ADVERTISEMENT

ಯದ್ವಾತದ್ವಾ ಕಲಿತ ಹುಡುಗಿ

ಲಲಿತಾ ಕೆ ಹೊಸಪ್ಯಾಟಿ.
Published 3 ಮಾರ್ಚ್ 2018, 10:37 IST
Last Updated 3 ಮಾರ್ಚ್ 2018, 10:37 IST
ಚಿತ್ರ: ಮದನ್ ಸಿ.ಪಿ
ಚಿತ್ರ: ಮದನ್ ಸಿ.ಪಿ   

‘ಶಬ್ದಪುರ’ ರಾಜ್ಯದಲ್ಲಿ ‘ಭಾಷಿತ’ನೆಂಬ ರಾಜನಿದ್ದ. ಅವನು ಪ್ರಜೆಗಳ ಯೋಗಕ್ಷೇಮಕ್ಕೆ ಹೆಸರಾಗಿದ್ದ. ಒಂದು ದಿನ ‘ನಮ್ಮ ಮಕ್ಕಳಿಗೆ ಮಾತ್ರ ವಿದ್ಯೆ ಏಕೆ? ನಮ್ಮ ಬಡವರ ಮಕ್ಕಳೂ ಕಲಿಯಲಿ. ಅವರಿಗೂ ಹೆಚ್ಚಿನ ಜ್ಞಾನ ಲಭಿಸಲಿ. ಅವರು ಕಲಿತರೆ ರಾಜ್ಯಕ್ಕೆ ಲಾಭ. ಸಾಮಾನ್ಯ ಜನರಿಗೂ ಅಕ್ಷರ ತಿಳಿಯಬೇಕು’ ಎಂದು ಪಂಡಿತರ ಸಭೆಯಲ್ಲಿ ಹೇಳಿದ.

ರಾಜನ ತೀರ್ಮಾನಕ್ಕೆ ಪಂಡಿತರು ಒಪ್ಪಲಿಲ್ಲ. ಯಾಜಿ ಎಂಬ ಪಂಡಿತನು ‘ಅರಣಿಗೆ ಹಾಕಿದ ಬೆರಣಿ ಕಣ್ಣಿಗೆ ಕಾಣದ ತಣ್ಣೆಲಳು ಎರಡೂ ವ್ಯರ್ಥ. ತಳಿರಿದ್ದರೆ ತೋರಣ. ಕಲಿಯುವ ಸಾಮರ್ಥ್ಯ ಇದ್ದರೆ ಮಾತ್ರ ಕಲಿಸಬೇಕು. ವಿದ್ಯೆ ಏನು ಪುಗಸಟ್ಟೆ ಸಿಗುವ ಬೆಕ್ಕೇನು’ ಎಂದ.

ರಾಜನಿಗೆ ಸಮಾಧಾನವಾಗಲಿಲ್ಲ. ‘ಪಾಂಡವರು ಐದು ಜನ ವಿದ್ಯಾಪಾರಂಗತರು. ಆದರೆ ಯಕ್ಷ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟವ ಧರ್ಮರಾಯ ಮಾತ್ರ. ಊರಿಡೀ ಡಂಗುರ ಸಾರಿರಿ. ಎಲ್ಲರೂ ಬರಲಿ. ಪಂಡಿತನು ಕೇಳುವ ಪ್ರಶ್ನೆಗೆ ಒಬ್ಬ ಉತ್ತರಿಸಿದರೂ ಸಾಕು. ಪಾಠ ಶಾಲೆ ಪ್ರಾರಂಭಿಸುತ್ತೇನೆ’ ಎಂದು ಆಜ್ಞಾಪಿಸಿದ.

ADVERTISEMENT

ರಾಜಾಜ್ಞೆಯನ್ನು ಮೀರಲಾಗದೆ ಪಂಡಿತರು ಸುಮ್ಮನಾದರು. ತಾವು ಸರ್ವ ವಿದ್ಯಾ ಪಾರಂಗತರು. ತಮ್ಮ ಪ್ರಶ್ನೆಗೆ ಉತ್ತರ ಕೊಡುವವರು ಯಾರಿದ್ದಾರೆ ಎಂದು ಭ್ರಮಿಸಿದರು. ಇಲ್ಲಿಯವರೆಗೆ ಪಾಠಶಾಲೆಯ ವಿದ್ಯೆಯು ಪಂಡಿತರು, ಪ್ರಧಾನ ಮಂತ್ರಿ ಮಹೋದಯರ ಮಕ್ಕಳಿಗೆ ಮಾತ್ರ ಮೀಸಲಾಗಿತ್ತು. ಈಗ ಕೆಲಸದಾಳಾಗಿ ದುಡಿಯುವ ಬಡವರ ಮಕ್ಕಳಿಗೂ ಆ ವಿದ್ಯೆ ಸಿಗುತ್ತದೆ ಎಂದು ಪ್ರಜೆಗಳಿಗೆ ಖುಷಿಯಾಯಿತು. ಅವರು ಕೇಳುವ ಪ್ರಶ್ನೆ ಏನು ಆಕಾಶದಷ್ಟು ಅಗಲವೇ, ಸಮುದ್ರದಷ್ಟು ಆಳವೇ ನೋಡಿ ಬಿಡೋಣ ಎಂದರು. ತಮ್ಮ ಮಕ್ಕಳೊಂದಿಗೆ ಬಂದು ಅರಮನೆಯ ಅಂಗಳದಲ್ಲಿ ನಿಂತರು. ಆಗ ಪಂಡಿತ ಯಾಜಿ ಎಂಬುವವನು ‘ನೀವೆಲ್ಲ ಕಲಿಯಲು ಯದ್ವಾ ತದ್ವಾ ಬಂದು ನಿಂತಿದ್ದೀರಿ. ನಮಗೂ ಸಂತೋಷ. ನಾವು ಕೇಳುವ ಪ್ರಶ್ನೆಗೆ ಉತ್ತರಿಸಿರಿ’ ಎಂದ.

‘ಯದ್ವಾ ತದ್ವಾ’ ಎನ್ನುವ ಶಬ್ದ ಕಿವಿಗೆ ಬಿದ್ದದ್ದೇ ತಡ. ರಾಜನು ‘ಬಂಧುಗಳೇ ಇದೀಗ ನಮ್ಮ ಪಂಡಿತರು ಯದ್ವಾ ತದ್ವಾ ಎಂದರು. ತಾವು ದಯವಿಟ್ಟು ಹಾಗಂದರೇನು ಎನ್ನುವ ಅರ್ಥ ಹೇಳಿರಿ. ಇಲ್ಲವೇ ನೀವೇ ಅದಕ್ಕೊಂದು ದೃಷ್ಟಾಂತ ಕೊಡಿ’ ಎಂದನು.

ಶಬ್ದದ ಅರ್ಥ ಯಾರಿಗೂ ತಿಳಿಯಲಿಲ್ಲ. ಎಲ್ಲರೂ ಬೇರೆ ಬೇರೆ ಉತ್ತರ ಹೇಳಿದರು. ಆದರೆ ರಾಜನಿಗೆ ಅವರು ಕೊಟ್ಟ ಉತ್ತರ ಸರಿ ಎನಿಸಲಿಲ್ಲ. ಆಗ ಒಬ್ಬರಾಗಿ ಕಲಿಯುವ ಈ ಉಸಾಬರಿಯೇ ಬೇಡ ಎಂದು ಹೊರಡತೊಡಗಿದರು.

ಅಲ್ಲಿಯೇ ಇದ್ದ ಒಬ್ಬಳು ಸಣ್ಣ ಹುಡುಗಿ ಸೋಮಿ ಕಂಕುಳಲ್ಲಿ ಮಂಗನ ಮರಿ ಎತ್ತಿಕೊಂಡು ನಿಂತಿದ್ದಳು. ‘ಗದ್ದಲವಿದೆ. ಬಹಳ ಜನ ನಿಂತಿದ್ದಾg. ಮಂಗನ ಕೊರಳಿಗೆ ಹಗ್ಗ ಕಟ್ಟಿ ಲಗಾಟ ಹೊಡೆಸಿದರೆ ಭಿಕ್ಷೆ ಭರಪೂರ ಉಡಿ ತುಂಬುತ್ತೆ’ ಎಂದು ಮನದಲ್ಲಿ ಲೆಕ್ಕಾಚಾರ ಹಾಕಿದಳು. ಆದರೆ ಜನ ರಾಜನ ಪ್ರಶ್ನೆಗೆ ಉತ್ತರಿಸದೇ ಹೊರಟು ಹೋದರು. ಒಬ್ಬಳೇ ಕೋತಿಯನ್ನು ಹೆಗಲ ಮೇಲೆ ಹೊತ್ತು ನಿಂತಳು. ಸ್ವಲ್ಪ ಯೋಚಿಸಿ ‘ಮಹಾರಾಜರೇ ಅಳಿಲು ಮರಿಗೆ ಶ್ರೀರಾಮ ಒಂದು ಅವಕಾಶ ಕೊಟ್ಟಿದ್ದನು. ಈಗ ನನಗೂ ತಾವೊಂದು ಅವಕಾಶ ಕೊಡಬೇಕು. ಉತ್ತರ ಹೇಳಲು ಪ್ರಯತ್ನಿಸುವೆ’ ಎಂದಳು.

ರಾಜ ಒಪ್ಪಿದ. ಹುಡುಗಿಯು ಅಲ್ಲಿರುವ ಸೇವಕರಿಗೆ ಹೇಳಿ ಮದ್ಯ ತರಿಸಿದಳು. ಹಗ್ಗದಿಂದ ಬಂಧಿಸಿದ್ದ ಮಂಗನ ಕೊರಳನ್ನು ಸಡಿಲಿಸಿದಳು. ಮಂಗ ಕಿಸ್ ಕಿಸ್ ಎಂದು ಒದ್ದಾಡಿತು. ಹಸಿವೆಯಾಗಿದ್ದ ಮಂಗಕ್ಕೆ ಮದ್ಯವನ್ನು ಕುಡಿಸಿದಳು.

ನಂತರ ಅದರ ಕುಣಿಕೆಯ ಹಗ್ಗ ಕೈಬಿಟ್ಟಳು. ಮಂಗ ಬಿಡುಗಡೆಯ ಸಂತೋಷಕ್ಕೋ ಹೊಟ್ಟೆ ತುಂಬಿದ ಸಂತೃಪ್ತಿಗೋ ಜಿಗಿದಾಡತೊಡಗಿತು. ಆಗ ರಾಜನು ‘ಏನು ಹುಡುಗಿ ಹುಚ್ಚು ಹಿಡಿದಿದೆಯಾ? ಯಾರಾದರೂ ಮಂಗಕ್ಕೆ ಮದ್ಯ ಕುಡಿಸುತ್ತಾರೆಯೇ? ಅದೂ ಮೊದಲೇ ಕಪಿ. ಮನಬಂದಂತೆ ಜನರಿಗೆ ಕಚ್ಚಿದರೇನು ಮಾಡುವುದು’ ಎಂದನು. ಅದಕ್ಕೆ ಹುಡುಗಿಯು ‘ಪ್ರಭು ಮನ್ನಿಸಬೇಕು. ನನ್ನ ಬಳಿ ಯದ್ವಾ ತದ್ವಾ ಪದಕ್ಕೆ ದೃಷ್ಟಾಂತ ಕೊಡಲು ಬೇರೆ ಯಾವ ಸಾಧನಗಳೂ ಇರಲಿಲ್ಲ. ಅದಕ್ಕಾಗಿಯೇ ಹೊಟ್ಟೆಗೆ ಅನ್ನ ಹಾಕುವ ಮಂಗಕ್ಕೆ ಮದ್ಯ ಕುಡಿಸಿದೆ. ಅದು ಯದ್ವಾ ತದ್ವಾ ಮಾಡುವ ಆಟ ತೋರಿಸಿದೆ’ ಎಂದು ಸಮರ್ಥಿಸಿಕೊಂಡಳು.

ತಕ್ಷಣ ರಾಜ ಎದ್ದು ನಿಂತು ಚಪ್ಪಾಳೆ ತಟ್ಟಿದ. ಅವಳ ಮಾತನ್ನು ಮೆಚ್ಚಿಕೊಂಡ. ಅವಳು ‘ಪ್ರಭು ಇನ್ನೊಂದು ವಿಷಯ. ಮದ್ಯ ಸೇವನೆ ಮನುಷ್ಯನ ವ್ಯಕ್ತಿತ್ವವನ್ನೇ ಯದ್ವಾ ತದ್ವಾ ಮಾಡುತ್ತದೆ. ಮಾದಕ ಪಾನೀಯ ದೇಹದೊಳಗೆ ಸೇರಿದರೆ ಮನುಷ್ಯನ ಮತ್ತು ಪ್ರಾಣಿಗಳ ವರ್ತನೆ ಬದಲಾಗುತ್ತದೆ. ಅದರಿಂದ ದೂರವಿರಬೇಕೆಂಬ ಕಳಕಳಿ ನನ್ನದು’ ಎಂದಳು.

ರಾಜನಿಗೆ ಹುಡುಗಿಯ ಒಳಿತು ಕೆಡಕುಗಳ ಅರಿವು ಇಷ್ಟವಾಯಿತು. ಪ್ರಶ್ನೆಗೆ ಉತ್ತರಿಸಿದ ಬಾಲಕಿಗೆ ಬಹುಮಾನ ಕೊಟ್ಟನು. ರಾಜನು ಈ ಬಾಲಕಿಗಾಗಿಯೇ ಪಾಠ ಶಾಲೆ ಪ್ರಾರಂಭಿಸಿದನು. ಯಾಜಿ ಪಂಡಿತನು ಸಂತೋಷದಿಂದ ಸೋಮಿ ಹುಡುಗಿಗೆ ವಿದ್ಯೆ ಕಲಿಸಿದನು. ಸೋಮಿಯು ವಿದ್ಯೆ ಕಲಿತ ಮೊದಲ ಹೆಣ್ಣು ಮಗಳಾಗಿ ಕೀರ್ತಿ ಪಡೆದಳು. ಬಡವರ ಮಕ್ಕಳಿಗೆ ಅಕ್ಷರ ಕಲಿಸಿದನೆಂಬ ಶ್ರೇಯಸ್ಸು ಯಾಜಿ ಪಂಡಿತನಿಗೆ ಸಂದಿತು. ಮುಂದೆ ರಾಜನು ತರೆದ ಪಾಠಶಾಲೆಯು ಗುರು ಶಿಷ್ಯೆಯರ ಹೆಸರಿನಿಂದ ‘ಸೋಮಯಾಜಿ’ ಪಾಠಶಾಲೆಯಾಗಿ ಪ್ರಸಿದ್ಧಿ ಪಡೆಯಿತು. ರಾಜನು ಗಂಡು ಹೆಣ್ಣು ಬಡವ ಶ್ರೀಮಂತ ಭೇದವಿಲ್ಲದೆ ಸರ್ವರಿಗೂ ಉಚಿತ ವಿದ್ಯೆ ಕೊಡಿಸಿದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.