ಏಳು, ನನ್ನ ಪ್ರೀತಿಯ ಹುಡುಗಿ, ನಾವಿಬ್ಬರೂ ಒಂದಾಗಿ ಸಾಗಬೇಕಾಗಿದೆ
ಎಲ್ಲಿಂದೆಲ್ಲಿಗೆ ಹೋದರೂ ಅದೇ ತ್ಯಾಗದ ನಿರೀಕ್ಷೆ ನಿನ್ನಿಂದ
ಶರಣಾಗುವುದೇ ನಿನ್ನ ಬದುಕಿನ ದಾರಿ
ನಿನ್ನೆಲ್ಲ ಚೆಲುವಿನ ಕಾಂತಿಯೇ ಹಂಗಿಸುವುದು ನಿನ್ನ
ಜಗದ ಹಾದಿಗಳೆ ವಿಷ ನಿನಗೆ
ಬದಲಿಸು ಋತುಗಳನ್ನು, ಅರಳಲಿ ಬಿಡುಗಡೆಯ ಹೂವುಗಳು
ಚೆಲುವು ಮತ್ತು ಪ್ರೀತಿಗಿರುವುದು ಇದೊಂದೇ ಜನ್ಮ, ಒಂದೇ ಆತ್ಮ
ಸ್ವಾತಂತ್ರ್ಯದ ಬೆಂಕಿಯಲ್ಲಿ ನನ್ನೊಂದಿಗೆ ನೀನೂ ಸುಟ್ಟುಕೊಳ್ಳುವಿಯಂತೆ
ಏಳು, ನನ್ನ ಪ್ರೀತಿಯ ಹುಡುಗಿ, ನಾವಿಬ್ಬರೂ ಒಂದಾಗಿ ಸಾಗಬೇಕಾಗಿದೆ
–ಕೈಫಿ ಆಜ್ಮಿ
ಪ್ರತಿರೋಧಗಳನ್ನು ಕುರಿತಂತೆ, ಪಲ್ಲಟಗಳನ್ನು ಕುರಿತಂತೆ ಸಾಮಾನ್ಯವಾಗಿ ಮೂರ್ತ ಮಾದರಿಗಳನ್ನು ಗುರುತಿಸುವುದು ನಮಗೊಂದು ಅಭ್ಯಾಸವೇ ಆಗಿಬಿಟ್ಟಿರುತ್ತದೆ. ಒಂದು ಘಟ್ಟದವರೆಗೂ ಇದರ ಅವಶ್ಯಕತೆ ಇತ್ತು ಎನ್ನುವುದೂ ನಿಜ. ಆದರೆ ಸಮಕಾಲೀನ ಸಮುದಾಯ ಅಧ್ಯಯನಗಳು ಇಂದು ರೂಪಿಸುತ್ತಿರುವ ಮಾದರಿಗಳು ಇದರ ಮುಂದಿನ ಹಂತವನ್ನು ಉದ್ದೇಶಿಸಿವೆ. ಸಮುದಾಯ ಅಧ್ಯಯನಗಳಲ್ಲಿ, ಇತಿಹಾಸದ ಖಾಲಿಬಿಟ್ಟಿರುವ ಜಾಗಗಳನ್ನು ತುಂಬುವ ಅಥವಾ ಅದರ ಮಿತಿಗಳನ್ನು, ಅರೆಕೊರೆಗಳನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆ ಮತ್ತು ಪ್ರಯತ್ನಗಳೆರಡೂ ಇಂದು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ.
ಇತಿಹಾಸದ ಮರುಓದು ಅಥವಾ ಪುನರ್ ಇತಿಹಾಸವೆನ್ನುವುದು ಭೂತಕಾಲದ ನವೀಕರಣವೋ ರಿಪೇರಿಯೋ ಅಲ್ಲ. ಅದು ಇತಿಹಾಸವನ್ನು ನೋಡಬೇಕಾಗಿರುವ ಹೊಸ ಕಣ್ಣುಗಳ ಸೃಷ್ಟಿ. ಈ ಹೊಸ ಕಣ್ಣು ಬದಲಾದ ದೃಷ್ಟಿಕೋನಗಳಿಂದ ಸಾಧಿತವಾಗುವ ಹೊಸ ಗ್ರಹಿಕೆಗಳನ್ನು ಪ್ರಸ್ತುತ ಪಡಿಸುವ ಮಹತ್ವಾಕಾಂಕ್ಷೆಯದು. ‘ನೆನೆವ ಪರಿಕರ ಹೊಸತು’ ಎನ್ನುವ ಮಾತು ಇದನ್ನು ಇನ್ನೂ ಸಮರ್ಥವಾಗಿ ಹೇಳುತ್ತದೆ. ಕಂಡೂ ಕಾಣದಿರುವ, ಸಂಗತಿಗಳನ್ನು ಮುನ್ನೆಲೆಗೆ ತರುತ್ತ ಅವುಗಳಿಂದ ಇತಿಹಾಸದ ನಕಾಶೆಯ ಸ್ವರೂಪ ಮತ್ತು ಬಣ್ಣಗಳೆರಡನ್ನೂ ಬದಲಿಸಬಹುದಾದ ಹುಡುಕಾಟಗಳಲ್ಲಿ ಇವು ಮಗ್ನವಾಗಿವೆ.
ಇದನ್ನು ಮಹಿಳಾ ಸಂಕಥನದ ಹಿನ್ನೆಲೆಯಲ್ಲಿ ನೋಡುವುದಾದರೆ, ಹೆಣ್ಣಿನ ಪ್ರತಿರೋಧಗಳನ್ನು ಮತ್ತು ಅರಿವಿನ ನೆಲೆಗಳನ್ನು ಅಪವಾದಗೆಳೆಂಬಂತೆ ನೋಡುವ ಮತ್ತು ವ್ಯಾಖ್ಯಾನಿಸುತ್ತ ಬಂದಿರುವ ಪರಿಯೇ ಲಿಂಗರಾಜಕಾರಣದ ಅಮೂರ್ತ ಮತ್ತು ಸಶಕ್ತ ಕಾರ್ಯಮಾದರಿ. ಇವುಗಳನ್ನು ಸಾತತ್ಯದ ನೆಲೆಯಲ್ಲಿ ನೋಡದೇ ಬಿಡಿಬಿಡಿಯಾಗಿ ನೋಡುವ ಮೂಲಕವೇ ಮಹಿಳಾ ಸಂಕಥನವನ್ನು ದುರ್ಬಲಗೊಳಿಸುವ ಯತ್ನಗಳಾಗಿ ಬಿಟ್ಟಿರುವ ವಿಪರ್ಯಾಸವನ್ನು ಚರ್ಚಿಸಬೇಕಾದ ಸನ್ನಿವೇಶ ಈಗಿನದು. ಹೆಣ್ಣು ತನ್ನನ್ನು ತಾನೇ ಕಂಡುಕೊಳ್ಳುವ ಮತ್ತು ಕಾಣಿಸುವ ಪಾತ್ರಗಳನ್ನೆಲ್ಲ ಹೆಣೆಯಬೇಕಾಗಿರುವುದು ಇಂದಿನ ಅಗತ್ಯ.
ಲಂಕೇಶರ ‘ಕಲ್ಲು ಕರಗುವ ಸಮಯ’ ಕಥೆಯ ನಾಯಕಿ ಶ್ಯಾಮಲಳನ್ನು ನೋಡಿದಾಗ, ಇದೇ ಇದನ್ನಲ್ಲವೇ ನಾವು ಹೆಣ್ಣುಮಕ್ಕಳು ಸದಾ ಒಳಗಿನಿಂದ ಬಯಸುವುದು ಎನಿಸಿಬಿಡುತ್ತದೆ. ಮೌನ ಕ್ರಾಂತಿಯೊಂದು ನಾವು ನೋಡನೋಡುತ್ತಲೇ ಘಟಿಸಿಬಿಡುವ ಮಾಂತ್ರಿಕತೆ, ಹೆಣ್ಣಿನ ಪ್ರಶಾಂತ ನಿಲುವು ಮತ್ತು ಮೌನವೇ ಪಲ್ಲಟವೊಂದನ್ನು ಹೆಣ್ಣಿನಲ್ಲೂ ಗಂಡಿನಲ್ಲೂ ಸಮುದಾಯದಲ್ಲೂ ಸಾಧ್ಯವಾಗಿಸುವ ಮಹತ್ವದ ಘಳಿಗೆಯನ್ನು ಅದರ ಮಹತ್ವ, ತಲ್ಲಣಗಳನ್ನು ಬಿಟ್ಟುಕೊಡದೆ ಆದರೆ ಅದನ್ನು ಬದುಕು ಮತ್ತು ವ್ಯಕ್ತಿತ್ವವನ್ನು ಕುರಿತ ಮೂಲಭೂತ ಹಕ್ಕಿನ ಪ್ರತಿಪಾದನೆಯ ಮಾನವೀಯ ಮತ್ತು ಜೀವನ್ಯಾಯದ ನೆಲೆಯಲ್ಲಿ ಮಂಡಿಸುವ ಕಥೆಗಾರಿಕೆಯ ಯಶಸ್ಸು ಇವೆಲ್ಲ ಸೇರಿ ಶ್ಯಾಮಲ ಹೆಣ್ಣಿನ ಪ್ರತಿನಿಧಿಯೂ ಆಗುತ್ತಾಳೆ, ಹಂಬಲವೂ ಆಗುತ್ತಾಳೆ. ಬಯಕೆಯೂ ಬಯಕೆಯ ಈಡೇರಿಕೆಯ ಪ್ರತಿನಿಧಿಯೂ ಆಗುತ್ತಾಳೆ.
ಹೆಣ್ಣು ತನ್ನನ್ನು ತಾನು ಸ್ವಪ್ರಜ್ಞೆಯ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತಲೇ ಸುತ್ತಲಿನ ಪರಿಸರವನ್ನೂ ಅದರ ಒಂದು ಭಾಗವಾಗಿಸುವ, ಬೇಕಾಗಿ ಬೇಡವಾಗಿ ಅದರ ಸಕ್ರಿಯ ಭಾಗವಾಗಬೇಕಾದ ಪಿತೃಸಂಸ್ಕೃತಿಯನ್ನು ಅದರೆಲ್ಲ ಸೂಕ್ಷ್ಮಗಳಲ್ಲಿ ಈ ಕಥೆ ದಾಖಲಿಸುತ್ತದೆ. ಶ್ಯಾಮಲಳ ಹಿತಮಿತ ಮಾತು, ತನ್ನ ನಡೆ ನುಡಿಯ ಬಗ್ಗೆ ದ್ವಂದ್ವಗಳಿಲ್ಲದ ಸ್ಪಷ್ಟತೆ, ತಾನು ತೆಗೆದುಕೊಳ್ಳುವ ತೀರ್ಮಾನಗಳಿಂದ ಉತ್ಪಾತಗಳಾಗಬಹುದೆನ್ನುವ ಅರಿವಿದ್ದೂ ಕಳೆದುಕೊಳ್ಳದ ಮನಸಿನ ಸಂಯಮ ಮತ್ತು ದೃಢತೆ ಇವೆಲ್ಲವೂ ಶ್ಯಾಮಲೆಯನ್ನು, ಅವಳ ವ್ಯಕ್ತಿತ್ವವನ್ನು ಹೆಚ್ಚು ಹೆಚ್ಚು ‘ನಿಜ’ವಾಗಿಸುತ್ತವೆ. ‘ಕಲ್ಲು ಕರಗುವ ಸಮಯ’ ಒಂದು ಸಂಕೀರ್ಣ ಕಥೆ. ಬದಲಾಗುತ್ತಿರುವ ಕಾಲಘಟ್ಟದ ಸನ್ನಿವೇಶಗಳು ಒಂದರೊಳಗೊಂದು ಬಿಡಿಸಬರದ ಹಾಗೆ ಬೆರೆತುಹೋಗುವ ವಾಸ್ತವವನ್ನು ಈ ಕಥೆ ಎದುರಾಗುತ್ತಿದೆ. ಗಂಡು–ಹೆಣ್ಣಿನ ನಡುವಿನ ಅಸಮಾನತೆಯ ಪ್ರಶ್ನೆಗಳು ಜಾತಿ ಮತ್ತು ಅಧಿಕಾರದ ಸಂದರ್ಭದಲ್ಲಿ ಇನ್ನೂ ಆಳವಾಗುವ, ಗೋಜಲಾಗುವ ಪರಿಸ್ಥಿತಿಯನ್ನು ಲಂಕೇಶರು ಅದರ ಎಲ್ಲ ಮಗ್ಗುಲುಗಳಲ್ಲಿ ಹಿಡಿಯುವ ಪ್ರಯತ್ನ ಮಾಡುತ್ತಾರೆ.
ಈ ಕಥೆಯ ಕೇಂದ್ರ ಹೆಣ್ಣಿನ ಪ್ರಶ್ನೆ ಮಾತ್ರವೇ ಎಂದು ಖಚಿತವಾಗಿ ಹೇಳಲಾರದಷ್ಟು ಈ ಕಥೆ ಬಹುಮುಖಿಯಾಗಿದೆ ಮತ್ತು ಈ ಕಾರಣಕ್ಕಾಗಿಯೇ ಹೆಣ್ಣಿನ ಸವಾಲುಗಳನ್ನು ವರ್ಗಸೀಮಿತ ನೆಲೆಗಳ ಆಚೆಗೆ ನೋಡುವುದು ಸಾಧ್ಯವಾಗಿದೆ. ಕಥೆ ಕಟ್ಟಿಕೊಳ್ಳುವ ಈ ವಿಸ್ತಾರ ಭಿತ್ತಿಯು ಕಥಾ ಸನ್ನಿವೇಶವನ್ನು ಗಂಭೀರವಾಗಿಸುತ್ತಾ ಹೋದಂತೆ ಶ್ಯಾಮಲಳ ಪಾತ್ರವೂ ತನ್ನ ಭಿತ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಶ್ಯಾಮಲ ಕಥೆಯೊಂದರ ನಾಯಕಿಯ ಚೌಕಟ್ಟನ್ನು ದಾಟುತ್ತಾ ಹೆಣ್ಣಿನ ಅರಿವಿನ ಸಂಕೇತವಾಗುತ್ತಾ ಹೋಗುವ ಪ್ರಕ್ರಿಯೆಯೊಂದು ಈ ಕಥೆಯಲ್ಲಿ ಘಟಿಸುತ್ತದೆ. ಬದಲಾವಣೆಯ ಹರಿಕಾರಳಂತೆ ಕಾಣಿಸುವ ಈ ಶ್ಯಾಮಲ ಈ ಪ್ರಕ್ರಿಯೆಯಲ್ಲಿ ತಾನೂ ತನ್ನ ಸುತ್ತಲಿನವರೂ ಪಾಲ್ಗೊಳ್ಳುವಂತೆ ಮಾಡುವ ಮೂಲಕವೇ ನಿಶ್ಶಬ್ದ ಆಸ್ಫೋಟವೊಂದಕ್ಕೆ ಕಾರಣಳಾಗುತ್ತಾಳೆ. ನನಗಂತೂ ಇದೊಂದು ರೂಪಕ. ಮೌನಕ್ಕೂ ಹೆಣ್ಣಿಗೂ ಇರುವ ಅವಿಚ್ಛಿನ್ನ ಸಖ್ಯವನ್ನು ಈ ಕಥೆ ಮೌನದಲ್ಲಿಯೇ ಕಟ್ಟಿಕೊಡುವ ಕಾರಣಕ್ಕೆ.
ಶ್ಯಾಮಲ ಎನ್ನುವ ಗಟ್ಟಿಗಿತ್ತಿಯ ಸಂಕ್ಷಿಪ್ತ ಪರಿಚಯ ಹೀಗಿದೆ. ಹಳ್ಳಿಯೊಂದರ ಪ್ರತಿಷ್ಠಿತ ಜಾತಿ ಮತ್ತು ಕುಟುಂಬಕ್ಕೆ ಸೇರಿದ, ಕಾಲೇಜು ವಿದ್ಯಾಭ್ಯಾಸ ಮುಗಿಸಿದ, ಶತೃಘ್ನ ಎನ್ನುವ ಲೇಖಕನ ಅಭಿಮಾನಿಯಾದ, ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಅಪಾರವಾಗಿ ಪ್ರೀತಿಸುವ, ತನ್ನ ಸುತ್ತಲಿನ ಪರಿಸರವನ್ನು ಆಳವಾಗಿ ಗ್ರಹಿಸಬಲ್ಲ ತರುಣಿ. ಈ ಯುವತಿ ಸಿನಿಮಾ ಕುರಿತ ಶಿಬಿರವೊಂದರಲ್ಲಿ ತಿಪ್ಪಣ್ಣ ಎನ್ನುವ ಯುವಕನನ್ನು ಭೇಟಿಯಾಗುತ್ತಾಳೆ. ಜಾತಿ ಮೂಲದಿಂದಲೋ ಸ್ವಭಾವದಿಂದಲೋ ಬದುಕುತ್ತಿರುವ ಪರಿಸರದ ಕಾರಣಕ್ಕಾಗಿಯೋ ತೀವ್ರ ಸಂಕೋಚದ ವ್ಯಕ್ತಿತ್ವದವನಾದ ಈ ಯುವಕನನ್ನು ಶ್ಯಾಮಲ ಇಷ್ಟಪಡುತ್ತಾಳೆ. ತಿಪ್ಪಣ್ಣನನ್ನು ಮದುವೆಯಾಗಲು ಹೊರಡುವ ಈಕೆ ತನಗೆ ಎದುರಾಗುವ ಅಡೆತಡೆಗಳನ್ನು ನಿಭಾಯಿಸುವ ರೀತಿ ಮತ್ತು ಗೆಲ್ಲುವ ರೀತಿಗಳೆರಡೂ ಈಕೆಯನ್ನು ಪರಿಗಣಿಸಲೇಬೇಕೆಂದು ಒತ್ತಾಯಿಸುತ್ತವೆ.
ನಿಧಾನವಾಗಿ ಒಳಗೇ ಎಲ್ಲರ ಮನಸಿನಲ್ಲೂ ಎದ್ದಿರುವ ಪ್ರಶ್ನೆಗಳಿಗೆ ಧ್ವನಿಯಾಗುತ್ತಲೇ ಪಲ್ಲಟವೊಂದರ ಫಲಾನುಭವಿಯಾಗುತ್ತಾಳೆ.
ಸಿನಿಮಾಗಳನ್ನು ಕುರಿತ ಚರ್ಚೆ ಇವರಿಬ್ಬರ ಬದುಕಿನ ದೃಷ್ಟಿಕೋನಗಳನ್ನು ಕುರಿತ ಚರ್ಚೆಯಾಗಿ ಬೆಳೆಯುತ್ತಾ ಹೋಗುತ್ತದೆ. ಮನುಷ್ಯನ ಅಹಂಕಾರಕ್ಕೆ ಕಾರಣಗಳೇ ಇಲ್ಲ ಎನ್ನುವ ತಿಪ್ಪಣ್ಣನ ನಿಲುವು ಒಪ್ಪದಿರಲು ಶ್ಯಾಮಲಳಿಗೆ ಯಾವ ಕಾರಣಗಳೂ ಸಿಗುವುದಿಲ್ಲ. ತಿಪ್ಪಣ್ಣನನ್ನು ಕುರಿತಂತೆ ಒಳಗೇ ಇದ್ದ ಶ್ಯಾಮಲಳ ಪ್ರೀತಿ ಅವನನ್ನು ತನ್ನ ತಾಯಿಗೆ ಪರಿಚಯಿಸುವಾಗ ಏಕಕಾಲಕ್ಕೆ ತನ್ನ ಅರಿವಿಗೂ ಲೋಕದ ಅರಿವಿಗೂ ತಂದುಕೊಡುವವಳಂತೆ ‘ಇವರನ್ನೇ ನಾನು ಮದುವೆಯಾಗುವುದು’ ಎಂದು ಘೋಷಿಸುತ್ತಾಳೆ. ಇಲ್ಲಿಂದಾಚೆಗೆ ಅವಳ ವ್ಯಕ್ತಿತ್ವವೇ ರೂಪಾಂತರಗೊಳ್ಳುತ್ತದೆ. ಅಪ್ಪ ಅಮ್ಮ, ಜಾತಿವಂತರು ಮಾತ್ರವಲ್ಲದೆ ಊರಿನವರು ಇದನ್ನು ತೀವ್ರವಾಗಿ ವಿರೋಧಿಸುವ ಹೊತ್ತಿನಲ್ಲಿ ಇವಳ ಹೋರಾಟ ವ್ಯಕ್ತಿಗತ ನೆಲೆಯಿಂದ ಸಮುದಾಯದ ನೆಲೆಗೆ ವಿಸ್ತರಿಸಿಕೊಳ್ಳುತ್ತದೆ. ಇದೇ ಹೆಣ್ಣಿನ ಹೋರಾಟದ ಎದುರಿಗಿರುವ ಮಹತ್ವದ ಸವಾಲು.
ಹೆಣ್ಣಿನ ದೃಢತೆಯನ್ನು ಕಂಗೆಡಿಸುವ ನೂರು ಸಂಗತಿಗಳಿರುತ್ತವೆ. ಯಾವುದೋ ಘಳಿಗೆಯಲ್ಲಿ ಹೆಣ್ಣು ಇದರಿಂದ ವಿಮುಖಳಾಗಲಿ ಎಂದು ವ್ಯವಸ್ಥೆ ಕಾಯುತ್ತಲೇ ಇರುತ್ತದೆ. ಕಿಚ್ಚಿಲ್ಲದ ಬೇಗೆಯಲ್ಲಿ ಅವಳನ್ನು ಹಣ್ಣು ಮಾಡಲು ಅದು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತದೆ. ಹೆಣ್ಣಿನ ಆತ್ಮಸ್ಥೈರ್ಯ ತೀವ್ರವಾದ ಪರೀಕ್ಷೆಗೊಳಗಾಗುವುದು ಇಂಥ ಸನ್ನಿವೇಶಗಳಲ್ಲೇ. ಎದುರಾಳಿ ಎದುರಾಳಿಯ ರೂಪದಲ್ಲಿ ಬರದೇ ಪ್ರೀತಿ ವಾತ್ಸಲ್ಯದ ರೂಪದಲ್ಲಿ, ಮೌಲ್ಯದ ರೂಪದಲ್ಲಿ ಕೊನೆಗೆ ಸಾಮಾಜಿಕ ಅಸ್ಪೃಶ್ಯತೆಯ ರೂಪದಲ್ಲಿ ಬರುವುದೇ ಇಲ್ಲಿನ ತೊಡಕು. ಇದನ್ನು ಎದುರಿಸಲು ಬೇಕಾದ ಅರಿವು ಹೆಣ್ಣಿನ ಸುಪ್ತಪ್ರಜ್ಞೆಯಲ್ಲಿ ಇದ್ದೇ ಇರುತ್ತದೆ ಎನ್ನುವುದು ನಿಜ. ಅದನ್ನು ಮುನ್ನೆಲೆಗೆ ತಂದುಕೊಳ್ಳುತ್ತಾ ಬದುಕಿನ ಹಾದಿಯಾಗಿಸಿಕೊಳ್ಳುವುದಕ್ಕೆ ಬೇಕಾಗಿರುವುದು ಬದಲಾದ ಮನೋವಿನ್ಯಾಸ. ಈ ಮನೋವಿನ್ಯಾಸವನ್ನು ಕಟ್ಟಿಕೊಳ್ಳುವುದು, ರಚಿಸಿಕೊಳ್ಳುವುದು, ಅದನ್ನು ನಿರಂತರವಾಗಿ ಕಾಪಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಆರಿಸಿಕೊಂಡ ದಾರಿಯ ಬಗೆಗಿನ ಅಖಂಡ ವಿಶ್ವಾಸ ಮತ್ತು ಸ್ಪಷ್ಟತೆಯನ್ನು ಇದು ಅಪೇಕ್ಷಿಸುತ್ತದೆ. ಈ ಗುಣಗಳಿವೆಯೆಂದೇ ಶ್ಯಾಮಲ ‘ಹೊಸ ಹೆಣ್ಣು’ ಎನ್ನುವ ಅನುಭವವನ್ನು ನಮಗೆ ತಂದುಕೊಡುತ್ತಾಳೆ.
ಇಡೀ ಕಥೆಯಲ್ಲಿ ವಿಪರ್ಯಾಸದ ವಿನ್ಯಾಸವಿದೆ. ಇದು ಕೊಂಚ ನಾಟಕೀಯ ಅನಿಸಿದರೂ ಕಥೆಯ ಅದರಲ್ಲೂ ಶ್ಯಾಮಲಳ ಪಾತ್ರದ ಪೋಷಣೆಗೆ ಒದಗಿ ಬಂದಿದೆ. ಪರಸ್ಪರ ವಿರುದ್ಧವೆನಿಸುವ ಕೇಂದ್ರಗಳಲ್ಲಿ ವಸ್ತುಸ್ಥಿತಿ ಮತ್ತು ಬದಲಾವಣೆಗಳನ್ನು ಅರ್ಹಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಕಥೆಯ ಆರಂಭದಲ್ಲಿ– ಅದೊಂದು ವೀರಾವೇಶದ, ಮಾರಾಮಾರಿಯ ಊರು, ಜಾತಿ ಮೌಲ್ಯದ ಹೆಸರಿನಲ್ಲಿ ಕೊಲೆ, ಹೊಡೆದಾಟಗಳಾಗುವುದು ಆ ಊರಿನ ಮುಖ್ಯ ಲಕ್ಷಣ ಎನ್ನುವ ಪರಿಚಯ, ಕಥೆಯ ಕೊನೆಗೆ ಬರುವ ಹೊತ್ತಿಗೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಆ ಊರು ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಅಂತರ್ಜಾತೀಯ ವಿವಾಹವೊಂದು ಸಮುದಾಯದ ಒಪ್ಪಿತ ಸಂಗತಿಯಾಗುವ ಸೂಚನೆಯೊಂದಿಗೆ ಕಥೆ ಮುಗಿಯುತ್ತದೆ.
ಈ ಕಥೆ ಮತ್ತು ಶ್ಯಾಮಲ ನಮ್ಮ ಗಮನ ಸೆಳೆಯುವುದಕ್ಕೆ ಅನೇಕ ಕಾರಣಗಳಿವೆ. ಬದಲಾವಣೆಯೊಂದಕ್ಕೆ, ಅದು ಶ್ಯಾಮಲ ತಾನು ಬಯಸಿದ ಯುವಕನೊಂದಿಗೆ ಮದುವೆಯಾಗುವುದಿರಬಹುದು, ಶ್ಯಾಮಲ ತನ್ನ ಆಯ್ಕೆಯ ಬದುಕಿನ ಹಕ್ಕನ್ನು ಪ್ರತಿಪಾದಿಸುವುದಿರಬಹುದು. ಅದನ್ನು ಸಹಜಾತಿ ಸಹಜವೆನಿಸುವ ಮನಸ್ಥಿತಿಯಲ್ಲಿ ನಿರ್ವಹಿಸುವುದರ ಮೂಲಕವೇ ಅದನ್ನು ವಿರೋಧಿಸುವವರೂ ಈ ಪ್ರಕ್ರಿಯೆಯೊಳಗೆ ಸೇರಿಕೊಳ್ಳುವಂತೆ ಮಾಡುವ ಅಪರೂಪದ ಸಂಗತಿಯನ್ನು ಸಾಧ್ಯಮಾಡುವಲ್ಲಿ ಶ್ಯಾಮಲ ಯಶಸ್ವಿಯಾಗುತ್ತಾಳೆ. ಶ್ಯಾಮಲಳ ತಂದೆ ಮಲ್ಲಯ್ಯ ಆರಂಭದಲ್ಲಿ ಇದನ್ನು ಜಾತಿ, ಅಧಿಕಾರದಿಂದ ದತ್ತವಾದ ಕ್ರೌರ್ಯ ಮತ್ತು ಅಮಾನವೀಯತೆಯಲ್ಲಿ ನೋಡುತ್ತಾ, ವ್ಯವಸ್ಥೆಯ ಪರವಾಗಿ ಹೋರಾಡಿದರೂ ಕೊನೆಗೆ ಮೌನಕ್ಕೆ ಶರಣಾಗುತ್ತಾನೆ. ತಾಯಿ ಕೂಡ ಈ ಮದುವೆ ತಮಗೆಲ್ಲ ಎಷ್ಟು ಬೇಡದ್ದು ಎನ್ನುವುದನ್ನು ಹೇಳಿಯೂ ಕೊನೆಗೆ ಮೌನವಾಗುತ್ತಾಳೆ.
ಮಲ್ಲಯ್ಯನ ಮತ್ತು ಇಡೀ ವ್ಯವಸ್ಥೆಯ ಕೊನೆಯ ಪ್ರಯತ್ನದಂತೆ ಕಾಣಿಸುವುದು ಶ್ಯಾಮಲಳ ಜಾತಿಯ ಸ್ವಾಮಿ ಕೂಡ ನಡೆಸುವ ಪ್ರಯತ್ನ. ಜಾತಿವ್ಯವಸ್ಥೆಯನ್ನು ಕುರಿತಂತೆ ಅವಳಲ್ಲಿ ‘ಅರಿವು’ ಮೂಡಿಸಲು ಬರುವ ಸ್ವಾಮಿ ‘ಮನುಷ್ಯತ್ವದ ಅರಿವಿ’ನೊಂದಿಗೆ ಮೌನವಾಗುವುದು ಕೂಡ ಅರ್ಥಪೂರ್ಣವಾಗಿದೆ. ಇಡೀ ಜಾತಿಯ ಆಗುಹೋಗುಗಳನ್ನು ನಿರ್ಧರಿಸಬಲ್ಲ ಅಧಿಕಾರ ಕೇಂದ್ರವಾಗಿರುವ ಸ್ವಾಮೀಜಿ ಕೂಡ ಇಲ್ಲಿ ಬದಲಾವಣೆಯ ಸಕ್ರಿಯ ಪ್ರಕ್ರಿಯೆಯ ಭಾಗವಾಗಿಬಿಡುತ್ತಾರೆ. ಸ್ವಾಮಿಯ ಮಾತೊಂದಕ್ಕೆ ಉತ್ತರಿಸುತ್ತಾ ಶ್ಯಾಮಲ ‘ಅದಕ್ಕೇ ನನ್ನ ತಿಪ್ಪಣ್ಣ ಹೆಚ್ಚು ಮಾತೇ ಆಡೋಲ್ಲ’ ಎನ್ನುವ ಮಾತು ಮೌನವನ್ನು ಕುರಿತ ಘನ ವ್ಯಾಖ್ಯಾನದಂತೆಯೇ ಕಾಣಿಸುತ್ತದೆ. ಮೌನದಲ್ಲಿ ಸಾಧ್ಯವಾಗಬಹುದಾದ ಸತ್ಯದ ಸಾಕ್ಷಾತ್ಕಾರ, ಆತ್ಮ ವಿಮರ್ಶೆಯ ಸಾಧ್ಯತೆಗಳನ್ನು ಇದು ಸೂಚಿಸುತ್ತಿರುವಂತಿದೆ.
ಈ ಅರಿವು ತಿಪ್ಪಣ್ಣನಲ್ಲಿಯೂ ಶ್ಯಾಮಲಳ ಮೂಲಕವೇ ಸಾಕ್ಷಾತ್ಕಾರಗೊಳ್ಳುವುದು ಕಥೆಯ ಮುಖ್ಯ ಘಟಿತಗಳಲ್ಲಿ ಒಂದು. ತಿಪ್ಪಣ್ಣನ ಹೊಯ್ದಾಟಗಳೆಲ್ಲ ನಿಲುಗಡೆಗೆ ಬರುವುದರಲ್ಲಿ, ತಾತ್ವಿಕ ಮತ್ತು ಪ್ರಾಯೋಗಿಕ ಸ್ಪಷ್ಟತೆಯನ್ನು ಪಡೆಯುವಲ್ಲಿ ಶ್ಯಾಮಲಳ ಮುಂದೊಡಗು ಪ್ರಧಾನ ಪಾತ್ರ ವಹಿಸುತ್ತದೆ. ಇದನ್ನು ತಿಪ್ಪಣ್ಣ ಒಪ್ಪಿ ಗೌರವಿಸುವ ಸಂಗತಿ ಕಥೆಗೆ ಇನ್ನೊಂದು ವಿಶಿಷ್ಟ ಮಜಲನ್ನು ಸೇರಿಸುತ್ತದೆ. ಇದನ್ನು ಶರಣಾಗತಿಯೆಂದೋ, ಶ್ಯಾಮಲಳ ವ್ಯಕ್ತಿತ್ವ ಪಡೆಯುವ ಮೇಲುಗೈಯೆಂದೋ ನೋಡುವುದಕ್ಕಿಂತ ಸಂಕರಘಟ್ಟದಲ್ಲಿ ಪರಸ್ಪರರು ಒದಗಿ ಬರುವ ಸಂಗತಿಯಾಗಿ ನೋಡುವುದೇ ಸೂಕ್ತ.
ಇದಕ್ಕೆ ಇನ್ನೊಂದು ಮುಖ್ಯವಾದ ಆಯಾಮವೂ ಇದೆ. ಮತ್ತೆ ಮತ್ತೆ ಮೌನವನ್ನು ಹೆಣ್ಣಿನ ಅಭಿವ್ಯಕ್ತಿ ಕ್ರಮಗಳಲ್ಲೊಂದು ಎಂದು ನೋಡುತ್ತಲೇ ಬಂದಿದ್ದೇವೆ. ಅನಗತ್ಯವಾದ ಮಾತಿನ ಹಂಗಿಲ್ಲದೆ ಶ್ಯಾಮಲಳಿಗೆ ತನ್ನ ಹಕ್ಕು ಮತ್ತು ಆಯ್ಕೆಗಳನ್ನು ಪ್ರಶ್ನಾತೀತವಾಗಿ ಮಂಡಿಸಲು ಸಾಧ್ಯವಾಗುತ್ತದೆ ಎನ್ನುವ ಅಂಶ ಮೌನವು ಹೆಣ್ಣಿನ ಶಕ್ತಿಮೂಲಗಳಲ್ಲೊಂದು ಎನ್ನುವುದನ್ನು ಸಾಬೀತುಪಡಿಸುತ್ತದೆ. ಹೆಣ್ಣಿನ ಮಾತಾಳಿತನವನ್ನು ಅವಳ ದೌರ್ಬಲ್ಯವೆಂದು, ಲಕ್ಷಣವೆಂದು ಕರೆಕರೆದೇ ಅವಳನ್ನು ಭಾಷೆಯಿಂದ ಬೇರ್ಪಡಿಸುವ ಪಿತೃಸಂಸ್ಕೃತಿಗೆ ಹೆಣ್ಣಿನ ಮೌನ ಮತ್ತು ಮಿತಭಾಷಿತನವನ್ನು ಕಂಡರೆ ಹುಟ್ಟುವುದು ದಿಗಿಲು ಮಾತ್ರವಲ್ಲ ಗೌರವವೂ. ಅದನ್ನು ತನ್ನ ಅರಿವಿನ ಭಾಷೆಯಾಗಿ ರೂಪಾಂತರಿಸುತ್ತಾಳೆಂದೇ ಶ್ಯಾಮಲ ನಮ್ಮ ಪ್ರೀತಿಯ ಹೆಮ್ಮೆಯ ಹುಡುಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.