ADVERTISEMENT

‘ಶಾಂತಿ’ಯ ಸಮಾನತೆ ಕನಸು

ಮಂಜುಶ್ರೀ ಎಂ.ಕಡಕೋಳ
Published 31 ಡಿಸೆಂಬರ್ 2018, 19:30 IST
Last Updated 31 ಡಿಸೆಂಬರ್ 2018, 19:30 IST
ಶಾಂತಿ ಮುನಿಸ್ವಾಮಿ, ರೇಡಿಯೊ ಜಾಕಿ, ಬೆಂಗಳೂರು
ಶಾಂತಿ ಮುನಿಸ್ವಾಮಿ, ರೇಡಿಯೊ ಜಾಕಿ, ಬೆಂಗಳೂರು   

ಮನೆಬಿಟ್ಟಾಗ ಸರಿಯಾಗಿ 21 ವರ್ಷ. ‘ನಾನು ಅವನಲ್ಲ ಅವಳು!’ ಅಂದಾಗ ಮನೆಯವರಿಂದ ತೀವ್ರ ವಿರೋಧ. ಮದುವೆಗೆ ಬಲವಂತ, ಗೃಹಬಂಧನ, ಆತ್ಮಹತ್ಯೆಗೆ ಪ್ರಯತ್ನ ಆದರೆ, ತಡೆಹಿಡಿದ ಸ್ವಾಭಿಮಾನ.

–ಇದು ಲಿಂಗತ್ವ ಅಲ್ಪಸಂಖ್ಯಾತೆ ಶಾಂತಿ ಮುನಿಸ್ವಾಮಿ ಅವರ ಒನ್‌ಲೈನ್ ಸ್ಟೋರಿ. ತನ್ನನ್ನು ಅರಿಯದ ಸಮಾಜ, ಮನೆಯಲ್ಲೂ ಅಸಹಕಾರ ಇವೆಲ್ಲವನ್ನೂ ಮೀರಿ ಘನತೆಯ ಬದುಕು ಕಟ್ಟಿಕೊಳ್ಳಬೇಕೆಂಬ ಛಲ ಶಾಂತಿ ಅವರಲ್ಲಿ ಮನೆಮಾಡಿತ್ತು. ಅದರ ಫಲವಾಗಿಯೇ ಅವರಿಂದು ರೇಡಿಯೊ ಜಾಕಿ, ಚಿತ್ರಕಲಾವಿದೆ ಮತ್ತು ಕವಯತ್ರಿ!

ಶಾಂತಿ ಮನೆಬಿಟ್ಟು ಬಂದಾಗ ಅವರ ಎದುರಿಗಿದ್ದದ್ದು ಸೆಕ್ಸ್ ವರ್ಕ್, ಭಿಕ್ಷಾಟನೆ ಎಂಬ ಎರಡೇ ಆಯ್ಕೆಗಳು. ಸ್ನೇಹಿತರೊಬ್ಬರ ಮೂಲಕ ‘ಸಂಗಮ’ದ ಅಕ್ಕೈ ಪದ್ಮಸಾಲಿ ಸಂಪರ್ಕಕ್ಕೆ ಬಂದ ಶಾಂತಿ ತಮ್ಮ ಅನುಭವ ಕಥನವೊಂದನ್ನು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಶಾಂತಿ ಅವರ ಅಂತರಂಗದ ದನಿಗೆ ಮಿಡಿದ ಸಮುದಾಯ ರೇಡಿಯೊದ ನಿರ್ದೇಶಕಿ ಪಿಂಕಿ ಚಂದ್ರನ್ ಅವರಿಂದ ರೇಡಿಯೊ ಜಾಕಿ ಆಗುವ ಅವಕಾಶ. ಅಲ್ಲಿಂದ ಹಿಂತಿರುಗಿ ನೋಡದ ಶಾಂತಿ ಈಗ ತಮ್ಮ ಮಧುರ ಕಂಠದ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರೇಡಿಯೊ ಆಕ್ಟೀವ್ ಸಿಆರ್ 90.4 ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಕಣ್ಣೀರು ಒರೆಸುವ ಕೆಲಸದ ಜತೆಗೆ, ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.

ADVERTISEMENT

ಅರ್ವಾಣಿ ಆರ್ಟ್ ಪ್ರಾಜೆಕ್ಟ್ ಮೂಲಕ ಚಿತ್ರಕಲಾವಿದೆಯೂ ಆಗಿರುವ ಶಾಂತಿ, ತಮ್ಮ ನೋವು–ನಲಿವಿಗೆ ಸಾರ್ವಜನಿಕ ಗೋಡೆಗಳನ್ನು ಕ್ಯಾನ್ವಾಸ್ ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ರಂಗೋಲಿ ಹಾಕಿದ್ದಕ್ಕೆ ಅಮ್ಮನಿಂದ ಬೈಸಿಕೊಂಡಿದ್ದ ಶಾಂತಿ ಅವರ ಕಲಾಕೃತಿಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಗೋಡೆಗಳ ಮೇಲೆ ನಗುತ್ತಿವೆ. ಅದನ್ನು ತೋರಿಸಿದಾಗ ಅಮ್ಮನಿಗೆ ಈ ಮಗಳ ಮೇಲೆ ಎಲ್ಲಿಲ್ಲದ ಹೆಮ್ಮೆ ಮೂಡಿತಂತೆ.

‘ನಾನು ರೇಡಿಯೊ ಜಾಕಿ ಆಗುವ ಮುನ್ನ ಸೆಕ್ಸ್ ವರ್ಕರ್ ಆಗಿದ್ದೆ. ಅದನ್ನು ಹೇಳಿಕೊಳ್ಳಲು ಮುಜುಗರವಿಲ್ಲ. ಜನ ನಮ್ಮ ಒಂದು ಮುಖ ಮಾತ್ರ ನೋಡಿರ್ತಾರೆ. ಮತ್ತೊಂದು ಮುಖ ನೋಡೋದಿಲ್ಲ. ಸೆಕ್ಸ್ ವರ್ಕರ್ಅನ್ನೋದು ಸುಲಭದ ಕೆಲಸವಲ್ಲ. ನಾವು ಗುಂಪಿನಲ್ಲಿದ್ದರೂ ನಮ್ಮ ಮೇಲೂ ದಾಳಿ, ಅತ್ಯಾಚಾರ, ಕೊಲೆಗಳು ನಡೆಯುತ್ತವೆ. ನಮ್ಮನ್ನು ಮನುಷ್ಯರಂತೆ ಕಂಡಾಗ ಮಾತ್ರ ಇತರರಿಗೂ ನಮ್ಮ ನೋವುಅರ್ಥವಾಗಬಹುದು. ನನ್ನ ಬಗ್ಗೆ ‘ಗಾರ್ಡಿಯನ್‌’ ಪತ್ರಿಕೆಯಲ್ಲಿ ‘ಸೆಕ್ಸ್ ವರ್ಕರ್ ಟು ರೇಡಿಯೊ ಜಾಕಿ’ ಹೆಸರಿನಲ್ಲಿ ಲೇಖನ ಪ್ರಕಟವಾಗಿದೆ. ಅದನ್ನು ಓದಿದ ಹಲವರು ಕಣ್ಣೀರು ಹಾಕಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

‘ಕಳೆದ ವರ್ಷ ನಮ್ಮ ಸಮುದಾಯಕ್ಕೆ ಕಾನೂನಾತ್ಮಕ ಜಯ ಸಿಕ್ಕಿತು ನಿಜ. ಆದರೆ, ನಮ್ಮ ಸಾಮಾಜಿಕ ಅಸ್ಪೃಶ್ಯತೆಯಿನ್ನೂ ವಿಮೋಚನೆಯಾಗಿಲ್ಲ. ಹೊಸ ವರ್ಷದಲ್ಲಿ ಈ ಹೋರಾಟ ಮತ್ತಷ್ಟು ಮುಂದುವರಿಯಲಿದೆ’ ಎನ್ನುತ್ತಾ ಹೊಸ ವರ್ಷದ ಕನಸು ಬಿಚ್ಚಿಡುತ್ತಾರೆ ಅವರು.

‘ನನಗೆ ತಿರುಗಾಟವೆಂದರೆ ತುಂಬಾ ಇಷ್ಟ. ಭಿನ್ನ ಆಚಾರ–ವಿಚಾರ, ಸಂಸ್ಕೃತಿಯ ಜನರನ್ನು ಅರಿಯುವ ಬಯಕೆ. ಅದಕ್ಕಾಗಿಯೇ ಹೊಸ ವರ್ಷವನ್ನು ಮೀಸಲಿಟ್ಟಿದ್ದೇನೆ. ಅದರ ಜತೆಗೆ ಮುಖ್ಯವಾದ ಕೆಲಸವೆಂದರೆ, ನನ್ನ ಕಲಾಯಾನ ಮತ್ತು ಅಂತರಂಗದ ದನಿಯನ್ನು ಇಂಗ್ಲಿಷ್ ಕವನ ಸಂಕಲದ ಮೂಲಕ ತರುವುದು. ಅದಕ್ಕಾಗಿ ಸಿದ್ಧತೆ ನಡೆಸಿದ್ದೇನೆ. ಕವನಗಳಲ್ಲಿ ನನ್ನ ಸಮುದಾಯದ ನೋವಿದೆ, ನಲಿವಿದೆ’ ಎಂದು ವಿವರಿಸುತ್ತಾರೆ ಅವರು.

ಹೊಸ ವರ್ಷದಲ್ಲಾದರೂ ನಮ್ಮನ್ನೂ ಇತರರಂತೆ ಸಮಾನವಾಗಿ ಕಾಣಬಹುದು ಎಂಬುದು ಶಾಂತಿ ಅವರ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.