ADVERTISEMENT

ಬೆಕ್ಕಿಗಾಯಿತು ತಕ್ಕಶಾಸ್ತಿ

ಚಂದ ಪದ್ಯ

ವಿ.ಪ್ರಾಣೇಶರಾವ್
Published 21 ಫೆಬ್ರುವರಿ 2015, 19:30 IST
Last Updated 21 ಫೆಬ್ರುವರಿ 2015, 19:30 IST
ವಿಜಯಕುಮಾರಿ
ವಿಜಯಕುಮಾರಿ   

ಚಳಿ ಚಳಿ ಎಂದಿತು
ಇಲಿ ಬಿಲದೊಳಗೆ
ಮಿಯಾಂವ್‌ ಮಿಯಾಂವ್‌
ದನಿ ಕೇಳಿಸಲು
ಜ್ವರವೇ ಬಂದಿತು
ಇಲಿ ಮರಿಗೆ!

ಡಾಕ್ಟರು ಬಂದರು
ಕ್ಯಾಟ್‌ವಾಕಿನಲಿ
ಜತೆಯಲಿ ಬಂದರು
ನರಸಮ್ಮ.
ಇಲಿಯನು ಪರೀಕ್ಷಿಸಿ
ಫೀಸನು ಕೇಳಲು
ಕೈ ತಿರುವಿದಳು
ಇಲಿಯಮ್ಮ!

ಕನ್ಸಲ್ಟೇಷನ್‌
ಕೊಡದಿದ್ದಾಗ
ಇಲಿ ಮರಿಯನೆ
ಗುಳುಂ ಎನಿಸಿದರು!
ಢರ್ರನೆ ಡೇಗುತ
ಬೆಕ್ಕಪ್ಪ ಡಾಕ್ಟರು
ಭರ್ರನೆ ಕಾರಲಿ
ಚಲಿಸಿದರು!

ADVERTISEMENT

ದುಃಖದಿ ಮುಳುಗಿದ
ಇಲಿಯಮ್ಮ
ಡಾಕ್ಟರ ಷಾಪಿಗೆ
ಓಡಿದಳು.
ಸ್ಟೆಥಾಸ್ಕೋಪಲಿ
ಕತ್ತನು ಬಿಗಿಯುತ
ಡಾಕ್ಟರ್ ಮೋರೆಯ
ಪರಚಿದಳು.

ರಾಮಾರಕುತವು
ಸುರಿಯುತ್ತಿರಲು
ಸತ್ತೆನೊ ಕೆಟ್ಟನೊ
ಎನ್ನುತ್ತ
ಬೆಕ್ಕಪ್ಪ ಡಾಕ್ಟರು
ಪೊಲೀಸ್‌ ಠಾಣೆಗೆ
ಓಡಿದರು.

ಎದ್ದೆನೊ ಬಿದ್ದನೊ
ಎನ್ನುತ್ತ
ಇಲಿಯೂ ಠಾಣೆಯ
ಸೇರಿದಳು!

ಖಾಕಿಯ ಖದರಲಿ
ಕುಳಿತಿದ್ದರು ಬಿಮ್ಮನೆ
ಇಲಿಯಾಸ್‌ ಹೆಸರಿನ
ಇನ್‌ಸ್ಪೆಕ್ಟರು.
ಇಲಿಯಮ್ಮನ ರೋದನ
ಕೇಳಿದ ಅವರು
ಅಲ್ಲಿಯೇ ಹಾಗೇ
ಕರಗಿದರು.
ಕಾಂಪನ್ಸೇಷನ್‌
ಕೊಡಿಸುವೆನೆನುತ
ಬೆಕ್ಕನು ಜೈಲಿಗೆ
ತಳ್ಳಿದರು!
ಕಾಂಪನ್ಸೇಷನ್‌
ಕೈಸೇರುತಲಿ
ಥಕ ಥೈ
ಕುಣಿದಳು
ಇಲಿಯಮ್ಮ
ಇಲಿಯಪ್ಪನ
ಜತೆ ಸೇರಿದ
ಅವಳು
ತುಪು ತುಪು
ಮರಿಗಳ ಹಾಕಿದಳು!
ಒಂದು .... ಎರಡು....
ಎಂದೆಣಿಸಿದ ಜನರು
ಅಯ್ಯಯ್ಯೋ
ಎಂದರಚಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.