ADVERTISEMENT

ಮಕ್ಕಳ ಪ್ರೀತಿಯ ಕವಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST
ಡಿ.ಎಂ. ಘನಶ್ಯಾಮ
ಡಿ.ಎಂ. ಘನಶ್ಯಾಮ   

ಎಚ್‌.ಎಸ್‌. ವೆಂಕಟೇಶಮೂರ್ತಿ ನಮ್ಮ ನಡುವಣ ಅತ್ಯುತ್ತಮ ಕವಿಗಳಲ್ಲೊಬ್ಬರು. ನಾಲ್ಕು ದಶಕಗಳ ಕವಿತೆಯ ಹಾದಿಯಲ್ಲಿ ತಮ್ಮದೇ ಆದ ಕಾವ್ಯ ಮೀಮಾಂಸೆಯೊಂದನ್ನು ರೂಪಿಸಿಕೊಂಡು, ವ್ರತದಂತೆ ಕಾವ್ಯಧಾನ್ಯದಲ್ಲಿ ಮುಳುಗಿದ ಕವಿ ಅವರು. ಎಚ್ಚೆಸ್ವಿ ಮಕ್ಕಳಿಗೂ ಪ್ರಿಯವಾದವರು.

ಕುವೆಂಪು, ಶಿವರಾಮ ಕಾರಂತ, ಜಿ.ಪಿ. ರಾಜರತ್ನಂ ಅವರಂಥ ಹಿರಿಯರು ಚಿಣ್ಣರಿಗಾಗಿ ಬರೆಯುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಮಕ್ಕಳ ಸಾಹಿತ್ಯ ರಚಿಸಿದರು. ಈ ಸಾಲಿಗೆ ಸೇರಿದ ಎಚ್ಚೆಸ್ವಿ ಕನ್ನಡದ ಮಕ್ಕಳಿಗೆಂದು ವಿಶಿಷ್ಟವಾದ ಕಥೆ, ಕವಿತೆ, ನಾಟಕಗಳನ್ನು ರಚಿಸಿದ್ದಾರೆ. ಅವರ ‘ಹಕ್ಕಿಸಾಲು’ ಸಂಕಲದ ಪದ್ಯಗಳು ಕನ್ನಡದ ಅತ್ಯುತ್ತಮ ಶಿಶುಗೀತೆಗಳ ಸಾಲಿಗೆ ಸೇರಿದವು. ‘ಹೂವಿನಶಾಲೆ’, ‘ಸೋನಿ ಪದ್ಯಗಳು’ ಪುಸ್ತಕಗಳು ಕೂಡ ಮಕ್ಕಳು ಹಾಡಿಕೊಂಡು ಖುಷಿಯಾಗಲು ಹೇಳಿ ಮಾಡಿಸಿದ ರಚನೆಗಳನ್ನು ಹೊಂದಿವೆ.

ಎಚ್ಚೆಸ್ವಿ ಅವರ ‘ಚಿನ್ನಾರಿಮುತ್ತ’ ಸಿನಿಮಾ ಆಗಿ ಮಕ್ಕಳನ್ನು ರಂಜಿಸಿತು. ಇಂಥ ಮಕ್ಕಳ ಪ್ರೀತಿಯ ಕವಿಗೆ, ಮಕ್ಕಳನ್ನು ಪ್ರೀತಿಸುವ ಕವಿಗೆ, 2013ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ‘ಬಾಲ ಸಾಹಿತ್ಯ ಪುರಸ್ಕಾರ’ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಒಟ್ಟು ಕೆಲಸಕ್ಕೆ ಈ ಪ್ರಶಸ್ತಿ ಸಂದಿದೆ. ಬೊಳುವಾರ ಮಹಮದ್ ಕುಂಞಿ, ಪಳಕಳ ಸೀತಾರಾಮಭಟ್ಟರ ನಂತರ ಈ ಗೌರವಕ್ಕೆ ಪಾತ್ರರಾಗುತ್ತಿರುವ ಮೂರನೆಯವರು ಎಚ್ಚೆಸ್ವಿ. ಈ ಪ್ರಶಸ್ತಿಯ ಪುಳಕಕ್ಕೆ ಸ್ಪಂದನದ ರೀತಿಯಲ್ಲಿ, ಪಂಪನ ‘ಆದಿಪುರಾಣ’ದ ಭರತ–ಬಾಹುಬಲಿಯ ಅಣ್ಣತಮ್ಮಂದಿರ ಕಥೆಯನ್ನು ಮಕ್ಕಳಿಗೆಂದು ಹೊಸಗನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಮೊದಲು ಎಚ್ಚೆಸ್ವಿ ಸರಳಗನ್ನಡದಲ್ಲಿ ರಚಿಸಿದ ‘ಪಂಪಭಾರತ’ದ ಕೆಲವು ಭಾಗಗಳು ‘ಸಾಪ್ತಾಹಿಕ ಪುರವಣಿ’ಯಲ್ಲೇ ಪ್ರಕಟಗೊಂಡಿದ್ದವು. ಈಗ ‘ಅಣ್ಣತಮ್ಮಂದಿರ ಕಥೆ’ಯ ಸರದಿ. ಪ್ರಶಸ್ತಿಗೆ ಭಾಜನರಾಗಿರುವ ಕವಿಯನ್ನು ಅಭಿನಂದಿಸುವ ಅರ್ಥಪೂರ್ಣ ವಿಧಾನ, ಆ ಕವಿಯ ಸಾಹಿತ್ಯವನ್ನು ಓದುವುದು. ಹಾಗಾಗಿ, ಇಲ್ಲಿನ ಕಾವ್ಯ ಭಾಗದ ಓದು ಎಚ್ಚೆಸ್ವಿ ಅವರಿಗೆ ಸಲ್ಲುವ ಅಭಿನಂದನೆಯೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.