ADVERTISEMENT

ಹಕ್ಕಿಗಳನ್ನು ಹಿಂತಿರುಗಿಸಲು ನಿರ್ಧರಿಸಿದ್ದೇನೆ...

ಓದುಗರ ವೇದಿಕೆ

ರಾಜಲಕ್ಷ್ಮಿ ಸಿ.ಜಿ.
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST
ಈಶ್ವರ ಬಡಿಗೇರ
ಈಶ್ವರ ಬಡಿಗೇರ   

ಮಗನಿಗೆ ಜೊತೆಯಾಗಿ ಇರಲೆಂದು ಹಕ್ಕಿಗಳನ್ನು ತಂದದ್ದಾಯಿತು. ಆದರೆ, ಆ ಹಕ್ಕಿಗಳ ವರ್ತನೆ ತೋರಿಸಿದ ಸತ್ಯವನ್ನು ಅರಗಿಸಿಕೊಳ್ಳುವುದು ಸುಲಭವಾಗಿರಲಿಲ್ಲ.

ಹಳ್ಳಿಯಲ್ಲಿ ಹುಟ್ಟಿದರೂ ನಗರದಲ್ಲೇ ಬೆಳೆದ ನನಗೆ ಪ್ರಾಣಿ ಪಕ್ಷಿಗಳ ಬಗ್ಗೆ ಜ್ಞಾನ ಅಷ್ಟಕ್ಕಷ್ಟೆ. ತಮ್ಮ–ತಂಗಿ ಬೇಕೆಂದು ನನ್ನ ಮಗ ಹಟ ಮಾಡಿದಾಗ, ಇನ್ನೊಂದನ್ನು ಹೊತ್ತು ಹೆತ್ತು ಸಾಕುವುದರ ಊಹೆಗೇ ಹೆದರಿದ ನಾನು ಮೀನುಗಳನ್ನು ತಂದೆ. ಅವು ಆಹಾರಕ್ಕಾಗಿ ಹೊರತು ಬೇರೆ ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ. ಮಗ ನಾಯಿ ಬೆಕ್ಕಿಗಾಗಿ ಹಟ ಮಾಡಿದ. ವಂಶ ಪಾರಂಪರ್ಯವಾಗಿ ಬಂದಿರುವ ಅಸ್ತಮಾ ಇರುವುದರಿಂದಲೂ ಮತ್ತು  ನಾಯಿ – ಬೆಕ್ಕಿಗೆ ನಾನೇ ಸಿಕ್ಕಾಪಟ್ಟೆ ಹೆದರುವುದರಿಂದ ಆ ವಿಷಯ ಬಿಟ್ಟೆ. ಉಳಿದದ್ದು ಪಕ್ಷಿಗಳು.

ನಾನು ನನ್ನ ಮಗನೊಂದಿಗೆ ಸೇರಿ ಚಂಡಿ ಹಿಡಿದು ಯಜಮಾನರನ್ನು ಒಪ್ಪಿಸಿದ್ದಾಯಿತು. ಒಂದು ಸುದಿನ  ನಾಲ್ಕು ಲವ್‌ ಬರ್ಡ್ಸ್ (ಹಸಿರು ಒಂದು ಜೊತೆ, ನೀಲಿ ಒಂದು ಜೊತೆ) ಮನೆಗೆ ಬಂದವು. ‘ಅವುಗಳ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ’ ಎಂದು ‘ಪ್ರಮಾಣ’ (ಮದರ್‌ ಡೈ ಪ್ರಾಮಿಸ್‌) ಮಾಡಿದ್ದು ನನ್ನ ಮಗ. ಆದರೆ, ಎರಡು ದಿನಗಳ ನಂತರ ಅವನಿಗೆ ಅವನ ಆಣೆ ಮರೆತುಹೋಗಿತ್ತು.

ಪಕ್ಷಿಗಳ ಚಿಲಿಪಿಲಿ, ಅವುಗಳ ಆಟ, ರಾತ್ರಿ ನಿಶ್ಶಬ್ದವಾಗಿ ನಿದ್ದೆ ಮಾಡುವುದು, ಕೈ ಮೇಲೆ ಕೂರುವುದು, ಕೈಯಿಂದ ಆಹಾರ ತಿನ್ನುವುದು... ಇದೆಲ್ಲ ಅಪ್ಯಾಯಮಾನವಾಗಿತ್ತು. ಎರಡು ಮೂರು ತಿಂಗಳು ಈ ಪಕ್ಷಿಪ್ರೀತಿ ಮುಂದುವರೆಯಿತು.

ಒಂದು ದಿನ ಹಕ್ಕಿಗಳ ಹತ್ತಿರ ಹೋದ ಮಗ ತುಂಬಾ ಸಂಭ್ರಮದಿಂದ ‘ಅಮ್ಮ ಮೊಟ್ಟೆ ಇಟ್ಟಿದೆ’ ಎಂದು ಕುಣಿಯತ್ತಾ ಬಂದ. ಪಂಜರದಲ್ಲಿ ಎರಡು ಮಡಿಕೆಗಳಿದ್ದವು. ಒಂದರಲ್ಲಿ ಎರಡು ಗೋಲಿ ಗಾತ್ರದ ಮೊಟ್ಟೆಗಳು. ಅವುಗಳನ್ನು ನೋಡಿ ತುಂಬಾ ಸಂತೋಷವಾಯಿತು.

ಅಪ್ಪ – ಅಮ್ಮ – ಅಕ್ಕನಿಗೆ ಫೋನಾಯಿಸಿ ನನ್ನ ಸಂತೋಷ ಹಂಚಿಕೊಂಡಿದ್ದಾಯಿತು. ಅಕ್ಕ ಪಕ್ಕದವರನ್ನು ಕರೆದು ತೋರಿಸಿದ್ದಾಯಿತು. ಎಲ್ಲರ ಸಲಹೆ ಕೇಳಿದ್ದಾಯಿತು. ಅಂತರ್ಜಾಲದಲ್ಲಿ ಜಾಲಾಡಿದ್ದಾಯ್ತು. ಇನ್ನೊಂದೆರಡು ದಿನಗಳಲ್ಲಿ ಇನ್ನೂ ಎರಡು ಮೊಟ್ಟೆಗಳು. ಸಂಭ್ರಮವೆಲ್ಲಾ ಚಿಂತೆಗೆ ಬದಲಾಯಿತು. ಅವುಗಳನ್ನು ಸಲಹುವುದು ಹೇಗೆ?

ಮೊಟ್ಟೆಗಳ ಅಪ್ಪ–ಅಮ್ಮ ಹಸಿರು ಹುಡುಗ – ನೀಲಿ ಹುಡುಗಿ! ಅವರಲ್ಲಿ ಹುಡುಗಿ ಮಾತ್ರ ಯಾವಾಗಲೂ ಮಡಕೆಯನ್ನು ಇಣುಕಿ ಇಣುಕಿ ನೋಡುತ್ತಿತ್ತು. ಮಗರಾಯ ಕೇಳಿದ– ‘ಅಮ್ಮ ಅದು ಮೊಟ್ಟೆ ಹಾಳು ಮಾಡಿದರೆ!’.

ನಾನು ದೊಡ್ಡ ಭಾಷಣವನ್ನೇ ಕೊಟ್ಟೆ. ‘ಮನುಷ್ಯರಲ್ಲಿ ಮಾತ್ರ ಆ ತರಹ ಕೆಟ್ಟವರಿರುತ್ತಾರೆ. ಪ್ರಾಣಿ – ಪಕ್ಷಿಗಳಲ್ಲಿ ಹಾಗೆ ಇರುವುದೇ ಇಲ್ಲ’ ಎಂದೆ.

ಮಾರನೆಯ ದಿನ ನೋಡಿದರೆ ಮೂರು ಮೊಟ್ಟೆ ಒಡೆದು ಹೋಗಿವೆ. ಎಲ್ಲಾ ಹಕ್ಕಿಗಳೂ (ಮೊಟ್ಟೆ ಅಮ್ಮನೂ) ಸೇರಿ ಮೊಟ್ಟೆ ಭೋಜನ ಸವಿಯುತ್ತಿವೆ. ನನಗೆ ಒಂದು ಕ್ಷಣ ನಂಬಲಾಗಲೇ ಇಲ್ಲ.

ಮೊಟ್ಟ ಒಡೆದದ್ದು ಹಸಿರು ಹುಡುಗಿಯೇ? ಹಾಗೆಂದು ಊಹಿಸಿದೆ. ಪ್ಲಾಸ್ಟಿಕ್ ಹಾಳೆಯಿಂದ ಪಂಜರವನ್ನು ಎರಡು ಭಾಗ ಮಾಡಿದೆ. ಒಂದು ಕಡೆ ಮೊಟ್ಟೆಯ ಅಪ್ಪ ಅಮ್ಮ– ಇನ್ನೊಂದು ಕಡೆ ಉಳಿದ ಎರಡು ಹಕ್ಕಿಗಳು! ನನ್ನ ಪ್ಲಾಸ್ಟಿಕ್‌ ಕೋಟೆ ಭದ್ರವಾಗಿದೆಯೆಂದೇ ನಂಬಿದ್ದೆ. ನೀಲಿ ಹುಡುಗಿ ಇನ್ನೊಂದು ಮೊಟ್ಟೆ ಇಟ್ಟಿತು. ಹಳೆಯದೊಂದಿತ್ತು. ಎರಡು ಮೊಟ್ಟೆಗಳಾದವು. ಆದರೆ ಹಸಿರು ಹುಡುಗಿ ಕಾಳು ತಿನ್ನುವುದನ್ನು ಬಿಟ್ಟು ಪ್ಲಾಸ್ಟಿಕ್‌ ಹಾಳೆ ಕೀಳುವುದರಲ್ಲಿ, ಈ ಕಡೆ ಬರುವ ದಾರಿ ಹುಡುಕುವುದರಲ್ಲಿ ನಿರತಳಾಗಿರುತ್ತಿದ್ದಳು.

ನನ್ನ ಮನೆ ಕೆಲಸ ಮಾಡಿಕೊಳ್ಳುತ್ತಿದ್ದೆ. ಹಕ್ಕಿಗಳ ಕಿರುಚುವಿಕೆ ಕೇಳಿಸಿತು. ಓಡಿ ಹೋಗಿ ನೋಡಿದರೆ ಹಸಿರು ಹುಡುಗಿ ನಾನು ಕಟ್ಟಿದ ಕೋಟೆಯನ್ನು ಭೇದಿಸಿ ಮೊಟ್ಟೆಗಳಿದ್ದ ಮಡಕೆಯೊಳಗೇ ಇಳಿದಿದ್ದಾಳೆ.

ಹೆಣ್ಣು ಪಕ್ಷಿಗಳ ನಡುವೆ ಮಹಾಯುದ್ಧ! ಕೊನೆಗೆ, ಹಸಿರು ಹುಡುಗಿಯನ್ನು ನನ್ನ ಮಗ ಅನಾಮತ್ತಾಗಿ ಕತ್ತು ಹಿಡಿದೇ ಆಚೆ ಎಳೆದುತಂದ. ಸ್ವಲ್ಪ ಸಮಯದಲ್ಲೇ ಆ ಮೊಟ್ಟೆಗಳು ಒಡೆದು ಹೋದವು. ಈಗ ಮೊಟ್ಟೆ ಭೋಜನವನ್ನು ಅಪ್ಪ ಅಮ್ಮನೇ ಸವಿಯುತ್ತಿದ್ದರು.

ಅಯ್ಯೋ, ಹಕ್ಕಿ ಪ್ರಪಂಚ ಇಷ್ಟು ಭಾವಹಿತವೇ! ಅಥವಾ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಮರೆತು ಬಂದದ್ದನ್ನು ಬಂದ ಹಾಗೆಯೇ ಸ್ವೀಕರಿಸುವುದು ರೀತಿ ಅವುಗಳದೇ? ಮೊಟ್ಟೆಗಳನ್ನು ಉಳಿಸಿಕೊಳ್ಳಲು ಹೋರಾಟವನ್ನೇ ನಡೆಸಿದ ಅಮ್ಮ ಪಕ್ಷಿ, ಮೊಟ್ಟೆ ಒಡೆದ ತಕ್ಷಣ ಅದನ್ನೇ ತಿನ್ನುವುದೇ? ಗೊಂದಲ ಬರೆಹರಿಯುತ್ತಿಲ್ಲ. ಹಕ್ಕಿಗಳನ್ನು ಅಂಗಡಿಗೆ ಹಿಂತಿರುಗಿಸಲು ನಿರ್ಧರಿಸಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT