ADVERTISEMENT

ಸಿರಿಹಸೆಯ ಸಿರಿವಂತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2010, 18:30 IST
Last Updated 22 ಅಕ್ಟೋಬರ್ 2010, 18:30 IST

ಭತ್ತದ ತೆನೆ ಅಲ್ಲಿ ಮಂಟಪ. ತೋರಣವೂ ಹೌದು. ಸುರುಳಿ ಸುರುಳಿ ಸುತ್ತಿಕೊಂಡ ದೊಡ್ಡಾಕಾರವನ್ನು ಎತ್ತಿ ಕಟ್ಟಿದರೆ ಚಕಿತಗೊಳಿಸುವ ಕಲಾಕೃತಿ. ಇನ್ನೊಂದಿಷ್ಟು ದೂರಕ್ಕೆ ಹೆಜ್ಜೆ ಇಟ್ಟರೆ ಅಕ್ಷರ ಕಲಿಸುವ ಸಂಕೇತಾಕಾರ. ಮಕ್ಕಳ ವರ್ಣಮಾಲೆಯ ಕಲಿಕೆಗೆ ಅದುವೆ ಮಾದರಿ.
ಸಿರಿವಂತೆಯ ಚಿತ್ರಸಿರಿ ಸಂಸ್ಥೆ ಮೊದಲ ನೋಟಕ್ಕೆ ಕಾಣುವುದು ಹೀಗೆ. ವ್ಯಕ್ತಿಯೊಬ್ಬರ ಕಲಾ ಹುಡುಕಾಟದ ಫಲವಿದು. ಇಂಥ ತುಡಿತಕ್ಕೆ ಇಡೀ ಬೆಂಬಲ ಕೊಟ್ಟರಷ್ಟೆ ಕಲೆ, ಕುಶಲತೆ ಹೀಗೆ ಜೀವ ಪಡೆಯಲು ಸಾಧ್ಯ. ಹಸೆ, ಭತ್ತದ ತೆನೆಯ ಕಲಾಕೃತಿ, ಕನ್ನಡ ಅಕ್ಷರ ವರ್ಣಮಾಲಾ ಕಲಿಕಾ ಮಾದರಿ, ಚಮತ್ಕೋನದ ಚಮತ್ಕಾರ ಹೀಗೆ ಚಿತ್ರಸಿರಿಯಲ್ಲಿ ಚಿತ್ತಾರದ್ದೇ ಮಾತು.
ಸಾಗರ ತಾಲ್ಲೂಕಿನ ಸಿರಿವಂತೆ ಗ್ರಾಮದ ಚಿತ್ರಸಿರಿ ಅಂದೊಡನೆ ಎನ್.ಚಂದ್ರಶೇಖರ್ ಹೆಸರು ತುಟಿಮೇಲೆ ಬರುತ್ತದೆ. ಇದು ಅವರದ್ದೇ ಕೂಸು. ಮೂಲತಃ ಕೃಷಿಕರಾದ ಚಂದ್ರಶೇಖರ್ ಓದಿದ್ದು ಪಿಯುಸಿ. ಆರಿಸಿಕೊಂಡಿದ್ದು ಹಸೆ ಚಿತ್ತಾರ. ಪತಿಯ ಅಪರೂಪದ ಕನಸಿಗೆ ರೆಕ್ಕೆ ಹಚ್ಚಿದ್ದು ಪತ್ನಿ ಗೌರಿ. ಅಪ್ಪ-ಅಮ್ಮನ ಶ್ರಮದ ಕಂಪನ್ನು ಎಲ್ಲೆಲ್ಲಿಗೋ ಹಬ್ಬಿಸಿದ್ದು ಇಬ್ಬರು ಗಂಡು ಮಕ್ಕಳು ಹಾಗೂ ಗ್ರಾಮದ ಜನ.
ಮಲೆನಾಡಿನ ಶ್ರೀಮಂತ ಕಲೆಯಾದ ಹಸೆ ಚಿತ್ತಾರ ಹಳ್ಳಿಕಲೆಯ ಸಾಕ್ಷಾತ್ಕಾರ. ಆಧುನಿಕತೆಯ ಬೀಸಿನಲ್ಲಿ ಹಸೆ ಕಳೆಗುಂದುತ್ತಾ ಬಂದಿತ್ತು. ಚಂದ್ರಶೇಖರ್ ಆರಿಸಿಕೊಂಡಿದ್ದು ಇಂಥ ಕಲೆಯನ್ನೇ. ವಿವಿಧ ವಸ್ತುಗಳ ಮೇಲೆ ನೂರಾರು ಹಸೆ ಚಿತ್ತಾರಗಳನ್ನು ಸೃಷ್ಟಿಸಿ ಅವು ಥಟ್ಟನೆ ಕಣ್ಸೆಳೆಯುವಂತೆ ಮಾಡಿದರು. ಆರಂಭದಲ್ಲಿ ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಹಸೆ ಗೋಡೆ ರಚಿಸಿ ಗಮನ ಸೆಳೆಯತೊಡಗಿದ ಚಂದ್ರಶೇಖರ್ ಆಮೇಲೆ ಆ ಕಲೆಗೆ ಹೊಂದಿಸಿಕೊಂಡ ಕ್ಯಾನ್ವಾಸ್‌ಗಳು ಅಸಂಖ್ಯ.

ಹಳ್ಳಿಗೋಡೆಗಳ ಅಲಂಕಾರಕ್ಕಷ್ಟೆ ಮೀಸಲು ಎಂಬಂತಿದ್ದ ಹಸೆಯನ್ನು ಚಿತ್ರಸಿರಿ ತಂಡ ಸೀರೆ, ಗಾಜು, ವಿವಾಹ ಆಮಂತ್ರಣ ಪತ್ರಿಕೆ, ಬಿದಿರಿನ ತಡಿಕೆ, ಪೆನ್ ಸ್ಟ್ಯಾಂಡ್ ಹೀಗೆ ಬಗೆಬಗೆಯ ವಸ್ತುಗಳ ಮೇಲೆ ಮೂಡಿಸಿದೆ. ಜನರನ್ನು ಆಕರ್ಷಿಸುವ ತಂತ್ರವಾಗಿ ಪರಿಣಮಿಸಿದ್ದೇ ತಂಡದ ಈ ಯತ್ನ.
ಹಸೆಯ ಯಶಸ್ಸಿನ ನಂತರ ಮೂಡಿದ್ದು ಭತ್ತದ ಕಲಾಕೃತಿಗಳ ಬಗ್ಗೆ ಆಸಕ್ತಿ. ಗ್ರಾಮೀಣ ಭಾಗದಲ್ಲಿ ಜನರು ಹಬ್ಬಹರಿದಿನಗಳಲ್ಲಿ ತಮ್ಮ ಕರಕುಶಲತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದ್ದ ಭತ್ತದ ತೋರಣಕ್ಕೆ ಹೊಸಭಾಷ್ಯ ಬರೆದವರೂ ಇದೇ ಚಂದ್ರಶೇಖರ್. ಸುಮಾರು ಒಂದು ಸಾವಿರ ಅಡಿ ಭತ್ತದ ತೆನೆಯ ಸರವನ್ನು ನಿರ್ಮಿಸುವ ಮೂಲಕ ದಾಖಲೆ ನಿರ್ಮಿಸಿರುವ ಚಿತ್ರಸಿರಿ ತಂಡ, ಭತ್ತದ ತೆನೆಯಲ್ಲಿ ಬೇರೆ ಬೇರೆ ಕಲಾಕೃತಿಗಳನ್ನು ಸಹ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಆಕಾಶಬುಟ್ಟಿ, ಗೂಡು,  ಕಳಸದ ಕಡ್ಡಿ, ಚಾಮರ, ಐದು ಅಡಿ ಉದ್ದದ ಬಾಳೆಎಲೆ ಪ್ರತಿಕೃತಿ, ಮದುವೆ ಆರತಕ್ಷತೆ ಹಾಗೂ ಮದುವೆ ಮಂಟಪ ಎಲ್ಲಕ್ಕೂ ಭತ್ತದ ತೆನೆಯಲ್ಲೇ ಸಿಂಗಾರ ಸಾಧ್ಯವಾಗಿಸಿದ್ದು ಚಂದ್ರಶೇಖರ್.
ಚಿತ್ರಸಿರಿಯ ಕಲೆಯ ಹಸಿವು ಇಂಗುತ್ತಲೇ ಇಲ್ಲ. ಈ ಮಾತಿಗೆ ‘ಅಕ್ಷರ ವರ್ಣಮಾಲಾ’ ಎಂಬ ಶೈಕ್ಷಣಿಕ ಚಿತ್ತಾರದ ಯತ್ನವೇ ಉದಾಹರಣೆ. ಮಕ್ಕಳು ಸುಲಭವಾಗಿ ಕನ್ನಡ ಭಾಷೆ ಮನನ ಮಾಡಿಕೊಳ್ಳಲು 30 ಸಂಕೇತಾಕಾರಗಳನ್ನು ತಂಡ ರೂಪಿಸಿದೆ. ರಟ್ಟಿನ ತುಂಡುಗಳಲ್ಲಿ ಕನ್ನಡ ಕಲಿಕೋಪಕರಣವನ್ನು ತಯಾರಿಸಿದೆ.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಚಂದ್ರಶೇಖರ್ ಚಿರಸ್ಥಾಯಿಯಾಗಲು ಕಾರಣ ಚಮತ್ಕೋನ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಸಹ ಚಮತ್ಕೋನದ ಚಮತ್ಕಾರದಿಂದ ಲವಲವಿಕೆ ಪಡೆಯಬಹುದೆಂಬುದು ಸಾಬೀತಾಗಿದೆ. ಒಂಬತ್ತು ತ್ರಿಕೋನ ಆಕೃತಿಯ ರಬ್ಬರ್ ತುಂಡುಗಳು ಮಕ್ಕಳಿಗೆ ನೂರಾರು ಆಕಾರಗಳನ್ನು ತಯಾರಿಸಲು ನೆರವು ನೀಡುತ್ತವೆ. ದೀಪ, ಹಾರುವ ಹಕ್ಕಿ, ಪಾಳಿಯ ಕೆಲಸಕ್ಕೆ ಹೊರಟ ದಾದಿ, ಓಡುವ ಮನುಷ್ಯ, ಡೈನೋಸಾರ್, ಒಂಟೆ- ಹೀಗೆ ಮುನ್ನೂರಕ್ಕೂ ಹೆಚ್ಚು ಆಕೃತಿಗಳನ್ನು ರಬ್ಬರ್ ತುಂಡಿನಿಂದ ರಚಿಸಬಹುದು. ಆಕೃತಿ ರಚಿಸುತ್ತಲೇ ಅವುಗಳ ಕುರಿತು ಜ್ಞಾನವೂ ಮೂಡುತ್ತದೆಂಬುದು ವಿಶೇಷ. 
ಚಿತ್ರಸಿರಿಯ ಹಸೆ ಮತ್ತು ಭತ್ತದ ಕಲಾಕೃತಿಗಳು ಜಪಾನ್, ದುಬೈ ದೇಶಗಳಲ್ಲೂ ಸದ್ದು ಮಾಡಿವೆ. ಜಪಾನ್‌ನ ಕಲಾವಿದರ ತಂಡವೊಂದು ಸಾಗರ ತಾಲ್ಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ಚಿತ್ರಸಿರಿಗೆ ಭೇಟಿ ನೀಡಿ, ಇಲ್ಲಿನ ವೈವಿಧ್ಯಕ್ಕೆ ಮಾರುಹೋಗಿತ್ತು. ಕೆಲವೇ ದಿನಗಳಲ್ಲಿ ಕಲಾಕೃತಿಗಳೊಂದಿಗೆ ಜಪಾನ್‌ಗೆ ಬರುವಂತೆ ಚಂದ್ರಶೇಖರ್ ಅವರಿಗೆ ತಂಡ ಪತ್ರ ಬರೆದಿತ್ತು. 2008ರ ಆಗಸ್ಟ್‌ನಲ್ಲಿ ನಡೆದ ಜಪಾನಿ ಕಲಾವಿದರ ಕಲಾಪ್ರದರ್ಶನದಲ್ಲಿ ಚಿತ್ರಸಿರಿಯ ಕಲಾಕೃತಿಗಳು ಭಾರತ ದೇಶದ ಪರವಾಗಿ ಪ್ರದರ್ಶನಗೊಂಡು, ಮೆಚ್ಚುಗೆಗೆ ಪಾತ್ರವಾಗಲು ಆ ಪತ್ರವೇ ಕಾರಣ.
2009ರ ನವೆಂಬರ್‌ನಲ್ಲಿ ದುಬೈನಲ್ಲಿ ನಡೆದ ಕನ್ನಡ ಸಮ್ಮೇಳನಕ್ಕೂ ಚಿತ್ರಸಿರಿಗೆ ಆಹ್ವಾನವಿತ್ತು. ಸಮ್ಮೇಳನದ ಪ್ರಮುಖ ಅಂಶವಾಗಿ ಭಾರತದ ಗ್ರಾಮೀಣಕಲೆಯಾದ ಹಸೆ, ಭತ್ತದ ತೆನೆಯ ಕಲಾಕೃತಿಗಳ ಪ್ರಾತ್ಯಕ್ಷಿಕೆ ಮತ್ತು ವಸ್ತುಪ್ರದರ್ಶನ ನಡೆಸಿ, ಅಲ್ಲೂ ಕಲಾಪ್ರೇಕ್ಷಕರ ಪ್ರಶಂಸೆಗೆ ತಂಡ ಭಾಜನವಾಯಿತು. ವಿವಿಧ ವೇದಿಕೆಗಳಲ್ಲಿ ರಾರಾಜಿಸುತ್ತಿರುವ ಚಿತ್ರಸಿರಿ ಎಲ್ಲರ ಮೆಚ್ಚುಗೆ ಪಡೆಯುವಲ್ಲಿ ಚಂದ್ರಶೇಖರ್ ಅಲ್ಲದೆ ಅವರ ಪತ್ನಿ ಗೌರಿ, ಪುತ್ರ ಹರ್ಷ ಮತ್ತು ನರ್ತನ್‌ಕುಮಾರ್, ಕುಸುಮಾ, ರಮೇಶ್, ರಮ್ಯಾ, ಸೌಮ್ಯ, ರುಕ್ಮಿಣಿ ಮೊದಲಾದವರ ಶ್ರಮವೂ ಇದೆ.
ಮಲೆನಾಡಿನ ಭಾಗಕ್ಕೆ ಬರುವ ಅನೇಕ ಗಣ್ಯರು ಒಮ್ಮೆ ಚಿತ್ರಸಿರಿಯನ್ನು ನೋಡದೆ ಹೋಗುವುದಿಲ್ಲ. ಮಾನಸಿಕ ರೋಗ ತಜ್ಞ ಡಾ.ಅಶೋಕ ಪೈ, ವೈ.ಕೆ. ಮುದ್ದುಕೃಷ್ಣ, ಯಶವಂತ ಹಳಿಬಂಡಿ, ಡಾ.ಮುರಿಗೆಪ್ಪ, ಡಾ.ಸಿದ್ದಲಿಂಗಯ್ಯ, ಡಾ.ವಿವೇಕ ರೈ, ಡಾ.ಬೋರಲಿಂಗಯ್ಯ ಹೀಗೆ ಗಣ್ಯಾತಿಗಣ್ಯರು ಬಂದು, ಕಲಾಸಿರಿವಂತಿಕೆಗೆ ಶಹಬ್ಬಾಸ್ ಹೇಳಿದ್ದಾರೆ.
ಅಳಿಯುತ್ತಿರುವ ಕಲೆ ಉಳಿಸಲು ಇಲ್ಲಿ ಉಚಿತವಾದ ತರಬೇತಿ ನೀಡಲಾಗುತ್ತಿದೆ; ಸರ್ಕಾರದ ಕಿಂಚಿತ್ ಸಹಾಯವೂ ಇಲ್ಲದೆ. ಜಪಾನ್‌ಗೆ ಹೋದಾಗಲೂ ಸರ್ಕಾರದಿಂದ ಅಲ್ಪಸ್ವಲ್ಪ ಸಹಾಯ ಕೊಡಿಸುವುದಾಗಿ ಹೇಳಿದ ಅಧಿಕಾರಿಗಳು ಕೊನೆ ಕ್ಷಣದಲ್ಲಿ ಕೈಎತ್ತಿದ್ದನ್ನು ಹೇಳಿಕೊಳ್ಳುವಾಗ ಚಂದ್ರಶೇಖರ್ ಮುಖದಲ್ಲಿ ಬೇಸರ. ಚಿತ್ರಸಿರಿ ಅರಳಿದ್ದ ಕಲಾತೋಟದತ್ತ ನೋಟ ಬಿದ್ದದ್ದೇ ಮತ್ತೆ ಅವರ ಮುಖ ಅರಳಿತು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT