ADVERTISEMENT

ಸಿಟ್ಟು ಯಾಕ?

ಡಾ.ಸಿ.ರವೀಂದ್ರನಾಥ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST
ಸಿಟ್ಟು ಯಾಕ?
ಸಿಟ್ಟು ಯಾಕ?   

ಆ ಬಯಲ ಗಾಳಿ ಭರ‌್ರಂತ ಹಾರಿ
ತಲಿಮ್ಯಾಲ ತೂಗತಾವ
ಹನಿಹನಿದು ಕಣ್ಣು ಮನದಾಗ ಹುಣ್ಣು
ನನ ಮ್ಯಾಲ ಸಿಟ್ಟು ಯಾಕ?

ನಡ ನಡುವಿನಾಗ ಬಿರಬಿರನೆ ಹೊಂಟಿ
ಕೊಡದಾಗ ಚಂದ್ರಬಿಂಬ
ಎಲೆಬಳ್ಳಿ ಚಿಗುರಿ ಗಿರಗಿರನೆ ಸುತ್ತಿ
ಹಸಿರಾತು ಒಂಟಿ ಕಂಬ

ಮನ ಒದ್ದಿ ಇಲ್ಲಿ ನಿನ ಸುದ್ದಿ ಎಲ್ಲಿ?
ಮುಗಿಲಾಗ ಇಂದ್ರಛಾಪ
ಎಳೆಗರಿಕೆ ಬುಡದ ಇಬ್ಬನಿಯ ತಂದು
ಆರಿಸಲೆ ನಿನ್ನ ಕ್ವಾಪ?

ADVERTISEMENT

ದನಿ ಅರಸಿ ಹೊಂಟೆ ಜೀರುಂಡೆ ಸಂತೆ
ಕತ್ಲಾಗ ಗುಕ್ಕ ಗೂಗಿ
ಕೆಳಗಿಳಿದ ಚಿಕ್ಕಿ ಫಕ್ಕಂತ ಬೆಳಗಿ
ನಿನಮ್ಯಾಲ ಮುಗಿಲಗಂಗಿ

ಆ ಬಲಕೆ ಹುದುಲು ಈ ಎಡಕೆ ಸಿಡಿಲು
ನಡಬರಕ ಹಾದಿ ಸುದ್ದ
ಬಿದಿರಾತು ಕೊಳಲು ಕೊಳಲಾತು ಕೊರಳು
ತರಗೆಲೆಯ ಸಣ್ಣ ಸದ್ದ

ತಂದಿರುವೆ ನಿನಗೆ ಸಕ್ಕರಿಯ ಚೂರು
ನಾ ಒಂದು ಸಣ್ಣ ಇರುವಿ
ಈ ತಿರುವಿನಲ್ಲಿ ನಿಂತಿರುವೆ ಇಲ್ಲಿ
ನೀನೆಲ್ಲಿ ಎಲ್ಲಿ ಇರುವಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.