ADVERTISEMENT

‘ಹತ್ತೂರ ಜಾತ್ರೆಗಿಂತ ಸುತ್ತೂರು ಜಾತ್ರೆ ಚೆಂದ ’

ಕೆ.ಎಸ್.ಗಿರೀಶ್
Published 2 ಫೆಬ್ರುವರಿ 2019, 6:39 IST
Last Updated 2 ಫೆಬ್ರುವರಿ 2019, 6:39 IST
ಸುತ್ತೂರು ಶಿವರಾತ್ರೀಶ್ವರ ಶಿವಯೋಗಿ
ಸುತ್ತೂರು ಶಿವರಾತ್ರೀಶ್ವರ ಶಿವಯೋಗಿ   

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಮಹತ್ವ ಪಡೆದ ಕ್ಷೇತ್ರ. ಕಪಿಲಾ ನದಿಯ ದಂಡೆಯಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷ 6 ದಿನಗಳ ಕಾಲ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಇಲ್ಲಿ ನಿತ್ಯ ಲಕ್ಷಾಂತರ ಮಂದಿಗೆ ಅನ್ನದಾಸೋಹ ಹಾಗೂ ಜ್ಞಾನದಾಸೋಹಗಳು ನಡೆಯುವುದು ವಿಶೇಷ.

ಸುತ್ತೂರು ಮಠವು ಜಗತ್ತಿಗೆ ಶಾಂತಿ ಬೋಧಿಸಿದ ಅತ್ಯಂತ ಹಳೆಯ ಮಠ. ಕ್ರಿ.ಶ. 950ರಲ್ಲಿ ಇಲ್ಲಿದ್ದ ಶಿವರಾತ್ರೀಶ್ವರ ಶಿವಯೋಗಿಗಳು ತಮಿಳುನಾಡಿನ ಚೋಳರಿಗೂ ತಲಕಾಡಿನ ಗಂಗರಿಗೂ ನಡೆಯಬಹುದಾಗಿದ್ದ ಯುದ್ಧವನ್ನು ತಪ್ಪಿಸಿದ ಮಹನೀಯರು. ಎರಡೂ ಕಡೆಯ ಸೈನ್ಯ ಸುತ್ತೂರು ಬಳಿ ಬೀಡು ಬಿಟ್ಟು ಇನ್ನೇನು ಯುದ್ಧ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಇವರು ಮಧ್ಯಪ್ರವೇಶಿಸಿ ಶಾಂತಿಮಂತ್ರವನ್ನು ಬೋಧಿಸುತ್ತಾರೆ. ಎರಡೂ ಕಡೆಯ ಅರಸರಿಗೂ ಮನಃಪರಿವರ್ತನೆಯಾಗಿ ನಡೆಯಬಹುದಾಗಿದ್ದ ದೊಡ್ಡದೊಂದು ಕದನ ತಪ್ಪಿತು ಎಂಬ ಐತಿಹ್ಯವಿದೆ.

ಮೂಲಗದ್ದುಗೆಗೆ ವಿಶೇಷ ಪೂಜೆ–ಪುನಸ್ಕಾರಗಳು, ರಥೋತ್ಸವಗಳು ಧಾರ್ಮಿಕ ಮನೋಭಾವದ ಜನರನ್ನು ಬರಸೆಳೆಯುತ್ತವೆ. ಕೃಷಿ ಮೇಳ ರೈತರನ್ನು ಕೈಬೀಸಿ ಕರೆಯುತ್ತದೆ. ಭಜನೆಯ ಪದ್ಧತಿಯನ್ನು ಉಳಿಸಲು ಜಾತ್ರೆಯಲ್ಲಿ ರಾಜ್ಯಮಟ್ಟದ ಭಜನಾಮೇಳವನ್ನು ಆಯೋಜಿಸಲಾಗುತ್ತದೆ.

ADVERTISEMENT

ಮಲೆಮಹದೇಶ್ವರ ಬಂದಿದ್ದ ಮಠ

ಸುತ್ತೂರು ಮಠ ಇಂದು ಮಾತ್ರ ಜನಪ್ರಿಯವಾಗಿಲ್ಲ. ಅದು ಶತಶತಮಾನಗಳಿಂದಲೂ ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿತ್ತು ಎನ್ನುವುದಕ್ಕೆ ಮಲೆಮಹದೇಶ್ವರ ಮಹಾಕಾವ್ಯ ಮತ್ತು ಜನಪದ ಗಾದೆಗಳೇ ಸಾಕ್ಷಿ.

ಮಹಾಕಾವ್ಯದಲ್ಲಿ ಬರುವ ‘ಸುತ್ತೂರು ಮಠದ ಕವಟ್ಲು’ ಎಂಬ ಅಧ್ಯಾಯದಲ್ಲಿ ವಿಸ್ತಾರವಾಗಿ ಮಠದ ಕಾಯಕ ಸಂಸ್ಕೃತಿಯನ್ನು ಹಾಗೂ ಜಾತ್ಯಾತೀತ ನಿಲುವನ್ನು ವರ್ಣಿಸಲಾಗಿದೆ. ಹಿಂದೆ ಮಠಗಳು ಸಮಾಜದ ದಲಿತರನ್ನು ತುಳಿದವು ಎಂಬ ಮಾತನ್ನು ಅಕ್ಷರಶಃ ಈ ಭಾಗ ಹುಸಿಯಾಗಿಸಿದೆ. ಅಂದಿನ ಸ್ವಾಮಿಯಾಗಿದ್ದ ಸಿದ್ದನಂಜದೇಶಿಕರು ಮಹದೇಶ್ವರ ಅವರನ್ನು ‘ಏನಪ್ಪ ಜಂಗಮದೇವ್ರೇ ನೀವು ಯಾವೂರಪ್ಪ’ ಎಂದು ಗೌರವದಿಂದ ಕೇಳುವುದು, ವಿದ್ಯೆ ಕೇಳಲು ಬಂದ ಮಹದೇಶ್ವರನಿಗೆ ವಿದ್ಯೆ ಕಲಿಸಲು ಒಪ‍್ಪಿಗೆ ಸೂಚಿಸುವುದು, ರಾಗಿ ಬೀಸುವ ಕೆಲಸ ನೀಡುವುದು. ಇವೆಲ್ಲವೂ ಇದರ ಕಾಯಕ ಸಂಸ್ಕೃತಿಗೆ ಹಿಡಿದ ಕೈಗನ್ನಡಿ. ’ಸುತ್ತೂರು ಮಠ ಸುಖ ಅಂತ ಹೋದ್ರೆ ರಾಗಿ ಬೀಸೋದು ತಪ್ಪಲಿಲ್ಲ’ ಎಂಬ ಗಾದೆ ಮಾತು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಅಂದೇ ಅನುಷ್ಠಾನಗೊಳಿಸಿತ್ತು ಎಂಬುದಕ್ಕೆ ದ್ಯೋತಕ.

ಈ ಬಾರಿಯ ಜಾತ್ರಾ ವಿಶೇಷಗಳು

* ಪ್ರಸಾದವನ್ನು ಮೊದಲು ಪರೀಕ್ಷಿಸಿ ನಂತರ ವಿತರಿಸಲಾಗುತ್ತದೆ

* ಈ ಬಾರಿ 8ರಿಂದ 10 ಲಕ್ಷ ಮಂದಿ ಬರುವ ನಿರೀಕ್ಷೆ ಇದೆ. ಎಲ್ಲರಿಗೂ ತಿಂಡಿ, ಊಟ ನೀಡಲು ಐದು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 500 ಮಂದಿ ಬಾಣಸಿಗರು ಅಡುಗೆ ತಯಾರಿಸಲಿದ್ದಾರೆ.

* 27ನೇ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ, 800ಕ್ಕೂ ಹೆಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ.

* ವಸ್ತುಪ್ರದರ್ಶನ, ಕೃಷಿ ಮೇಳ, ಚಿತ್ರಕಲಾ ಸ್ಪರ್ಧೆ, ಚಿತ್ರಸಂತೆ, ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ದೇಸಿ ಆಟಗಳ ಸ್ಪರ್ಧೆ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ ಇರಲಿದೆ

* ಫೆ.1ರಂದು ಮುಂಜಾನೆ 4ಕ್ಕೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕದ ಮೂಲಕ ಜಾತ್ರೆಗೆ ಚಾಲನೆ. 3ರಂದು ರಥೋತ್ಸವ, 5ರಂದು ತೆಪ್ಪೋತ್ಸವ, ಕೊಂಡೋತ್ಸವ ಹಾಗೂ ಹಾಲರವಿ ಉತ್ಸವ ನಡೆಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.