ಘಲ್ಲು ಘಲ್ಲು ಗೆಜ್ಜೆ ಕಾಲು
ಪುಟ್ಟ ದೇವತೆ
ಮಲಗು ಮಗಳೆ ಹೇಳಲೇನು
ಚಿಕ್ಕದೊಂದು ಕಥೆ?
ಚಂದಮಾಮ ಕಿಟಕಿಯಲ್ಲಿ
ಇಣುಕುತಿರುವ ನೋಡು
ನಗುತಲಿಹವು ಕೈಯ ಬೀಸಿ
ನಕ್ಷತ್ರದ ದಂಡು
ಕಾಗೆ, ಗುಬ್ಬಿ ನಿನ್ನ ಬಳಗ
ಸೇರಿಕೊಂಡು ಗೂಡು
ಮಮ್ಮು ಉಂಡು ಮಲಗಿಯಾಯ್ತು
ಹೊದಿಕೆ ಹೊದ್ದುಕೊಂಡು
ಮನೆಯ ಕಾಯುತಿರುವ ಟಾಮಿ
ಕಣ್ಣು ಬಿಟ್ಟುಕೊಂಡು
ಕಳ್ಳ ನೋಡಿ ಓಡುತಾನೆ
ಹೆದರಿ ನಡುಗಿಕೊಂಡು
ಸದ್ದಿಲ್ಲದೆ ಮೊಗ್ಗು ಬಿರಿದು
ಅರಳಲಿರುವ ಮೋಡಿ
ಸುಳಿದು ಬರುವ ತಂಗಾಳಿಗೆ
ಹೂಗಂಧದ ಜೋಡಿ
ನಿನ್ನ ಉಸಿರು, ನನ್ನ ಉಸಿರು
ಒಂದಾಗುತ ಕೂಡಿ
ನಿದ್ದೆ ತೇಲಿ ಬರುತಲಿದೆ
ಕಣ್ಣ ರೆಪ್ಪೆ ಬಾಡಿ...
ನೀನು ಬೇರೆ, ಮಗನು ಬೇರೆ
ಎಲ್ಲ ಭ್ರಮೆಯು ಮಗಳೇ..
ನೀನೆ ಅವನು, ಅವನೆ ನೀನು
ನೀವೆ ನಮ್ಮ ನಾಳೆ
ನೀನಿಲ್ಲದೆ ಜಗವೆಲ್ಲಿದೆ
ಎಲ್ಲಿದೆ ಈ ಸೃಷ್ಟಿ?
ನಿನ್ನಿಂದಲೆ ಬದುಕಲ್ಲಿದೆ
ಸಂತಸ, ಸಂತುಷ್ಟಿ..
ಘಲ್ಲು ಘಲ್ಲು ಗೆಜ್ಜೆ ಕಾಲು
ಪುಟ್ಟ ದೇವತೆ
ಅಂಧಕಾರ ನೀಗಿಸುತ್ತ
ಬೆಳಕನೀವ ಹಣತೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.