ADVERTISEMENT

ಕಪ್ಪು ರಂಧ್ರ: ಅಚ್ಚರಿಯ ಆರು ಪ್ರಶ್ನೆಗಳು

ಎನ್.ವಾಸುದೇವ್
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಕಪ್ಪು ರಂಧ್ರ: ಅಚ್ಚರಿಯ ಆರು ಪ್ರಶ್ನೆಗಳು
ಕಪ್ಪು ರಂಧ್ರ: ಅಚ್ಚರಿಯ ಆರು ಪ್ರಶ್ನೆಗಳು   

1. ‘ಕಪ್ಪು ರಂಧ್ರ’ - ಅದೆಂಥ ನಿರ್ಮಿತಿ?
‘ಕಪ್ಪು ರಂಧ್ರ’ - ಅದು ವಿಶ್ವದ, ನಕ್ಷತ್ರ ಲೋಕದ ಒಂದು ವಿಶಿಷ್ಟ ಪ್ರದೇಶ. ವಾಸ್ತವವಾಗಿ ಅದು ಬೃಹತ್ ನಕ್ಷತ್ರವೊಂದರ ಮರಣದ ಪರಿಣಾಮವಾಗಿ ರೂಪುಗೊಂಡ ನಕ್ಷತ್ರಾವಶೇಷ ಸಹಿತ ಪ್ರದೇಶ. ‘ಪರಮ ಸಾಂದ್ರತೆಯ, ಕಲ್ಪನಾತೀತ ಗುರುತ್ವ ಶಕ್ತಿಯ, ಅತ್ಯಂತ ಕುಬ್ಜ ಗಾತ್ರದ ಒಂದು ಕಾಯ ಮತ್ತು ಅದನ್ನು ಆವರಿಸಿದ, ಬೆಳಕಿನ ಸುಳಿವೂ ಇಲ್ಲದ, ಗಾಢ ಅಂಧಕಾರದ, ತೀವ್ರ ಗುರುತ್ವದ ಒಂದು ವಿಸ್ತಾರ ಪ್ರದೇಶ’ - ಇದು ಕಪ್ಪು ರಂಧ್ರದ ಒಟ್ಟಾರೆ ಸ್ವರೂಪ.

2. ‘ಕಪ್ಪು ರಂಧ್ರ’ - ಏಕೆ ಈ ಹೆಸರು?
ಈಗಾಗಲೇ ಹೇಳಿದಂತೆ ಕಪ್ಪು ರಂಧ್ರದ ಪ್ರದೇಶದಿಂದ ದೃಗ್ಗೋಚರ ಬೆಳಕು ಕಿಂಚಿತ್ತೂ ಹೊಮ್ಮುವುದಿಲ್ಲ. ಏಕೆಂದರೆ, ಕಪ್ಪು ರಂಧ್ರದ ಪರಮ ಗುರುತ್ವದಿಂದಾಗಿ ಅದರ ‘ವಿಮೋಚನಾ ವೇಗ’ ಅತ್ಯಧಿಕ. ಎಷ್ಟೆಂದರೆ, ಅದು ಸೆಕೆಂಡ್‌ಗೆ ಮೂರು ಲಕ್ಷ ಕಿಲೋ ಮೀಟರ್‌ಗಿಂತ ಹೆಚ್ಚು. (ಹೋಲಿಕೆಗೆ ಬೇಕೆಂದರೆ, ನಮ್ಮ ಭೂಮಿಯ ವಿಮೋಚನಾ ವೇಗ ಸೆಕೆಂಡ್‌ಗೆ 11.2 ಕಿಲೋ ಮೀಟರ್, ಗುರು ಗ್ರಹದ್ದು ಸೆಕೆಂಡ್‌ಗೆ 59.5 ಕಿಲೋ ಮೀಟರ್, ನಮ್ಮ ಸೂರ್ಯನದು ಸೆಕೆಂಡ್‌ಗೆ 618 ಕಿಲೋ ಮೀಟರ್, ಬಂದೂಕಿನಿಂದ ಹಾರುವ ಗುಂಡಿನ ವೇಗ ಸೆಕೆಂಡ್‌ಗೆ 1.7 ಕಿ.ಮೀ) ಹಾಗೆಂದರೆ ಪ್ರತಿ ಸೆಕೆಂಡ್‌ಗೆ ಮೂರು ಲಕ್ಷ ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ಬೆಳಕಿನ ಕಣಗಳೂ ಕಪ್ಪು ರಂಧ್ರದ ಗುರುತ್ವದ ಸೆಳೆತದಿಂದ ತಪ್ಪಿಸಿಕೊಂಡು ಹೊರ ಬರುವುದು ಸಾಧ್ಯವಿಲ್ಲ ಎಂಬುದು ಸ್ಪಷ್ಟ ತಾನೇ? ಹಾಗಾಗಿ ಕಪ್ಪಾದ, ವೃತ್ತಾಕಾರದ, ಬೃಹತ್ ರಂಧ್ರಸದೃಶ ಸ್ವರೂಪವನ್ನು ಪಡೆದಿರುವುದರಿಂದ ಈ ಕಾಯಗಳಿಗೆ ಕಪ್ಪು ರಂಧ್ರ ಎಂಬ ರೂಪಾನ್ವಯ ಹೆಸರು. ಅಮೆರಿಕದ ವಿಖ್ಯಾತ ಭೌತ ವಿಜ್ಞಾನಿ ಜಾನ್ ವೀಲರ್ 1967ರಲ್ಲಿ ಪ್ರಥಮ ಬಾರಿಗೆ ಬಳಸಿದ ಈ ಹೆಸರು ಇಂದಿಗೂ ಹಾಗೆಯೇ ಉಳಿದಿದೆ.

3. ಕಪ್ಪು ರಂಧ್ರಗಳು ಮೈದಳೆಯುವುದು ಹೇಗೆ?
ಕಪ್ಪು ರಂಧ್ರದ ಜನನ - ಅದು ವಿಶ್ವದ ಒಂದು ಪರಮ ಭೀಕರ, ಅತ್ಯಂತ ವಿಸ್ಮಯಕರ ವಿದ್ಯಮಾನ. ಅಸಾಧಾರಣ ಪ್ರಮಾಣದ ದ್ರವ್ಯದ ದೈತ್ಯ ತಾರೆಗಳ ಬದುಕಿನ ಅಂತ್ಯದಲ್ಲಿ ಸಂಭವಿಸುವಂಥ ವಿದ್ಯಮಾನವೇ ಕಪ್ಪು ರಂಧ್ರಗಳ ಅವತರಣಕ್ಕೆ ಕಾರಣ.

ADVERTISEMENT

ವಿಶ್ವದಲ್ಲಿನ ಎಲ್ಲ ನಕ್ಷತ್ರಗಳ ಬದುಕು ಅಂತ್ಯಗೊಳ್ಳುವ ಕ್ರಮ ಏಕರೂಪದ್ದಲ್ಲ. ನಮ್ಮ ಸೂರ್ಯನಂತಹ (ಚಿತ್ರ-1) ತುಂಬ ಸಾಮಾನ್ಯ ದ್ರವ್ಯರಾಶಿಯ ನಕ್ಷತ್ರಗಳು (ಸೂರ್ಯನ ದ್ರವ್ಯರಾಶಿ ಇನ್ನೂರು ಕೋಟಿ ಕೋಟಿ ಕೋಟಿ ಕೋಟಿ ಕಿಲೋ ಗ್ರಾಂ) ತಮ್ಮ ಜೀವಿತದ ಸ್ಥಿರ ಸ್ಥಿತಿಯ ಹಂತವನ್ನು ದಾಟಿ, ಭಾರೀ ಗಾತ್ರಕ್ಕೆ ಉಬ್ಬಿ ‘ಕೆಂಪು ದೈತ್ಯ’ರಾಗುತ್ತವೆ. ಅಲ್ಲಿಂದ ಮುಂದೆ ಅವುಗಳ ಅವಸಾನದ ಸಮಯದಲ್ಲಿ ಹೊರ ಪದರಗಳೆಲ್ಲ ಕಳಚಿ ಅವು ‘ಗ್ರಹೀಯ ನೀಹಾರಿಕೆ’ ಆಗುತ್ತವೆ (ಚಿತ್ರ-2). ಹಾಗೆ ಚದುರುವ ಅನಿಲ ರಾಶಿಯ ಮಧ್ಯದಲ್ಲಿ ಮೂಲ ನಕ್ಷತ್ರದ ಅವಶೇಷ ಸಾಂದ್ರವಾದ, ಪುಟ್ಟ ಗಾತ್ರದ, ಜ್ವಲಂತವಾದ ‘ಶ್ವೇತ ಕುಬ್ಜ’ವಾಗಿ ಉಳಿಯುತ್ತದೆ (ಚಿತ್ರ-2ರ ಕೇಂದ್ರದಲ್ಲಿ ನೋಡಿ).

ಆದರೆ, ಸೂರ್ಯನ ಹತ್ತು ಮಡಿಗೂ ಅಧಿಕ ದ್ರವ್ಯರಾಶಿಯ ದೈತ್ಯ ನಕ್ಷತ್ರಗಳು ಸ್ಥಿರ ಹಂತದ ನಂತರ ‘ಸೂಪರ್ ಕೆಂಪು ದೈತ್ಯ’ರಾಗಿ ಕಡೆಗೆ ಕಲ್ಪನಾತೀತ ಶಕ್ತಿಯ ‘ಸೂಪರ್ ನೋವಾ’ ಮಹಾ ಸ್ಫೋಟದೊಡನೆ ಅಂತ್ಯ ಕಾಣುತ್ತವೆ (ಚಿತ್ರ-3 ಮತ್ತು ಚಿತ್ರ-4). ಅವುಗಳ ಅತ್ಯಂತ ಸಾಂದ್ರ ಗರ್ಭ ‘ನ್ಯೂಟ್ರಾನ್ ನಕ್ಷತ್ರ’ವಾಗಿ ಉಳಿಯುತ್ತದೆ. ನ್ಯೂಟ್ರಾನ್ ನಕ್ಷತ್ರಗಳಲ್ಲಿ ಅಡಕಗೊಳ್ಳುವ ದ್ರವ್ಯದ ಸಾಂದ್ರತೆ ಎಷ್ಟಿರುತ್ತದೆಂದರೆ ಅದರ ಒಂದು ಗೋಲಿ ಗಾತ್ರದ ದ್ರವ್ಯ ಕನಿಷ್ಠ ಒಂದು ನೂರು ಕೋಟಿ ಟನ್ ತೂಗಬಹುದು!

ನಮ್ಮ ಸೂರ್ಯನ ದ್ರವ್ಯರಾಶಿಯ ಇಪ್ಪತ್ತು ಮಡಿ ಮತ್ತು ಅದಕ್ಕೂ ಅಧಿಕ ದ್ರವ್ಯರಾಶಿಯ ಪರಮ ದೈತ್ಯ ನಕ್ಷತ್ರಗಳು ಕೆಂಪು ದೈತ್ಯ ಹಂತದ ನಂತರದ ಸೂಪರ್ ನೋವಾ ಸ್ಫೋಟದ ಸಮಯವನ್ನು ತಲುಪಿದಾಗ ಅವುಗಳ ದ್ರವ್ಯದ ಬಹುಭಾಗ ಕ್ಷಣಾರ್ಧದಲ್ಲಿ ಕೇಂದ್ರದತ್ತ ಏಕಾಏಕಿ ಕುಸಿದು ಕುಗ್ಗಿಬಿಡುತ್ತದೆ (ಚಿತ್ರ 11, ಚಿತ್ರ 12). ಹಿಮಾಲಯದ ಇಡೀ ದ್ರವ್ಯವನ್ನು ಒಂದೇ ಒಂದು ಮರಳಿನ ಕಣದ ಗಾತ್ರಕ್ಕೆ ಕುಗ್ಗಿಸಿದಂತೆ ಅಥವಾ ನಮ್ಮ ಇಡೀ ಭೂಮಿಯನ್ನು ಒಂದು ಟೆನಿಸ್ ಚೆಂಡಿನ ಗಾತ್ರಕ್ಕೆ ಅಥವಾ ನಮ್ಮ ಸೂರ್ಯನನ್ನು ಒಂದು ಕಾಲ್ಚೆಂಡಿನ ಗಾತ್ರಕ್ಕೆ ಕುಗ್ಗಿಸಿದಂತಾಗುವ ಆ ಕುಬ್ಜ ಅವಶೇಷದ ದ್ರವ್ಯರಾಶಿ ಹತ್ತು ಸೂರ್ಯರ ದ್ರವ್ಯರಾಶಿಗೆ ಸಮನಾಗುವಂತಿದ್ದು, ಅದರ ಸಾಂದ್ರತೆ ಪ್ರತಿ ಘನ ಸೆಂಟಿಮೀಟರ್‌ಗೂ ನೂರಾರು ಶತಕೋಟಿ ಟನ್‌ಗಳನ್ನೂ ಮೀರುವಂತಿದ್ದು, ಕಲ್ಪನಾತೀತ ಗುರುತ್ವವನ್ನೂ ಪಡೆದಿರುತ್ತದೆ.

ಹೀಗೆ ಮೈದಾಳುವ ಕಾಯವೇ ‘ಕಪ್ಪು ರಂಧ್ರ’ (ಕಪ್ಪು ರಂಧ್ರವೊಂದು ಅವತರಿಸುವ ಕ್ರಿಯಾ ಸರಣಿಯನ್ನು ಚಿತ್ರ-8ರಲ್ಲೂ, ಹಾಗೆ ಮೈದಳೆದ ಒಂದು ಕಪ್ಪು ರಂಧ್ರವನ್ನು ಚಿತ್ರ-5ರಲ್ಲೂ ಗಮನಿಸಿ). ಕಪ್ಪು ರಂಧ್ರದ ಸುತ್ತಲೂ ಅದರ ತೀವ್ರ ಗುರುತ್ವ ವ್ಯಾಪಿಸಿ ನಿಲ್ಲುವ ಪ್ರದೇಶದ ಬಾಹ್ಯ ಅಂಚಿಗೆ ‘ಈವೆಂಟ್ ಹೊರೈಜ಼ನ್’ ಎಂಬ ವಿಶೇಷ ಹೆಸರಿದೆ. ಈ ಸೀಮೆಯನ್ನು ದಾಟಿ ಬರುವ ಯಾವುದೇ ನಕ್ಷತ್ರ ಅಥವಾ ಇನ್ನಾವುದೇ ಕಾಯ ಕಪ್ಪು ರಂಧ್ರದ ತೀವ್ರ ಸೆಳೆತಕ್ಕೆ ಸಿಕ್ಕಿ ಅದಕ್ಕೆ ಬಲಿಯಾಗುತ್ತದೆ; ಅದರಲ್ಲಿ ಲೀನವಾಗುತ್ತದೆ (ಚಿತ್ರ-6, 7). ಹಾಗಾಗಿಯೇ ಕಪ್ಪು ರಂಧ್ರಗಳಿಗೆ ‘ನಕ್ಷತ್ರ ಭಕ್ಷಕ’ ಎಂಬ ಅಭಿಧಾನ ಕೂಡ!

4. ಕಪ್ಪು ರಂಧ್ರಗಳು ಪತ್ತೆಯಾದದ್ದು ಹೇಗೆ?
ಕಪ್ಪು ರಂಧ್ರಗಳೆಂಬ ಪರಮ ವಿಸ್ಮಯದ ಕಾಯಗಳ ಅಸ್ತಿತ್ವದ ಸಾಧ್ಯತೆಯನ್ನು ಹದಿನೆಂಟನೆಯ ಶತಮಾನದ ವೇಳೆಗೇ ಖಗೋಳ ವಿಜ್ಞಾನಿಗಳು ಊಹಿಸಿದ್ದರು. ಆದರೆ 1960ರ ದಶಕದಲ್ಲಿ ಶ್ರೇಷ್ಠ ‘ರೇಡಿಯೊ ದೂರದರ್ಶಕ’ಗಳು ಮತ್ತು ‘ಕ್ಷ-ಕಿರಣ ದೂರದರ್ಶಕ’ಗಳು ವ್ಯಾಪಕ ಬಳಕೆಗೆ ಬಂದ ನಂತರ ಕಪ್ಪು ರಂಧ್ರಗಳ ಅಸ್ತಿತ್ವದ ಸ್ಪಷ್ಟ ಸಾಕ್ಷ್ಯಗಳು ಲಭ್ಯವಾಗಿ ಅವುಗಳ ಇರುವಿಕೆ ಪತ್ತೆಯಾಯಿತು.

ವಾಸ್ತವ ಏನೆಂದರೆ, ನಮ್ಮ ಗೆಲಾಕ್ಸಿ ‘ಕ್ಷೀರ ಪಥ’ವೂ ಸೇರಿದಂತೆ (ಚಿತ್ರ-9) ವಿಶ್ವದ ಪ್ರತಿ ಗೆಲಾಕ್ಸಿಯ ಕೇಂದ್ರ ಭಾಗದಲ್ಲೂ ಒಂದು ಉಬ್ಬು ಇದೆ. ಅಲ್ಲಿ ಅಸಂಖ್ಯ ತಾರೆಗಳು, ನಾನಾ ಅನಿಲಗಳು, ದೂಳು ಮತ್ತಿತರ ದ್ರವ್ಯ ದಟ್ಟೈಸಿದೆ. ಇಂಥ ಉಬ್ಬಿನ ನಡುವೆ ಕಲ್ಪನಾತೀತ ದ್ರವ್ಯರಾಶಿಯ, ಕಲ್ಪನಾತೀತ ಗುರುತ್ವ ಶಕ್ತಿಯ, ಅಗೋಚರ ನೆಲೆಯಿಂದ ಅತ್ಯಂತ ಪ್ರಬಲ ರೇಡಿಯೋ ಅಲೆಗಳು ಮತ್ತು ಕ್ಷ-ಕಿರಣಗಳು ಹೊಮ್ಮುತ್ತಿವೆ. ರೇಡಿಯೋ ಮತ್ತು ಕ್ಷ-ಕಿರಣ ದೂರದರ್ಶಕಗಳು ಪತ್ತೆ ಹಚ್ಚಿದ ಈ ವಿಕಿರಣ ಮೂಲಗಳೇ ಕಪ್ಪು ರಂಧ್ರಗಳು. ವಿಶ್ವದಲ್ಲಿ ಸುಮಾರು ಎರಡು ಲಕ್ಷ ಕೋಟಿ ಗೆಲಾಕ್ಸಿಗಳಿವೆ. ಪ್ರತಿ ಗೆಲಾಕ್ಸಿಯಲ್ಲೂ ಕನಿಷ್ಠ ಒಂದಾದರೂ ಕಪ್ಪು ರಂಧ್ರ ಇದೆ. ಅಷ್ಟೇ ಅಲ್ಲದೆ, ಹೇರಳ ಗೆಲಾಕ್ಸಿಗಳಲ್ಲಿ ಸಿಕ್ಕಂತೆ ಅಲೆದಾಡುತ್ತಿರುವ ಕಪ್ಪು ರಂಧ್ರಗಳೂ ಬಹು ಸಂಖ್ಯೆಯಲ್ಲಿವೆ. ಹಾಗೆಂದರೆ, ವಿಶ್ವದಲ್ಲಿ ಕಪ್ಪು ರಂಧ್ರಗಳು ಅಸಂಖ್ಯ ಎಂಬುದು ಸ್ಪಷ್ಟವಾಯಿತು ತಾನೇ?

5. ವಿಶ್ವದಲ್ಲಿರುವ ಎಲ್ಲ ಕಪ್ಪು ರಂಧ್ರಗಳದೂ ಸಮಾನ ದ್ರವ್ಯರಾಶಿಯೇ? ಸಮಾನ ಗಾತ್ರವೇ?
ಖಂಡಿತ ಇಲ್ಲ. ಕಪ್ಪು ರಂಧ್ರಗಳ ಗಾತ್ರ, ದ್ರವ್ಯರಾಶಿ ಹಾಗೂ ಅವುಗಳ ‘ಈವೆಂಟ್ ಹೊರೈಜ಼ನ್’ಗಳ ವಿಸ್ತಾರ ಎಲ್ಲವೂ ಭಿನ್ನ. ಉದಾಹರಣೆಗೆ ನಮ್ಮ ಗೆಲಾಕ್ಸಿ ಕ್ಷೀರಪಥದ (ಚಿತ್ರ-9) ಕೇಂದ್ರದಲ್ಲಿ, ಸ್ಯಾಜಿಟೇರಿಯಸ್ ನಕ್ಷತ್ರ ಪುಂಜದಲ್ಲಿರುವ ಭಾರೀ ಕಪ್ಪು ರಂಧ್ರದ ದ್ರವ್ಯರಾಶಿ ನಮ್ಮ ಸೂರ್ಯನ 43 ಲಕ್ಷ ಪಟ್ಟು ಆಗುವಷ್ಟಿದೆ! ಕ್ಷೀರ ಪಥದ ನೆರೆಯ ‘ಆಂಡ್ರೋಮೇಡಾ ಗೆಲಾಕ್ಸಿ’ (ಚಿತ್ರ-10)ಯಲ್ಲಿರುವ ಒಂದು ಕಪ್ಪು ರಂಧ್ರದ ದ್ರವ್ಯರಾಶಿ ಸೂರ್ಯನ 100 ದಶಲಕ್ಷ ಮಡಿಯಷ್ಟಿದೆ! ಇತರ ಹಲವಾರು ಗೆಲಾಕ್ಸಿಗಳಲ್ಲಿ (ಚಿತ್ರ-13) ಸೂರ್ಯನ ಶತ ಕೋಟಿ ಪಟ್ಟು ದ್ರವ್ಯರಾಶಿಯ ಕಪ್ಪು ರಂಧ್ರಗಳೂ ಗುರುತಿಸಲ್ಪಟ್ಟಿವೆ!

ಹಾಗಾದ್ದರಿಂದಲೇ ಕಪ್ಪು ರಂಧ್ರಗಳನ್ನು ಸ್ಥೂಲವಾಗಿ ತ್ರಿವಿಧಗಳಲ್ಲಿ ವರ್ಗೀಕರಿಸಲಾಗಿದೆ ಕೂಡ. ಮೊದಲ ವಿಧವಾದ ‘ಪ್ರೈಮಾರ್ಡಿಯಲ್ ಕಪ್ಪು ರಂಧ್ರ’ಗಳದು ಒಂದು ಪರಮಾಣುವಿನಷ್ಟೇ ಗಾತ್ರ; ಅಷ್ಟರಲ್ಲೇ ಅಡಕವಾದ ಒಂದು ಇಡೀ ಪರ್ವತದಷ್ಟು ದ್ರವ್ಯರಾಶಿ. ಎರಡನೆಯದು ‘ಸ್ಟೆಲ್ಲಾರ್ ಕಪ್ಪು ರಂಧ್ರ’. ಇವುಗಳದು ಸೂರ್ಯನ ಸುಮಾರು ಇಪ್ಪತ್ತು ಮಡಿ ದ್ರವ್ಯರಾಶಿ; ಹತ್ತು-ಹದಿನೈದು ಕಿಲೋಮೀಟರ್ ಮೀರದ ವ್ಯಾಸ. ಮೂರನೆಯ ಬಗೆ ‘ಸೂಪರ್ ಮ್ಯಾಸಿವ್ ಕಪ್ಪು ರಂಧ್ರ’. ಅವುಗಳದು ಕನಿಷ್ಠ ಒಂದು ದಶಲಕ್ಷ ಸೂರ್ಯರ ಮೊತ್ತದಷ್ಟಾಗುವ ದ್ರವ್ಯರಾಶಿ. ವಿಶೇಷ ಏನೆಂದರೆ, ವಿಶ್ವದಲ್ಲಿ ಸ್ಟೆಲ್ಲಾರ್ ಕಪ್ಪು ರಂಧ್ರಗಳದೇ ಗರಿಷ್ಠ ಸಂಖ್ಯೆ; ಪ್ರತಿ ಗೆಲಾಕ್ಸಿಯಲ್ಲೂ ನೂರಾರು ಸಂಖ್ಯೆಯಲ್ಲಿ ಅವುಗಳ ಅಸ್ತಿತ್ವ.

6. ಕಪ್ಪು ರಂಧ್ರಗಳು ಲಕ್ಷಾಂತರ, ಕೋಟ್ಯಂತರ ಸೂರ್ಯರಷ್ಟು ದ್ರವ್ಯರಾಶಿಯನ್ನು ಗಳಿಸುವುದು ಹೇಗೆ?
ಜನ್ಮ ತಳೆವಾಗಲೇ ಯಾವ ಕಪ್ಪು ರಂಧ್ರವೂ ನೂರಾರು ಸೂರ್ಯರಷ್ಟು ಒಟ್ಟು ದ್ರವ್ಯರಾಶಿಯನ್ನು ಪಡೆದಿರುವುದಿಲ್ಲ. ವಾಸ್ತವ ಏನೆಂದರೆ ಪ್ರತಿ ಕಪ್ಪು ರಂಧ್ರವೂ ಜನನಾನಂತರ ತನ್ನ ದ್ರವ್ಯರಾಶಿಯನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತದೆ. ಪ್ರತಿ ಗೆಲಾಕ್ಸಿಯಲ್ಲೂ ನಕ್ಷತ್ರಗಳು ಮತ್ತಿತರ ನಾನಾ ವಿಧ ಕಾಯಗಳ ನಡುವೆಯೇ ಕಪ್ಪು ರಂಧ್ರಗಳೂ ನೆಲೆಗೊಂಡಿರುತ್ತವೆ. ಗೆಲಾಕ್ಸಿಯಲ್ಲಿ ನಿರಂತರ ಚಲನಶೀಲವಾಗಿರುವ ಕೋಟ್ಯಂತರ ತಾರೆಗಳಲ್ಲಿ ಕೆಲವು ಒಮ್ಮೊಮ್ಮೆ ಆಕಸ್ಮಿಕವಾಗಿ ಕಪ್ಪು ರಂಧ್ರದ ಗುರುತ್ವದ ಸೀಮೆಯನ್ನು ದಾಟಿಬಿಡುತ್ತವೆ. ಅಂಥ ನಕ್ಷತ್ರಗಳು ಕಪ್ಪು ರಂಧ್ರಕ್ಕೆ ಬಲಿಯಾಗುತ್ತವೆ. ಅವುಗಳ ದ್ರವ್ಯವೆಲ್ಲ ನಿಧಾನವಾಗಿ ಸೆಳೆಯಲ್ಪಟ್ಟು ಕಪ್ಪು ರಂಧ್ರದಲ್ಲಿ ಬೆರೆತುಹೋಗುತ್ತವೆ (ಚಿತ್ರ 6, 7 ಗಮನಿಸಿ). ಇಂಥ ಪ್ರತಿ ‘ಊಟ’ದ ನಂತರವೂ ಕಪ್ಪು ರಂದ್ರದ ಒಟ್ಟು ದ್ರವ್ಯರಾಶಿ ಹೆಚ್ಚುತ್ತದೆ. ಇದೇ ಕ್ರಿಯೆ ಮತ್ತೆ ಮತ್ತೆ ನಡೆದು ಕೋಟ್ಯಂತರ ವರ್ಷಗಳಲ್ಲಿ ಸಾಮಾನ್ಯ ಕಪ್ಪು ರಂಧ್ರಗಳು ದೈತ್ಯರಾಗುತ್ತವೆ; ಸೂಪರ್ ಮ್ಯಾಸಿವ್ ಕಪ್ಪು ರಂಧ್ರಗಳಾಗುತ್ತವೆ! ಎಷ್ಟೆಲ್ಲ ಸೋಜಿಗ! ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.