ADVERTISEMENT

ಹಾಗಾಗದಿರಲಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಮನೆಯೆಲ್ಲ ಅಸ್ತವ್ಯಸ್ತ

ನಿಮಗೆ ನೀಟಾಗಿ ಇಡಲು ಗೊತ್ತಿಲ್ಲ
ನೀವೆಂಥ ಮನುಷ್ಯರೊ
ಹೆಂಡತಿಯ ಗೊಣಗಾಟ
ನನ್ನಲ್ಲಿ ಮಾತ್ರವಲ್ಲ ಮಕ್ಕಳಲ್ಲೂ

ಎಲ್ಲಿದೆ ಅಚ್ಚುಕಟ್ಟು ನಿಸರ್ಗದಲ್ಲಿ
ಅಸ್ತವ್ಯಸ್ತವೇ ಚೆಂದ
ಜೀವಜಾಲದ ಸ್ವಚ್ಛಂದ
ಅಭಯಾರಣ್ಯದ ಪ್ರ-ಬಂಧ

ADVERTISEMENT

ನೀನು ವೈನಾಗಿ ಬೈತಲೆಹಾಕಿ ಜಡೆ ನೇಯ್ದು
ಪಾವಲಿ ಸಿಂಧೂರ ಇಟ್ಟು
ಮೈತುಂಬ ಸೀರೆಯುಟ್ಟು
ಮುಖತುಂಬ ಸಿಂಗಾರವಾಗಿ
ಇರುವುದು ನನಗಿಷ್ಟವಿಲ್ಲ ಗರತಿಯಾಗಿ

ತುಟಿವರೆಗೂ ಬಂದ ಮಾತು ತಡೆದಿತ್ತು
ಮನೆಯಂದ ಚೆಂದಕಾಗಿ
ನೆಂಟರಿಷ್ಟರಿಂದ ಹೊಗಳಿಸಿಕೊಳ್ಳುವುದು
ಆಕೆಗೆ ಮಾಮೂಲು
ಒಂದಿರುವೆ ಕಂಡರೂ
ಗುಡಿಸಿ ಹಾಕುವಳು

ಸಣ್ಣವನಿರುವಾಗ ನಾನು
ಅಮ್ಮನೂ ಹಾಗೆ
ತುಂಬ ಕಟ್ಟುನಿಟ್ಟು
ಇಟ್ಟಲ್ಲಿ ಇಡದಿದ್ದರೆ ಬಟ್ಟೆ ವಸ್ತು
ಬೈದೇ ಬಿಡುವಳು ಆಗುವವರೆಗೆ ಸುಸ್ತು

ಅದೇ ಗೀಳುರೋಗವಾಗಿ
ಅಮ್ಮ ಬದುಕಿರುವವರೆಗೂ
ಓ  ದೇವರೇ
ನನ್ನವಳು ಹಾಗಾಗದಿರಲಿ
ಮಕ್ಕಳಿಗೆ ಅಸ್ತವ್ಯಸ್ತವೇ ಪ್ರಿಯವಾಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.