ADVERTISEMENT

ಕಲಾತ್ಮಕ ಜಾಗೃತಿ..!

ಹನಮಂತ ಕೊಪ್ಪದ
Published 21 ನವೆಂಬರ್ 2018, 19:45 IST
Last Updated 21 ನವೆಂಬರ್ 2018, 19:45 IST
   

ರಸ್ತೆಯ ಮೇಲೆ ಮ್ಯಾನ್‌ಹೋಲ್ ಒಂದು ಬಾಯಿತೆರೆದಿದೆ. ಸ್ವಲ್ಪ ಮೈಮರೆತರೂ ಅಪಘಾತ ಗ್ಯಾರಂಟಿ. ಅಂಥ ಮ್ಯಾನ್‌ಹೋಲ್‌ ಸುತ್ತಮುತ್ತ ವಾಹನ ಸವಾರರು, ಮಕ್ಕಳು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಆದರೆ ಯಾರೂ ಸಂಬಂಧಿಸಿದ ವರಿಗೆ ದೂರು ಸಲ್ಲಿಸಲು ಮುಂದೆ ಬರುತ್ತಿಲ್ಲ. ಕೆಲವರು ದೂರು ಸಲ್ಲಿಸಿದರೂ ಅದಕ್ಕೆ ಆಡಳಿತ ವರ್ಗದವರೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಇದನ್ನು ಗಮನಿಸುತ್ತಿದ್ದ ಯುವ ಕಲಾವಿದ ಬಣ್ಣ ಮತ್ತು ಕುಂಚ ತಗೆದುಕೊಂಡು ಮ್ಯಾನ್‌ಹೋಲ್ ಸುತ್ತ ಬೃಹತ್ ಮೀನಿನ ಚಿತ್ರ ರಚಿಸುತ್ತಾ ಜನರ ಗಮನ ಸೆಳೆದರು. ಚಿತ್ರಬಿಡಿಸುತ್ತಿರುವ ವಿಚಾರ ಮಿಂಚಿನಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಲುಪಿತು. ದಿನ ಕಳೆಯುವುದರೊಳಗೆ ‘ಯಮ ಸ್ವರೂಪಿ ಮ್ಯಾನ್‌ಹೋಲ್’ಗೆ ದುರಸ್ತಿ ಭಾಗ್ಯ ಸಿಕ್ಕಿತು. ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು!

ಇದು ಕಾಲ್ಪನಿಕ ಕಥೆಯಲ್ಲ. ಮೈಸೂರಿನ ಮಾನಸಿನಗರದ ಚಿತ್ರಕಲಾವಿದ ವಿ. ಶಿರಂಜನ್ ಅವರು ತನ್ನ ಕಲೆಯ ಮೂಲಕ ಸರ್ಕಾರ ಮತ್ತು ಜನರಲ್ಲಿ ಸಮಸ್ಯೆಯೊಂದರ ಬಗ್ಗೆ ಜಾಗೃತಿ ಮೂಡಿಸಿ, ಯಶಸ್ವಿಯಾದ ಪರಿ.

ADVERTISEMENT

ನಗರದಲ್ಲಿ ಎಲ್ಲೇ ಬಾಯಿ ತೆರೆದ ಮ್ಯಾನ್‌ಹೋಲ್‌ಗಳು, ದೊಡ್ಡ ರಸ್ತೆ ಗುಂಡಿಗಳು ಕಂಡರೆ, ಅವುಗಳ ಸುತ್ತಾ ಬಣ್ಣ ಬಣ್ಣದಿಂದ ಚಿತ್ರಬಿಡಿಸುತ್ತಾರೆ ಶಿವರಂಜನ್. ಈ ಮೂಲಕ ಅಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಕಣ್ಣಿಗೆ ರಾಚುವಂತೆ ಮಾಡುತ್ತಾರೆ. ಇಂಥ ಮೂಲಭೂತ ಸಮಸ್ಯೆಗಳ ವಿರುದ್ಧ ತನ್ನ ಕಲೆಯನ್ನೇ ‘ಜಾಗೃತಿಯ’ ಪರಿಕರವಾಗಿ ಬಳಸುತ್ತಿದ್ದಾರೆ.

ಬ್ಯಾನ್ಸ್ಕಿ ಎಂಬ ಸ್ಪೂರ್ತಿ ಚಿಲುಮೆ
ಇಂಗ್ಲೆಂಡಿನ ಅಜ್ಞಾತ ಗೋಡೆ ಚಿತ್ರ ಕಲಾವಿದ. ಸಮಾಜದಲ್ಲಿರುವ ಸಮಸ್ಯೆಗಳು ಮತ್ತು ಆಡಳಿತ ವರ್ಗದ ದುರಾಡಳಿತವನ್ನು ಖಂಡಿಸಿ ರಾತ್ರೋರಾತ್ರಿ ಯಾರಿಗೂ ಗೊತ್ತಾಗದಂತೆ ಗೋಡೆಗಳ ಮೇಲೆ ವಿಡಂಬನಾತ್ಮಕವಾಗಿ ಚಿತ್ರ ಬಿಡಿಸಿ ಜನರ ಗಮನ ಸೆಳೆಯುವಂತೆ ಮಾಡುತ್ತಿದ್ದ. ಬ್ಯಾನ್ಸ್ಕಿ ಜೀವನಗಾಥೆಯೇ ಶಿವರಂಜನ್‌ ಅವರಿಗೆ ಪ್ರೇರಣೆಯಂತೆ. ‘ಪ್ರಚಾರಕ್ಕಿಂತಲೂ ಸಮಸ್ಯೆ ಪರಿಹಾರವಾದರೆ ಸಾಕು’ ಎನ್ನುವ ಮನೋಭಾವ ಅವರದು. ಸದ್ಯ ಮೈಸೂರಿನ ‘ಕಾವಾ’ದಲ್ಲಿ ಲಲಿತಕಲೆ ಕುರಿತು ಅಭ್ಯಸಿಸುತ್ತಿರುವ ಶಿವರಂಜನ್ ತನ್ನ ಸಾಮಾಜಿಕ ಕಳಕಳಿಯಿಂದ ಇಲ್ಲಿನ ಜನರಿಗೆ ಚಿರಪರಿಚಿತರಾಗಿದ್ದಾರೆ.

ಪಾಳುಬಿದ್ದ ಗೋಡೆಗಳೇ ಕ್ಯಾನ್ವಾಸ್
ಇಲ್ಲಿಯವರೆಗೂ 30ಕ್ಕೂ ಹೆಚ್ಚು ಗುಂಡಿಗಳನ್ನು ಮತ್ತು ಮ್ಯಾನ್‌ಹೋಲ್‌ಗಳನ್ನು ಮುಚ್ಚಿಸುವಲ್ಲಿ ಶಿವರಂಜನ್ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ‘3ಡಿ’ ಚಿತ್ರಗಳನ್ನು ಬಿಡಿಸುವುದ ರಲ್ಲಿಯೂ ಪರಿಣತರಾಗಿದ್ದಾರೆ. ಜೀನ್ಸ್ ಪ್ಯಾಂಟ್‌, ಎಲೆ, ಶರ್ಟ್‌ಗಳ ಮೇಲೆ ಬಿಡಿಸಿದ ಚಿತ್ತಾರಗಳು ಯುವಕರನ್ನು ಆಕರ್ಷಿಸುತ್ತಿವೆ.

ಜನಜಂಗುಳಿಯಿಂದ ದೂರವಿದ್ದು ಪ್ರಶಾಂತ ಪರಿಸರದಲ್ಲಿ ಚಿತ್ರ ಬಿಡಿಸುವ ಅಭಿಲಾಷೆ ಹೊಂದಿರುವ ಶಿವರಂಜನ್‌ಗೆ ಪಾಳುಬಿದ್ದ ಕಟ್ಟಡಗಳ ಗೋಡೆಗಳೇ ಕ್ಯಾನ್ಯಾಸ್‌ಗಳು !

ಪರಿಸರ ಜಾಗೃತಿ, ಇತ್ತೀಚೆಗೆ ಸದ್ದುಮಾಡುತ್ತಿರುವ ಮೀ ಟೂ ಪ್ರಕರಣ, ಮೊಬೈಲ್‌ ಗೇಮ್‌ಗಳು ಮಕ್ಕಳ ಮೇಲೆ ಉಂಟುಮಾಡುತ್ತಿರುವ ದುಷ್ಪರಿಣಾಮಗಳು, ಪ್ರಾಣಿಗಳ ಸಂರಕ್ಷಣೆ, ಹೆಲ್ಮೆಟ್, ಧೂಮಪಾನ, ಮದ್ಯಪಾನ, ಮಹಿಳಾ ಸುರಕ್ಷತೆ ಸೇರಿದಂತೆ ಮೊದಲಾದ ವಿಷಯಗಳ ಕುರಿತು ಗೋಡೆ ಚಿತ್ರಗಳನ್ನು ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸಮುದ್ರ ಕಲುಷಿತವಾಗುವುದರಿಂದ ಜಲಚರ ಗಳು ಹೇಗೆ ಸಂಕಟ ಅನುಭವಿಸುತ್ತವೆ ಎಂಬುದನ್ನು ಮೀನಿನ ಹೊಟ್ಟೆಯಲ್ಲಿ ಕಸ ಕಡ್ಡಿ, ಪ್ಯಾಸ್ಟಿಕ್, ಗಾಜುಗಳು ತುಂಬಿರುವಂತಹ ಚಿತ್ರ ಬಿಡಿಸುವ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಿದ್ದಾರೆ ಶಿವರಂಜನ್.

ಮುಂದೆ ತಾವೊಬ್ಬ ಉತ್ತಮ ಸ್ಟ್ರೀಟ್ ಆರ್ಟಿಸ್ಟ್ ಆಗುವ ಹೆಬ್ಬಯಕೆಯನ್ನು ಹೊಂದಿದ್ದಾರೆ. ಅವರ ಕನಸು ನನಸಾಗಿಸಲು ಅವರಿಗೆ ವನ್ಯಜೀವಿ ಛಾಯಾಗ್ರಾಹಕ ಅನಿರುದ್ದ ಬೆಂಬಲವಾಗಿ ನಿಂತಿದ್ದಾರೆ. ಶಿವರಂಜನ್ ಅವರ ಮೊ: 9739057609

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.