ADVERTISEMENT

ಮಂಗಲಜೋಡಿ: ಪಕ್ಷಿಗಳ ಮೋಡಿ

ಡಿ.ಜಿ.ಮಲ್ಲಿಕಾರ್ಜುನ
Published 20 ಅಕ್ಟೋಬರ್ 2018, 19:46 IST
Last Updated 20 ಅಕ್ಟೋಬರ್ 2018, 19:46 IST
ಮಂಗಲಜೋಡಿಯಲ್ಲಿ ಕ್ಯಾಮೆರಾಕ್ಕೆ ಸೆರೆಯಾದ ಹಕ್ಕಿಗಳು
ಮಂಗಲಜೋಡಿಯಲ್ಲಿ ಕ್ಯಾಮೆರಾಕ್ಕೆ ಸೆರೆಯಾದ ಹಕ್ಕಿಗಳು   

‘ಅಲ್ನೋಡಿ, ಬ್ಲಾಕ್‌ಟೇಲ್ಡ್ ಗಾಡ್ವಿಟ್‌ಗಳು’ ಎಂದು ನನ್ನ ಹಿಂದೆ ಕುಳಿತಿದ್ದ ಸನಾತನ್‌ ಬೆಹ್ರಾ, ಕಪ್ಪು ಮತ್ತು ಬೆಳ್ಳಿಯ ಬಿಳಿ ಬಣ್ಣವನ್ನು ಬದಲಿಸುವ ರೀತಿಯಲ್ಲಿ ದೂರದಲ್ಲಿ ಸುತ್ತುತ್ತಾ ಒಂದೆಡೆ ಕುಳಿತ ನೂರಾರು ಹಕ್ಕಿಗಳನ್ನು ತೋರಿಸಿ ಹೇಳಿದರು. ನಾವು ಪುಟ್ಟ ಹುಟ್ಟು ಹಾಕುವ ದೋಣಿಯಲ್ಲಿ ಕುಳಿತಿದ್ದೆವು.

‘ಸರ್ ಅದು, ಬ್ಲೂ ಥ್ರೋಟ್, ಆ ಕಡೆ ಇರುವುದು ರೇಲ್, ಈ ಕಡೆ ರಡ್ಡೀ ಬ್ರೆಸ್ಟೆಡ್‌ ಕ್ರೇಕ್‌’ ಎಂದು ಹಕ್ಕಿಗಳ ಹೆಸರುಗಳನ್ನು ಗೆಳೆಯರನ್ನು ಪರಿಚಯಿಸುವಂತೆ ಸನಾತನ್‌ ಬೆಹ್ರಾ ಹೇಳುತ್ತಿದ್ದರೆ ಅಚ್ಚರಿಯಾಗಿತ್ತು. ಅನುಮಾನಗೊಂಡು ಪ್ರಶ್ನಿಸಿದೆ. ‘ಬೇಕಿದ್ದರೆ ನೀವೇ ನೋಡಿ’ ಎನ್ನುತ್ತಾ ಹಕ್ಕಿಗಳ ದಪ್ಪ ಪುಸ್ತಕದಲ್ಲಿ ಆಯಾ ಹಕ್ಕಿಯ ಪುಟವನ್ನು ಕ್ಷಣಗಳಲ್ಲಿ ತೆಗೆದು ನಮ್ಮ ಮುಂದಿಟ್ಟರು.

ಸನಾತನ್‌ ಬೆಹ್ರ ಮಂಗಲಜೋಡಿ ಪಕ್ಷಿಧಾಮದ ಗೈಡ್‌. ಒಂದು ರೀತಿಯಲ್ಲಿ ತೇಜಸ್ವಿಯವರ ಮಂದಣ್ಣನಂಥವನು. ಈ ರೀತಿಯ ಮಂದಣ್ಣಗಳು 32 ಮಂದಿ ಇಲ್ಲಿದ್ದಾರೆ.ಒಡಿಶಾದ ಚಿಲ್ಕಾ ಸರೋವರ ತೀರದಲ್ಲಿ ಭುವನೇಶ್ವರದಿಂದ ಕೇವಲ 75 ಕಿ.ಮೀ. ದೂರದಲ್ಲಿದೆ ಮಂಗಲಜೋಡಿ. ಇಲ್ಲಿನ ದೊಡ್ಡದಾದ ಜವುಗು ಪ್ರದೇಶಗಳು, ತೆರೆದ ನೀರಿನ ಹಾಸು ಸಾವಿರಾರು ವಲಸೆ ಮತ್ತು ನಿವಾಸಿ ಪಕ್ಷಿಗಳಿಗೆ ಆಶ್ರಯತಾಣ. ಸ್ಥಳೀಯ ಹಳ್ಳಿಗರಿಂದ ಸಂರಕ್ಷಿಸಲ್ಪಟ್ಟಿದೆ.

ADVERTISEMENT

‘ಹಕ್ಕಿಗಳಿಗಿದು ಅತ್ಯಂತ ಸುರಕ್ಷಿತ ಪ್ರದೇಶವಲ್ವಾ’ ಎಂದು ನನ್ನ ಮಾರ್ಗದರ್ಶಿ ಸನಾತನ್‌ ಬೆಹ್ರಾನನ್ನು ಕೇಳಿದೆ. ‘20 ವರ್ಷದ ಹಿಂದೆ ಹೀಗಿರಲಿಲ್ಲ ಸಾಬ್‌. ಇಲ್ಲಿ ಹಕ್ಕಿಗಳ ಬೇಟೆ ನಡೆಯುತ್ತಿತ್ತು. ಅವುಗಳನ್ನು ತಿಂದು ತೇಗಿ ಮಾರಿ ಜೀವನ ನಡೆಸುತ್ತಿದ್ದೆವು’ ಎನ್ನುತ್ತಾ ಆತ ತಲೆತಗ್ಗಿಸಿದ.

ವಿಸ್ಕರ್ಡ್‌ ಟರ್ನ್‌ ಬಾಯಲ್ಲಿ ಮೀನು

ಜನರ ಮನಪರಿವರ್ತನೆಯ ಹಿಂದೆ ಒಂದು ಕಥೆಯೇ ಇದೆ. ಎರಡು ದಶಕದ ಹಿಂದೆ ಮಂಗಲಜೋಡಿ ಹಕ್ಕಿ ಹಿಡಿಯುವವರ ಹಳ್ಳಿಯಾಗಿತ್ತು. ಯಾವುದೇ ಪ್ರಭೇದಗಳ ಭೇದಭಾವವಿಲ್ಲದಂತೆ ಎಲ್ಲಾ ರೀತಿಯ ಹಕ್ಕಿಗಳನ್ನೂ ಬಲೆಯೋ. ಗುಂಡು ಹಾರಿಸಿಯೋ ಹಿಡಿದು ಕೊಂದು, ತಿಂದು ಉಳಿದದ್ದನ್ನು ಮಾರಾಟ ಮಾಡುತ್ತಿದ್ದರು. ಇದು ಅವರಿಗೆ ಲಾಭದಾಯಕ ವ್ಯವಹಾರವಾಗಿತ್ತು. ಕೆಲವರಂತೂ ತಿಂಗಳಿಗೆ ₹ 30 ಸಾವಿರ ಸಂಪಾದಿಸುತ್ತಿದ್ದರಂತೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ವನ್ಯಜೀವಿ ಅಧಿಕಾರಿಗಳು ಕೈಚೆಲ್ಲಿದ್ದರು.

1996ರಲ್ಲಿ ನಂದಕಿಶೋರ್‌ ಭುಜಬಲ್ ನೇತೃತ್ವದ ವೈಲ್ಡ್ ಒರಿಸ್ಸಾ ಎಂಬ ಸ್ವಯಂಸೇವಾ ಸಂಸ್ಥೆ ಕೆಲವು ಹಳ್ಳಿಗರೊಂದಿಗೆ ಹಕ್ಕಿಗಳ ಸಂರಕ್ಷಣಾ ಪ್ರಯತ್ನಕ್ಕೆ ಕೈಹಾಕಿತು. ಭಾವನಾತ್ಮಕವಾಗಿ ಸ್ಥಳೀಯರ ಮನಗೆದ್ದು ಬೇಟೆ ಪ್ರವೃತ್ತಿಯನ್ನು ಬಿಡಿಸಲು ಪ್ರಯತ್ನಿಸಿತು. ಜನರ ವರ್ತನೆ ಬದಲಾಗಲಾಗುತ್ತಿದ್ದಂತೆ, 2000ರಲ್ಲಿ ‘ಶ್ರೀ ಶ್ರೀ ಮಹಾವೀರ್ ಪಕ್ಷಿ ಸುರಕ್ಷಾ ಸಮಿತಿ’ಯ ಸ್ಥಾಪನೆಯಾಯಿತು. ನಂತರ ಇಲ್ಲಿನ ಹಕ್ಕಿಗಳ ಬೇಟೆ ಸಂಪೂರ್ಣ ನಿಂತುಹೋಯಿತು.

ಈಗ ಮಾಜಿ ಬೇಟೆಗಾರರು ಹಕ್ಕಿ ಸಂರಕ್ಷಕರಾಗಿದ್ದಾರೆ. ಅಷ್ಟೇ ಅಲ್ಲದೆ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಶೂಟ್‌ ಮಾಡಲು ಬರುವ ಛಾಯಾಗ್ರಾಹಕರಿಗೆ ಮತ್ತು ಹಕ್ಕಿಗಳನ್ನು ನೋಡಲು ಬರು ಪ್ರವಾಸಿಗರಿಗೆ ಮಾರ್ಗದರ್ಶಿಗಳಾಗಿದ್ದಾರೆ. ಇವರ ಈ ಸಂಸ್ಕಾರಯುತ ನಡೆಯನ್ನು ಮೆಚ್ಚಿ 2007ರಲ್ಲಿ ಒಡಿಶಾ ಸರ್ಕಾರ ವನ್ಯಜೀವಿ ಸಂರಕ್ಷಣೆಗಾಗಿ ನೀಡುವ ‘ಬಿಜು ಪಟ್ನಾಯಿಕ್ ಪ್ರಶಸ್ತಿ’ಯನ್ನು ಶ್ರೀ ಶ್ರೀ ಮಹಾವೀರ್ ಪಕ್ಷಿ ಸುರಕ್ಷಾ ಸಮಿತಿಗೆ ನೀಡಿತು.

ಈ ಪರಿವರ್ತನೆ ಸ್ಥಳೀಯರಿಗೆ ಅಷ್ಟು ಸುಲಭವಾಗಿರಲಿಲ್ಲ. ನಮ್ಮ ಮಾರ್ಗದರ್ಶಿ ಸನಾತನ್‌ ಬೆಹ್ರ ಶಾಲೆಯಲ್ಲಿ ಅಕ್ಷರ ಕಲಿತವರಲ್ಲ. ಒಡಿಶಾ ಭಾಷೆ ಮತ್ತು ಇಂಗ್ಲಿಷನ್ನು ಅವರಿವರಿಂದ ಹೇಗೆಲ್ಲಾ ಕಲಿತರೋ, ಈಗ ನೂರಾರು ಹಕ್ಕಿಗಳ ಹೆಸರನ್ನು ಸರಾಗವಾಗಿ ಹೇಳಬಲ್ಲರು. ಪಕ್ಷಿ ವೀಕ್ಷಣೆಯ ಪುಸ್ತಕದಲ್ಲಿ ಅವುಗಳನ್ನು ತೋರಿಸಬಲ್ಲವರಾಗಿದ್ದಾರೆ. ಬದುಕು ಏನೆಲ್ಲಾ ಕಲಿಸುತ್ತದೆ ಎಂದು ಅಚ್ಚರಿಯಾದರೂ ಈ ಕಲಿಕೆ ಪಕ್ಷಿ ಪ್ರಪಂಚದ ಉಳಿವಿನೆಡೆಗೆ ಮತ್ತು ಸಂರಕ್ಷಣೆಯೆಡೆಗೆ ಇರುವುದರಿಂದ ಇವರ ಬಗ್ಗೆ ಗೌರವಭಾವ ಮೂಡುತ್ತದೆ.

ಮಂಗಲಜೋಡಿಯಲ್ಲಿ 200ಕ್ಕಿಂತಲೂ ಹೆಚ್ಚು ಸಂಖ್ಯೆಯ ಹಕ್ಕಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ವಲಸೆ ಹಕ್ಕಿಗಳು. ಚಳಿಗಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಕ್ಕಿಗಳು ಇಲ್ಲಿಗೆ ಬರುತ್ತವೆ. ರಾಜಸ್ಥಾನದ ಭರತ್‌ಪುರಕ್ಕಿಂತ ಹೆಚ್ಚಿನ ಸಂಖ್ಯೆಯ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಈ ಕಾರಣದಿಂದಲೇ ಈ ಹಿಂದೆ ಪ್ರತಿವರ್ಷ ಭರತ್‌ಪುರದಲ್ಲಿ ನಡೆಯುತ್ತಿದ್ದ ‘ನ್ಯಾಷನಲ್‌ ಬರ್ಡ್‌ ಫೆಸ್ಟಿವಲ್‌’ ಅನ್ನು ಈಗ ಮಂಗಲಜೋಡಿಯಲ್ಲಿ ನಡೆಸಲಾಗುತ್ತಿದೆ.

ಐಬಿಸ್‌ ಹಕ್ಕಿಗಳ ಹಾವಿನ ಬೇಟೆ


ಸಾಂಘಿಕ ಶಿಸ್ತು

ಶ್ರೀ ಶ್ರೀ ಮಹಾವೀರ್ ಪಕ್ಷಿ ಸುರಕ್ಷಾ ಸಮಿತಿ ಪ್ರಾರಂಭಗೊಂಡಾಗ ಆರೇಳು ಮಂದಿ ಸದಸ್ಯರಿದ್ದರು. ಈಗ 36 ಮಂದಿಯಾಗಿದ್ದಾರೆ. ಇವರದ್ದೇ ಸಮವಸ್ತ್ರವಿದೆ. ಸರ್ಕಾರ ಮತ್ತು ಸೇವಾ ಸಂಸ್ಥೆಗಳು ನೀಡಿರುವ ಬೈನಾಕುಲರ್‌, ಪಕ್ಷಿವೀಕ್ಷಣಾ ಪುಸ್ತಕಗಳು, ಲೈಫ್‌ ಜಾಕೆಟ್ಸ್‌ ಜೊತೆಯಲ್ಲಿ ಸಾಂಘಿಕ ಶಿಸ್ತು ಇವರಲ್ಲಿದೆ. ನಾಲ್ಕು ತಿಂಗಳು ಮಾತ್ರ ಇವರು ಮಾರ್ಗದರ್ಶಿಗಳಾಗಿರುತ್ತಾರೆ. ಉಳಿದಂತೆ ಇವರು ತಮ್ಮ ಮೂಲ ವೃತ್ತಿಯಾದ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಕ್ಕಿಗಳ ತಂಟೆಗೆ ಇವರೂ ಹೋಗುವುದಿಲ್ಲ, ಇತರರಿಗೂ ಹೋಗಲು ಬಿಡುವುದಿಲ್ಲ.

ವೈಲ್ಡ್ ಒಡಿಶಾ ನೇತೃತ್ವದಲ್ಲಿ ಸ್ಥಳೀಯ ಯುವಕರನ್ನು ಪಕ್ಷಿ ಮಾರ್ಗದರ್ಶಿಗಳಾಗಿ ತರಬೇತಿ ನೀಡಿದ್ದಾರೆ. ಚಿಲ್ಕಾ ಅಭಿವೃದ್ಧಿ ಪ್ರಾಧಿಕಾರವು ಇಲ್ಲಿ ಪಕ್ಷಿ ವೀಕ್ಷಣಾ ಗೋಪುರ ಮತ್ತು ಸಂದರ್ಶಕರ ಕೇಂದ್ರ ನಿರ್ಮಾಣಕ್ಕೆ ಹಣವನ್ನೂ ನೀಡಿದೆ. ಪ್ರವಾಸಿಗರು ದೋಣಿಯಲ್ಲಿ ಪಕ್ಷಿ ವೀಕ್ಷಿಸಿ ಬರಲು ಶುಲ್ಕವನ್ನು ವಿಧಿಸಿ ಸಮಿತಿ ಹಣ ಸಂಗ್ರಹಿಸುತ್ತಿದೆ.

‘ಸಮಿತಿಯಿಂದ ನಿಯಮಿತವಾಗಿ ಸಭೆಗಳನ್ನು ನಡೆಸುತ್ತೇವೆ. ಅರಣ್ಯ ಸಿಬ್ಬಂದಿಯೊಂದಿಗೆ, ಮುಖ್ಯ ವನ್ಯಜೀವಿ ಸಂರಕ್ಷಕರು, ನೀರಾವರಿ ಇಲಾಖೆ, ಚಿಲ್ಕಾ ಅಭಿವೃದ್ಧಿ ಪ್ರಾಧಿಕಾರದ ಜೊತೆಗೂಡಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಸಂವಾದ ನಡೆಸಲಾಗುತ್ತದೆ. ಸಂಶೋಧನೆಗಾಗಿ ಈ ಪ್ರದೇಶಕ್ಕೆ ಭೇಟಿ ನೀಡುವ ವಿಜ್ಞಾನಿಗಳು ಮತ್ತು ಜೀವವಿಜ್ಞಾನಿಗಳೊಂದಿಗೆ ನಾವು ಸಭೆ ಆಯೋಜಿಸುತ್ತೇವೆ. ಶಾಲಾ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಮತ್ತು ಅವುಗಳ ವಾಸಸ್ಥಳದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಸಹ ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ ಶ್ರೀ ಶ್ರೀ ಮಹಾವೀರ್ ಪಕ್ಷಿ ಸುರಕ್ಷಾ ಸಮಿತಿ ಅಧ್ಯಕ್ಷ ರಾಮ್‌ಹರಿ ಬೆಹ್ರ.

ಸ್ಥಳೀಯ ಜನಸಮುದಾಯದ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ, ಪರಿಸರ ಪಾಠ, ಪ್ರವಾಸೋದ್ಯಮ, ಸ್ಥಳೀಯರಿಗೆ ಉದ್ಯೋಗ, ಎಲ್ಲಕ್ಕಿಂತ ಹೆಚ್ಚಾಗಿ ಹಕ್ಕಿಗಳ ಸಂರಕ್ಷಣೆ ನಡೆಯುತ್ತಿರುವುದು ಮಂಗಲಜೋಡಿಯ ಹೆಗ್ಗಳಿಕೆ. ಲಕ್ಷಾಂತರ ಹಕ್ಕಿಗಳು ಯಾವ ಅಡ್ಡಿ ಆತಂಕವಿಲ್ಲದೆ ಇಲ್ಲಿಗೆ ಬಂದು ಹೋಗುತ್ತವೆ.

ವಲಸೆ ಹಕ್ಕಿಗಳು ನವೆಂಬರ್‌ ತಿಂಗಳಿನಿಂದ ಮಾರ್ಚ್‌ವರೆಗೆ ಮಾತ್ರ ಇರುವ ಕಾರಣ ಈ ನಾಲ್ಕೈದು ತಿಂಗಳಿನಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಗಾಡ್ವಿಟ್‌, ಎಗ್ರೆಟ್‌, ಸ್ಟಿಲ್ಟ್‌, ಸ್ಟಾರ್ಕ್‌ ಮೊದಲಾದ ಹಕ್ಕಿಗಳ ಜೋಡಿಯಾಟಗಳು, ಮೀನುಗಳನ್ನು ಹೆಕ್ಕಿ ತಿನ್ನುವ ವಿವಿಧ ಹಕ್ಕಿಗಳ ಚಿತ್ರಗಳು, ನೀರು ಹಾವನ್ನು ಸರಾಗವಾಗಿ ಹಿಡಿದು ಕಬಳಿಸುವ ಐಬಿಸ್‌ ಹಕ್ಕಿಗಳು, ಕಪ್ಪೆಯನ್ನು ನುಂಗುವ ಹೆರಾನ್‌ಗಳು, ವಿವಿಧ ಸುಂದರ ವಲಸೆ ಹಕ್ಕಿಗಳು ಕಾಣಸಿಗುತ್ತವೆ. ಈ ವಿಸ್ಮಯ ಕ್ಷಣಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರಿಗೆ ಮಂಗಲಜೋಡಿ ಮೋಡಿ ಮಾಡಿ ಕೈ ಬೀಸಿ ಕರೆಯುತ್ತದೆ.

ಗಾಡ್ವಿಟ್‌ಗಳ ಆಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.