ADVERTISEMENT

ಯುದ್ಧದ ಗೆಲುವು ಬೆನ್ನಿಗೇ ಸೋಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:30 IST
Last Updated 7 ಜುಲೈ 2012, 19:30 IST

ಹನ್ನೆರಡು ವರ್ಷದ ಉಮೀರಾ ಆ ಕುಟುಂಬದ ಮೂವರು ಮಕ್ಕಳಲ್ಲಿ ಎರಡನೆಯವಳು. ಆಕೆ ನನ್ನ ವಿಭಾಗಕ್ಕೆ ದಾಖಲಾಗಿದ್ದು 2012ರ ಜನವರಿಯಲ್ಲಿ. ಆಕೆಗೆ ಒಂಬತ್ತು ವರ್ಷವಾದಾಗಿನಿಂದಲೂ ತನ್ನ ಕಾಯಿಲೆಯ ಪರೀಕ್ಷೆಗಳಿಗಾಗಿ ಆಸ್ಪತ್ರೆ ಒಳಹೊರಗೆ ಸದಾ ಓಡಾಡುವಂತಾಗಿತ್ತು.
 
ಅಕ್ಷರಶಃ ಹಲವು ಆಸ್ಪತ್ರೆಗಳಲ್ಲಿಯೇ ಬದುಕು ಸಾಗಿಸಿದ್ದ ಅವಳನ್ನು ನಾನು ಇಲ್ಲಿ ದಾಖಲಿಸಿಕೊಳ್ಳಲೇಬೇಕಾಗಿತ್ತು.ಆಕೆಯ ಪರಿಸ್ಥಿತಿಗೆ ಕಾರಣಗಳನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾಗ ಉಮೀರಾ ಖಿನ್ನತೆಗೆ ಒಳಗಾದಂತೆ, ಎಲ್ಲದರ ಬಗ್ಗೆಯೂ ಉದಾಸೀನ ತಾಳಿದವಳಂತೆ ಕಂಡುಬಂದಳು. ಆಕೆಯ ವಯಸ್ಸಿಗೆ ದೈಹಿಕವಾಗಿ ತೀರಾ ಪೀಚಾಗಿಯೂ ಕಾಣುತ್ತಿದ್ದಳು. ಇದಕ್ಕೂ ಕಾಯಿಲೆಯೇ ಕಾರಣವಿರಬಹುದೇ?

ಉಮೀರಾಳ ಮುಖ ಕಳೆದ ಮೂರು ವರ್ಷಗಳಿಂದ ಮಿತಿ ಮೀರಿ ಊದಿಕೊಂಡಿತ್ತು. ಆಕೆ ತುಂಬಾ ಬಿಳಿಚಿಕೊಂಡಿದ್ದಳು. ರಕ್ತದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಬಳಲುತ್ತಿದ್ದಳು. ಚಿಕಿತ್ಸೆ ಕೊಡಿಸಿದ್ದರೂ ಆರೋಗ್ಯದಲ್ಲಿ ಸುಧಾರಣೆಯಾಗಿರಲಿಲ್ಲ.

ಸುತ್ತಮುತ್ತಲ ಪ್ರಪಂಚದ ಬಗೆಗೆ ನಿರಾಸಕ್ತಿ, ನಿರುತ್ಸಾಹದಿಂದ ಇರುವುದು, ಓದಲು ಮತ್ತು ಬರೆಯಲು ಸಾಧ್ಯವಾಗದೆ ಇರುವುದು ಮುಂತಾದ ಸಮಸ್ಯೆಗಳು ಕಬ್ಬಿಣ ಅಂಶದ ಕೊರತೆಯ ಲಕ್ಷಣಗಳಾಗಿದ್ದವು. ಆಕೆ ಐದನೇ ತರಗತಿಯಲ್ಲಿದ್ದಾಗ ಕಾಯಿಲೆ ಮತ್ತು ಬುದ್ಧಿಶಕ್ತಿ ಕೊರತೆಯಿದ್ದ ಕಾರಣ ಓದನ್ನು ಅರ್ಧಕ್ಕೇ ನಿಲ್ಲಿಸುವಂತಾಯಿತು ಹಾಗೂ ಉಮೀರಾಳನ್ನು ಮಾನಸಿಕ ಬೆಳವಣಿಗೆ ಇಲ್ಲದ ಮಗು ಎಂದು ಗುರುತಿಸಲಾಯಿತು.

ನಾನು ಪ್ರತಿ ದಿನ ಬಹಳ ಸಮಯ ಆಕೆಯೊಂದಿಗೆ ಕಳೆಯುತ್ತಿದ್ದೆ. ಉಮೀರಾ ಕೆಲವೇ ಪದಗಳನ್ನು ಮಾತನಾಡಲು ಸಹ ಹೆಣಗಾಡುತ್ತಿದ್ದಳು. ಯಾರೂ ಆರೈಕೆ ಮಾಡುವವರಿಲ್ಲದೆ ತನ್ನ ಹಾಸಿಗೆ ಮೇಲೆ ಸದಾ ಒಂಟಿಯಾಗಿ ಇರುತ್ತಿದ್ದದ್ದು ತೀರಾ ವಿಚಿತ್ರವಾಗಿ ಕಾಣಿಸುತ್ತಿತ್ತು.
ಉಮೀರಾ ಸಿಟ್ಟಿಗೇಳುತ್ತಿದ್ದರೂ ಅಕ್ಕಪಕ್ಕದ ರೋಗಿಗಳ ಸಹಾಯಕ್ಕೆ ಇದ್ದವರು ಆಕೆಯ ಅಗತ್ಯಗಳಿಗೆ ನೆರವಾಗುತ್ತಿದ್ದರು.

ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಆಹಾರವನ್ನು ಮುಟ್ಟುತ್ತಿರಲಿಲ್ಲ. ಇದು ನನಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಆ ಮಗುವಿಗೆ ಇರುವ ನಿಜವಾದ ಸಮಸ್ಯೆ ಸ್ಪಷ್ಟವಾಗುತ್ತಿರಲಿಲ್ಲ. ಆ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಲು ಮತ್ತು ಆಕೆಯೊಂದಿಗೆ ಸಮಯ ಕಳೆಯಲು ನನ್ನ ಪದವಿ ವಿದ್ಯಾರ್ಥಿ ಡಾ. ಜಸ್ವಂತ್‌ಗೆ ಜವಾಬ್ದಾರಿಯನ್ನು ವಹಿಸಿದೆ.

ಆಕೆ ಖಿನ್ನತೆಗೆ ಒಳಗಾಗಿದ್ದಾಳೆಯೇ? ಅಥವಾ ಆಕೆಯ ಮೂಲ ಕಾಯಿಲೆಯನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲವೇ? ಅಥವಾ ಅದು ನಿಜಕ್ಕೂ ಕಬ್ಬಿಣ ಕೊರತೆಯ-ರಕ್ತಹೀನತೆಯ ಸಮಸ್ಯೆಯೇ?

ಉಮೀರಾಳ ತಂದೆತಾಯಿ ಕಳೆದ ಏಳು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿರಲಿಲ್ಲ. ಮೆಕಾನಿಕ್ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಎರಡು ವರ್ಷದಿಂದ ನಿರುದ್ಯೋಗಿಯಾಗಿದ್ದ. ದುಶ್ಚಟಗಳ ವ್ಯಸನಿಯಾಗಿದ್ದ ಆತ ಪತ್ನಿಯನ್ನು ಹಿಂಸಿಸುತ್ತಿದ್ದ.

ಹೆಂಡತಿಯ ಜೊತೆಗಿದ್ದ ಮೂವರು ಮಕ್ಕಳನ್ನು ತನ್ನ ಜೊತೆ ಕರೆದುಕೊಂಡು ಬಂದು ತಾನೇ ನೋಡಿಕೊಳ್ಳಲು ನಿರ್ಧರಿಸಿದ್ದ. ಉಮೀರಾ ತಾನು ತಾಯಿ ಪ್ರೀತಿಯಿಂದ  ವಂಚಿತಳಾಗಿರುವುದನ್ನು ಮತ್ತು ಅದಕ್ಕಾಗಿ ಹಲವು ಬಾರಿ ಅಳುವುದನ್ನು ಡಾ. ಭ್ರಮರಾಂಬಾ ಬಳಿ ಹೇಳಿಕೊಂಡಳು. ಆಕೆಯ ಖಿನ್ನತೆಗೆ ಇದೇ ಕಾರಣವಿರಬಹುದೇ?

ಉಮೀರಳ ಅಕ್ಕ 16 ವರ್ಷದ ಅಫ್ಸಾ ತನ್ನ ತಂಗಿಯ ಆರೈಕೆ ಮಾಡುತ್ತಿದ್ದಳು. ಉಮೀರಾ ಆಸ್ಪತ್ರೆಗೆ ದಾಖಲಾದ ಆರಂಭದ ದಿನಗಳಲ್ಲಿ ಅಫ್ಸಾ ಆಕೆಯ ಜೊತೆಗಿರುತ್ತಿದ್ದಳು. ಆದರೆ ನಂತರದ ದಿನಗಳಲ್ಲಿ ಆಕೆ ನಮಗೆ ಕಾಣಿಸಲಿಲ್ಲ.

ಆಕೆಯ ತಂದೆ ಅಪರೂಪಕ್ಕೆ ಆಸ್ಪತ್ರೆಗೆ ಭೇಟಿ ನೀಡಿದಾಗ ಆ ಮಗುವಿನ ಸುದೀರ್ಘ ಗೈರುಹಾಜರಿ ಬಗ್ಗೆ ವಿಚಾರಿಸಿದೆ. ವೈದ್ಯರು ಮಕ್ಕಳಿಗೆ ಚಿಕಿತ್ಸೆ ಮಾಡಬಹುದಷ್ಟೆ, ಆ ಮಗುವಿನ ಆರೈಕೆ ನೋಡಿಕೊಳ್ಳುವುದರಲ್ಲಿ ಪೋಷಕರ ಜವಾಬ್ದಾರಿಯೂ ತುಂಬಾ ಇರುತ್ತದೆ ಎಂದು ಆತನಿಗೆ ಹೇಳಿದೆ.

ಆತ, ಉಮೀರಾಳಿಗೆ ತಾಯಿಯ ಸ್ಥಾನದಲ್ಲಿದ್ದು ಆರೈಕೆ ಮಾಡುತ್ತಿದ್ದ ತನ್ನ ಹಿರಿಯ ಮಗಳು ಅಫ್ಸಾ ಪಾರ್ಶ್ವವಾಯುವಿಗೆ ತುತ್ತಾಗಿ ಒಂದೂವರೆ ತಿಂಗಳಿನಿಂದ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನುವ ವಿಷಯ ತಿಳಿಸಿದ. ಹಾಸಿಗೆ ಹಿಡಿದಿರುವ ಆಕೆಯ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಹೇಳಿದ. ಆತ ತನ್ನ ಇಬ್ಬರು ಮಕ್ಕಳ ಚಿಕಿತ್ಸೆಗಾಗಿ ಎರಡು ಆಸ್ಪತ್ರೆಗಳ ನಡುವೆ ಓಡಾಡುತ್ತಿದ್ದ.

ಸಂಪಾದನೆಯ ಮೂಲವೇ ಇಲ್ಲದೆ, ಕಾಯಿಲೆಗೆ ತುತ್ತಾಗಿದ್ದ ಈ ಎರಡು ಮಕ್ಕಳಿಗೆ ಊಟ, ಬಟ್ಟೆ, ಹಣ ಹೊಂದಿಸಲಾಗದೆ ತಂದೆ ಒದ್ದಾಡುತ್ತಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಆ ಮಕ್ಕಳ ತಾಯಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಇನ್ನೊಂದು ಮಗು ಚೆನ್ನೈನಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಇದೆ ಎನ್ನುವುದು ನಮಗೆ ಗೊತ್ತಾಯಿತು.

ಉಮೀರಾ ಈ ದಾಂಪತ್ಯ ಸಂಘರ್ಷದ ಉತ್ಪನ್ನವೇ ಅಥವಾ ಬಲಿಯೇ? ಆಕೆ ತನ್ನ ಮನೆಯ ಪರಿಸರದಿಂದ ಖಿನ್ನಳಾಗಿದ್ದಾಳೆಯೇ? ಅವಳ ಖಿನ್ನತೆಗೆ ಅಮ್ಮನ ಮಡಿಲಿನ ಸಾಂಗತ್ಯದ ಕೊರತೆಯೇ ಕಾರಣವೇ?

ನಿಜಕ್ಕೂ ಇದು ಸವಾಲಿನ ಪ್ರಕರಣವಾಗಿತ್ತು. ಉಮೀರಾಳಿಗಾಗಿ ನಾವೆಲ್ಲರೂ ನಮ್ಮ ಬುದ್ಧಿಶಕ್ತಿಯನ್ನು ಒಂದುಗೂಡಿಸಿದ್ದು ಮಾತ್ರವಲ್ಲ, ಚಿಕಿತ್ಸೆಗಾಗಿ ನೆರವನ್ನೂ ನೀಡಿದೆವು. ರೋಗ ಪತ್ತೆಗಾಗಿ ಅತ್ಯಗತ್ಯವಾದ ಪರಿಶೀಲನೆಗಳನ್ನು ನಡೆಸಲು ಹಣ ವ್ಯಯಿಸುವುದನ್ನು ಬಹಳಷ್ಟು ಸಮಯ ಪೋಷಕರು ಒಪ್ಪುವುದಿಲ್ಲ.

ಆದರೆ ಚಿಕಿತ್ಸೆಗೆ ವ್ಯಯಿಸುವಾಗ ಅವರಲ್ಲಿ ಈ ಮನೋಭಾವ ಇರುವುದಿಲ್ಲ. ಏಕಾಂಗಿಯಾಗಿರುವ, ಏಕಕಾಲದಲ್ಲಿ ತನ್ನಿಬ್ಬರು ರೋಗಪೀಡಿತ ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದ ಈ ನಿರುದ್ಯೋಗಿ ತಂದೆಯಿಂದ ಹಣವನ್ನು ನಾವು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?

ಸುಮಾರು ಒಂದು ತಿಂಗಳ ಸತತ ಪರಿಶೀಲನೆಯ ಬಳಿಕ ಉಮೀರಾಳಿಗೆ ಬಂದಿದ್ದ ಕಾಯಿಲೆಯನ್ನು ಪತ್ತೆ ಹಚ್ಚುವುದರಲ್ಲಿ ಸಫಲರಾದೆವು. ಅದು `ಆಟೊಯಿಮ್ಮುನೆ ಥೈರಾಯ್ಡಿಟಿಸ್.~

`ಆಟೊಯಿಮ್ಮುನೆ ಥೈರಾಯ್ಡಿಟಿಸ್~ ಶೇಕಡ 1.3ರಷ್ಟು ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ, ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳಲ್ಲಿ ಕಂಡುಬರುವಂತಹದ್ದು. ಈಕಾಯಿಲೆಯುಳ್ಳ ಮಕ್ಕಳು ರಕ್ತಹೀನತೆ, ಕೂದಲು ಉದುರುವಿಕೆ, ಮುಖ ಊದಿಕೊಳ್ಳುವಿಕೆ, ಚಟುವಟಿಕೆಗಳಿಂದ ವಿರಕ್ತಿ ಮತ್ತು ನಿರಾಸಕ್ತಿಗಳಿಂದ ಬಳಲುತ್ತಾರೆ.
 
ಇದಕ್ಕೆ ಚಿಕಿತ್ಸೆ ಕಷ್ಟಕರ. ನಿರ್ನಾಳ ಗ್ರಂಥಿ ಸ್ರವಿಸುವ, ಬೆಳವಣಿಗೆಯನ್ನು ನಿಯಂತ್ರಿಸುವ ಥೈರಾಕ್ಸಿನ್ ಎಂಬ ಹಾರ್ಮೋನು ಕಬ್ಬಿಣ ಅಂಶಗಳು ಮತ್ತು ಕೆಂಪು ರಕ್ತಕೋಶಗಳನ್ನು ಒಳಗೊಂಡಿರಬೇಕಾಗುತ್ತದೆ. ಆಕೆಯಲ್ಲಿ ಅದರ ಕೊರತೆ ಇರುವುದು ತಿಳಿಯಿತು. ಆರಂಭದ ರೋಗ ಪತ್ತೆ ಮಾಡುವ ಮುನ್ನ ಆಕೆಯ ಹೃದಯ ದೊಡ್ಡದಾಗಿತ್ತು.
 
ಹೀಗಾಗಿ ಆಕೆಗೆ ಹೃದಯ ಸ್ನಾಯುಗಳಿಗೆ ಸಂಬಂಧಿಸಿದ `ಕಾರ್ಡಿಯೊ ಮಿಯೊಪತಿ~ಯಿದೆ ಎಂದು ಊಹಿಸಲಾಗಿತ್ತು. ಹೃದಯದಲ್ಲಿ ರಕ್ತವನ್ನು ಹೊರಹಾಕುವ ಪ್ರಕ್ರಿಯೆ ತುಂಬಾ ನಿಧಾನಗತಿಯಲ್ಲಿತ್ತು. ಆ ಚಿಕಿತ್ಸೆ ನೀಡಿದಾಗಿನಿಂದ ಆಕೆಯ ಮುಖ ದಪ್ಪಗಾಗತೊಡಗಿತ್ತು. ರೋಗ ಒಂದೊಂದು ರೀತಿ ಕಾಣಿಸುತ್ತಿದ್ದಂತೆ ಬೇರೆ ಬೇರೆ ರೀತಿಯಲ್ಲಿ ಚಿಕಿತ್ಸೆ ನೀಡಲಾಯಿತು. ಅದು ಕೊನೆಗೆ ರೋಗ ಪತ್ತೆ ಮಾಡಲು ಕಷ್ಟಕರವಾದ ಪರಿಸ್ಥಿತಿಗೆ ಕೊಂಡೊಯ್ದಿತು.

ಆಕೆಯ ವ್ಯಾಧಿ ನಮ್ಮನ್ನು ಅಣಕಿಸುವಂತೆ ಕಂಡಿತು; ಒಂದು ದಿನ ಚೇತರಿಸಿಕೊಳ್ಳುತ್ತಿದ್ದ ಆಕೆ ಮಾರನೇ ದಿನ ಮತ್ತೆ ಅದೇ ಸ್ಥಿತಿಗೆ ತಲುಪುತ್ತಿದ್ದಳು. ಆಕೆ ಸುಧಾರಿಸಿಕೊಂಡಾಗ ವಾರ್ಡ್‌ಗೆ ಮತ್ತು ಕಾಯಿಲೆ ತೀವ್ರವಾದಾಗ `ಐಸಿಯು~ಗೆ ವರ್ಗಾಯಿಸಲಾಗುತ್ತಿತ್ತು. ಇದೆಲ್ಲವನ್ನೂ ಆಸ್ಪತ್ರೆಯಲ್ಲಿದ್ದ ಆಕೆಯ ಹೊಸ ಕುಟುಂಬ ನೋಡಿಕೊಳ್ಳುತ್ತಿತ್ತು. ಹೊಸ ಕುಟುಂಬವೆಂದರೆ- ವೈದ್ಯರು, ಪದವಿ ವಿದ್ಯಾರ್ಥಿಗಳು, ದಾದಿಯರು ಮತ್ತು ನೆರೆಹೊರೆ ರೋಗಿಗಳ ಸಹಾಯಕರು.

ಉಮೀರಾಗೆ ನೀಡಲಾಗುತ್ತಿದ್ದ ಥೈರಾಕ್ಸಿನ್ ಮಾತ್ರೆಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅಲ್ಲಿದ್ದ ರೋಗಿಯೊಬ್ಬರ ತಾಯಿಯಾದ ರತ್ನಮ್ಮ ನನಗೆ ಹೇಳಿದಾಗ ನನಗೆ ಆಘಾತ ಮತ್ತು ಬೇಸರ ಎರಡೂ ಆಯಿತು. ಈ ಗಂಭೀರ ಸನ್ನಿವೇಶದಲ್ಲಿ ಮಗುವಿನ ಚೇತರಿಕೆಗೆ ತಾಯಿಯ ಹಾಜರಿ ಅವಶ್ಯವಾಗಿತ್ತು.
 
ಇಬ್ಬರು ಕಾಯಿಲೆ ಪೀಡಿತ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಆ ತಂದೆ ತನ್ನ ಕೈ ಮೀರಿ ಪ್ರಯತ್ನ ಮಾಡುತ್ತಿದ್ದ. ಬಳಿಕ ಈ ಮಗುವಿನ ಯೋಗಕ್ಷೇಮ ನೋಡಿಕೊಳ್ಳುವಂತೆ ರತ್ನಮ್ಮ ಅವರಿಗೆ ಮನವಿ ಮಾಡಿದೆ. ಅಂತಿಮವಾಗಿ ಮಗು ಮಾತ್ರೆಗಳನ್ನು ಸೇವಿಸುವಂತೆ ಮಾಡುವ ಹೊಣೆಯನ್ನು ಡಾ. ಜಸ್ವಂತ್‌ಗೆ ಒಪ್ಪಿಸಿದೆ.
 
ಮಗುವಿನೊಂದಿಗೆ ಬೆರೆತು ಆಕೆಯನ್ನು ನಗುವಂತೆ, ಆಟವಾಡುವಂತೆ ಮಾಡುವ ಸವಾಲಿನ ಕೆಲಸವನ್ನು ಡಾ. ಭ್ರಮರಾಂಬಾ ಅವರಿಗೆ ವಹಿಸಲಾಯಿತು. ಇದು ಎರಡು ತಿಂಗಳ ಕಾಲ ಮುಂದುವರಿಯಿತು. ಉಮೀರಾ ನಮ್ಮ ದೈನಿಕ ಚರ್ಚೆಯ ಕೇಂದ್ರವಾಗಿದ್ದಳು. ಇದ್ದಕ್ಕಿದ್ದಂತೆ ಉಮೀರಾ ಆಕರ್ಷಕವಾಗಿ ಕಾಣಿಸತೊಡಗಿದಳು.

ನಗುನಗುತ್ತಾ ನಮ್ಮೆಲ್ಲರ ಜೊತೆ ಬೆರೆಯತೊಡಗಿದಳು. ಆಕೆ ತಾನು ಈಗ ಹೇಗೆ ಕಾಣುತ್ತಿದ್ದೇನೆ ಎನ್ನುವ ಬಗ್ಗೆ ಕಾಳಜಿ ವಹಿಸತೊಡಗಿದಳು. ತುಂಡಾಗಿದ್ದ ಕನ್ನಡಿಯ ಚೂರೊಂದರಲ್ಲಿ ತನ್ನ ಮುಖ ನೋಡಿಕೊಳ್ಳುತ್ತಿದ್ದಳು. ಹನ್ನೆರಡದ ಹರೆಯದ ಹೆಣ್ಣುಮಕ್ಕಳಲ್ಲಿ ಕಾಣುವ ಸಾಮಾನ್ಯ ವರ್ತನೆ ಅವಳಲ್ಲಿಯೂ ಕಂಡುಬಂತು.

ಉಮೀರಾ ನಾವು ತೆಗೆಯುತ್ತಿದ್ದ ಹಲವಾರು ಛಾಯಾಚಿತ್ರಗಳಿಗೆ ಪೋಸು ನೀಡಿದಳು. ತನ್ನ ತಂದೆಯ ಅಪರೂಪದ ಭೇಟಿ ಸಂದರ್ಭದಲ್ಲಿ ಆತನೊಂದಿಗೆ ಸಂತೋಷದಿಂದ ಮಾತನಾಡುತ್ತಿದ್ದಳು. ನಾನು ಆಟಿಕೆಗಳನ್ನು, ಬಟ್ಟೆಗಳನ್ನು ತಂದುಕೊಡುತ್ತಿದ್ದೆ. ಆಕೆ ಖುಷಿಯಿಂದ ಅದನ್ನು ಧರಿಸಿ ಪೋಸು ನೀಡುತ್ತಿದ್ದಳು.
 
ಆಕೆಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದ ನಾನು, ಆಕೆಯ ತಂದೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥನಾಗುವವರೆಗೂ ಆಕೆಯ ಬಿಡುಗಡೆಯ ದಿನಾಂಕವನ್ನು ಮುಂದೂಡತೊಡಗಿದೆ. ಒಂದು ದಿನ ತಂದೆ ಮತ್ತು ಮಗಳಿಗೆ ಆಸ್ಪತ್ರೆ ಸಾಕೆನಿಸಿ ಮನೆಗೆ ಹೋಗಲು ನಿರ್ಧರಿಸಿದರು.

ಸಂತೋಷದಿಂದಲೇ ಅವರನ್ನು ಬೀಳ್ಕೊಟ್ಟು, ಕಾಯಿಲೆಯಿಂದ ಸಂಪೂರ್ಣ ಗುಣಮುಖಳಾಗಲು ಬೇಕಾದ ಮೂರು ತಿಂಗಳಿಗೆ ಸಾಕಾಗುವಷ್ಟು ಔಷಧ ಮತ್ತು ಒಂದೆರಡು ವರ್ಷ ತೆಗೆದುಕೊಳ್ಳಬೇಕಾದ ಥೈರಾಕ್ಸಿನ್ ಮಾತ್ರೆಗಳನ್ನು ತರಿಸಿಕೊಟ್ಟೆವು. ಆಸ್ಪತ್ರೆಯಿಂದ ಹೊರಡುವ ದಿನದಂದು ಉಮೀರಾ ಮತ್ತು ಡಾ. ರಮ್ಯಾ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಫೋಟೋ ಸೆಷನ್ ನಡೆಸಿದರು.

ಉಮೀರಾ ಅಷ್ಟು ಸುಂದರವಾಗಿದ್ದನ್ನು ನನಗೇ ನಂಬಲು ಸಾಧ್ಯವಾಗುತ್ತಿರಲಿಲ್ಲ. ಚಿಕಿತ್ಸೆಯ ಬಳಿಕ ಆಕೆಯ ಊದಿಕೊಂಡಿದ್ದ ಮುಖ ಸರಿಯಾಗಿತ್ತು, ನಾಲ್ಕು ಅಡಿ ಮಾತ್ರವಿದ್ದ ಆಕೆ ಎತ್ತರಕ್ಕೆ ಬೆಳೆದಿದ್ದಳು. ನಾನು ಇನ್ನೂ ಕೆಲವು ಹೊಸ ಬಟ್ಟೆಗಳನ್ನು ಕೊಡಿಸಿ ಮತ್ತೆ ಶಾಲೆಗೆ ಹೋಗಬೇಕು ಎಂದು ಹೇಳಿದಾಗ ಆಕೆ ಕೂಡಲೇ ಸಮ್ಮತಿಸಿದಳು.

ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನ ಪ್ರಕರಣವನ್ನು ಬಗೆಹರಿಸಿದ ಖುಷಿ ನಮ್ಮದಾಗಿತ್ತು. ಈ ರೋಗದ ಪತ್ತೆಯೇ ಗೂಳಿಯೊಂದಿಗೆ ಕಾದಾಟ ನಡೆಸಿದಂತಾಗಿತ್ತು.

ಉಮೀರಾ ಬಿಡುಗಡೆಯಾಗಿ 10 ದಿನಗಳ ಬಳಿಕ ಮಾರ್ಚ್ ತಿಂಗಳಿನಲ್ಲಿ, ಕರ್ತವ್ಯದಲ್ಲಿದ್ದ ಪದವಿ ವಿದ್ಯಾರ್ಥಿನಿ ಡಾ. ಅನಿತಾ ನನ್ನ ಬಳಿ ಬಂದು, ಮಾರ್ಚ್ 5ರಂದು ಆಸ್ಪತ್ರೆಗೆ ದಾಖಲಾದ ಉಮೀರಾ ಹದಿನೈದೇ ನಿಮಿಷದಲ್ಲಿ ಕೊನೆಯುಸಿರೆಳೆದಳು ಎಂದು ಹೇಳಿದರು. ತೀವ್ರ ಆಘಾತ ಮತ್ತು ದುಃಖ ನನ್ನನ್ನು ಆವರಿಸಿತು. ನಾವು ಮಾಡಿದ ರೋಗ ನಿರ್ಣಯ ತಪ್ಪಾಗಿತ್ತೇ?

“ಇಲ್ಲಾ ಮೇಡಂ. ಆಕೆ ಸತ್ತದ್ದು ಅತಿಯಾದ ವಾಂತಿ ಮತ್ತು ಬೇಧಿಯಿಂದ” ಎಂದು ಅನಿತಾ ಹೇಳಿದರು. ಉಮೀರಾ ವಾಸಿಸುತ್ತಿದ್ದದ್ದು ನೈರ್ಮಲ್ಯವೇ ಇಲ್ಲದ ಕೊಳೆಗೇರಿಯಲ್ಲಿ. ಆಕೆ ಕಲುಷಿತ ನೀರನ್ನು ಕುಡಿದಿರುವ ಸಾಧ್ಯತೆಯಿತ್ತು. ಆ ಮಗು ಕಾಯಿಲೆಯನ್ನು ಸಹಿಸಿಕೊಂಡು ಎರಡು ದಿನ ಒಬ್ಬೊಂಟಿಯಾಗಿ ಮನೆಯಲ್ಲಿ ಕಳೆದಿತ್ತು.

ಕೊನೆಗೆ ದೇಹದಲ್ಲಿ ನೀರಿನ ಅಂಶವೇ ಇಲ್ಲದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು ನೆರೆಹೊರೆಯವರಿಗೆ ತಿಳಿಯಿತು. ಆಸ್ಪತ್ರೆಗೆ ದಾಖಲಿಸಿದರೂ ಹದಿನೈದು ನಿಮಿಷಗಳಲ್ಲಿಯೇ ಆಕೆ ಕೊನೆಯುಸಿರೆಳೆದಳು.

ಆಕೆ ಕೇವಲ ವಿಶ್ವ ಆರೋಗ್ಯ ಸಂಸ್ಥೆಯ `ಓಆರ್‌ಎಸ್~ ಪುಡಿ ತೆಗೆದುಕೊಂಡಿದ್ದರೆ ಅಥವಾ ಕೇವಲ ಸಕ್ಕರೆ-ಉಪ್ಪು ನೀರು ಸೇವಿಸಿದ್ದರೆ... ಅಥವಾ ನಾನು ಆಕೆಯನ್ನು ಬಿಡುಗಡೆ ಮಾಡದೆ ವಾರ್ಡ್‌ನಲ್ಲಿಯೇ ಇರಿಸಿಕೊಂಡಿದ್ದರೆ?

ಮುದ್ದಿನ ಉಮೀರಾಳ ಸಾವನ್ನು ನಾನು ತಡೆದುಕೊಳ್ಳಲಾರೆ. ಅತ್ಯಂತ ಕ್ಲಿಷ್ಟಕರವಾಗಿದ್ದ ರೋಗನಿರ್ಣಯ ಮತ್ತು ಚಿಕಿತ್ಸೆ ಎಂಬ `ಮಹಾಯುದ್ಧ~ವನ್ನು ಜಯಿಸಿ ಗ್ಯಾಸ್ಟ್ರೋಯೆಂಟರಿಟಿಸ್ (ವಾಂತಿ-ಬೇಧಿ) ಎಂಬ ಸಮರದಲ್ಲಿ ಸೋತ ಸ್ಥಿತಿ ನಮ್ಮದು.
ವೈದ್ಯಕೀಯ ಸವಾಲಿನಲ್ಲಿ ಗೆದ್ದರೂ, ಸಾಮಾಜಿಕ ಸವಾಲಿನಲ್ಲಿ ಹಲವು ಬಾರಿ ಇಂಥ ಮಕ್ಕಳನ್ನು ನಾವು ಕಳೆದುಕೊಂಡಿದ್ದೇವೆ.

ಮತ್ತೊಂದು ಜೀವ ಹೀಗೆ ಕರಗಿ ಹೋಯಿತು. ನಾವು (ವೈದ್ಯರು) ಮತ್ತು ಉಮೀರಾ (ಮಗಳು) ಕಳೆದ ಜುಲೈ 1ರ `ವೈದ್ಯರು ಮತ್ತು ಹೆಣ್ಣುಮಕ್ಕಳ~ ದಿನ ಆಚರಿಸುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡೆವು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.