ADVERTISEMENT

ಹಕ್ಕಿಗಳ ಹೆರಿಗೆ ಆಸ್ಪತ್ರೆ ಅತ್ತಿವೇರಿ

ಹ.ಸ.ಬ್ಯಾಕೋಡ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅತ್ತಿವೇರಿ ಒಂದು ಪುಟ್ಟ ಗ್ರಾಮ. ಈ ಗ್ರಾಮದ ಹೊರವಲಯದಲ್ಲಿನ ಹಿನ್ನೀರಿನ ಪ್ರದೇಶಕ್ಕೆ ಪ್ರತಿವರ್ಷವೂ ಸಾವಿರಾರು ಸಂಖ್ಯೆಯಲ್ಲಿ ವಲಸೆ ಹಕ್ಕಿಗಳು ಆಗಮಿಸುತ್ತವೆ. ಅಂತಹ ವಲಸೆ ಹಕ್ಕಿಗಳ ಪೈಕಿ ಬಿಳಿ ಕೆಂಬರಲು ಹಕ್ಕಿ, ಚಮಚ ಕೊಕ್ಕಿನ ಹಕ್ಕಿ, ತೆರೆದ ಕೊಕ್ಕಿನ ಹಕ್ಕಿ, ಕೆಂಬಣ್ಣದ ಕೊಕ್ಕರೆ, ಗೋವಕ್ಕಿ, ಸೂಚಿ ಬಾಲದ ಬಾತು ಕೋಳಿ, ಕಲ್ಲುಗೊರವ ಹಕ್ಕಿ ಹಾಗೂ ನೀಲಿ ರೆಕ್ಕೆಯ ಬಾತು ಹಕ್ಕಿಗಳು ಬರುತ್ತವೆ.

ವಿವಿಧ ಬಗೆಯ ಸುಮಾರು 1200 ಜೊತೆ ಹಕ್ಕಿಗಳು ಅತ್ತಿವೇರಿಗೆ ಪ್ರತಿವರ್ಷ ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿಯೇ ಅತ್ತಿವೇರಿ ಹಿನ್ನೀರಿನ ಪ್ರದೇಶವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪಕ್ಷಿಧಾಮವೆಂದು ಘೋಷಿಸಿದೆ. ಪ್ರಸ್ತುತ ಅತ್ತಿವೇರಿ ವಲಸೆ ಹಕ್ಕಿಗಳ ಹೆರಿಗೆ ಆಸ್ಪತ್ರೆಯಾಗಿ ಬದಲಾಗಿದೆ. ಹಿನ್ನೀರಿನ ಪ್ರದೇಶದಲ್ಲಿ ಮುಳುಗಿದ ಎತ್ತರದ ದಿಬ್ಬಗಳು ಹಾಗೂ ಆ ದಿಬ್ಬಗಳ ಮೇಲಿನ ಗಿಡ–ಗಂಟಿಗಳ ಗುಂಪುಗಳ ಮೇಲೆ ಗೂಡು ಕಟ್ಟಿ ಮೊಟ್ಟೆ ಇಟ್ಟುಕೊಂಡು ಕುಳಿತಿರುವ ವಲಸೆ ಹಕ್ಕಿಗಳನ್ನು ಕಂಡಾಗ ನಿಜಕ್ಕೂ ಇಡೀ ಪಕ್ಷಿಧಾಮವೇ ಹೆರಿಗೆ ಆಸ್ಪತ್ರೆಯಂತೆ ಕಾಣುತ್ತದೆ.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಿಳಿ ಕೆಂಬರಲು ಹಕ್ಕಿ, ಚಮಚ ಕೊಕ್ಕಿನ ಹಕ್ಕಿ, ತೆರೆದ ಕೊಕ್ಕಿನ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬಾಣಂತನಕ್ಕಾಗಿಯೇ ಇಲ್ಲಿಗೆ ಬಂದಂತಿವೆ. ಪರಸ್ಪರ ಪ್ರೀತಿಯಿಂದ ಪಕ್ಕಪಕ್ಕದಲ್ಲಿಯೇ ಗೂಡು ನಿರ್ಮಿಸಿಕೊಂಡು ಮರಿ ಮಾಡಲು ಕುಳಿತುಕೊಂಡಿವೆ.

ಇನ್ನೇನು ಕೆಲವೇ ದಿನಗಳೊಳಗಾಗಿ ಮೊಟ್ಟೆಯಿಂದ ಹೊಸ ಹಕ್ಕಿಗಳು ಹೊರಬರುತ್ತವೆ. ಆಗ ತಾಯಿ ಹಕ್ಕಿಗಳು ಮರಿಗಳಿಗೆ ಇಷ್ಟವಾದ ಆಹಾರವನ್ನು ಹಿನ್ನೀರಿನಲ್ಲಿ ಹುಡುಕಿ ತಂದು ತಿನಿಸುವುದು. ದಿನಗಳು ಕಳೆಯುತ್ತಿದ್ದಂತೆ ಮರಿಗಳ ಮೈಮೇಲೆ ರೆಕ್ಕೆ ಪುಕ್ಕಗಳು ಮೂಡುತ್ತಿದ್ದಂತೆ ಟೊಂಗೆಯಿಂದ ಟೊಂಗೆಗೆ ಹಾರಲು ಕಲಿಸುವ ಪಾಠ ಗಮನಸೆಳೆಯುತ್ತದೆ.

ADVERTISEMENT

ಬೇಸಿಗೆ ಕಳೆಯುತ್ತಲೇ ಎಲ್ಲ ಹಕ್ಕಿಗಳೂ ಮರಳಿ ತಮ್ಮ ಮೂಲಸ್ಥಾನವನ್ನು ಅರಸಿಕೊಂಡು ಹೊರಟು ಹೋಗುತ್ತವೆ. ಅದಕ್ಕಾಗಿಯೇ ಅರಣ್ಯ

ಇಲಾಖೆಯು ಹಕ್ಕಿಗಳ ವೀಕ್ಷಣೆಗೆ ಅಕ್ಟೋಬರ್‌ ತಿಂಗಳಿಂದ ಮಾರ್ಚ್–ಮೇ ತಿಂಗಳವರೆಗಿನ ಅವಧಿ ಸೂಕ್ತ ಸಮಯವೆಂದು ಗೊತ್ತುಪಡಿಸಿದೆ.ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಕಡಿಮೆ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಈ ಉಷ್ಣಾಂಶ ವಲಸೆ ಹಕ್ಕಿಗಳ ಸಂತಾನೋತ್ಪತ್ತಿ  ಕ್ರಿಯೆಗೆ ಸೂಕ್ತವಾದುದು. ರಾಜ್ಯದ ಪ್ರಮುಖ ಆರು ಪಕ್ಷಿಧಾಮಗಳಲ್ಲಿ ಅತ್ತಿವೇರಿ ಪಕ್ಷಿಧಾಮವೂ ಒಂದು. ಆದರೆ, ದಟ್ಟ ಕಾಡಿನ ಮಧ್ಯೆ ಇರುವ ಈ ಪಕ್ಷಿಧಾಮ ಪ್ರಕೃತಿ ಪ್ರಿಯರಿಗೆ ಅಷ್ಠೇನೂ ಪರಿಚಿತವಾದುದಲ್ಲ. ಇಲ್ಲಿಗೆ ಹೋಗಲು ಸೂಕ್ತ ಬಸ್‌ ವ್ಯವಸ್ಥೆ ಇಲ್ಲ.

ಸ್ವಂತ ವಾಹನದಲ್ಲಿಯೇ ಹೋಗಬೇಕು. ಆದರೆ, ಒಂದು ಪುಟ್ಟ ಉಪಹಾರ ಗೃಹ ಇಲ್ಲಿರುವುದು ವಿಶೇಷ. ಹಕ್ಕಿಗಳನ್ನು ಹತ್ತಿರದಿಂದ ವೀಕ್ಷಿಸಲಿಕ್ಕಾಗಿ, ಪುಟ್ಟದಾದ ಉದ್ದನೆಯ ಸೇತುವೆಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಅದರ ಮೇಲೆ ಹೋಗಿ ನಿಂತುಕೊಂಡು ಮನಸಾರೆ ಹಕ್ಕಿಗಳ ಚೆಲುವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

 ವಲಸೆ ಹಕ್ಕಿಗಳ ಹೆರೆಗೆ ಆಸ್ಪತ್ರೆ ಅತ್ತಿವೇರಿಗೆ ಭೇಟಿ ನೀಡುವವರು ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ ಬರಬಹುದು. ಕಾವೇರಿ ಕಡೆಯಿಂದ ಬರುವವರು ಬಂಕಾಪುರಕ್ಕೆ ಬಂದು ಮುಂಡಗೋಡದಿಂದ ಹುನಗುಂದ ಗ್ರಾಮಕ್ಕೆ ಬರಬೇಕು.

ಅಲ್ಲಿಂದ ನಾಲ್ಕು ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸಾಗಿದರೆ ಅತ್ತಿವೇರಿ ಪಕ್ಷಿಧಾಮ ಕಾಣಸಿಗುವುದು. ಶಿರಸಿ ಕಡೆಯಿಂದ ಬರುವವರು ನೇರವಾಗಿ ಮುಂಡಗೋಡಕ್ಕೆ ಬಂದು ಬರಬಹುದು.

ಪ್ರತಿ ವರ್ಷವೂ ಆಗಸ್ಟ್‌ ತಿಂಗಳಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ವಲಸೆ ಪಕ್ಷಿಗಳು ಅತ್ತಿವೇರಿಗೆ ಆಗಮಿಸುತ್ತವೆ. ಆದರೆ ಈ ಬಾರಿ ಮಳೆ ಸರಿಯಾಗಿ ಬಾರದಿರುವ ಕಾರಣದಿಂದ ವಲಸೆ ಹಕ್ಕಿಗಳು ತಡವಾಗಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿವೆ. ವಿಶೇಷವಾಗಿ ವಲಸೆ ಬಾತುಕೋಳಿಗಳು ಹಾಗೂ ಬಿಳಿ ಕೆಂಬರಲು ಹಕ್ಕಿಗಳು ಹೆಚ್ಚಾಗಿ ಬಂದಿವೆ.
–ಪರಮೇಶ ಅನವಟ್ಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.