ADVERTISEMENT

ಸುಲಭದ ಚಾರಣ; ಕುರುಂಜಿಲ್‌ ಬೆಟ್ಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಚಾರಣಿಗರ ಸಾಲು ಎಂಬ ಹನುಮಂತನ ಬಾಲ...
ಚಾರಣಿಗರ ಸಾಲು ಎಂಬ ಹನುಮಂತನ ಬಾಲ...   

‘ಜರ್ಕಿನ್‌ ಏನೂ ಬೇಡ… ತಲೆಗೊಂದು ಟೊಪ್ಪಿ ಇರಲಿ ಸರ್. ಸನ್‌ಸ್ಟ್ರೋಕ್ಸ್‌ ಆಗಬಹುದು’ ಎಂದು ಬೆಳ್ಳ ಹೋಮ್‍ ಸ್ಟೇಯ ಚಂದನ್ ಒಂದು ಎಚ್ಚರಿಕೆ ನೀಡಿದರು. ಅಡಿಕೆ ಹಾಳೆಯ ತಟ್ಟೆಯಲ್ಲಿ ಅವರಿಟ್ಟ ಇಡ್ಲಿಗಳು ಹೊರಗಿನ ಮಂಜಿನ ಹೊಗೆಗೆ ಸ್ಪರ್ಧೆ ಒಡ್ಡುವಂತೆ ಹಬೆಯಾಡುತ್ತಿದ್ದವು.

ಕುರುಂಜಿಲ್‌ ಬೆಟ್ಟ ಈ ಹೋಮ್‌ ಸ್ಟೇಯಿಂದ ಸುಮಾರು 15 ಕಿ.ಮೀ ದೂರ. ಕುದುರೆಮುಖ ಅಭಯಾರಣ್ಯದೊಳಗೆ ಈ ಬೆಟ್ಟ ಇದೆ. ಅಭಯಾರಣ್ಯ ವ್ಯಾಪ್ತಿಯ ರಸ್ತೆ ಪ್ರವೇಶಿಸಬೇಕಾದರೆ ಬೆಳ್ಳ ಚೆಕ್‌ಪೋಸ್ಟ್‌ನಲ್ಲಿ ವಿವರ ಬರೆದು ಶುಲ್ಕ ತೆರಬೇಕು. ಇನ್ನು ಚಾರಣಕ್ಕೆ ಪ್ರತ್ಯೇಕ ಶುಲ್ಕ. ನುರಿತ ಮಾರ್ಗದರ್ಶಕರು ಚಾರಣ ಹೋಗುವವರ ಜೊತೆಗೆ ಕಡ್ಡಾಯವಾಗಿ ಇರಬೇಕು. ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಚಾರಣದ ಆರಂಭದ ಪಾಯಿಂಟ್‍ವರೆಗೆ ಬಂದು ಇದನ್ನು ಖಾತ್ರಿಪಡಿಸಿ ವಾಪಸಾಗುತ್ತಾರೆ.

ಬೆಂಗಳೂರಿನಿಂದ ಶುಕ್ರವಾರ ರಾತ್ರಿ ಹೊರಟಾಗಲೇ ಹನ್ನೆರಡು ಹೊಡೆದಿತ್ತು. ಹಾಸನ, ಬೇಲೂರು, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ ಮಾರ್ಗ. ಕೊಟ್ಟಿಗೆಹಾರ ತಲುಪಿದಾಗ ಸೂರ್ಯ ಇನ್ನೂ ಎದ್ದಿರಲಿಲ್ಲ. ರಸ್ತೆಯೂ ಮಂಜಿನ ಮುಸುಕು ಹಾಕಿಕೊಂಡು ಮಲಗಿತ್ತು. ‘ಇಲ್ಲಿ ಹೋಗೋಕೆ ಈಗ ಆಗೊಲ್ಲ ಸರ್’ ಅನ್ನುತ್ತ ಡ್ರೈವರ್‌ ವೆಂಕಟೇಶ್‌ ವಾಹನ ಬಂದ್‌ ಮಾಡಿ ಮುಸುಕು ಎಳೆದುಕೊಳ್ಳಬೇಕೇ? ವಾಹನದಲ್ಲಿದ್ದವರಿಗೆ ಮಲಗಬೇಕೇ ಎಚ್ಚರವಾಗಿರಬೇಕೇ ಎನ್ನುವ ಗೊಂದಲ. ಮಂಜು ಸರಿದರೂ ಡ್ರೈವರ್‌ ಏಳಲೊಪ್ಪಲಿಲ್ಲ. ಕುಂಭಕರ್ಣನನ್ನು ಎಬ್ಬಿಸುವಂತೆ ಚಹಾದ ಬಿಸಿ ಮೂಗಿಗೆ ಹಿಡಿದಾಗ ವೆಂಕಟೇಶ್‌ ಕಣ್ಣುಜ್ಜುತ್ತಾ ಎದ್ದರು.

ADVERTISEMENT

(ಇಂತಹ ಹಾದಿ ಸಿಕ್ಕರೆ ಆಯಾಸ ಹೇಗೆ ಆದೀತು ಹೇಳಿ...)

ಅವರ ನಿದ್ದೆಯಿಂದಾಗಿ ಗಮ್ಯ ತಲುಪುವಾಗ ತಡವಾಯಿತು. ಸ್ನಾನ ಈಗ ಬೇಡ, ಸಂಜೆ ಹೊತ್ತಿಗೆ ಬರುವಾಗ ಬಿಸಿ ನೀರಿರುತ್ತೆ. ಹತ್ತೇ ನಿಮಿಷದಲ್ಲಿ ರೆಡಿಯಾಗಿ ಎಂದು ಹೋಮ್‍ಸ್ಟೇಯವರು ಗಡಿಬಿಡಿ ಮಾಡಿದರು. ಚಾರಣಕ್ಕೆಂದೇ ಬೆಂಗಳೂರಿನಿಂದ ಬಂದ ಸುಮಾರು 50 ಮಂದಿ ಅಲ್ಲಿದ್ದರು. ಇಬ್ಬರೇ ಗೈಡ್‌ಗಳು. ಅಂತೂ ನಮ್ಮ ಚಾರಣ ಶುರುವಾದಾಗ ಹತ್ತು ಹೊಡೆದಿತ್ತು.

ಈ ಬೆಟ್ಟದ ಮೇಲೆ ಹನ್ನೆರಡು ವರ್ಷಕ್ಕೊಮ್ಮೆ ಕುರುಂಜಿ ಹೂಗಳಾಗುತ್ತವೆ. ಹಾಗಾಗಿ ಬೆಟ್ಟಕ್ಕೆ ಕುರುಂಜಿಲ್‌ ಎಂಬ ಹೆಸರು. ನಾಲ್ಕು ವರ್ಷಗಳ ಹಿಂದೆ ನೇರಳೆ ಬಣ್ಣದ ಹೂವುಗಳಿಂದ ಬೆಟ್ಟ ಅಲಂಕಾರಗೊಂಡಿತ್ತು. ‘ನೋಡೋಕೇನೋ ಅದು ಚಂದ ಸರ್. ಆದರೆ ಆ ಹೂವಾದರೆ ಬರಗಾಲದ ಮುನ್ಸೂಚನೆ’ ಎಂದು ಗೈಡ್‌ ಶೀನಣ್ಣ ಲೊಚಗುಟ್ಟಿದರು.

ಚಾರಣ ಹೋಗೋಕೆ ಆಸೆ, ಆದರೆ ಅಷ್ಟು ಎತ್ತರ ನಡೆಯೋಕೆ ಸಾಧ್ಯನಾ ಎಂದು ಕೈಚೆಲ್ಲುವವರಿಗೆ ಕುರುಂಜಿಲ್‌ ಬೆಟ್ಟದ ಟ್ರೆಕ್‌ ಹೇಳಿ ಮಾಡಿಸಿದಂತಿದೆ. ಮೇಲೇರಿ ಬರುವ ಒಟ್ಟು ದೂರ 14 ಕಿ.ಮೀ ಆಗಬಹುದು. ಆದರೆ ಶೀನಣ್ಣ ಕಾಡಿನೊಳಗೆ ಸಾಗುವ ಅಡ್ಡದಾರಿಯೊಂದನ್ನು ಪರಿಚಯಿಸುವ ಉಮೇದಿನಲ್ಲಿದ್ದರು. ಅವರಿಗೂ ಬೇಗ ವಾಪಸ್‌ ಹೋಗುವ ಧಾವಂತ ಇದ್ದಿತ್ತಿರಬೇಕು.

ಮುಖ್ಯರಸ್ತೆಯಿಂದ ಏರುಹಾದಿಗೆ ಜಾರುವವರೆಗೆ ಸುಮಾರು ಎರಡೂವರೆ ಕಿ.ಮೀ. ನಡಿಗೆ ಇದೆ. ಅಲ್ಲಿ ದಾರಿ ಕವಲಾಗುತ್ತದೆ. ಸಹಜದಾರಿಯಲ್ಲಿ ಬಯಲುದಾರಿ. ಅಲ್ಲೊಂದು ಸಣ್ಣ ತೊರೆಯೂ ಸಿಗುತ್ತದೆ. ಇನ್ನೊಂದು ಅಡ್ಡದಾರಿ. ಕಾಡಿನೊಳಗೆ ಸಾಗುವ ಅವಕಾಶವನ್ನು ಇದು ನೀಡುತ್ತದೆ. ಅಡ್ಡ ಬಿದ್ದ ಮರಗಳನ್ನು ಹಾರುತ್ತ ಎದುರಾಗುವ ಪೊದೆಗಳನ್ನು ಸವರುತ್ತ ಏರುವ ದಾರಿ. ಎರಡು ಮಾರ್ಗಗಳಲ್ಲಿ ಎರಡು ಕಿ.ಮೀ. ವ್ಯತ್ಯಾಸವಿದೆ. ಅಂದರೆ ಸಮೀಪದಾರಿಯಲ್ಲಿ ಸಾಗಿದರೆ ಒಟ್ಟು ನಾಲ್ಕು ಕಿ.ಮೀ. ಉಳಿಸಬಹುದು.

(ಬೆಟ್ಟದ ಮೇಲಿಂದ ಕಾಣುವ ರಮ್ಯ ನೋಟ)

ಯಾವ ದಾರಿ ಬೇಕು ಎಂಬ ಬಗ್ಗೆ ಚರ್ಚಿಸುವ ನೆಪದಲ್ಲಿ ಒಂದಿಷ್ಟು ಮಂದಿ ಕಾಲಿಗೆ ವಿಶ್ರಾಂತಿ ಕೊಟ್ಟರು. ಕೊನೆಗೆ ಹೋಗೋದೊಂದು ಬರೋದೊಂದು ಎಂಬ ಒಪ್ಪಂದಕ್ಕೆ ಬಂದು ಪ್ರಯಾಣ ಶುರುವಾಯಿತು. ಮೊದಲಿಗೆ ಅಡ್ಡದಾರಿಯನ್ನೇ ನೆಚ್ಚಿಕೊಂಡರು. ಇಲ್ಲಿ ಒಬ್ಬರ ಹಿಂದೊಬ್ಬರಂತೆಯೇ ಬರಬೇಕು. ಹಾಗಾಗಿ ನಮ್ಮ ಚಾರಣಿಗರ ಸಾಲು ಹನುಮಂತನ ಬಾಲದಂತೆ ಬೆಳೆಯಿತು. ಮುಂದೆ ಶೀನಣ್ಣ. ಹಿಂದೆ ಬೆಂಗಳೂರಿನಿಂದ ನಮ್ಮೊಂದಿಗೆ ಬಂದಿದ್ದ ಕ್ಯಾಪ್ಟನ್. ‘ಯಾರೂ ಬೇರೆ ಹೋಗಬೇಡಿ ಸರ್’ ಎನ್ನುತ್ತ ಶೀನಣ್ಣ ಆಗಾಗ್ಗೆ ನಿಂತು ಎಚ್ಚರಿಕೆ ಕೊಡುತ್ತಲೇ ಇದ್ದರು. ದಟ್ಟ ಅಡವಿಯಲ್ಲಿ ಸ್ವಲ್ಪ ಯಾಮಾರಿದರೂ ದಾರಿ ತಪ್ಪಿ ಅಲೆಯಬೇಕಾಗುತ್ತದೆ. ಅದು ಗೈಡ್ ತಲೆಗೆ ಬರುತ್ತೆ ಎನ್ನುವ ಅಳುಕು ಅವರದು. ಒಂದೆರಡು ತಿಂಗಳ ಹಿಂದೆ ಇಬ್ಬರು ತಪ್ಪಿಸಿಕೊಂಡು ಮೂರು ದಿನಗಳ ನಂತರ ಬೆಳ್ತಂಗಡಿ ಹತ್ತಿರ ಸಿಕ್ಕಿದ‌್ದರು ಎಂದು ಹೆದರಿಸುವ ಕಥೆಯನ್ನೂ ಅವರು ಹೇಳಿದ ಮೇಲೆ ಎಲ್ಲರೂ ಶಾಲೆ ಮಕ್ಕಳಂತೆ ಲೈನ್‌ ಕಟ್ಟಿದರು.

ಹಿಂದೆ ಕುದುರೆಮುಖ ಅದಿರು ಕಂಪೆನಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇದೇ ಬೆಟ್ಟದಲ್ಲಿ ಬಿಎಸ್‍ಎನ್‍ಎಲ್‍ ನೆಟ್‌ವರ್ಕ್‌ ಕಚೇರಿಯೊಂದಿತ್ತು. ಅದರ ಪಳೆಯುಳಿಕೆ ಈಗಿದೆ. ಆಗ ಮೂವರು ಸಿಬ್ಬಂದಿ ವಾರಕ್ಕಾಗುವಷ್ಟು ರೇಷನ್‍ನೊಂದಿಗೆ ಬಂದು ವಾರವಿದ್ದು ಕೆಳಗೆ ಹೋಗುತ್ತಿದ್ದರಂತೆ. ಬಳಿಕ ಮೂವರ ಇನ್ನೊಂದು ಪಾಳಿ. ಈ ಪಾಳು ಕಚೇರಿಯ ಹಿಂದೆಯೇ ಬೆಟ್ಟದ ತುದಿಯಿದೆ. ತುದಿಯಲ್ಲಿ ಹೆಚ್ಚು ಬಂಡೆಗಳೇ. ಕುದುರೆಮುಖ ಅರಣ್ಯ ಸಾಲಿನ ವಿಹಂಗಮ ನೋಟವನ್ನು ಇದು ಕೊಡುತ್ತದೆ. ಮೂರ್ನಾಲ್ಕು ಕಡೆಗಳಲ್ಲಿ ಅಪಾಯಕಾರಿ ಕಡಿದಾದ ಬಂಡೆಗಳಿವೆ. ಆದರೆ ಚಾರಣದ ನೆನಪು ಕಟ್ಟಿಕೊಡುವ ಆಕರ್ಷಕ ಫೋಟೊಗಳಿಗೆ ಹೇಳಿ ಮಾಡಿಸಿದ ಸ್ಥಳಗಳಿವು. ಕಟ್ಟಿಕೊಂಡಿದ್ದ ಬುತ್ತಿ ಅಲ್ಲೇ ಖಾಲಿ ಆಯಿತು.

(ಚಾರಣದ ಹಾದಿಯಲ್ಲಿ ಸಿಕ್ಕ ಕರು)

ಚಾರಣ ದೀರ್ಘವಾಗಿರಬೇಕು ಎಂದುಕೊಳ್ಳುವವರು ದೂರ ಅಂತರದ ದಾರಿಯನ್ನು ಆಯ್ದುಕೊಳ್ಳಬಹುದು. ಯಾವ ದಾರಿಯಲ್ಲಿ ಹೋದರೂ ಮಧ್ಯಾಹ್ನ 3 ಗಂಟೆಯೊಳಗೆ ಚಾರಣ ಮುಗಿಸಬಹುದು. ನಂತರ ಸಮಯ ಇದ್ದರೆ ಪಕ್ಕದಲ್ಲೇ ಜಂಗಲ್ ಲಾಡ್ಜ್‌ನವರ ಭಗವತಿ ಪ್ರಕೃತಿ ಶಿಬಿರವಿದೆ. ಅಲ್ಲಿ ಬೆಟ್ಟದಿಂದಿಳಿಯುವ ತುಂಗೆ ಸ್ಫಟಿಕಸದೃಶವಾಗಿ, ನಿಶ್ಶಬ್ದವಾಗಿ ಹರಿಯುತ್ತಾಳೆ. ಚಾರಣಕ್ಕೆ ಹೋದವವರಿಗೆ ಇಲ್ಲಿ ಉಚಿತ ಪ್ರವೇಶವಿದೆ. ಇಲ್ಲದಿದ್ದಲ್ಲಿ ಶುಲ್ಕತೆರಬೇಕು. ಚಾರಣದಿಂದ ಬಿಸಿಯಾದ ಕಾಲುಗಳನ್ನು ಇಲ್ಲಿಯ ನೀರಿನಲ್ಲಿ ಇಳಿಸಬಹುದು.

ಸುತ್ತಮುತ್ತ ಇನ್ನೂ ಸಣ್ಣಪುಟ್ಟ ಜಲಪಾತಗಳಿವೆ. ಸಮಯವಿದ್ದರೆ ಕಳಸಕ್ಕೆ ಹೋಗಬಹುದು. ತುಂಗಾ, ಭದ್ರಾ ಮತ್ತು ನೇತ್ರಾವತಿ ಹುಟ್ಟುವ ಗಂಗಾಮೂಲ ಇದೆ. ಸಂಜೆ ಚಳಿ ಶುರುವಾಗುವ ಹೊತ್ತಿಗೆ ವಾಪಸಾದಾಗ ಬೆಳ್ಳ ಹೋಮ್‍ಸ್ಟೇಯ ಚಂದನ್‌ ಬಿಸಿ ಮೆಣಸಿನಕಾಯಿ ಬಜ್ಜಿಯೊಂದಿಗೆ ಕಾಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.