ADVERTISEMENT

ಮುಂಗಾರಿನ ಮಿಂಚು

ಚಂದ ಪದ್ಯ!

ವಿ.ಪ್ರಾಣೇಶರಾವ್
Published 10 ಆಗಸ್ಟ್ 2013, 19:59 IST
Last Updated 10 ಆಗಸ್ಟ್ 2013, 19:59 IST

ಬಿಳಿಕರಿ ನೀಲಿಯ
ಹಾಳೆಯ ಮೇಲೆ
ಏನದು ಬಿಳಿಬಿಳಿ
ಗೋಚಲು ಗೀಚು!

ಫಳಫಳ ಹೊಳೆಯುತ
ಹಾವಿನ ಹಾಗೆ
ಹರಿದಾಡಿದೆ
ಮುಂಗಾರಿನ ಮಿಂಚು!

ಬಾನಿನ ಉದ್ದಕು
ಮೋಡದ ಮರೆಯಲಿ
ಮೆರೆದಾಡಿದೆ
ವಿದ್ಯುತ್ ಕೋಲ್ಮಿಂಚು!

ADVERTISEMENT

ಮುಗಿಲಲಿ ಬಾನಲಿ
ಭೂಮಿಯ ಮೇಲೆ
ವಿದ್ಯುತ್ ವಿಸರ್ಜನೆಯ
ಬೆಳಕಿನ ಲೀಲೆ!

ಮಿಂಚದು ಮಿಂಚಿದೆ
ಬಾನಂಚಿನಲಿ
ನವಿಲದು ಕುಣಿದಿದೆ
ಗರಿಗೆದರಿ!

ಮಿಂಚಿನ ವೇಗದಿ
ಜಿಂಕೆಗಳೋಡಿವೆ
ಮಿಂಚಿಗು ಗುಡುಗಿಗು
ಬಲುಬೆದರಿ!

ಇರುಳಲಿ ಹೊಳೆದಿದೆ
ಬಾನಿನ ಅಂಚು
ಬಡವಗು ದಾರಿಯ
ತೋರುವ ಸಂಚು!

ಪರಿಸರ ನಾಶದಿ
ಬೆದರಿಹ ರೈತನು
ಬಿರುಮಳೆಗಂಜುತ
ಬಳಲಿಹನು!

ಹಿತಮಿತ ಮಳೆಯದು
ಸುರಿಯಲು ರೈತನು
ಆನಂದಿಸುವನು
ಇಂಚಿಂಚು!

ಅನ್ನದಾತನು
ರೈತನು ನಲಿದರೆ
ಸುಭಿಕ್ಷ ಕಾಲವು
ಎಲ್ಲೆಲ್ಲು!
-ವಿ. ಪ್ರಾಣೇಶರಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.