ADVERTISEMENT

ಸಾಲದ ಇಡುಗಂಟು ಮತ್ತು ಶಿವನ ಕರುಣೆ

ಕವಿತೆ

ಪವಿತ್ರ ಪ್ರಿಯಭಾಷಿಣಿ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST
ಸಾಲದ ಇಡುಗಂಟು ಮತ್ತು ಶಿವನ ಕರುಣೆ
ಸಾಲದ ಇಡುಗಂಟು ಮತ್ತು ಶಿವನ ಕರುಣೆ   

ಜೋಳದ ತೆನೆ ತೂಗುತ್ತಿದ್ದವು ಸುಮ್ಮನೆ ಹಾಗೆ
ಕಳೆಗಟ್ಟದೆ ಹೋಯ್ತು ಕೂಡು ಕಳೆವಾಟ 
ಬವಣೆ ಅಲಗು, ಬಯಲ ಕಡೆಗೆ ಒಲವು; 
ಗಾಣದ ಮಗ್ಗಲು ಮುರಿದು ಯಾಮಾರಿದ ಧವಳಪ್ಪ

ಎಳ್ಳು ಜೀರಿಗೆ ಬೆಲ್ಲ,
ಹೋಗಲಾರೆನವ್ವ ಮನೆ ಮನೆಗೆ ಚರಿಗೆ
ಚಿಂತೆಯ ನೆರೆ ನೆರಿಗೆ
ಮಾಡಲಾರೆನವ್ವ ತಟವಟ ಎಂದರೂ
ತನುವತ್ತಿ ಕೂಡ ಇಲ್ಲ ಮಾರಲು,
ಪುಡಿಗಾಸು ಹುಟ್ಟೀತು ಹೇಗೆ?
ಸಾಲುಗಟ್ಟಿ ಚಿಲಕ ಬಡಿದ ಸಾಲಗಾರರು

ಮಾತು ಸೋತು ಹೈರಾಣಾದವನು
ಒಂದೇ ಏಟಿಗೆ ಹಾರಿದ ಹಿತ್ತಿಲು
ದಾಟಿದ ಗೊರಟೆ ಪಾರಿವಾಳಗಳ ಕುಟೀರ,
ಮುಖ ತಿರುಗಿಸಿತ್ತು ಹಾದಿಯಲಿ
ಸಂಕರದ ಸೂರ್ಯಕಾಂತಿ

ADVERTISEMENT

ಇತ್ತ ಫಕೀರಪ್ಪನೂ ಹೊರಟ ದಿವಿನಾಗಿ,
ಕೊಟ್ಟ ದುಗ್ಗಾಣೆ ಪರಭಾರೆಯಾಗದು
ಎಂದು ದಿಟ ಮಾಡಿಕೊಂಡ ಮನದಲ್ಲಿ,
ಕೊಟ್ಟೋನು ಕೋಡಂಗಿ
ಇಸ್ಕೊಂಡೋನು ಈರಭದ್ರ
ಎಂದು ಶಪಿಸುತ್ತ ಜಾರು ಹೆಜ್ಜೆಯಾದ
ಬಂಡೆ ಸಂದಿಯ ಮಳೆನೀರಂತೆ

ಸಣ್ಣದೊಂದು ಕಲ್ಲ ಪೊಟರೆಯ ಹತ್ತಿರ
ಹಾವುರಾಣಿಯ ದಿಟ್ಟಿ ತಪ್ಪಿಸಲು
ಪಡಿಪಾಟಲು ಪಡುವ ಇರುವೆ
ಮನಸಿಗೆ ಕಿರಿಕಿರಿಯಾಗಿ ತುಂಬಿಕೊಂಡ
ಆಕಾಶದ ವಿಸ್ತಾರವ ಕಣ್ಣಾಲಿಯಲಿ

ಸಾವಿನ ಸೂತಕದ ಒಬ್ಬಂಟಿ ಮನೆಗಳ ಮಣಭಾರ
ಹೆಗಲ ಮೇಲೆ ಹೊರುವ ಧವಳಪ್ಪ,
ಬೆಟ್ಟದ ಮೇಲಿನ ಮಂಗಗಳಿಗೆ
ಮಂಡಕ್ಕಿ ಚೆಲ್ಲುವ ಧವಳಪ್ಪ: ತೆರೆಯಿತು
ಫಕೀರನ ಜೋಳಿಗೆಯಲ್ಲಿ ಕಾರುಣ್ಯದ ಮಳಿಗೆ

ಬೆನ್ನಟ್ಟಿದ ಅವನು ಧವಳಪ್ಪಗೆ ಹೆಗಲೆಣೆ ಆಗಲು;
ಹೃದಯವೇ ಬಾಯಿಗೆ ಬಂದಂತಾಗಿ
ಧವಳಪ್ಪನೂ ಹಾರಿದ ಮಾರುದೂರ
ಇಬ್ಬರೂ ಬೆಟ್ಟವೇರಿದರು ಸರ ಸರ
ಇನ್ನೇನು ಹಿಡಿದ, ಹಿಡಿದೇಬಿಟ್ಟ ಎನುವಾಗ
ಸಿಡಿಲು ಬಡಿದಿತ್ತು ಗುಡ್ಡದ ತುತ್ತ ತುದೀಲಿ,
ಇಬ್ಬರ ಕಣ್ಣಲೂ ಆಕಾಶದ ಪ್ರತಿಬಿಂಬ

ಈಗಲೂ ಬತ್ತದ ಮಳೆನೀರ ಕಂಡಿಗಳಲಿ
ಆಗೊಮ್ಮೆ ಈಗೊಮ್ಮೆ ನಾಣ್ಯಗಳ ಝಲಕು,
ಇಬ್ಬರ ಲೌಕಿಕ ವ್ಯಾಪಾರ ತೀರಲೆಂದೆ ಇರಬೇಕು

ಟಿಪ್ಪಣಿ: ಧವಳಪ್ಪನೆಂಬ ಶರಣ ಹಾಗೂ ಅಸಾದುಲ್ಲ ಎನ್ನುವ ಫಕೀರ ಇಬ್ಬರೂ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿರುವ ಧವಳಪ್ಪನ ಗುಡ್ಡದ ಮೇಲೆ ಶಿವನಲ್ಲಿ ಐಕ್ಯರಾಗಿರುವರೆಂದು ಪ್ರತೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.