ಶಕುಂತಲಾ ದೇವಿ ಹುಟ್ಟಿದ್ದು ಎಲ್ಲಿ, ಯಾವಾಗ?
ನವೆಂಬರ್ 4, 1929ರಲ್ಲಿ ಬೆಂಗಳೂರಿನ ಬ್ರಾಹ್ಮಣ ಕುಟುಂಬವೊಂದರಲ್ಲಿ ಅವರು ಜನಿಸಿದರು.
ಯಾವ ವಯಸ್ಸಿನಲ್ಲಿ ಅವರ ಪ್ರತಿಭೆ ಬೆಳಕಿಗೆ ಬಂತು?
ಅವರ ತಂದೆ ಜಾದೂಗಾರ. ಮಗಳಿಗೆ ವಯಸ್ಸು ಮೂರು ತುಂಬಿದಾಗಲೇ ಅವಳ ಬುದ್ಧಿಮತ್ತೆಯನ್ನು ತಿಳಿದುಕೊಂಡರು. ಇಸ್ಪೀಟ್ ಎಲೆಗಳಲ್ಲಿ ಆಡುವಾಗ ಶಕುಂತಲಾ ಚುರುಕುತನ ಕಂಡು ತಂದೆಗೆ ತಮ್ಮ ಮಗಳು ಅಸಾಮಾನ್ಯಳಾಗುತ್ತಾಳೆ ಎನಿಸಿತ್ತಂತೆ. ಆರನೇ ವಯಸ್ಸಿನಲ್ಲೇ ಮೈಸೂರು ವಿಶ್ವವಿದ್ಯಾಲಯ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಶಕುಂತಲಾ ದೇವಿ ತಮ್ಮ ಗಣಿತ ಪ್ರತಿಭೆಯನ್ನು ಪ್ರದರ್ಶಿಸಿದ್ದರು.
ಅವರ ಶೈಕ್ಷಣಿಕ ಹಿನ್ನೆಲೆ ಏನು?
ಅಧಿಕೃತ, ಸಾಂಪ್ರದಾಯಿಕ ಶಿಕ್ಷಣವನ್ನೇನೂ ಅವರು ಪಡೆಯಲಿಲ್ಲ. ಶಾಲಾ ಶುಲ್ಕವನ್ನು ಭರಿಸಲು ಕುಟುಂಬದವರಿಗೆ ಸಾಧ್ಯವಾಗದ ಕಾರಣ ಓದನ್ನು ಮೊಟಕುಗೊಳಿಸಬೇಕಾಯಿತು.
ಮರೆಯಲಾಗದ ಅವರ ಸಾಧನೆಗಳು ಯಾವುವು?
1977ರಲ್ಲಿ ಅಮೆರಿಕದ ವಿಶ್ವವಿದ್ಯಾಲಯದಲ್ಲಿ 201 ಅಂಕಿಗಳುಳ್ಳ ಸಂಖ್ಯೆಯ 23ನೇ ವರ್ಗಮೂಲವನ್ನು 50 ಸೆಕೆಂಡ್‌ಗಳಲ್ಲಿ ಕಂಡುಹಿಡಿದು ಕಂಪ್ಯೂಟರನ್ನೂ ಹಿಂದಿಕ್ಕಿದರು. `ಯೂನಿವ್ಯಾಕ್' ಕಂಪ್ಯೂಟರ್ ಅದೇ ಲೆಕ್ಕ ಮಾಡಲು 12 ಹೆಚ್ಚುವರಿ ಸೆಕೆಂಡ್‌ಗಳನ್ನು ತೆಗೆದುಕೊಂಡಿತ್ತು.
1995ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಕ್ಕೆ ಶಕುಂತಲಾ ದೇವಿ ಹೆಸರು ಸೇರಿತು. ಲಂಡನ್‌ನ ಇಂಪೀರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ 13 ಅಂಕೆಗಳ ಯಾವ ಎರಡು ಸಂಖ್ಯೆಯನ್ನು ಕೊಟ್ಟರೂ ನಿಖರವಾಗಿ ಗುಣಾಕಾರ ಮಾಡಿ ಅವರು ಉತ್ತರ ಕೊಟ್ಟಿದ್ದರು. 1980ರಲ್ಲಿ ಅವರು ಈ ಸಾಧನೆ ಮಾಡಿದ್ದು ಕೇವಲ 28 ಸೆಕೆಂಡ್‌ಗಳಲ್ಲಿ. ಶತಮಾನದ ಯಾವುದೇ ದಿನಾಂಕ ಹೇಳಿದರೂ ಅದು ಯಾವ ವಾರ ಎಂದು ಥಟ್ಟನೆ ಹೇಳುವಷ್ಟು ಚುರುಕುಮತಿ ಅವರು.
ಗಣಿತ ಕ್ಷೇತ್ರದಲ್ಲಿ ಇನ್ನೂ ಏನೆಲ್ಲಾ ಮಾಡಿದರು?
ಗಣಿತದ ಕುರಿತು ವಿದ್ಯಾರ್ಥಿಗಳಲ್ಲಿ ಇರುವ ಸಹಜ ಭಯವನ್ನು ಹೋಗಲಾಡಿಸುವುದು ಅವರ ಉದ್ದೇಶವಾಗಿತ್ತು. ಗಣಿತದ ಸಂಖ್ಯಾ ವಿಜ್ಞಾನವನ್ನು ಸರಳವಾಗಿ ಅರ್ಥವಾಗುವಂತೆ ಮಾಡಲು ಅವರು ಕೆಲವು ಪುಸ್ತಕಗಳನ್ನು ಬರೆದರು. `ಪಜಲ್ಸ್ ಟು ಪಜಲ್ ಯು', `ಫನ್ ವಿತ್ ನಂಬರ್ಸ್', `ಅವೇಕನ್ ದಿ ಜೀನಿಯಸ್ ಇನ್ ಯುವರ್ ಚೈಲ್ಡ್', `ಬುಕ್ ಆಫ್ ನಂಬರ್ಸ್', `ಇನ್ ದಿ ವಂಡರ್‌ಲ್ಯಾಂಡ್ ಆಫ್ ನಂಬರ್ಸ್' ಇವು ಅವರು ರಚಿಸಿದ ಕೆಲವು ಕೃತಿಗಳು. ಜ್ಯೋತಿಷ್ಯಶಾಸ್ತ್ರ ಹಾಗೂ ಪಾಕಶಾಸ್ತ್ರದ ಕುರಿತೂ ಅವರು ಕೆಲವು ಕೃತಿಗಳನ್ನು ಬರೆದರು.
ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲೆಂದು ಅವರು `ಶಕುಂತಲಾ ದೇವಿ ಫೌಂಡೇಷನ್ ಪಬ್ಲಿಕ್ ಟ್ರಸ್ಟ್' ಸ್ಥಾಪಿಸಿದರು. ತಮ್ಮದೇ ಹೆಸರಿನಲ್ಲಿ ಗಣಿತ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬುದು ಅವರ ಕನಸಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.