ADVERTISEMENT

ವಾಮನ ಗ್ರಾಮ `ಮೌಲಿನಾಂಗ್'

ಡಾ.ಸದಾನಂದ ಪೆರ್ಲ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST
ಹಳ್ಳಿಗೆ ತೆರಳುವ ಸುಂದರ ಕಾಲುಹಾದಿ...
ಹಳ್ಳಿಗೆ ತೆರಳುವ ಸುಂದರ ಕಾಲುಹಾದಿ...   

`ನೀವು ನೋಡಲೇಬೇಕು. ನಮ್ಮದು ಮಾದರಿ ಗ್ರಾಮ. ಇ್ಲ್ಲಲಿಯವರೆಗೆ ಬಂದು ಮಿಸ್ ಮಾಡಿದ್ರೆ ಆಮೇಲೆ ಪಶ್ಚಾತ್ತಾಪ ಪಡುವುದು ಖಂಡಿತ'- ಶಿಲ್ಲಾಂಗ್‌ನ ಜಸ್ನಿನ್ ರಾಠಿ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಹ್ವಾನವನ್ನು ಸಲೀಸಾಗಿ ತೆಗೆದುಹಾಕಲು ಮನಸ್ಸು ಬರಲಿಲ್ಲ. ಸ್ವಚ್ಛ, ಸುಂದರ ಗ್ರಾಮವನ್ನು ನೋಡಲೇಬೇಕು ಎಂದು ಮನಸ್ಸಾಯಿತು.

ಉತ್ತರ ಈಶಾನ್ಯದ ಏಳು ಸಹೋದರಿ ರಾಜ್ಯಗಳಲ್ಲಿ ಮೇಘಾಲಯವೂ ಒಂದು. ಬಾಂಗ್ಲಾ ದೇಶದ ಗಡಿಗೆ ತಾಗಿಕೊಂಡಿರುವ ಮೇಘಾಲಯದ ಈ ಮಾದರಿ ಗ್ರಾಮದ ಹೆಸರು ಮೌಲಿನಾಂಗ್. ಹಸಿರು ಸಿರಿಯ ಸುಂದರ ಊರಿದು. ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಬಾಂಗ್ಲಾ ಗಡಿಗುಂಟದ ಡೌಕಿನ್ ರಸ್ತೆಯಲ್ಲಿ ಸುಮಾರು 92 ಕಿ.ಮೀ ದೂರದಲ್ಲಿ ಪೂರ್ವಖಾಸಿ ಪರ್ವತಗಳ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮವಿದು. ಪರ್ವತಗಳ ಬಳಸಿ ಸಾಗುವ ರಸ್ತೆಯ ಪಯಣ ಒಂದು ಸುಂದರ ಅನುಭವ.

ಮಂಜು ಕವಿದ ಬೆಟ್ಟಗಳ ಸಾಲು, ಝುಳು ಝುಳು ಹರಿಯುವ ಝರಿಗಳು, ದೃಷ್ಟಿ ಹರಿಸಿದಷ್ಟೂ ಮಿಗುವ ನಿತ್ಯ ಹರಿದ್ವರ್ಣ- ಸಂತಸದ ಜೊತೆಗೆ ಆತಂಕವನ್ನೂ ಉಂಟು ಮಾಡುವ ಪಯಣವಿದು. ಕೆಲವೊಮ್ಮೆ ಮೈಲಿಗಟ್ಟಲೆ ಸಾಗಿದರೂ ಮನೆಗಳ ಸುಳಿವೇ ಇಲ್ಲ. ದಾರಿ ಮಧ್ಯೆ ಕೆಲವೆಡೆ ಭಯ ಹುಟ್ಟಿಸುವ ಪ್ರಪಾತಗಳು. ಇದು ಪೂರ್ವ ಖಾಸಿ ಪರ್ವತ ಸಾಲುಗಳ ರುದ್ರ ರಮಣೀಯ ದೃಶ್ಯ.

ಶಿಲ್ಲಾಂಗ್‌ನಿಂದ ಚಿರಾಪುಂಜಿ ರಸ್ತೆಯಲ್ಲಿ 12 ಕಿ.ಮೀ. ದೂರದಲ್ಲಿ ಕವಲೊಡೆಯುವ ರಸ್ತೆ ಡೌಕಿನ್ ಕಡೆಗೆ ಸಾಗುತ್ತದೆ. ಡಾಂಗ್‌ಡೋರ್ಮ, ಪೆನ್ಸುಲಾ ಗ್ರಾಮವೆಂಬ ಸಣ್ಣ ಸಣ್ಣ ಊರುಗಳನ್ನು ದಾಟಿ ಪೊಂಗ್‌ಟಂಗ್ ಗ್ರಾಮದಲ್ಲಿ ಬಲರಸ್ತೆಯಲ್ಲಿ 18 ಕಿ.ಮೀ ದೂರ ಸಾಗಿದರೆ ಮೌಲಿನಾಂಗ್ ಎದುರಾಗುತ್ತದೆ. ಪೂರ್ವ ಖಾಸಿ ಪರ್ವತಕ್ಕೆ ಹೊಂದಿಕೊಂಡಿರುವ `ದೇವರ ನಾಡಿನ ಉದ್ಯಾನ'ವೆಂದೇ ಬಣ್ಣಿಸಲಾಗುವ ಸಂಪೂರ್ಣ ಸ್ವಚ್ಛ ಗ್ರಾಮ ಇದು. ಈ ಗ್ರಾಮದ ಜನರು ತಮ್ಮೂರನ್ನು `ಪ್ರಕೃತಿ ಪರಿಸರೋದ್ಯಮ'ದ ಕೇಂದ್ರವಾಗಿ ಮಾರ್ಪಡಿಸಿರುವುದು ವಿಶೇಷ.

ಪುಟ್ಟ ಗ್ರಾಮದ ದಿಟ್ಟ ಸಾಧನೆ
ಒಂದು ಬಾರಿ ಏಷ್ಯಾಖಂಡದಲ್ಲೇ ಅತೀ ಸ್ವಚ್ಛ ಗ್ರಾಮ; ಇನ್ನೊಂದು ವರ್ಷ ಭಾರತದ ಅತೀ ಸ್ವಚ್ಛ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಊರು ಮೌಲಿನಾಂಗ್. ಈ ಗ್ರಾಮದ ವೀಕ್ಷಣೆಗೆ ತೆರಳಿದಾಗ ಎದುರಾಗುವ ಬಿಕ್ಕಿ ವಲಾಂಗ್, ಗ್ರಾಮದ ದರ್ಬಾರ್‌ನಿಂದ ನಿಯೋಜಿತನಾದ ವ್ಯಕ್ತಿ. ಗ್ರಾಮದ ಜನಸಂಖ್ಯೆಯಿಂದ ಹಿಡಿದು ಪ್ರಗತಿಯ ಮುಂದಿನ ರೂಪುರೇಷೆಗಳ ಕುರಿತು ಖಾಸಿ ಮಿಶ್ರಿತ ಹಿಂದಿ ಭಾಷೆಯಲ್ಲಿ ಅರಳು ಹುರಿದಂತೆ ಉತ್ತರಿಸುತ್ತಾನೆ. ಈ ಗ್ರಾಮದ ಜನಭಾಷೆ ಖಾಸಿವಾರ್.

2004ರಲ್ಲಿ ಏಷ್ಯಾದ ಅತೀ ಸ್ವಚ್ಛ ಗ್ರಾಮವೆಂಬ ಹೆಗ್ಗಳಿಕೆಗೆ ಮೌಲಿನಾಂಗ್ ಪಾತ್ರವಾಗಲು ಶ್ರಮಿಸಿದವರು `ಬಿಬಿಸಿ'ಯ ತಿಮೋತಿ ಅಲೆನ್. ಬಿಬಿಸಿಯ ವಕ್ತಾರನ ಕಿವಿಗೆ ಬಿದ್ದ ಸುದ್ದಿಯ ಮೇಲೆ ಸಾಕ್ಷ್ಯರೂಪಕ ಸಿದ್ಧಗೊಂಡು ಬಿತ್ತರಗೊಂಡಾಗ ಏಷ್ಯಾದಲ್ಲೇ ದೊಡ್ಡ ಸುದ್ದಿಯಾಯಿತು. ನಂತರ ಡಿಸ್ಕವರಿ ಚಾನೆಲ್ ತಂಡ ಇಲ್ಲಿಗೆ ಭೇಟಿ ನೀಡಿ ವಿಶೇಷ ವರದಿ ಪ್ರಸಾರ ಮಾಡಿತು.

ಬಿಕ್ಕಿ ವಲಾಂಗ್ ಹೇಳುವ ಪ್ರಕಾರ ಈ ಗ್ರಾಮದಲ್ಲಿ ಒಟ್ಟು 94 ಕುಟುಂಬಗಳಿವೆ. ಜನರ ಸಂಖ್ಯೆ 516. ಇದರಲ್ಲಿ 240 ಮತದಾನದ ಹಕ್ಕು ಹೊಂದಿರುವ ವಯಸ್ಕರಿದ್ದಾರೆ. ಮೂರು ಶಾಲೆಗಳಲ್ಲಿ ಎರಡು ಕಿರಿಯ ಪ್ರಾಥಮಿಕ ಶಾಲೆಗಳು, ಮತ್ತೊಂದು ಹಿರಿಯ ಪ್ರಾಥಮಿಕ ಶಾಲೆ. ವಾಪೂರ್ ನದಿ ತಟದ ಈ ಗ್ರಾಮದಲ್ಲಿ ಎರಡು ಚರ್ಚ್‌ಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ 18 ಕಿ.ಮೀ. ದೂರದ ಪೊಂಗ್‌ಟಂಗ್‌ನಲ್ಲಿದೆ.

ಕಾಲ್ನಡಿಗೆಯಲ್ಲಿ ಮೂರು ಕಿ.ಮೀ ದೂರದಲ್ಲಿ ಭಾರತ-ಬಾಂಗ್ಲಾ ಗಡಿ ಇದ್ದು, ಬಾಂಗ್ಲಾದ ಲಿನ್ ಹಾಟ್ ಇಲ್ಲಿನವರಿಗೆ ಮುಖ್ಯ ಮಾರುಕಟ್ಟೆ. ರಸ್ತೆ ಮೂಲಕ ಈ ಮಾರುಕಟ್ಟೆಗೆ ಹೋಗಲು 10 ಕಿ.ಮೀ. ಸುತ್ತಬೇಕು. ಕಸಪೊರಕೆ, ಹುಲ್ಲು (ಬ್ರೂಮ್ ಸ್ಟಿಕ್), ಅಡಿಕೆ, ತೇಜಪತ್ರ, ಕಿತ್ತಳೆ, ಅನಾನಸ್ ಮುಂತಾದವುಗಳು ಮೌಲಿನಾಂಗ್ ಗ್ರಾಮದಿಂದ ಬಾಂಗ್ಲಾ ಮಾರುಕಟ್ಟೆಗೆ ಸಾಗಣೆಯಾಗುತ್ತದೆ. ಬಾಂಗ್ಲಾದ ವಿಶೇಷ ಮರದಿಂದ ತಯಾರಿಸಿದ ಕರಕುಶಲ ವಸ್ತುಗಳು, ಬಟ್ಟೆ, ಅಕ್ಕಿ, ಮುಂತಾದ ದಿನನಿತ್ಯದ ಅವಶ್ಯಕ ಸಾಮಗ್ರಿಗಳನ್ನು ಇಲ್ಲಿಗೆ ತರಲಾಗುತ್ತಿದೆ.

ಮೌಲಿನಾಂಗ್‌ನ ವಿಶೇಷ
ಮೌಲಿನಾಂಗ್ ಗ್ರಾಮಕ್ಕೆ ಸ್ವಚ್ಛ ಗ್ರಾಮದ ಪುರಸ್ಕಾರ ದೊರಕಲು ಪ್ರಮುಖ ಕಾರಣಗಳಲ್ಲಿ- ಶೇಕಡಾ 100ರಷ್ಟು ಶಿಕ್ಷಣ, ಪ್ರತಿ ಮನೆಗೂ ಸ್ವಚ್ಛ ಕುಡಿಯುವ ನೀರು, ಪ್ರತಿ ಮನೆಗೂ ಶೌಚಾಲಯ, ಗ್ರಾಮದ ಎಲ್ಲಾ ಕಡೆಗೂ ಕಾಂಕ್ರೀಟ್ ರಸ್ತೆ, ಗ್ರಾಮದ ತುಂಬಾ ಉದ್ಯಾನವನಗಳು, ಕೆರೆ, ಸಾರ್ವಜನಿಕ ಶೌಚಾಲಯ, ಮೂರು ಶಾಲೆ ಒಂದು ಸಮುದಾಯ ಭವನ, ಇವೆಲ್ಲವೂ ಸೇರಿವೆ. ಒಂದು ಮಾದರಿ ಗ್ರಾಮಕ್ಕೆ ಇನ್ನೇನು ಬೇಕು?

ಗ್ರಾಮದ ನೈರ್ಮಲ್ಯ ಕಾಪಾಡಲು ಗ್ರಾಮಸ್ಥರು ಸ್ವತಃ ಶ್ರಮದಾನ ಮಾಡುತ್ತಾರೆ. ಪ್ರತಿ ದಿನ ಮೂರು ಮನೆಗಳಿಂದ ತಲಾ ಒಬ್ಬರಂತೆ ಒಟ್ಟು ಮೂರು ಜನ ಬೆಳಗಿನಿಂದ ಸಂಜೆಯತನಕ ಶುಚಿತ್ವ, ಹೂ ಗಿಡಗಳಿಗೆ ನೀರು ಹಾಕುವುದು, ಕಸ ಎತ್ತುವುದು ಸೇರಿದಂತೆ ಪರಿಸರ ಪಾಲನೆಯ ಕೆಲಸದಲ್ಲಿ ನಿರತರಾಗುತ್ತಾರೆ. `ಸಂಬಳ ಎಷ್ಟು?' ಎಂದು ಕೆಲಸ ನಿರತ ಖಾಸಿ ಹೆಣ್ಣು ಮಕ್ಕಳಲ್ಲಿ ಕೇಳಿದೆ. ಅವರು ಹೇಳಿದರು- `ಇದು ನಮ್ಮ ಗ್ರಾಮ, ನಮ್ಮ ಕೆಲಸ'.

ಈ ಗ್ರಾಮದ ಶೇಕಡಾ 20ರಷ್ಟು ಜನರು ಶಿಲ್ಲಾಂಗ್ ಮತ್ತಿತರೆಡೆ ಸರ್ಕಾರಿ ಉದ್ಯೋಗಗಳಲ್ಲಿ ನಿರತರಾಗಿದ್ದಾರೆ. ಇವರೆಲ್ಲಾ ವರ್ಷಕ್ಕೆ 2-3 ಬಾರಿ ಹಬ್ಬ ಹರಿದಿನಗಳಲ್ಲಿ ಮಾತ್ರ ಗ್ರಾಮಕ್ಕೆ ಭೇಟಿ ನೀಡಿ ಸಂಭ್ರಮಿಸುತ್ತಾರೆ.

ಗ್ರಾಮ ಆಡಳಿತದ ಹೊಸ ಪರಿ
ಭಾರತದ ಯಾವ ಗ್ರಾಮದಲ್ಲೂ ಇಲ್ಲದ ಆಡಳಿತ ಶೈಲಿ ಇಲ್ಲಿದೆ. ಅದು `ಗ್ರಾಮ ದರ್ಬಾರ್' (ಗಾಂವ್ ದರ್ಬಾರ್). ಈ ದರ್ಬಾರ್‌ಗೊಬ್ಬ `ಹೆಡ್ ಮ್ಯೋನ್' ಹೆಸರಿನ ಮುಖ್ಯಸ್ಥ ಇದ್ದಾನೆ. ಈತನ ನಾಯಕತ್ವದಲ್ಲಿ 20 ನಾಮಕರಣ ಸದಸ್ಯರಿದ್ದಾರೆ. ಇವರು ತಿಂಗಳಿಗೆ ಒಂದೆರಡು ಬಾರಿ ಸಭೆ ಸೇರಿ ಚರ್ಚೆ ಮಾಡುತ್ತಾರೆ. ಪರಿಸರ, ಕುಟುಂಬ, ಜಮೀನುಗಳ ವ್ಯಾಜ್ಯಕ್ಕೆ ಈ ದರ್ಬಾರ್ ನಿರ್ಣಯ ನೀಡುತ್ತದೆ. ಈ ದರ್ಬಾರ್ ನಮ್ಮಲ್ಲಿನ ಗ್ರಾಮ ಪಂಚಾಯತಿಯನ್ನು ಹೋಲುತ್ತದಾದರೂ ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಅಂದಹಾಗೆ, ಈ ಗ್ರಾಮ ಪರಿಸರ ಪ್ರವಾಸ ಕೇಂದ್ರ ಆಗಿರುವುದರಿಂದ ಪ್ರವಾಸಿಗರಿಗೆ ವಾಹನ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ.

ಮರದ ಮೇಲೆ ಅಂತಸ್ತಿನ ಮನೆ
ಗ್ರಾಮದ ಆರಂಭದಲ್ಲೇ 50 ಅಡಿ ಎತ್ತರದ ಮರವೊಂದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಮೇಲೆ ಒಂದು ವಿಶೇಷ ಮನೆಯಿದೆ. ಈ ಮರದ ಮೇಲಿನ ಮನೆ ಏರಿ, ಮಹಡಿಯಲ್ಲಿ ಕುಳಿತು ಬಾಂಗ್ಲಾ ಗಡಿ ವೀಕ್ಷಿಸಬಹುದು. ಈ ಮನೆಯ ನಿರ್ಮಾಣಕ್ಕೆ 9 ತಿಂಗಳು ಹಿಡಿಯಿತಂತೆ.

ಇಲ್ಲಿನ ಜಂಗಲ್ ರೆಸಾರ್ಟ್ ಬೆತ್ತ ಹಾಗೂ ಬಿದಿರಿನಿಂದ ನಿರ್ಮಿತ. ಮರದ ಮೇಲಿನ ಬಿದಿರಿನಿಂದ ನಿರ್ಮಿತ ಅಂತಸ್ತಿನ ಮನೆಯನ್ನು ನೋಡಿಕೊಳ್ಳುತ್ತಿರುವ ನವಸಾಕ್ಷರ ಮಹಿಳೆ ಪೆಸ್ಬಿಬಲ್‌ರ ಇಂಗ್ಲಿಷ್ ಭಾಷಾ ಪ್ರೌಢಿಮೆ ಅಚ್ಚರಿ ಮೂಡಿಸುವಷ್ಟು ಸೊಗಸಾಗಿದೆ. `ಪ್ರತಿ ದಿನವೂ ನೂರಕ್ಕೂ ಹೆಚ್ಚು ಜನ ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಇವರಲ್ಲಿ ಅರ್ಧದಷ್ಟು ಪ್ರವಾಸಿಗರಾದರೂ ಈ ಮನೆಗೆ ಬರುತ್ತಾರೆ. ಇದು ನನ್ನ ಗಳಿಕೆ' ಎಂದು ಬಾಯಿ ತುಂಬಾ ಅಡಿಕೆ ಹಾಕಿ ಜಗಿಯುತ್ತಾ ಇಂಗ್ಲಿಷಿನಲ್ಲಿ ಹೇಳಿದರು ಪೆಸ್ಬಿಬಲ್.

ಮೌಲಿನಾಂಗ್‌ನ ದಾರಿಯಲ್ಲಿ ರಿವಾಯ್ ಎನ್ನುವ ಊರು ಸಿಗುತ್ತದೆ. ಈ ಊರಿಗೆ ಅರ್ಧ ಕಿ.ಮೀ ದೂರದಲ್ಲಿರುವ `ಜೀವಂತ ಬೇರುಗಳ ಸೇತುವೆ' ಹಾಗೂ ಅದಕ್ಕೆ ಸಮೀಪದ `ಬ್ಯಾಲೆನ್ಸಿಂಗ್ ರಾಕ್' ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಗ್ರಾಮ ನೈರ್ಮಲ್ಯವನ್ನೇ ಬಂಡವಾಳ ಆಗಿರಿಸಿಕೊಂಡು ರಾಜ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಮೌಲಿನಾಂಗ್ ಸಾಧನೆ ವಿಶೇಷವಾದುದು. ಬೆಳಗಿನಿಂದ ಸಂಜೆಯವರೆಗೆ ಸ್ವಚ್ಛ ಗ್ರಾಮದ ಬಿದಿರು ಹಾಗೂ ಮರಗಳಿಂದ ನಿರ್ಮಿತವಾದ ವಿಶಿಷ್ಟ ಬಣ್ಣಗಳ ಮನೆಗಳ ಅಂಗಳ ಅಂಗಳಕ್ಕೆ ಹೋಗಿ, ಹಸಿರು ತೋಟಗಳ ಮಧ್ಯೆ ನಡೆದು ಹೂದೋಟಗಳಲ್ಲಿ ವಿಹರಿಸುವುದು ಮನಸ್ಸನ್ನು ಅರಳಿಸುವಂತಹ ಅಪೂರ್ವ ಅನುಭವ. ಗ್ರಾಮದ ಅಭಿವೃದ್ಧಿಯ ಕನಸುಗಳು ಸಾಕಾರಗೊಳ್ಳುವುದು ಸರ್ಕಾರದ ಯೋಜನೆಗಳಿಂದಲ್ಲ, ಗ್ರಾಮದ ಜನರ ಮನಸ್ಸಿನ ಆಳದಿಂದ ಎನ್ನುವುದಕ್ಕೆ ಮೌಲಿನಾಂಗ್ ಅತ್ಯುತ್ತಮ ಉದಾಹರಣೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT