ADVERTISEMENT

ಮುಲಾಮು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   

ಮೋಡ ಕವಿದ ಅನ್ನುವುದಕ್ಕಿಂದ ಮಂಕುಕವಿದ ಆಕಾಶ ಅನ್ನುವುದೇ ವಾಸಿ. ಎಲ್ಲ ಇದ್ದೂ ಮಧ್ಯಂತರ ವಯಸ್ಸಿನಲ್ಲಿ ಧುತ್ತನೆ ಆವರಿಸಿ ಕಾಡಿಸುವ ಒಂಟಿತನ. ಎಲ್ಲದಕ್ಕೂ ಪ್ರತಿಸ್ಪಂದಿಸೆಂದು ಪೀಡಿಸುವ ಜಗತ್ತು. ಇದ್ದಕಿದ್ದಂತೆ ಮಳೆ. ಕಣ್ಣಿಗೆ ಬಡಿಯುತ್ತಿರುವ ಹನಿಗಳು. ದೃಷ್ಟಿ ಮಂದವಾಗುತ್ತಿತ್ತು. ಭಂಡತನ ಹೆಚ್ಚು ಕಾಲ ಬಾಳಲಿಲ್ಲ. ಅನಾವಶ್ಯಕ ಅವಸರ ಬೇಡ ಎಂದೆನಿಸಿ ಸುರಂಗ ಬಂದೊಡನೆ ಬೈಕು ನಿಲ್ಲಿಸಿದೆ. ಒದ್ದೆಯಾಗಿ ನಡುಗುತ್ತಿದ್ದರು ಮಂದಿ. ಹಳದಿ ಬಲ್ಬುಗಳು ಸುರಂಗವನ್ನು ಹೊಂಬಣ್ಣಕ್ಕೆ ತಿರುಗಿಸಿದ್ದವು. ತುಸು ಒಳಗೆ ಸರಿದು ನಿಂತೆ. ರಸ್ತೆಯ ಕಾವು ವಾಹನಗಳ ಕಾವು ಶರೀರಕ್ಕೆ ತಗುಲಿ ಬೆಚ್ಚಗೆನಿಸಿತು.

ಅಲ್ಲೆ, ಒಳಗೆ, ಸ್ಕೂಟಿಗೆ ಒರಗಿ ಪಾರಿಜಾತ ನಿಂತಿದ್ದಳು. ಸಣ್ಣಹುಡುಗಿಯೊಬ್ಬಳು ಅವಳ ಸೀರೆಯ ಮಡಿಲೊಳಗೆ ಮುಖ ಹುದುಗಿಸಿ ಅವಳನ್ನು ಅಪ್ಪಿದ್ದಳು.

ಐದುವರ್ಷಗಳ ನಂತರದ ಮುಖಾಮುಖಿ. ಬೆಳಕಿನ ಪ್ರಭೆಗೆ ಹೊಳೆಯುತ್ತಿರುವ ಪಾರಿ. ಮುಂಗುರುಳಿನ ಅಂಚಿನಲ್ಲಿ ಮಿನುಗುತ್ತಿರುವ ಮಳೆ ಹನಿಗಳು. ಮತ್ತು ಜೀವಕ್ಕೆ ತಂಪೆರೆಯುವ ಅವಳ ಶಾಶ್ವತ ಮುಗುಳ್ನಗು. ನೆನಪಿನಲೆಗಳು ರಭಸದಿಂದ ದಾಳಿ ಮಾಡಿದವು. ಅವಳ ನಗುವನ್ನು ಅನುಭವಿಸಲೂ ಆಗದೆ, ದಾಳಿಯಿಂದ ಸಾವರಿಸಿಕೊಳ್ಳಲೂ ಆಗದೆ ಗಂಟಲು ಗದ್ಗದಿತವಾಯಿತು. ಉಗುಳು ನುಂಗಿದೆ. ಸುತ್ತ ಜನ. ಕಣ್ಣು ತುಂಬಿಕೊಳ್ಳುತ್ತಿವೆ.

ADVERTISEMENT

ಕನ್ನಡಕವನ್ನು ಒರೆಸಿಕೊಂಡೆ. ಪಾರಿಯ ನೋಟದಲ್ಲಿ ಯಾವುದೇ ಆಶ್ಚರ್ಯದ ಸೂಚನೆಯಿಲ್ಲ. ನೆನ್ನೆ ಮೊನ್ನೆ ಭೇಟಿಯಾಗಿದ್ದಂತೆ. ಎರಡೇ ಕ್ಷಣ. ದೃಷ್ಟಿ ಬೇರ್ಪಟ್ಟು ಕರ್ಚೀಫಿನಿಂದ ಹುಡುಗಿಯ ತಲೆ ಒರೆಸಲು ಮುಂದಾದಳು. ಮಳೆ ನಿಲ್ಲುತ್ತಿತ್ತು. ಜನವಿರಳವಾದರು. ‘ಬನ್ನಿ ಮನೆಗೆ’ ಕರೆದೆ. ಅವಳು ಸ್ಕೂಟಿ ಹತ್ತಿದಳು. ಪುಟ್ಟ ಹೆಜ್ಜೆಗಳ ಹುಡುಗಿ ಸ್ಕೂಟಿ ಹತ್ತಿ ಅವಳ ಕಾಲ ಸಂದಿಯಲ್ಲಿ ನಿಂತುಕೊಂಡಳು. ನಾನು ಮುಂದೆ ನಿಧಾನವಾಗಿ ಚಲಿಸಿದೆ. ಪಾರಿ ಹಿಂಬಾಲಿಸಿದಳು. ಸುರಂಗದಿಂದ ಹೊರಬಂದು ನೋಡಿದಾಗ ಪಾರಿ ಮುಖ ಮಾಸಿತ್ತು. ಕಣ್ಣ ಸುತ್ತ ಕಪ್ಪುಕುಳಿ.

***
ಐದು ವರ್ಷ. ಎಲ್ಲವೂ ಅಂದುಕೊಂಡಂತೆ ಜರುಗಿದ್ದರೆ, ಈ ಹೊತ್ತು ಪಾರಿ ನನ್ನ ಹಿಂದೆ ಕೂತಿರುತ್ತಿದ್ದಳು. ಮಧ್ಯದಲ್ಲಿ ಹುಡುಗಿ ಇರುತ್ತಿದ್ದಳು. ಶತಮಾನಗಳು ಉರುಳಿದರೂ ಏನೂ ಬದಲಾಗದ ಎಲ್ಲರ ಬಾಳಿನಲ್ಲಾಗುವ ಅದೇ ರೋದನ ರಸಹೀನ ಪುನಾರಪಿ ಕಥನ. ಅಣ್ಣ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ. ತುಂಬು ಕುಟುಂಬ. ಒಂದೇ ಮೊಬೈಲಿನಲ್ಲಿ ನೀಲಿಚಿತ್ರಗಳನ್ನು ಹಂಚಿಕೊಂಡು ನೋಡುತ್ತಿದ್ದ ನನ್ನಣ್ಣ ರಾತ್ರೋರಾತ್ರಿ ಖಳನಾಗಿಬಿಟ್ಟ. ತನ್ನ ‘ಹುಡುಗರನ್ನು’ ಛೂಬಿಟ್ಟು ಪಾರಿಯ ಊರಿನಲ್ಲಿ ದಾಂದಲೆ ಎಬ್ಬಿಸಿದ. ಹೆದರಿಸಿದ, ಬೆದರಿಸಿದ. ತನ್ನ ಕುಟುಂಬದ ‘ಶಕ್ತಿ’ಯನ್ನು ಪ್ರದರ್ಶಿಸುತ್ತ ವಿಜೃಂಭಿಸಿದ. ಕೈಕಾಲು ಕತ್ತರಿಸುವವರೆಗೂ ಮಾತುಹರಿಸಿದ.

ಒಂದೇ ಮನೆ, ದೊಡ್ಡಮನೆ. ನಾಲ್ವರು ಅಣ್ಣ–ತಮ್ಮಂದಿರು. ಎಲ್ಲರ ಮಕ್ಕಳನ್ನು ತಮ್ಮ ಮಕ್ಕಳಂತೆಯೆ ಕಾಣುತ್ತ ಎಂದೂ ಭೇದಭಾವ ಮಾಡದೆ, ಒಂದೇ ಬೇರಿನ ರೆಂಬೆಗಳಂತೆ ನಾವು ಮರದ ಪುಷ್ಪಗಳಂತೆ, ಅಪ್ಪ, ಚಿಕ್ಕಪ್ಪ ದೊಡ್ಡಪ್ಪ ನಮ್ಮನ್ನುಸಾಕಿ ಸಲಹಿದ್ದರು. ತಮಗೆ ಹುಟ್ಟಿದ ಮಕ್ಕಳು ಓದಿನಲ್ಲಿ ಹಿಂದೇಟು ಹಾಕಿದರೆಂದು ತಾರತಮ್ಯ ತೋರದೆ ಅವರನ್ನು ಬೇಸಾಯಕ್ಕಿಳಿಸಿ ತಮ್ಮ ರೆಟ್ಟೆ ಸವೆಸಿ ನಮ್ಮನ್ನು ಕಾಲೇಜಿನಲ್ಲಿ ಓದಿಸಿದ್ದರು. ಕುಲಕ್ಕೆ ಹೊರಗಿನ ಹೆಣ್ಣು ನಮ್ಮ ಮನೆಯ ಹೊಸ್ತಿಲು ತುಳಿಯುತ್ತಾಳೆಂಬ ಸುದ್ದಿ ಕಿವಿಗೆ ಬಡಿದ ತಕ್ಷಣವೆ, ಎಲ್ಲಿ ಹೋಯಿತು ಪಿತೃಕಾಳಜಿ, ಎಲ್ಲಿ ಹೋಯಿತು ಮಾತೃಪ್ರೇಮ, ಯಾವ ಗಟಾರದಲ್ಲಿ ಕೊಚ್ಚಿಹೋದವು ಕೈಯ್ಯಾರೆ ತಿನಿಸಿದ ತುತ್ತುಗಳು, ಹೊತ್ತು ನಡೆದ ಹೆಗಲುಗಳು, ಏಕ್‌ಧಮ್ ಇಬ್ಭಾಗವಾಗುವ ಮಾತನಾಡಿದರಲ್ಲ.

ಇನ್ನು ಅಪ್ಪ, ಈ ರಾದ್ಧಾಂತವನ್ನೆಲ್ಲ ಕಣ್ಣಾರೆ ಕಾಣಬೇಕಾಯಿತಲ್ಲ ಎಂದು ಎದೆ ಒಡೆದುಕೊಂದು, ಆಸ್ಪತ್ರೆಯಲ್ಲಿ ದಾಖಲಾಗಿ, ಅದು ಖಂಡಿತ ನಟನೆಯಲ್ಲ. ಯಾವ ಮೂಲೆಯಲ್ಲಿ ಅಡಗಿತ್ತೋ ಮಾರಿ ಹೃದಯಬೇನೆ, ಆ ಕ್ಷಣದಲ್ಲಿ ನನ್ನ ನೆಪದಲ್ಲಿ ಹೊರಬಿತ್ತು. ಜೀವವನ್ನೆ ನುಂಗಿತು. ಕಣ್ಣೀರಿನ ಕೋಡಿ ಹರಿಸಿದಳು ಅಮ್ಮ. ಅಲ್ಲಿಗೆ ಮುಗಿಯುತು ಎಲ್ಲವೂ. ತಂದೆಯನ್ನು ನುಂಗಿಕೊಂಡ ಅಪರಾಧೀ ಭಾವ. ಮನೆಯಲ್ಲಿ ವಿಷಯ ತಿಳಿಸಿ ಒಪ್ಪಿಗೆ ಪಡೆದು ಬರುತ್ತೇನೆಂದು ಮಾತುಕೊಟ್ಟು ಬಂದು ವಾರವಾಗಿತ್ತಷ್ಟೆ. ಅದೇ ಕಡೆಯ ಮುಖ ದರ್ಶನ. ತದನಂತರ ಪಾರಿ ಏನಾದಳೆಂದು ತಿಳಿದುಕೊಳ್ಳುವ, ಅದನ್ನು ಎದುರಿಸುವ ಧೈರ್ಯವೇ ಬರಲಿಲ್ಲ.

***
ಮೃದುಲ ಬಾಗಿಲು ತೆಗೆದವಳೇ, ‘ಹೇ... ಪಾರಿ?’ ಎಂದುಬಿಟ್ಟಳು. ಅವಳ ನೆನಪು ತೀಕ್ಷ್ಣ. ಸಮಯಪ್ರಜ್ಞೆಯೂ ಕೂಡ. ಎಂದೋ ಹೇಳಿದ್ದ ಕಥೆ, ಎಂದೋ ತೋರಿಸಿದ್ದ ಫೋಟೊ. ತನ್ನ ಕಡೆಯ ಸಂಬಂಧಿಯೇನೋ ಎಂಬಂತೆ ‘ಅಲಲೆ... ಬಾಲೆ ಪುಟ್ಟಾ’ ಎಂದು ಹುಡುಗಿಯನ್ನು ಮುದ್ದುಗರೆಯುತ್ತ ಎತ್ತಿಕೊಂಡು ಕೆನ್ನೆಗೆ ಒತ್ತಿಕೊಂಡಳು. ಮಗು ‘ಆಂತೀ...’ ಎಂದು ಮುತ್ತು ಕೊಟ್ಟಿತು. ಮೂವರಿಗೂ ಮೂವರ ಪರಿಚಯ ಮೊದಲೇ ಇದ್ದಂತೆ. ಹೆಂಗಸರಿಗೆ ಈ ಸ್ವಭಾವ ಎಲ್ಲಿಂದ ಬರುತ್ತದೆ?

ಮೃದುಲಳನ್ನು ಕಂಡರೆ ನನಗೆ ಒಮ್ಮೊಮ್ಮೆ ಅಸೂಯೆ ಮಗದೊಮ್ಮೆ ಅಸಹ್ಯ. ಅದು ಬಿಟ್ಟರೆ ಬಹಳ ಮುದ್ದು. ಗಡತ್ತಾಗಿ ತಿನ್ನುತ್ತಾಳೆ. ಢರ‍್ರನೆ ತೇಗುತ್ತಾಳೆ. ಮಲಗಲು ಕಣ್ ಮುಚ್ಚಿದಳೆಂದರೆ ಶವಗಳನ್ನೂ ನಾಚಿಸುತ್ತಾಳೆ. ಬೆಳಿಗ್ಗೆ ಎದ್ದಾಗ ಒಣಗಿದ ಕಟ ಬಾಯಿಯ ಜೊಲ್ಲನ್ನು ಮುದ್ದುಮುದ್ದಾಗಿ ಒರೆಸಿಕೊಂಡು ದಿನಚರಿ ಆರಂಭಿಸುತ್ತಾಳೆ. ಅವಳು ನಮ್ಮ ಅಮ್ಮನ ಕಡೆ ಸಂಬಂಧಿ. ಅಪ್ಪ ಹೋದ ಕೆಲವೇ ದಿನಗಳಲ್ಲಿ ನನ್ನೆದುರು ಲಕ್ಷಣವಾಗಿ ಸೀರೆ ಹುಟ್ಟು, ಹೂ ಮುಡಿದು ನಾಚಿ ನಿಂತಿದ್ದಳು ಅವರ ಮನೆಯಲ್ಲಿ. ನಮ್ಮ ಸಮಸ್ತ ಪೈಕಿಯಲ್ಲಿ ಮನೆಮಗಳೆಂದೇ ಖ್ಯಾತಿ ಪಡೆದಿದ್ದಳು. ಅದಾದ ಕೆಲವೇ ದಿನಗಳಲ್ಲಿ ದೊಡ್ಡವರ ಸಿನಿಮೀಯ ನಾಟಕದ ಅಂಗವಾಗಿ ನಾವು ದೇವಸ್ಥಾನದಲ್ಲಿ ಖಾಸಗಿಯಾಗಿ ಭೇಟಿಯಾಗಿದ್ದೆವು.

ಅಲ್ಲೇ ಅವಳು ನನ್ನನ್ನು ದಂಗುಬಡಿಸಿದ್ದು. ಮೈಗೆ ಮೈ ಒತ್ತಿ ಕುಳಿತಿದ್ದಳು. ಅರಳಿದ ಮಲ್ಲಿಗೆಯಂತೆ ನಗೆ ಸೂಸುತ್ತ ‘ನಾನೂ ಎಲ್ಲ ಆಟ ಆಡಿದೀನಿ. ಲವ್ ಮ್ಯಾರೇಜಿಗೆ ಮನೇಲಿ ಒಪ್ಪಲ್ಲಾಂತಲೇ ಯಾವನಿಗೂ ಕಟ್ಟು ಬೀಳಲಿಲ್ಲ’ ಎನ್ನುತ್ತ ನನ್ನನ್ನು ಬೆಚ್ಚಿ ಬೀಳಿಸಿದ್ದಳು. ಪ್ರಾಮಾಣಿಕತೆ. ‘ಆಟ’. ಅವಳ ಪರಿಭಾಷೆಯಲ್ಲಿ ನನ್ನದೂ ‘ಆಟ’ವೇ. ಅವಳನ್ನು ನೋಯಿಸದೆ ನನ್ನ ಅಂತರಂಗವನ್ನು ತೆರೆದಿಡಬೇಕಿದ್ದಲ್ಲಿ ನಾನೂ ಕೂಡ ‘ಆಟ’ವಾಡಿದ್ದೆ ಎಂದೇ ಹೇಳಬೇಕಿತ್ತು. ನಮ್ಮ ಸಂಭಾಷಣೆ ಅದೇ ಧಾಟಿಯಲ್ಲಿ ಮುಂದುವರಿದಿತ್ತು.

ಊರಿಗೆ ಹೋದರೆ ಸೀರೆ ಉಡುತ್ತಾಳೆ. ಬೀಚಿಗೆ ಹೋದಾಗ ಅಕ್ಷರಶಃ ಬಿಕಿನಿ ತೊಟ್ಟು ಸೂರ್ಯನಿಗೆ ಬೆನ್ನು ಕೊಟ್ಟು ಮರಳಿನ ಮೇಲೆ ಉರುಳುತ್ತಾಳೆ. ಸ್ವತಃ ಸೂರ್ಯನೇ ಅವಳ ಮಾಟಕ್ಕೆ ಕಂಗೆಟ್ಟು ಭರಪೂರ ಮೈ ನೆಕ್ಕುತ್ತಾನೆ. ನಾನು ವೀಕ್ಷಕನಾಗಿರುತ್ತೇನೆ. ಮನೆಯಲ್ಲಿ ಮುದ್ದೆ ಹೊಡೆಯುತ್ತಾಳೆ. ಸಬ್ ವೇನಲ್ಲಿ ಸ್ಯಾಂಡ್ ವಿಚ್ ಜಡಿಯುತ್ತಾಳೆ. ಬಿಯರ್ ಸವಿದಾಗ ಮೇಲೇರಿ ಸವಾರಿ ಮಾಡುತ್ತಾಳೆ. ತಾನೂ ಬೆವೆತು ನನ್ನನ್ನೂ ಬೆವೆಸುತ್ತಾಳೆ. ಅವಳ ಜೀವನ ಪ್ರೀತಿಯೆ ಒಂದು ಸೋಜಿಗದ ಸಂಗತಿ.

***
ಶರಣ್ಯಳನ್ನು ಮೃದುಲ ತನ್ನ ಕಂಕುಳಲ್ಲಿ ಎತ್ತಿಕೊಂಡು ಅಡುಗೆ ಕೋಣೆಯಲ್ಲಿ ಚರಪರಾಂತ ಸುಡುತ್ತಿದ್ದಾಳೆ. ಮೀನಿನ ವಾಸನೆ ಘಮ್ಮೆಂದು ನಮ್ಮ ಮೂಗಿಗೆ ಬಡಿಯುತ್ತಿದೆ. ಇವನು ಯಾವಾಗ ಮಾಂಸಾಹಾರಿಯಾದ? ಬಹುಶಃ ಮೃದುಲ ಕಲಿಸಿರಬೇಕು. ನನಗೆ ಮಾಂಸ ಖಾದ್ಯ ಅದರಲ್ಲೂ ಮೀನೆಂದರೆ ಇಷ್ಟವೆಂದು ಅವಳಿಗೆ ಹೇಗೆ ಗೊತ್ತು? ಇವನೇ ಹೇಳಿರುತ್ತಾನೆ. ಇನ್ನೂ ಏನೇನು ಹಂಚಿಕೊಂಡಿದ್ದಾನೋ.

ಹುಳಿ ಪೆಟ್ಟು ತಿಂದ ಶಿಲೆಯಂತಾಗಿದ್ದಾನೆ. ಕಣ್ಣೆತ್ತಿ ನೋಡುವ ಧೈರ್ಯವಿಲ್ಲ. ಅದು ನನಗೆ ಅನುಕೂಲವೇ. ಎಷ್ಟು ಸಾಧ್ಯವೋ ಅಷ್ಟು ಈ ಐದು ವರ್ಷಗಳಲ್ಲಿ ಕಳೆದುಕೊಂಡಿದ್ದಲ್ಲವನ್ನು ಮರಳಿ ಪಡೆಯುವಷ್ಟು ಅವನನ್ನು ನೋಡಬೇಕು. ಅಂಗುಲಂಗುಲವೂ ಬಿಡದೆ. ಅಲ್ಲಲ್ಲಿ ಕೂದಲು ಬೆಳ್ಳಗಾಗಿವೆ. ಹಣೆಯ ಮೇಲೆ ಯಾವುದೋ ಹೊಸ ಮಚ್ಚೆ. ಕಣ್ಣ ಪಾಪೆಯ ಕೆಳಗೆ ಸುಕ್ಕು ಮೂಡುತ್ತಿವೆ. ತುಟಿ ಕಪ್ಪಗೆ. ಕೆನ್ನೆ ಊದಿಕೊಂಡಿವೆ. ಚಟಗಳು ಹೆಚ್ಚಾಗಿವೆ ಅಂತ ಕಾಣುತ್ತೆ. ನಾನಿದ್ದಿದ್ದರೆ… ಛೇ ಅದೆಲ್ಲ ಈಗೇಕೆ.

ಮನೆಯಲ್ಲಿ ಇವರಿಬ್ಬರೇ ಇರುವಂತಿದೆ. ಮಕ್ಕಳು? ಊರಿನಲ್ಲಿ ದೊಡ್ಡ ಮನೆತನ. ಈ ನಗರದಲ್ಲಿ ಉಸಿರಾಡಲೂ ಅಸ್ಪದವಿಲ್ಲದ ಮನೆಯಲ್ಲಿ ಅದು ಹೇಗೆ ಜೀವನ ಸಾಗಿಸುತ್ತಿದ್ದಾನೋ ಏನೋ. ಇಲ್ಲಿ ಜೀವಕ್ಕೆ ಬೇಕಾದ ಗಾಳಿಯಿಲ್ಲ. ಅಲ್ಲಿ ವ್ಯಕ್ತಿತ್ವದ ವಿಕಸನಕ್ಕೆ ಅಗತ್ಯವಾದ ಗಾಳಿಯಿಲ್ಲ. ಇರುವ ಆಸ್ತಿಯನ್ನೆ ಪಳಗಿಸಿದ್ದರೆ ಕೋಟಿ ಕೋಟಿ ದುಡಿಯುತ್ತಿದ್ದ. ಇಲ್ಲಿ ಉದ್ಯೋಗವೊಂದಕ್ಕೆ ಜೋತುಬಿದ್ದು ಹೀಗೆ ಬದುಕುತ್ತ.

ಏಕೆ ಇಂಥ ಅಪರಾಧಿ ಭಾವ ಶರಣ್? ಬೇಡ. ನಿನ್ನನ್ನು ನೋಡಿದರೇ ಗೊತ್ತಾಗುತ್ತದೆ, ಶಿಕ್ಷೆಯನ್ನು ನೀನಾಗೆ ಮೇಲೆಳೆದುಕೊಂಡು ಅನುಭವಿಸಿದ್ದೀ. ಸಾಕು ಬಿಡು ಇನ್ನು. ನಿಲ್ಲಿಸು ನಿನ್ನೆನ್ನೆ ನೀನು ದಂಡಿಸಿಕೊಳ್ಳುವುದನ್ನು. ನಾವು ಬಲುದೂರ ಸಾಗಿ ಬಂದಿದ್ದೇವೆ ಶರಣ್. ಹಾಗೆನ್ನಲೂ ಆಗುತ್ತಿಲ್ಲವಲ್ಲ. ಕೇವಲ ಐದು ವರ್ಷ. ಮೊನ್ನೆ ಮೊನ್ನೆ ನಡೆದಂತಿದೆ. ನೆನಪುಗಳೆಲ್ಲ ಇನ್ನೂ ಹಸಿ ಹಸಿ. ಇಷ್ಟು ಬೇಗ ನಾವು ಎದುರಾಗಬಾರದಿತ್ತೇನೋ.

ನೀನು ತಾನೆ ಯಾವ ತಪ್ಪು ಮಾಡಿದೆ? ಪಾಪ, ನನ್ನಿಂದ ತಂದೆಯನ್ನು ಕಳೆದುಕೊಂಡೆ. ಕುಟುಂಬದಿಂದ ದೂರ ಬಂದೆ. ನನ್ನನ್ನು ನಂಬು, ಇದೇ ಕೊರಗಿನಲ್ಲಿ ನಾನೂ ಇನ್ನಿಲ್ಲದ ಶಿಕ್ಷೆ ಅನುಭವಿಸಿದ್ದೇನೆ. ಬೇಕಂತಲೇ ದಂಡಿಸಿಕೊಂಡಿದ್ದೇನೆ. ಪ್ರೇಮಕ್ಕೆ ಸಮಾನಾರ್ಥ ನೋವಲ್ಲವೇ. ಆ ನೋವೇ ಸಿಹಿಯಲ್ಲವೇ. ನಮ್ಮ ಪೂರ್ವದ ಸುಖ ಇಂದಿನ ನೋವು. ಇಂದಿನ ಸುಖ ಮುಂದಿನ ನೋವು. ಇದನ್ನೇ ಅಲ್ಲವೇ ಬುದ್ಧ ಕಂಡುಕೊಂಡಿದ್ದು? ಬಿಟ್ಟು ಬಿಡು ಹಟ.

ಹೇಗೆ ಹೇಳಲಿ? ಮಾತೇ ಹೊರಡುತ್ತಿಲ್ಲವಲ್ಲ. ಬಾಯಿ ತೆರೆದರೆ ಎಲ್ಲಿ ಗಂಟಲಿನಲ್ಲಿ ಕಟ್ಟಿರುವ ಕಟ್ಟೆ ಒಡೆದುಬಿಡುವುದೋ ಎಂಬ ದುಗುಡ.

***
ಹುಡುಗಿ ಚೂಟಿ ಇದಾಳೆ. ಜಾಗಿಂಗ್ ಮಾಡುತ್ತಿರವವರನ್ನೆಲ್ಲ ಅಜ್ಜಿ, ತಾತ ಎಂದು ಮಾತನಾಡಿಸುತ್ತ ಮೋಡಿ ಮಾಡುತ್ತಿದ್ದಾಳೆ. ನನ್ನ ಗುಣಗಳನ್ನೆ ತುಂಬಿ ಕೊಂಡಿರುವಂತಿದೆ. ಹ್ಹಹ್ಹಹ್ಹ... ಚಂದ ಹೆಸರು ಇಟ್ಟಿದ್ದಾಳೆ ಅವಳ ಅಮ್ಮ. ನಮಗೇನಾದರೂ ಮಗು ಆಗುವಂತಿದ್ದರೆ ಅವನು ಬೇಡವೆಂದರೂ ನಾನೇ ಪಾರಿ ಅಂತ ಹೆಸರಿಡುತ್ತಿದ್ದೆ.

ಅವರ ಸಂಗಡ ನಾನಿದ್ದರೆ ಇಬ್ಬರೂ ತುಟಿಪಿಟಿಕ್ ಎನ್ನದೆ ಜಗತ್ತನ್ನೇ ಮೈಮೇಲೆ ಎಳೆದುಕೊಂಡವರಂತೆ ಮೌನವ್ರತ ಆಚರಿಸುತ್ತಾರೆ. ಅದಕ್ಕೆ ಇವಳನ್ನು ಎತ್ತಿಕೊಂಡು ಪಾರ್ಕಿಗೆ ಬಂದುಬಿಟ್ಟೆ. ಅಪರೂಪದ ಭೇಟಿ. ಸ್ವಲ್ಪವಾದರೂ ಖಾಸಗಿ ಸಮಯ ಬೇಡವೇ? ನಾನೆಷ್ಟೇ ಸಲುಗೆ ನೀಡಿದರೂ ಅವರೊಳಗೊಂದು ಹಿಂಜರಿತ ಇದ್ದೇ ಇರುತ್ತದೆ.

ಪಾರಿ ಹಿಡಿಸಿದಳು. ಸ್ವಲ್ಪ ಅಸೂಯೆಯನ್ನೂ ಹುಟ್ಟಿಸಿದಳು. ಶರಣನ ಮುಖದಲ್ಲಿ ಹಿಂದೆಂದೂ ಕಂಡಿರದ ಹೊಳಪು ಕಂಡೆ ಇವತ್ತು. ಅವಳೂ ಅವನಂತೆಯೆ. ಅಂತರ್ಮುಖಿ. ಹೇಳಿ ಮಾಡಿಸಿದ ಜೋಡಿ. ನೋಟದಲ್ಲೆ ಎಲ್ಲ ಭಾವನೆಗಳನ್ನು ರವಾನಿಸುವ ಶಕ್ತಿ ಇಬ್ಬರಿಗೂ. ನಾನು ಎಷ್ಟೇ ಲಾಗಾ ಹಾಕಿದರೂ ಅವನೊಳಗೆ ಈ ಭಾವ ಹುಟ್ಟಿಸಲು ಆಗಿರಲಿಲ್ಲ. ಅದೇ ಅಲ್ಲವೇ ಪ್ರೇಮ?

ಆದರೂ ನನಗೊಂದು ಅನುಮಾನ. ಹೀಗೆ ಒಂದೇ ತರದ ಸ್ವಭಾವದವರು ಜೊತೆಯಾಗಿ ಎಷ್ಟು ಕಾಲ ಬಾಳಬಲ್ಲರು? ಬೋರ್ ಹೊಡೆಸುವುದಿಲ್ಲವೇ? ನನಗಂತೂ ಸಾಧ್ಯವಿಲ್ಲ. ನನಗೆ ಶರಣನಂತವರೇ ಸೂಕ್ತ. ನಾವೆಯಲ್ಲಿ ನಾವಿಬ್ಬರು ವಿರುದ್ಧ ದಿಕ್ಕಿನಲ್ಲಿ ಕುಳಿತುಕೊಳ್ಳುವವರು. ಹಾಗಿದ್ದರೇ ಅಲ್ಲವೆ ನಾವೆ ತೇಲುವುದು? ನನ್ನೆಲ್ಲ ಹುಚ್ಚಾಟಗಳನ್ನು ಅವನು ತಟ್ಟಿಕೊಳ್ಳುವನು. ನನ್ನನ್ನು ಗಮನಿಸುವನು. ಆನಂದಿಸುವನು. ಒಮ್ಮೊಮ್ಮೆ ಕಳೆದುಹೋಗುವನು. ನನಗೆ ಅವನೆಂದರೆ ಇಷ್ಟ.

ಇವರಿಬ್ಬರನ್ನು ನೋಡುತ್ತಿದ್ದರೆ ನನಗೆ ನನ್ನ ಹುಡುಗ ನೆನಪಾಗುವನು. ನಾವಿಬ್ಬರೂ ಒಂದೇ ತರಹ. ಸುತ್ತಾಟ. ಚೆಲ್ಲಾಟ. ಕುಡಿತ. ಹುಟ್ಟಿರುವುದೇ ನಗುನಗುತ್ತ ಮೋಜು ಮಾಡುತ್ತ ಬದುಕಲೆಂದು ನಂಬಿರುವವರು. ಬಹುಶಃ ಅದಕ್ಕೇ ಇರಬೇಕು ನಾನು ಅವನನ್ನು ಜೀವನ ಪರ್ಯಂತ ಒಪ್ಪಿಕೊಳ್ಳುವಷ್ಟು ಹಚ್ಚಿಕೊಳ್ಳಲಿಲ್ಲ. ಶರಣ್‌ನಿಂದ ನಾನು ಏನೆಲ್ಲ ಕಲಿತೆ. ನೆನಪುಗಳನ್ನು ಕಲೆ ಹಾಕುವುದು. ಅವುಗಳನ್ನು ಜೋಪಾನ ಮಾಡುವುದು. ಪ್ರಾಮಾಣಿಕವಾಗಿ ಅಳುವುದು. ಅಳುವವರನ್ನು ಸಂತೈಸುವುದು. ಹಳೇ ಹುಡುಗ ಒಮ್ಮೆ ಮಾಲ್ ಒಂದರಲ್ಲಿ ಎದುರಾಗಿದ್ದ. ಶರಣನನ್ನು ನೋಡಬೇಕಿತ್ತು ಆಗ. ವಿಲವಿಲ ಹುಳುವಿನಂತೆ ಒದ್ದಾಡಿದ್ದ. ಇವನಿಂದ ಪೊಸೆಸಿವ್ ಆಗುವುದನ್ನೂ ಕಲಿತೆ. ಇಷ್ಟು ಸಾಕಲ್ಲವೇ, ಶರಣನನ್ನು ನನ್ನವನನ್ನಾಗಿ ಉಳಿಸಿಕೊಳ್ಳಲು?

ಈ ಬಂಗಾರಿ ಶರಣ್ಯಳದ್ದು ಮಾತೂ ಬರಿ ಮಾತು. ದಾರಿಯುದ್ದಕ್ಕೂ,

‘ಆಂಟಿ, ನಮ್ಮ ಕಾರು ಈ ತರದ್ದು’, ‘ಆಂಟಿ ನಮ್ಮ ಕಾಂಪೋಂಡಲ್ಲಿ ಮಾವಿನ ಮರ ಬೆಳೆಸಿದ್ದೀವಿ ಗೊತ್ತಾ’, ‘ಆಂಟೀ ನಾವು ಯೂರೋಪ್‌ಗೆ ಟ್ರಿಪ್ ಹೋಗ್ತಿದ್ದೀವಿ. ನೀವೂ ನಮ್ಮ ಜೊತೆ ಬನ್ನಿ’
ಮುದ್ದು ಮುದ್ದು ಹುಡುಗಿ.‌

‘ನಿಮ್ಮಮ್ಮನ್ನ ಕೇಳಿನೋಡೆ. ಒಂದಷ್ಟು ದಿನ ನಿಮ್ಮ ಡ್ಯಾಡಿನು ನನ್ನ ಗಂಡನ್ನು ಎಕ್ಸಚೇಂಜ್ ಮಾಡಿಕೊಳ್ಳೋಕೆ ಒಪ್ತಾಳ ಅಂತ, ಆಗ ನಾವು ಮೂವರೂ ಟ್ರಿಪ್ ಹೋಗಿ ಬರಬಹುದು’, ಎಂದು ತಮಾಷೆ ಮಾಡಿದರೆ ಶರಣ್ಯ ಬಾಯ್ತೆರೆದು ಜೋರಾಗಿ ನಗುತ್ತಾಳೆ.

***
ಮೃದುಲಾಳ ಹುಡುಗಾಟ ಅತಿಯಾಯಿತು. ನನ್ನ ಸಂಕಟವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ ಅವಳು. ಆಯಿತಲ್ಲ, ಸಾಯಂಕಾಲವೆ ಪಾರಿ ಜೊತೆ ಏಕಾಂತ ಇರಲು ಬಿಟ್ಟುಹೋದದ್ದು. ಈಗೇಕೆ ಪುನಃ. ಬರುವಾಗ ಲೈಟ್ ಆಫ್ ಮಾಡೋದು ಮರೀಬೇಡ, ವಾಷಿಂಗ್‌ ಮಶೀನ್ ಓಡ್ತಿದೆ, ಒಗೆದ ಮೇಲೆ ಆಫ್ ಮಾಡು, ಅಲ್ಲೆ ಬಿಟ್ಟರೆ ಬಟ್ಟೆ ಮುಗ್ಗು ಬರ್ತದೆ, ಒಣಗಿ ಹಾಕು, ಗ್ಯಾಸ್ ಸಿಲಿಂಡರ್ ಆಫ್ ಮಾಡಿದ್ದೀನಿ, ಮರೆತು ಉಲ್ಟ ತಿರುಗಿಸಿ ಆನ್ ಮಾಡಿಬಿಡಬೇಡ ಒಂದಾ ಎರಡಾ. ಹೊಟ್ಟೆ ನೆಲಕ್ಕೆ ಹಾಕಿದಳೆಂದರೆ ಕುಂಭಕರ್ಣನಂತೆ ಗೊರಕೆ ಹೊಡೆಯುತ್ತ ಮಲಗಿಬಿಡುತ್ತಾಳೆ. ಅವಳು ಜೊತೆಗಿದ್ದರೆ ಏನೋ ಒಂದು ತರದ ಸಮಾಧಾನ, ಧೈರ್ಯ. ಮಾತಾಡಲು ವಿಷಯ.


ಚಿತ್ರ: ಗುರು ನಾವಳ್ಳಿ

ನಾವಿಬ್ಬರು ತಾನೆ ಎಷ್ಟೂಂತ ಮಾತನಾಡಬಹುದು? ಹೊಸದೇನಾದರೂ ಮಾತಾಡಲಿಕ್ಕೆ ಈ ಸಂಬಂಧ ಮುಂದುವರಿಯುವಂಥದ್ದೇ? ಇದಕ್ಕೆ ಯಾವ ಅರ್ಥವಿದೆ? ಮಾಜೀ ಪ್ರೇಯಸಿಯಂತಲೋ. ಗೆಳತಿಯಂತಲೋ? ನನ್ನ ಬಳಿಯೀಗ ಅಪ್ಪನಿಲ್ಲ. ಪಾರಿಯೂ ಇಲ್ಲ. ಅವತ್ತು ಮನೆಯವರು ತುಸುವೇ ಸಂಯಮ ತೋರಿದ್ದರೆ, ಅಪ್ಪ ಬದುಕಿರುತ್ತಿದ್ದರು. ಪಾರಿ ನನ್ನವಳಾಗಿರುತ್ತಿದ್ದಳು. ಏನು ಸಾಧಿಸಿದಂತಾಯಿತು ರಗಳೆ ಮಾಡಿ?

ಆದರೂ, ಈ ಭೇಟಿ ನಮ್ಮಿಬ್ಬರಿಗೆ ಬಹಳ ಅಗತ್ಯವಿತ್ತು ಅನಿಸುತ್ತಿದೆ. ಇಬ್ಬರಲ್ಲೂ ಗಾಯಗಳು ಮಾಗಿ ಹುಣ್ಣಾಗುತ್ತಿದ್ದವಷ್ಟೆ. ಒಂದು ಭೇಟಿ. ಒಂದಷ್ಟು ಮಾತುಕತೆ. ಮನಸ್ಸು ಹಗೂರ. ಗಾಯಗಳಿಗೆ ಮುಲಾಮು. ಪಾರಿಯೂ ಸುಖವಾಗಿದ್ದಾಳೆ. ಕಡುಬಡತನದಲ್ಲಿ ಬೆಂದವಳು. ಒಳ್ಳೆಯ ಗಂಡ ಸಿಕ್ಕಿದ್ದಾನಂತೆ. ತುಂಬಾನೆ ಓದಿಕೊಂಡಿದ್ದಾನಂತೆ. ಆದರ್ಶವಾದಿಯಿಂತೆ. ಈ ತನಕ ಆತನ ಕುಲ ನೆಲೆ ಹಿನ್ನೆಲೆ ಒಂದೂ ಅವಳಿಗೆ ಗೊತ್ತಿಲ್ಲವಂತೆ. ತಾನೇ ಅವನಿಗೆ ಎಲ್ಲ ಅನ್ನುತ್ತಾಳೆ. ತಿಳಿದುಕೊಳ್ಳುವ ಅಗತ್ಯವಾದರೂ ಏನು, ಅದರಿಂದೇನು ಲಾಭ ಎಂದು ಪ್ರಶ್ನಿಸುತ್ತಾಳೆ. ಮನೆಯವರೇನೋ ಸಿರಿವಂತನೆಂದು ‘ಮಾರಿ’ದರಂತೆ. ಅವಳ ಅದೃಷ್ಟ ಚೆನ್ನಾಗಿತ್ತು. ಬಹಳ ಬಹಳ ಚೆನ್ನಾಗಿತ್ತು. ಅಕಸ್ಮಾತ್ ಆತ ದುರಾತ್ಮನಾಗಿಬಿಟ್ಟಿದ್ದರೆ... ಈ ಕ್ಷಣ ಪಾರಿ ನನ್ನೆದುರು ಕುಳಿತಿರುತ್ತಿರಲಿಲ್ಲ. ಈ ರಾತ್ರಿ ನನ್ನ ಮನೆಯಲ್ಲಿ ಉಳಿಯುತ್ತಿರಲಿಲ್ಲ.

‘ಮಮ್ಮಿ ನಾನು ಮಲಗ್ತೀನಿ’ ಚಿಕ್ಕ ಹುಡುಗಿಗೆ ನಿದ್ದೆ ಹತ್ತುತ್ತಿದೆ. ಒಮ್ಮೆಯೂ ನಾನು ಎತ್ತಿಕೊಳ್ಳಲಿಲ್ಲವಲ್ಲ? ಮುದ್ದುನೇ ಏಷ್ಟೋ ಉತ್ತಮ. ಎತ್ತಿಕೊಂಡಳು. ತಿನಿಸಿದಳು. ಆಡಿಸಿದಳು. ನಾನೇಕೆ ಹೀಗೆ ಸಣ್ಣವನಂತೆ ವರ್ತಿಸಿದೆ? ಪಾರಿ ಇದನ್ನು ಗಮನಿಸದೇ ಇರುವುದಿಲ್ಲ. ಎಷ್ಟು ನೊಂದುಕೊಂಡಿರುವಳೋ ಏನೋ. ಈ ನಷ್ಟವನ್ನು ಬೆಳಗ್ಗೆ ಸರಿಪಡಿಸಿಕೊಳ್ಳಬೇಕು.

ತುಂಬಾ ಹೊತ್ತಾಗಿತ್ತು. ಪಾರಿಗೆ ಶುಭರಾತ್ರಿ ತಿಳಿಸಿ ನಾನು ಹೊರಟೆ. ಬಟ್ಟೆ ಒಣಗ ಹಾಕಿ ಲೈಟುಗಳನ್ನು ಆಫ್ ಮಾಡಿ, ಮುಂಬಾಗಿಲಿನ ಬೀಗ ಭದ್ರವಾಗಿದೆಯೋ ಇಲ್ಲವೇ ಪರೀಕ್ಷಿಸಿ ಮೆಟ್ಟಿಲು ಹತ್ತಿ ಕೋಣೆ ಸೇರಿಕೊಂಡೆ. ಎಂದಿನಂತೆ ಮುದ್ದು ಶವಾಸನದಲ್ಲಿದ್ದಳು. ಇವತ್ತೇನೋ ಗೊರಕೆ ಭಾಗ್ಯವಿಲ್ಲ. ಲೈಟ್ ಆಫ್ ಮಾಡಿ ಮಲಗಿದೆ. ಥಟ್ಟನೆ ಮುದ್ದು ಬಿಗಿಯಾಗಿ ಕೈ ಹಿಡಿದುಕೊಂಡಳು. ಹಿತವೆನಿಸುತ್ತಿದೆ. ಅಪರೂಪಕ್ಕೆ ನನ್ನ ಬಗ್ಗೆ ಪೊಸೆಸಿವ್ ಆಗಿದ್ದಾಳೆ. ಕಣ್ಮುಚ್ಚಿದೆ. ಕಣ್ರೆಪ್ಪೆಯ ಕತ್ತಲೆಯ ಆಕಾಶದಲ್ಲಿ ಪಾರಿ ಮಿನುಗುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.