
ಮಿಂಚುಮಿಂಚಿತು
ಗುಡುಗು ಗುಡುಗಿತು
ಸಿಡಿಲು ಸಿಡಿಯಿತು ಒಮ್ಮೆಲೆ!
ಗಾಳಿ ಬೀಸಿತು
ಮರವು ಅದುರಿತು
ಎಲೆಯು ಉದುರಿತು ಕೂಡಲೆ!
ತಟ್ಟ ತಟ ಪಟ
ಹನಿಯು ಸಿಡಿಯಿತು
ಕತ್ತಲಾಯಿತು ಆಗಲೆ!
ರಭಸ ಹೆಚ್ಚಿದ
ಮಳೆಯು ನುಡಿಯಿತು
ನೀರೆಲ್ಲ ಸುರಿಸುವ ಈಗಲೆ!
ಓಡುತೋಡುತ
ಬಂದ ಹಸುವು
ಬಾಲವನೆತ್ತಿ ನೆಗೆಯಿತು ಚಂಗನೆ!
ಮರಗಳೆಲೆಗಳ
ನಡುವಿನಿಂದ
ಕಾಗೆ ಹಾರಿತು ಪುರ್ರನೆ!
ರಸ್ತೆಯಂಚಲಿ
ಸ್ಕೂಟರೋಡಿತು
ನೀರು ಸಿಡಿಸುತ ಚಿಲ್ಲನೆ!
ಇದಕೆ ಬೆದರಿದ
ನಾಯಿ ನಿಂತಿತು
ಮೈ ಒದರುತ ಪಟಪಟನೆ!
ಕೊಡೆಯ ಹಿಡಿದ
ಜನರನೇಕರು
ನಡೆದು ಹೋದರು ಬೇಗನೆ!
ತನ್ನ ಪಾಡಿಗೆ
ಸುರಿಯುತ್ತಿತ್ತು
ಬಿಡದೆ ಮಳೆಯು ಸುಮ್ಮನೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.