತಪ್ಪಬಹುದು ಎಂಬುದೇ ಇಲ್ಲಿನ ಪ್ರಮುಖ ಲೆಕ್ಕಾಚಾರ. ಹೀಗಾಗಿಯೇ ಪರಮಶಿವಯ್ಯನವರ ವರದಿ ಎರಡು ನೆಲೆಯಲ್ಲಿ ಸದಾ ವ್ಯಾಖ್ಯಾನಗೊಂಡು ಘರ್ಷಣೆಗೆ ಒಳಗಾಗುತ್ತಲೇ ಇದೆ.

ಜನರ ನೆಲೆಯಲ್ಲಿ ಇದು ನಿಜವಾಗಿಯೂ ನೀರಿನ ಸಮಸ್ಯೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ನೆಲೆಯಲ್ಲಿ ಇದು ಮತ ಗಿಟ್ಟಿಸುವ ಅಥವಾ ಕಳೆದುಕೊಳ್ಳುವ ಸಮಸ್ಯೆ. ಬಯಲುಸೀಮೆಯ ಜಿಲ್ಲೆಗಳ ಜನ ಈಗ ಯಾವ ಮಟ್ಟಕ್ಕೆ ಬಂದಿದ್ದಾರೆ ಎಂದರೆ.

ಪರಮಶಿವಯ್ಯ ವರದಿಯಾದರೂ ಸರಿ, ಇನ್ಯಾವುದೇ ವರದಿಯಾದರೂ ಸರಿ, ನಮಗೆ ನೀರು ಕೊಡಿ ಎಂದು ಕೇಳುತ್ತಿದ್ದಾರೆ. ಯಾವ ನೀರು? ಎಲ್ಲಿಂದ ತರುವುದು? ಇಂಥ ಕಡೆ, ಇಂಥ ಯೋಜನೆಯಿಂದ ತಂದುಕೊಡುತ್ತೇವೆ ಎಂದರೆ ತಮ್ಮ ಅಧಿಕಾರ ಸ್ಥಾನಗಳ ಮೇಲೆ ಯಾವ ಬಗೆಯ ಪ್ರಭಾವ–ಪರಿಣಾಮ ಬೀರಬಹುದು ಎನ್ನುವುದು ರಾಜಕಾರಣಿಗಳ ಲೆಕ್ಕಚಾರ. ಹೀಗಾಗಿ ನೀರು ಇಲ್ಲಿ ಜೀವ ಜಲ ಎಂಬುದಕ್ಕಿಂತಲೂ, ಕೇವಲ ಬೇಡಿಕೆಯ ಮತ್ತು ರಾಜಕೀಯ ಲೆಕ್ಕಚಾರದ ವಸ್ತುವಾಗಿ ಮಾರ್ಪಟ್ಟಿದೆ. ಪರಮಶಿವಯ್ಯ ಅವರ ವರದಿ ಈ ಎರಡು ವಾಸ್ತವಗಳ ಮಧ್ಯೆ ಸಿಲುಕಿದೆ.

ಕೋಲಾರ–ಚಿಕ್ಕಬಳ್ಳಾಪುರ ವಿಭಜನೆಯಾಗುವ ಮುಂಚೆ, 2001ರಲ್ಲಿ ‘ಎಸ್‌ಎಫ್‌ಐ’ ಮೊದಲ ಬಾರಿಗೆ ಶಾಶ್ವತ ನೀರಾವರಿ ಹೋರಾಟವನ್ನು ರೂಪಿಸಿ ಚಿಕ್ಕಬಳ್ಳಾಪುರದಲ್ಲಿ ಮೊದಲ ಸಮಾವೇಶವನ್ನು ನಡೆಸಿದ ಸಮಯದಲ್ಲಿ ಹಾಜರಿದ್ದ ಪರಮಶಿವಯ್ಯ ಅವರ ಮುಂದೆಯೇ ಅಂದಿನ ಕೆಲವು ಜನಪ್ರತಿನಿಧಿಗಳು, ಪಶ್ಚಿಮ ಘಟ್ಟ ಎಲ್ಲಿ? ಬಯಲುಸೀಮೆಗಳೆಲ್ಲಿ? ಈ ಅಜ್ಜನಿಗೇನು ಗೊತ್ತು? ಎಂದು ವರದಿಯನ್ನು ಖಂಡಿಸಿದ್ದರು.

ಆಗ 83ರ ಅಜ್ಜನಾಗಿದ್ದ ಪರಮಶಿವಯ್ಯ, ಅದಾಗಿ 14 ವರ್ಷ ಕಾಲದ ನಂತರವೂ– ಸಾವಿನವರೆಗೂ– ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಹೋದುದು ಅವರ ಆತ್ಮಸ್ಥೈರ್ಯವನ್ನು ಸೂಚಿಸುವಂತಿದೆ.
ಈಗ ಪರಮಶಿವಯ್ಯನವರಿಲ್ಲ. ಆದರೆ, ಅವರ ಕನಸು ಮತ್ತು ಯೋಜನೆಗಳು ಜನರ ಮನಸ್ಸಿನಲ್ಲಿ ಅಂತರ್ಜಲದಂತೆ ಉಳಿದಿವೆ.

ನಡೆಯಲಿ ಮುಕ್ತ ಚರ್ಚೆ...
ಪರಮಶಿವಯ್ಯ ಅವರು 91ನೇ ವಯಸ್ಸಿನಲ್ಲಿದ್ದಾಗ, ಅವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗ್ರಹಿಸಲು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ಕುರಿತು 2010ರ ಜ.11ರಂದು ಕೋಲಾರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಸಮಾವೇಶ ನಡೆಯಿತು. ಅಲ್ಲಿ ಮಾತನಾಡಿದ ಅವರು, ‘ನನ್ನ ವರದಿಯನ್ನು ತಜ್ಞರ ಮುಂದೆ ಇಡಿ. ಅವರು ಅದರ ಲೋಪ–ದೋಷಗಳನ್ನು ಪಟ್ಟಿ ಮಾಡಲಿ. ಗುಣಾತ್ಮಕ ಅಂಶಗಳನ್ನು ಆಧರಿಸಿಯಾದರೂ ಯೋಜನೆ ರೂಪಿಸಿ ಎಂದು ರಾಜ್ಯ ಸರ್ಕಾರಗಳನ್ನು ಕೋರುತ್ತಲೇ ಇದ್ದೇನೆ.

ಆದರೆ ಯಾವ ಸರ್ಕಾರವೂ ಗಮನ ಹರಿಸುತ್ತಿಲ್ಲ’ ಎಂದು ವಿಷಾದಿಸಿದ್ದರು. ಅವರ ದಟ್ಟ ವಿಷಾದ ಸ್ಥಾಯಿಯಾಗಿಯೇ ಉಳಿದಿದೆ. ಏಕೆಂದರೆ ಅವರ ವರದಿ ಅನುಷ್ಠಾನದ ಕುರಿತು ಮುಕ್ತ ಚರ್ಚೆ ನಡೆಯುವ ಅವಕಾಶ ಇದುವರೆಗೂ ನಿರ್ಮಾಣವಾಗಿಲ್ಲ. ಪರಮಶಿವಯ್ಯ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು ಎನ್ನುವ ಬಯಲುಸೀಮೆ ಜಿಲ್ಲೆಗಳ ಆಗ್ರಹ ಹಾಗೂ ವರದಿಯನ್ನು ಜಾರಿಗೊಳಿಸಬಾರದು ಎಂಬ ಪಶ್ಚಿಮಘಟ್ಟ ಜಿಲ್ಲೆಗಳ ಆಗ್ರಹ ಪ್ರತ್ಯೇಕವಾಗಿಯೇ ಉಳಿದುಬಿಟ್ಟಿದೆ. ನೀರಿಗಾಗಿ ಯುದ್ಧ, ತ್ಯಾಗ–ಬಲಿದಾನದ ಪರಿಭಾಷೆಗಳೂ ಬಳಕೆಯಾಗುತ್ತಿವೆ.

ಎರಡೂ ಕಡೆಯವರ ಪಕ್ಷಪಾತದ ಆಗ್ರಹಗಳನ್ನು ಮತಬ್ಯಾಂಕ್‌ ನೆಲೆಯಲ್ಲಷ್ಟೇ ಗ್ರಹಿಸುವ ರಾಜಕಾರಣದ ಕಾರ್ಯಚಟುವಟಿಕೆಗಳು ಜಾರಿಯಲ್ಲಿ ಇರುವಾಗಲೇ ಪರಮಶಿವಯ್ಯ ಕೊನೆಯುಸಿರೆಳೆದಿದ್ದಾರೆ. ಇನ್ನಾದರೂ, ಅವರ ವರದಿ ಜಾರಿಯ ಸಾಧ್ಯತೆ, ಅನುಕೂಲ, ಅನನುಕೂಲಗಳ ಕುರಿತು ಮುಕ್ತ ಚರ್ಚೆಗಳು ನಡೆಯಬೇಕಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.