‘ವಡ್ಡಾರಾಧನೆ ಹೆಸರು: ಒಂದು ಹೊಸ ವಿಚಾರ’ ಎಂಬ ನನ್ನ ಲೇಖನವನ್ನು ಆಕ್ಷೇಪಿಸ ಪ್ರೊ. ಹಂಪನಾ ಅವರು (ಆ. 21) ಪ್ರತಿಕ್ರಿಯೆ ಬರೆದಿದ್ದಾರೆ. ನನ್ನ ಲೇಖನ ಪ್ರಕಟವಾದಾಗ, ಜೈನ ಧರ್ಮೀಯರೂ ಸೇರಿದಂತೆ ಅನೇಕರು ದೂರವಾಣಿಯ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದರು. ಹಾಗೆ ಸಂತೋಷ ವ್ಯಕ್ತಪಡಿಸಿದವರಲ್ಲಿ ಹಂಪನಾ ಅವರೂ ಒಬ್ಬರು. ಅವರು ಈ ರೀತಿಯ ಸ್ಪಷ್ಟೀಕರಣ ಬರೆದದ್ದು ನನಗೆ ಸೋಜಿಗ ಉಂಟುಮಾಡಿತು.
ವಡ್ಡಾರಾಧನೆಗೆ ಭಗವತೀ ಆರಾಧನಾ ಎಂಬುದು ಮೂಲ ಆಕರ ಸ್ವರೂಪದ ಕೃತಿಯಾದ್ದರಿಂದ ಅದಕ್ಕೆ ಮೂಲಾರಾಧನಾ ಎಂದೂ, ಅದು ಬೃಹತ್ ಪ್ರಮಾಣದ ಕೃತಿಯಾದ್ದರಿಂದ ಬೃಹದಾರಾಧನಾ ಎಂದೂ ಬೇರೆ ಬೇರೆ ಹೆಸರುಗಳಾದುವು; ಬೃಹದಾರಾಧನಾ ಎಂಬುದು ಅಖಂಡವಾಗಿ ತದ್ಭವಗೊಂಡು ವಡ್ಡಾರಾಧನಾ ಎಂಬ ರೂಪ ಪಡೆಯಿತು – ಎಂದು ಅವರು ಬರೆದಿದ್ದಾರೆ. ಒಟ್ಟಿನಲ್ಲಿ ವಡ್ಡಾರಾಧನೆಗೆ ಮೂಲ ಆಕರ ಹಾಗೂ ನೇರ ಆಕರ ಬೃಹದಾರಾಧನಾ ಗ್ರಂಥ. ಬೃಹದಾರಾಧನಾ ಎಂಬ ಹೆಸರು ವಡ್ಡಾರಾಧನಾ(ನೆ) ಆಗಿದೆ ಎಂದು ಪ್ರೊ. ಹಂಪನಾ ಬರೆದಿದ್ದಾರೆ. ಇಲ್ಲಿ ವಿಚಾರಣೀಯವಾದ ಕೆಲವು ಅಂಶಗಳನ್ನು ನೋಡಬೇಕು:
ಬೃಹತ್ ಎಂಬ ಶಬ್ದ ಭೌತಿಕ ಗಾತ್ರ ಪ್ರಮಾಣಗಳನ್ನು ಹೇಳುವ ಶಬ್ದವೇ ಹೊರತು ಗುಣ–ಮಹತ್ತ್ವಗಳನ್ನು ಹೇಳುವ ಶಬ್ದವಲ್ಲ. ಮೂಲ ಆರಾಧನಾ ಗ್ರಂಥ ಸಹಸ್ರಾಂತರ ಶ್ಲೋಕಗಳನ್ನು ಅಥವಾ ಪ್ರಾಕೃತ ಪದ್ಯ(ಗಾಹೆ)ಗಳನ್ನು ಹೊಂದಿದ್ದ ಬೃಹತ್ ಕೃತಿ. ಆದ್ದರಿಂದ ಅದನ್ನು ಗಾತ್ರದ ದೃಷ್ಟಿಯಿಂದ ಬೃಹತ್ ಆರಾಧನಾ ಎಂದು ಕರೆದಿರುವುದು ಉಚಿತವಾಗಿದೆ. ಆದರೆ, ಕನ್ನಡದ ಕೃತಿಯು ಮೂಲಕೃತಿಯ ಒಂದೇ ಒಂದು ಭಾಗದ ಟೀಕಾಗ್ರಂಥ ಮಾತ್ರ. ಆದುದರಿಂದ ಇದು ಮೂಲದ ಹಾಗೆ ಬೃಹತ್ತಾದ್ದಲ್ಲ ಎನ್ನುವುದು ಸುವಿದಿತ. ಹಾಗಾಗಿ ಆ ಹೆಸರು ಮೂಲದ ಬೃಹತ್ ಆರಾಧನಾ ಎಂಬುದರಿಂದ ಬಂತು ಎಂದು ತಿಳಿಯುವುದು ಸುಸಂಗತವೆನಿಸುವುದಿಲ್ಲ.
ವಡ್ಡಾರಾಧನೆ ಎಂಬಲ್ಲಿ ‘ವಡ್ಡ’ ಎಂಬುದು ಬೃಹತ್ ಎಂಬ ಅರ್ಥದ ಶಬ್ದವಾಗಿದ್ದರೆ, ಕೃತಿಕಾರ ಅದೇ ಬೃಹತ್ ಶಬ್ದವನ್ನೇ ನೇರವಾಗಿ ಬಳಸಿ ‘ಬೃಹದಾರಾಧನೆ’ ಎಂದೇ ಕೃತಿಯ ಹೆಸರನ್ನು ಕರೆಯಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಇದು ಕೂಡಾ ವಡ್ಡ ಎಂಬುದಕ್ಕೆ ಇಲ್ಲಿ ಆ ಅರ್ಥ ಇಟ್ಟುಕೊಂಡಿಲ್ಲ; ಅದನ್ನು ಇಲ್ಲಿ ಬಳಸಿರುವುದು ಭಿನ್ನ ಅರ್ಥದಲ್ಲಿ ಎಂದು ಸ್ವಯಂವ್ಯಕ್ತವಾಗುತ್ತದೆ.
ಹಂಪನಾ ಅವರು ಸಂಸ್ಕೃತದ ‘ವರ್ಧಮಾನ’ ಎಂಬುದು ಪ್ರಾಕೃತದಲ್ಲಿ ‘ವಡ್ಡಮಾಣ’ ಎಂದು ತದ್ಭವಗೊಳ್ಳುತ್ತದೆಯೇ ಹೊರತು ‘ವಡ್ಡ’ ಎಂದಲ್ಲ. ಕನ್ನಡದ ಶಾಸನಗಳಲ್ಲಿ ಸಂಸ್ಕೃತದ ವರ್ಧಮಾನ ಅಥವಾ ಪ್ರಾಕೃತದ ವಡ್ಡಮಾಣ ಎಂಬುದು ಎಲ್ಲಿಯೂ ವಡ್ಡ ಎಂದು ಬಂದಿಲ್ಲ ಎಂದು ಬರೆದಿರುವುದು ಆಶ್ಚರ್ಯಕರವಾಗಿದೆ.
ನಾನು ನನ್ನ ಲೇಖನದಲ್ಲಿ ಶಾಸನಗಳಲ್ಲಿ ಬರುವ ಅಂಥ ಹೆಸರುಗಳನ್ನು ಉದಾಹರಿಸಿರುವುದನ್ನು ಅವರು ಗಮನಿಸಲಿಲ್ಲವೇ? ವಡ್ಡಾಚಾರ್ಯ–ವಡ್ಡದೇವ ಎಂಬುವು ಹಿರಿಯ ಆಚಾರ್ಯ ಹಿರಿಯ ದೇವ ಎಂಬರ್ಥದ ಹೆಸರುಗಳು ಎಂದು ಬರೆಯುತ್ತ ಹಂಪನಾ ಅವರು – ಇವು ದೊಡ್ಡಪ್ಪ, ದೊಡ್ಡೇಗೌಡ, ದೊಡ್ಡಸ್ವಾಮಿ, ಹಿರೇಗೌಡ ಎಂಬಂತಹ ಹೆಸರುಗಳು ಎಂದು ಬರೆದಿರುವುದು ಇನ್ನಷ್ಟು ಆಶ್ಚರ್ಯಕರವಾಗಿದೆ.
ಏಕೆಂದರೆ, ಇಲ್ಲಿ ಅವರು ಹೆಸರಿಸಿರುವ ದೊಡ್ಡಪ್ಪ, ದೊಡ್ಡೇಗೌಡ, ದೊಡ್ಡಸ್ವಾಮಿ, ಹಿರೇಗೌಡ ಇತ್ಯಾದಿ ಹೆಸರುಗಳೆಲ್ಲ ಎಲ್ಲ ಸಂದರ್ಭದಲ್ಲೂ ಅವರೆಲ್ಲ ಹಿರಿಯರು ದೊಡ್ಡವರು ಎಂಬ ಅರ್ಥದಲ್ಲೇ ಅಥವಾ ಆ ಕಾರಣಕ್ಕೇ ಬಂದವುಗಳಲ್ಲ. ದೊಡ್ಡಪ್ಪ ಎಂಬುದಕ್ಕೆ ತಂದೆಯ ಅಣ್ಣ ಎಂಬಂಥ ಅರ್ಥ ಇರುವುದಾದರೂ ಉಳಿದೆಲ್ಲವೂ ವ್ಯಕ್ತಿಗಳಿಗೆ ನೇರವಾಗಿ ಇಟ್ಟ ಹೆಸರುಗಳು ಮಾತ್ರ. ಅಂದರೆ ಅವು ರೂಢನಾಮಗಳಲ್ಲ; ಅಂಕಿತನಾಮಗಳು ಮಾತ್ರ. ಜನ ಅವುಗಳನ್ನು ಸ್ವೀಕರಿಸುವುದು ಹಾಗೆಯೇ. ಶ್ರವಣಬೆಳಗೊಳದಲ್ಲಿ ಅನೇಕ ಮುನಿಗಳು, ದೊಡ್ಡವರು, ಹಿರಿಯರು ಇದ್ದೇ ಇದ್ದರು. ಅವರೆಲ್ಲರನ್ನು (ಅಲ್ಲದಿದ್ದರೂ ಇನ್ನೂ ಹಲವರನ್ನು) ವಡ್ಡದೇವರೆಂದು ಕರೆಯಬೇಕಾಗಿತ್ತಷ್ಟೆ? ಆದರೆ ಹಾಗೆ ಕರೆದಿಲ್ಲ. ಒಬ್ಬರನ್ನು ಮಾತ್ರ ಹಾಗೆ ಕರೆಯಲು ಕಾರಣವೇನು? ಅದಕ್ಕೆ ಕಾರಣ, ಆ ಮುನಿಯ ಹೆಸರೇ ಅದಾಗಿತ್ತು, ಅಷ್ಟೆ.
ಹಂಪನಾ ಅವರು ಬರೆಯುವ ಹಾಗೆ ವಡ್ಡದೇವ, ವಡ್ಡಾಚಾರ್ಯ ಎಂಬುವಕ್ಕೆ ಹಿರಿಯ ಆಚಾರ್ಯ ಹಿರಿಯದೇವ ಎಂಬ ರೂಢನಾಮಗಳ ಅರ್ಥ ಸಲ್ಲುವುದಿಲ್ಲ; ವರ್ಧಮಾನದೇವ, ವರ್ಧಮಾನ ಆಚಾರ್ಯ ಎಂಬ ಅಂಕಿತನಾಮಗಳ ಅರ್ಥ ಸಲ್ಲುತ್ತದೆ.
ಶಾಸನಗಳಲ್ಲಿ ಕಾಣುವ ವಡ್ಡದೇವ (ಎಕ 2, ಶ್ರವಣಬೆಳಗೊಳ 55), ವಡ್ಡಾಚಾರ್ಯ ಬ್ರತಿಪತಿ (ಎಕ 7, ಶಿವಮೊಗ್ಗ 64), ವಡ್ಡೇಶ್ವರದೇವ (ಎಕ 6, ಕಡೂರು 35) – ಮುಂತಾದ ಹೆಸರುಗಳು ಬಂದಿರುವುದೂ ವರ್ಧಮಾನ ಎಂಬ ಮೂಲದಿಂದಲೇ ಎಂಬುದನ್ನು ವಿವರಿಸಬೇಕಾಗಿಲ್ಲ. ವಡ್ಡ ಎಂಬ ರೂಪ ಶಾಸನಗಳಲ್ಲಾಗಲಿ, ಸಾಹಿತ್ಯದಲ್ಲಾಗಲಿ ಬಂದಿಲ್ಲ ಎಂದು ಹಂಪನಾ ಹೇಳಿರುವುದು ಸರಿಯಲ್ಲ ಎಂಬುದಕ್ಕೆ ಈ ನಿದರ್ಶನಗಳನ್ನು ನೋಡಬೇಕು.
ಕೃತಿಕಾರ ‘ವರ್ಧಮಾನಾರಾಧನೆ’ ಎಂಬ ಹೆಸರಿಟ್ಟದ್ದು, ಅನೇಕ ಕೃತಿಗಳ ದೀರ್ಘ ಹೆಸರುಗಳು ಸಂಕ್ಷೇಪಗೊಂಡಿರುವಂತೆ, ಅದು ಸಹ ಕಾಲಾಂತರದಲ್ಲಿ ಸಂಕ್ಷೇಪಗೊಂಡು, ವಡ್ಡಾರಾಧನೆ ಆಗಿರಬೇಕೆಂದು ತರ್ಕಬದ್ಧವಾಗಿ ಹೇಳಿದ್ದೇನೆಯೇ ಹೊರತು, ಹುಟ್ಟಿಸಿಕೊಂಡು ಹೇಳಿರುವುದಲ್ಲ.
ಹಂಪನಾ ಅವರು ಹಾಗೆ ಆರೋಪಿಸುವ ಮುನ್ನ, ಈ ಕೃತಿಯ ಹೆಸರಿಗೆ ಮೂಲವಿರಬಹುದೆಂದು ಈಗಾಗಲೇ ಹೇಳಲಾಗುತ್ತ ಬಂದಿರುವ ವೃದ್ಧಾರಾಧನೆಯಾಗಲಿ ಬೃಹದಾರಾಧನೆಯಾಗಲಿ ಮೂಲತಃ ಊಹೆಯಿಂದ ಹೇಳಿದ ಹೆಸರುಗಳಾದರೂ ಅವನ್ನು ಹುಟ್ಟಿಸಿಕೊಂಡು ಹೇಳಿದವುಗಳೆಂದು ಇದುವರೆಗೆ ಯಾರೂ ಹೇಳಿಲ್ಲ; ಅವೆಲ್ಲ ವಡ್ಡಾರಾಧನೆ ಹೆಸರಿನ ಮೂಲವನ್ನು ಹುಡುಕುವ ಪ್ರಯತ್ನದ ಸಾಧ್ಯತೆಗಳು ಮಾತ್ರ; ಹಾಗೆಯೇ ನನ್ನದು ಕೂಡಾ – ಎಂದು ಅವರು ಆಲೋಚಿಸಬೇಕಾಗಿತ್ತು.
– ಡಾ. ಬಿ. ರಾಜಶೇಖರಪ್ಪ, ಚಿತ್ರದುರ್ಗ
(ಈ ವಿಷಯಕ್ಕೆ ಸಂಬಂಧಿಸಿದ ಚರ್ಚೆ ಇಲ್ಲಿಗೆ ಮುಕ್ತಾಯ –ಸಂ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.