ಸುತ್ತಲೂ ಹಿಮದ ಬಿಳಿ ಟೊಪ್ಪಿಗೆ ಹೊತ್ತ ಹಿಮಶಿಖರಗಳು, ಮಂಜು ಕರಗಿ ನೀರಾಗಿ ಹರಿಯುವ ಬಿಯಾಸ್ ನದಿ. ಮೂರೂ ಹೊತ್ತು ಎಡಬಿಡದೆ ಸುರಿಯುವ ಹಿಮ. ಇದ್ದಕ್ಕಿದ್ದಂತೆ ಸುರಿಯುವ ಮಳೆ.
`ಗೂಗಲ್~ನಲ್ಲಿ ಜಾಲಾಡಿದರೆ ಮನಾಲಿಗೆ ಪ್ರಯಾಣಿಸಲು ಜನವರಿಯಿಂದ ಮಾರ್ಚ್ ಒಳ್ಳೆಯ ಸಂದರ್ಭವೇನೂ ಅಲ್ಲ ಎನ್ನುವುದು ಪ್ರವಾಸದ ಸಲಹೆ ನೀಡುವವರ ಅಭಿಪ್ರಾಯ. ಆದರೆ ಮೂಳೆ ಕೊರೆಯುವ ಚಳಿ, ಹೊತ್ತು ಗೊತ್ತಿಲ್ಲದೆ ರಸ್ತೆ ತುಂಬಿಕೊಳ್ಳುವ ಬಿಳುಪಾದ ಹಿಮದ ಹೂಮಳೆ, ಬಿಸಿಲೇರಿದರೆ ಕರಗಿಹೋಗುವ ಹಿಮದ ವಿಶಿಷ್ಟ ಅನುಭವಕ್ಕೆ ಇದೇ ಸಕಾಲ.
ಮಧುಚಂದ್ರದ ಪ್ರಣಯದ ಪಕ್ಷಿಗಳಿಗೆ ಮನಾಲಿಗಿಂತ ಒಳ್ಳೆಯ ತಾಣ ಬಹಳಷ್ಟು ಇರಲಿಕ್ಕಿಲ್ಲ. ಅಲ್ಲಿನ ಸಿಕ್ಕಾಪಟ್ಟೆ ಚಳಿ ಕನಸು ಕಂಗಳ ಚೆಲುವೆ ಚನ್ನಿಗರಿಗೆ ದಿವ್ಯ ಅನುಭೂತಿಯೊಂದನ್ನು ದೊರಕಿಸಿಕೊಡಬಲ್ಲುದು.
ಗೆಳೆಯರೊಂದಿಗೆ ಸಾಹಸ ಚಟುವಟಿಕೆಗಳಲ್ಲಿ ತೊಡಗಲೂ ಇದು ಉತ್ತಮ ತಾಣ. ಮನುಷ್ಯನ ಧೀಶಕ್ತಿಗೆ ಸವಾಲೊಡ್ಡುವ ಹಿಮಾಲಯದ ದುರ್ಗಮ ಶಿಖರಗಳನ್ನು ಮನಾಲಿ ತನ್ನೊಡಲಲ್ಲಿ ಅಡಗಿಸಿಕೊಂಡಿದೆ.
ಹಿಮಮಳೆಯಿಂದ ಜಾರಿಹೋಗುವ ರಸ್ತೆ. ಎಲ್ಲಿ ನೋಡಿದರೂ ಹಿಮದ ರಾಶಿ. ಚಾಲನೆ ಮಾಡಲಾಗದ ರಸ್ತೆಯಲ್ಲಿ ನಮ್ಮನ್ನು ಎಲ್ಲೆಲ್ಲಿಯೋ ಸುತ್ತಾಡಿಸುತ್ತೇನೆಂದು ಹುಸಿ ಭರವಸೆ ನೀಡುವ ಟ್ಯಾಕ್ಸಿ ಡ್ರೈವರ್.
ಕಪ್ಪು ಕನ್ನಡಕ ಹಾಕದಿದ್ದರೆ ಕಣ್ಣಿಗೆ ಅಪಾಯ ಎಂದು ಹೆದರಿಸಿ ಇಪ್ಪತ್ತು ರೂಪಾಯಿಯ ಕನ್ನಡಕಗಳನ್ನು ನೂರೈವತ್ತು ರೂಪಾಯಿಗೆ ಮಾರಾಟ ಮಾಡುವ ಜಾಣ ವ್ಯಾಪಾರಿಗಳು. ಹಿಮದಲ್ಲಿ ಆಡಬೇಕಿದ್ದರೆ ಅದಕ್ಕಾಗಿ ರೂಪಿಸಿದ ವಿಶೇಷ ದಿರಿಸು ಧರಿಸಲೇಬೇಕೆಂದು ಒತ್ತಾಯಿಸುವ ಬಾಡಿಗೆ ದಿರಿಸಿನ ಅಂಗಡಿಗಳ ಸಾಲು ಸಾಲು...
ಹೀಗೆ, ಮನಾಲಿಗೆ ಮತ್ತೊಂದು ಮುಖವೂ ಇದೆ. ಪ್ರವಾಸಿಗರ ಕೋಣೆಗೇ ಬಂದು ಸ್ಕೀಯಿಂಗ್ ಮಾಡಿ ಎಂದು ಸ್ಕೀಯಿಂಗ್ ಏಜೆಂಟರು ದುಂಬಾಲು ಬೀಳುತ್ತಾರೆ. ಕಲ್ಲುಬಂಡೆಗಳ ನಡುವೆ ಏರಿಳಿಯುವ ಬಿಯಾಸ್ ನದಿಯಲ್ಲಿ ರ‌್ಯಾಫ್ಟಿಂಗ್ ಆದರೂ ಮಾಡದಿದ್ದರೆ ನೀವು ಮನಾಲಿಗೆ ಬಂದಿದ್ದೇ ವ್ಯರ್ಥ ಎಂಬಂತೆ ತಲೆ ತಿನ್ನುತ್ತಾರೆ. ಏನಿಲ್ಲ ಎಂದರೂ ಅವರ ಜೊತೆ ವಾಹನದಲ್ಲಿ ಹಿಮದಲ್ಲಿ ಒಂದು ರೌಂಡ್ ಹಾಕದಿದ್ದರೆ ಅವರಿಗೆ ಸಮಾಧಾನವಿಲ್ಲ.
ಅಂದಹಾಗೆ, ಮನಾಲಿ `ಮನುಸ್ಮೃತಿ~ ಬರೆದ `ಮನುವಿನ ಆಲಯ~ ಎನ್ನುವುದರ ಬದಲಾದ ರೂಪ. ಮನಾಲಿಯನ್ನು `ದೇವತೆಗಳ ಕಣಿವೆ~ ಎಂದೂ ಕರೆಯಲಾಗುತ್ತದೆ. ಹಳೆಯ ಮನಾಲಿ ಗ್ರಾಮದಲ್ಲಿ ಮನುವಿನ ದೇವಾಲಯವೂ ಇದೆ.
ಇಲ್ಲಿ ಕಾಂಗ್ರಾ ಕಣಿವೆಯಿಂದ ವಲಸೆ ಬಂದು ನೆಲೆಯಾದ ನೌರ್ ಎಂಬ ವಿಶಿಷ್ಟ ಸಮುದಾಯವಿದೆ. ಅವರ ಕೆಲವೇ ಕುಟುಂಬಗಳು ಇಲ್ಲಿ ಅಸ್ತಿತ್ವದಲ್ಲಿವೆ ಎನ್ನುವುದು ಇತಿಹಾಸತಜ್ಞರ ಅಭಿಪ್ರಾಯ.
ದೆಹಲಿಯಿಂದ 550 ಕಿ.ಮೀ. ದೂರವಿರುವ ಮನಾಲಿ ಹಿಮಾಚಲ ಪ್ರದೇಶ ರಾಜ್ಯದಲ್ಲಿದೆ. ಇದು ವಾಸ್ತವವಾಗಿ ಒಂದು ಪುಟ್ಟ ಹಳ್ಳಿ. ಆದರೆ ಕಾಶ್ಮೀರದಲ್ಲಿ ಉಗ್ರವಾದದಿಂದ ಪ್ರವಾಸಿಗರ ನೆಮ್ಮದಿಗೆ ಭಂಗ ಬಂದ ನಂತರ ಮನಾಲಿ ದೇಶಿ ಹಾಗೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಋತುಮಾನಗಳ ತೀವ್ರತೆ ಗಮನಿಸದೆ ಪ್ರವಾಸಿಗರು ಇಲ್ಲಿ ಸದಾ ಕಿಕ್ಕಿರಿಯುತ್ತಾರೆ.
ಹಿಮ ಧರಿಸಿದ ಗಿರಿಶ್ರೇಣಿ, ದೇವದಾರು ಮತ್ತು ಪೈನ್‌ನ ದಟ್ಟ ಅರಣ್ಯ, ಬಿಯಾಸ್ ನದಿಯ ನಿರಂತರ ಹರಿವು ಉಂಟು ಮಾಡಿರುವ ಬೃಹತ್ ಕಲ್ಲು ಬಂಡೆಗಳು. ಹಳೆಯ ಸಾಂಪ್ರದಾಯಿಕ ಕಲ್ಲು ಹಾಗೂ ಮರಗಳಿಂದ ನಿರ್ಮಿತವಾದ ಮನೆಗಳನ್ನು ಮೀರಿಸುತ್ತಿರುವ ಆಧುನಿಕ ಕಾಂಕ್ರೀಟ್ ಕಟ್ಟಡಗಳು ಇಂದಿನ ಮನಾಲಿಯಲ್ಲಿ ಕಾಣಬಹುದು.
ಬ್ರಿಟಿಷರು ಇಲ್ಲಿ ಸೇಬನ್ನು ಪರಿಚಯಿಸಿದರು. ಹೀಗಾಗಿ ಅಪಾರ ಸಂಖ್ಯೆಯ ಸೇಬಿನ ಮರಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರವಾಸೋದ್ಯಮದ ನಂತರ ಸೇಬಿನ ತೋಟಗಳೇ ಇಲ್ಲಿನ ಜನರ ಬಹುಮುಖ್ಯ ಆದಾಯದ ಮೂಲ. ಮನಾಲಿಗೆ ಭೇಟಿ ನೀಡಲು ಏಪ್ರಿಲ್ ತಿಂಗಳಿಂದ ಸೆಪ್ಟೆಂಬರ್ ಅತ್ಯಂತ ಸೂಕ್ತ.
ಸ್ವದೇಶಿ ಸ್ವಿಟ್ಜರ್‌ಲೆಂಡ್
ಮನಾಲಿ ಭಾರತದ ಸ್ವಿಟ್ಜರ್‌ಲೆಂಡ್ ಎಂಬ ಹೆಮ್ಮೆಗೆ ಪಾತ್ರ. ಹಿಮ ಆವರಿಸಿದ ಪರ್ವತಗಳು, ಹಲವಾರು ಸಾಹಸ ಕ್ರೀಡೆಗಳ ಸೌಲಭ್ಯಗಳು ಪ್ರವಾಸಿಗರ ಹೃದಯವನ್ನು ಸೂರೆಗೊಳ್ಳುತ್ತವೆ.
ಮನಾಲಿ ಬರೀ ಗಿರಿಧಾಮವಲ್ಲ, ಅಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳೂ ಇವೆ. ಅದರಲ್ಲಿ ಅತ್ಯಂತ ಪ್ರಮುಖವಾದುದು ಹಿಡಿಂಬಾ ದೇವಾಲಯ. ಈ ದೇವಾಲಯವನ್ನು ಭೀಮನ ಪತ್ನಿ ಹಿಡಿಂಬೆಯ ನೆನಪಿಗೆ ನಿರ್ಮಿಸಲಾಗಿದೆ. ಈ ದೇವಾಲಯ ಬೃಹತ್ ಗಾತ್ರದ ಮರಗಿಡಗಳ ನಡುವೆ ಪ್ರತ್ಯೇಕವಾಗಿದ್ದು ಅಪರೂಪದ ನೈಸರ್ಗಿಕತೆ ಹೊಂದಿದೆ.
ಮನಾಲಿಯಲ್ಲಿ ನೂರಾರು ಹೋಟೆಲ್‌ಗಳಿವೆ. ಸಾಧಾರಣ ದರಗಳಲ್ಲಿ ಹೋಟೆಲ್ ರೂಂ ಲಭ್ಯವಾಗುತ್ತವೆ. ಆದರೆ, ರೂಮ್ ಹೀಟರ್‌ಗಳಿಗೆಂದು ಹೋಟೆಲ್ ಮಾಲಿಕರು ರೂಮ್ ಬಾಡಿಗೆಯಷ್ಟೇ ಹಣ ಕಕ್ಕಿಸುತ್ತಾನೆ.
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.