ADVERTISEMENT

ಧಾರ್ಮಿಕ ಮೂಲಭೂತ ಮತ್ತು ರಾಷ್ಟ್ರೀಯವಾದ

ಪ್ರೊ.ಬರಗೂರು ರಾಮಚಂದ್ರಪ್ಪ
Published 6 ಜುಲೈ 2019, 19:30 IST
Last Updated 6 ಜುಲೈ 2019, 19:30 IST
.
.   

ಇತ್ತೀಚೆಗೆ ನಮ್ಮ ದೇಶದ ಕೆಲವು ನೇತಾರರು ರಾಷ್ಟ್ರವಾದ, ರಾಷ್ಟ್ರೀಯತೆ, ರಾಷ್ಟ್ರೀಯವಾದ ಎಂಬ ಪದಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ. ಈ ಮೂರೂ ಪದಗಳಲ್ಲಿ ಒಂದೇ ಅರ್ಥವಿದೆ. ನಮ್ಮ ಭೂ ಭಾಗವನ್ನು ಒಂದು ಅಖಂಡವಾಗಿರುವ ದೇಶವೆಂದು ತಿಳಿಯುವ ಭಾವನೆಯಲ್ಲಿ ರಾಷ್ಟ್ರೀಯವಾದದ ತಿರುಳು ಇದೆ. ಬಹುಶಃ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಭೌಗೋಳಿಕ ಮತ್ತು ಸಾಂಸ್ಕೃತಿಕ ಆಸ್ಮಿತೆಯ ಫಲವಾಗಿ ರಾಷ್ಟ್ರೀಯ ಭಾವದ ಬೀಜಗಳನ್ನು ಕಾಣಬಹುದು. ಈ ಬೀಜರೂಪಿ ಭಾವನೆಯ ಸ್ವಾತಂತ್ರ್ಯ ಚಳವಳಿಯ ಮೂರ್ತರೂಪ‍ದಲ್ಲಿ ವಿಕಾಸಗೊಳ್ಳುತ್ತಾ ಅದೇ ಒಂದು ‘ವಾದ’ವಾಗುವ ತಾತ್ವಿಕತೆಯನ್ನು ಪಡೆದುಕೊಂಡಿದೆ.

ನೂರಾರು ರಾಜರು, ಸಾಮಂತರು, ಪ್ರತ್ಯೇಕ ಪ್ರಾಂತ್ಯಗಳ ಅಧಿಪತಿಗಳಾಗಿ ಅಳುತ್ತಿದ್ದ ಈ ಭೂಭಾಗವು ಸ್ವಾತಂತ್ರ್ಯ ಚಳವಳಿಯು ಬೆಳೆಯುತ್ತ ಬಂದಂತೆ ಒಂದೇ ಭೂವಲಯವಾಗುವ ಪ್ರಕ್ರಿಯೆ ಪ್ರಾರಂಭವಾಗಿ ಒಂದೇ ರಾಷ್ಟ್ರದ ಕಲ್ಪನೆ ಮೂಡಿ ಬಂದಿದೆ. ಈ ಸಂದರ್ಭದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಪರ್ಯಾಯವಾಗುವ ಪ್ರಜಾಸತ್ತಾತ್ಮಕ ರಾಜಕಾರಣದ ಜೊತೆಗೆ ನಮ್ಮದೇ ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸಿಕೊಳ್ಳುವ ಕ್ರಿಯಾಶೀಲತೆಯೂ ಬೆಳೆದಿದೆ.

ರಾಷ್ಟ್ರೀಯ ಭಾವನೆಯು ವಾದ ಸ್ವರೂಪ ಪಡೆಯುವಾಗ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಯನ್ನು ಒಳಗೊಂಡೇ ಇತ್ತು. ಆದರೆ ಇಂದು ‘ರಾಷ್ಟ್ರೀಯವಾದ’ವನ್ನು ಕಂಠಪಾಠ ಮಾದರಿಯಲ್ಲಿ ಪಠಿಸುತ್ತಿರುವ ನೇತಾರರಲ್ಲಿ ಈ ವೈವಿಧ್ಯಪರ ನಿಲುವು ಕಾಣಿಸುತ್ತಿಲ್ಲ. ಇಂಥವರು ಹಿಂದೂವಾದವನ್ನೇ ರಾಷ್ಟ್ರೀಯವಾದವೆಂಬಂತೆ ಬಿಂಬಿಸುತ್ತಿದ್ದಾರೆ, ನಂಬಿಸುತ್ತಿದ್ದಾರೆ. ಇಂಥ ಪ್ರತಿಪಾದನೆಯಿಂದ ಹಿಂದೂ ಮತ್ತು ರಾಷ್ಟ್ರೀಯವಾದಕ್ಕೆ ಕೋಮುವಾದದ ಆಯಾಮ ಒದಗಿಸುವ ಅಪಾಯವನ್ನು ತಂದೊಡ್ಡುತ್ತಿದ್ದಾರೆ. ಇದು ಏಕಕಾಲಕ್ಕೆ ಹಿಂದೂಧರ್ಮ ಮತ್ತು ರಾಷ್ಟ್ರೀಯವಾದವನ್ನು ಸಂಕುಚಿತಗೊಳಿಸುತ್ತದೆ.

ADVERTISEMENT

ಇಂದಿನ ನಮ್ಮ ಕೆಲವು ನೇತಾರರು ರಾಷ್ಟ್ರೀಯವಾದಕ್ಕೆ ಕೋಮುವಾದದ ಕನ್ನಡಕ ಹಾಕುತ್ತಿದ್ದಾರೆ. ಹಿಂಗಾಗಿ ಧಾರ್ಮಿಕವಾದವೇ ರಾಷ್ಟ್ರೀಯವಾದ ಎಂಬಂತೆ ಬಿಂಬಿಸಲಾಗುತ್ತಿದೆ. ಹಿಂದುತ್ವವಾದವೇ ರಾಷ್ಟ್ರೀಯವಾದವೆಂಬ ಅಪವ್ಯಾಖ್ಯಾನ ಅಬ್ಬರಿಸುತ್ತಿದೆ. ವಾಸ್ತವವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ಖರೇ ಮುಂತಾದವರು ತಂತಮ್ಮ ಧರ್ಮದ ಮೂಲಕ ಮಾತ್ರವೇ ರಾಷ್ಟ್ರೀಯ ವಾದವನ್ನು ಕಂಡುಕೊಂಡರೆ ಅದು ರಾಷ್ಟ್ರೀಯತೆಯ ವಿರೋಧವಷ್ಟೇ ಅಲ್ಲ, ಸಂವಿಧಾನದ ವಿರೋಧವೂ ಹೌದು. ನಮ್ಮ ದೇಶವು ಅನೇಕ ಧರ್ಮಗಳನ್ನು ಒಳಗೊಂಡಿದೆಯೇ ಹೊರತು ‘ಧರ್ಮವೇ ದೇಶ’ವಲ್ಲ, ಧರ್ಮವೊಂದೇ ದೇಶದ ಮಾನದಂಡವಲ್ಲ. ಧಾರ್ಮಿಕ ಮೂಲಭೂತವಾದವು ಖಂಡಿತ ರಾಷ್ಟ್ರೀಯವಾದವಲ್ಲ.

ರಾಷ್ಟ್ರೀಯತೆ ಅಥವಾ ರಾಷ್ಟ್ರೀಯ ವಾದವೆನ್ನುವ ಪರಿಕಲ್ಪನೆಯು ‘ಏಕ ಗುರಿಯ ವಿವಿಧ ವಿಚಾರ ಧಾರೆಯ ಒಕ್ಕೂಟ’ ಎಂಬುದನ್ನು ಗಮನಿಸಬೇಕು. ಈಗ ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ಬಾಲಗಂಗಾಧರ ತಿಲಕ್, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಾಕ್ಷಿರೂಪದಲ್ಲಿ ನೋಡೋಣ. ಗಾಂಧೀಜಿಯವರು ಪಕ್ಕಾ ಆಸ್ತಿಕರು. ಶ್ರೀರಾಮನನ್ನು ಆದರ್ಶ ದೈವ ಎಂದು ಭಾವಿಸಿದ್ದರು. ನಿತ್ಯವೂ ‘ರಘುಪತಿ ರಾಘವ ರಾಜಾರಾಮ, ಪತಿತಪಾವನ ಸೀತಾರಾಮ’ ಎಂದು ಪ್ರಾರ್ಥನೆ ಮಾಡುತ್ತಿದ್ದರು.ಆದರೆ ಅವರು ಬ್ರಿಟಿಷ್ ವಸಾಹತುಶಾಹಿ ಸರ್ವಾಧಿಕಾರದ ವಿರುದ್ಧ ನಡೆಸಿದ ಹೋರಾಟದಲ್ಲಿ ಶ್ರೀರಾಮನನ್ನೂ ಒಳಗೊಂಡಂತೆ ಯಾವ ದೇವರನ್ನೂ ಒಳಗೊಳ್ಳಲಿಲ್ಲ. ಅವರ ಹೋರಾಟದಲ್ಲಿ ಮೂರು ಮುಖ್ಯ ಸಂಕೇತಗಳಿದ್ದವು, ಉಪ್ಪು, ಖಾದಿ ಮತ್ತು ಚರಕ. ಈ ಮೂರೂ ಸ್ವದೇಶಿ ಸಂಕೇತಗಳು.

ಉಪ್ಪು, ಖಾದಿ, ಚರಕಗಳು ಯಾವುದೇ ಒಂದು ಜಾತಿಗೆ, ಒಂದು ಧರ್ಮಕ್ಕೆ ಸೇರಿಲ್ಲ. ಅವು ಜಾತ್ಯತೀತ. ಹೀಗೆ ಗಾಂಧೀಜಿ ತಮ್ಮ ದೈವ ಮತ್ತು ಹಿಂದೂ ಧರ್ಮನಿಷ್ಠೆಯನ್ನು ಮೀರಿ ರಾಷ್ಟ್ರೀಯ ವಿಚಾರಧಾರೆ ಮತ್ತು ಹೋರಾಟಕ್ಕೆ ಜಾತ್ಯತೀತ ನೆಲೆ–ನಿಲುವುಗಳನ್ನು ಒದಗಿಸಿದರು. ಡಾ. ಅಂಬೇಡ್ಕರ್ ಅವರು ತಮ್ಮ ಸಾಮಾಜಿಕ–ಆರ್ಥಿಕ ಸಮಾನತೆಯ ಹೋರಾಟದಲ್ಲಿ ಯಾವತ್ತೂ ತಾವು ನಂಬಿದ ಬುದ್ಧ ಗುರುವನ್ನು ಅಸ್ತ್ರವಾಗಿ ಬಳಸಲಿಲ್ಲ. ಹಿಂದೂ ಧರ್ಮದ ಹೊರಗಿದ್ದೂ ಎಲ್ಲ ಧರ್ಮದ ಸಮಾನತೆಯನ್ನು ಪ್ರತಿಪಾದಿಸಿದರು. ಅದೇ ಆಧಾರದ ಸಂವಿಧಾನವನ್ನು ಕೊಟ್ಟರು. ಅಂಬೇಡ್ಕರ್‌ ಅವರದು ಸಾಮಾಜಿಕ ರಾಷ್ರೀಯವಾದವೆನ್ನಬಹುದು. ಬಾಲಗಂಗಾಧರ ತಿಲಕರ ರಾಷ್ಟ್ರೀಯ ಚಳವಳಿಯಲ್ಲಿ ಗಣೇಶೋತ್ಸವವನ್ನು ಬಳಸಿಕೊಂಡರು. ಮೂಲತಃ ಕಾಂಗ್ರೆಸ್ಸಿನಲ್ಲಿದ್ದರೂ ಆನಂತರ ಪ್ರತ್ಯೇಕ ಸೈನ್ಯ ಕಟ್ಟದೆ ದೇಶದ ವಿಮೋಚನೆ ಸಾಧ್ಯವಿಲ್ಲವೆಂದು ನಂಬಿದ ಸುಭಾಷ್ ಚಂದ್ರ ಬೋಸ್ ಅವರು ‘ಭಾರತ ರಾಷ್ಟ್ರೀಯ ಸೇನೆ’ಯನ್ನು ಸ್ಥಾಪಿಸಿದರು. ಉಗ್ರ ರಾಷ್ಟ್ರೀಯವಾದವೆನಿಸಿಕೊಂಡ ಭಗತ್‌ಸಿಂಗ್ ಎಡಪಂಥೀಯ ವಿಚಾರಧಾರೆಯ ಒಲವಿದ್ದವರು, ತಮ್ಮನ್ನು ನಾಸ್ತಿಕರೆಂದು ಕರೆದುಕೊಂಡವರು. ಹೀಗೆ ಆಸ್ತಿಕರು, ನಾಸ್ತಿಕರು, ಸತ್ಯಾಗ್ರಹ ವಾದಿಗಳು, ಸೈನ್ಯವಾದಿಗಳು ಸಮಾಜವಾದಿಗಳು ಎಲ್ಲರೂ ರಾಷ್ಟ್ರೀಯವಾದದ ಪ್ರತಿಪಾದಕರೇ ಆಗಿದ್ದರು. ಎಲ್ಲರ ಗುರಿಯು ಸ್ವಾತಂತ್ರ್ಯ ಮತ್ತು ಸಮಾನತೆಯೇ ಆಗಿತ್ತು. ಆದರೆ ಗುರಿ, ತಲುಪುವ ದಾರಿ, ಬೇರೆಯಾಗಿದ್ದವು. ಹಾಗೆಂದು ಅವರನ್ನು ರಾಷ್ಟ್ರೀಯವಾದಿಗಳಲ್ಲ ಎನ್ನಲಾಗದು.

ಒಂದಂತೂ ನಿಜ, ಹಿಂದೆ ರಾಷ್ಟ್ರಿಯ ಹೋರಾಟಗಳನ್ನು ಕಟ್ಟಿ ಬೆಳೆಸಿದವರಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರೀಯವಾದವನ್ನು ಧಾರ್ಮಿಕ ಮೂಲಭೂತವಾದವನ್ನಾಗಿಸಲಿಲ್ಲ. ಸ್ವಾತಂತ್ರ್ಯ ಚಳವಳಿಯ ನೇತಾರರೆಲ್ಲರೂ ಧಾರ್ಮಿಕ ಮೂಲಭೂತವಾದದ ಕಟ್ಟಾ ವಿರೋಧಿಗಳಾಗಿದ್ದರು. ಆದರೆ ಇಂದಿನ ಕೆಲವು ನೇತಾರರು ಹಿಂದೂ ಮೂಲಭೂತವಾದವನ್ನೇ ರಾಷ್ಟ್ರೀಯವಾದವೆಂದು ಬಿಂಬಿಸುತ್ತಿದ್ದಾರೆ. ಹಿಂದೂ, ಇಸ್ಲಾಂ– ಯಾವುದೇ ಧಾರ್ಮಿಕವಾದದ ವ್ಯಾಪ್ತಿಗೆ ರಾಷ್ಟ್ರೀಯವಾದವೂ ಬರುವುದಿಲ್ಲ. ಆದ್ದರಿಂದ ರಾಷ್ಟ್ರೀಯವಾದದ ಹೆಸರಿನಲ್ಲಿ ಧಾರ್ಮಿಕ ಮೂಲಭೂತವಾದದ ಮಂಕುಬೂದಿ ಎರಚುವುದು ನಿಲ್ಲಬೇಕು, ನಿಲ್ಲಿಸಬೇಕು. ‘ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೊ ಅಲ್ಲಿಗೆ ಕರೆದೊಯ್ಯಬೇಕು. ಆದರೆ ವೇದ, ಬೈಬಲ್, ಕುರಾನ್‌ಗಳ ಏಕತೆಯಿಂದ ಇದನ್ನು ಸಾಧಿಸಬೇಕು’ ಎಂಬ ಸ್ವಾಮಿ ವಿವೇಕಾನಂದರ ಮಾತಿನಿಂದ ರಾಷ್ಟ್ರೀಯವಾದಕ್ಕೆ ಅರ್ಥ ತಂದುಕೊಳ್ಳಬೇಕು. ವಿವೇಕಾನಂದರು ನಮ್ಮಲ್ಲಿರುವ ಎಲ್ಲ ಧಾರ್ಮಿಕ ಧಾರೆಗಳನ್ನು ಒಳಗೊಳ್ಳುತ್ತಲೇ ಅವುಗಳನ್ನು ಮೀರಿ ಮಾನವ ವರ್ಗವನ್ನು ಸರ್ವಸಮಾನ ನೆಲೆಗೆ ಕೊಂಡೊಯ್ಯುವ ಆದರ್ಶದ ಮಾದರಿಯನ್ನು ಪ್ರತಿಪಾದಿಸಿದ್ದಾರೆ. ಮುಂದುವರೆದು, ಅದೇ ಉಸಿರಿನಲ್ಲಿ ‘ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮೆದುಳು, ಇಸ್ಲಾಮಿನ ದೇಹ– ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’ (ವಿವೇಕಾನಂದ ಕೃತಿಶ್ರೇಣಿ ಸಂ.7, ಪುಟ–238) ಎಂದು ಹೇಳುತ್ತಾರೆ. ಹಿಂದೂ ಧರ್ಮದ ನಿಜನೇತಾರರಾದ ವಿವೇಕಾನಂದ ಈ ನುಡಿಧಾರೆಯಲ್ಲಿ ಮೂಲಭೂತವಾದ ವಿರೋಧಿಯಾದ ಮಾನವೀಯ ಅಧ್ಯಾತ್ಮವಿದೆ. ಇದುರಾಷ್ಟ್ರೀಯವಾದಕ್ಕೆ ಇರಬೇಕಾದ ಒಂದು ಮುಖ್ಯ ಆಯಾಮವಾಗಿದೆ.

ಇಲ್ಲಿಯೇ ಡಾ. ಅಂಬೇಡ್ಕರ್‌ ಅವರ ಒಂದು ಮಾತನ್ನು ಚರ್ಚೆಗೆ ತೆಗೆದುಕೊಳ್ಳಬಹುದು, ಡಾ. ಅಂಬೇಡ್ಕರ್ ಅವರು 1931ರ ಆಗಸ್ಟ್ 14 ರಂದು ಗಾಂಧೀಜಿಯವರಿಗೆ ಹೀಗೆ ಹೇಳಿದರು: ‘ನನಗೊಂದು ತಾಯಿನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು ಅತ್ಯಂತ ಕೀಳಾಗಿ ಕಾಣುವ ಈ ನಾಡನ್ನು, ಈ ಧರ್ಮವನ್ನು, ನನ್ನ ನಾಡೆಂದು, ನನ್ನ ಧರ್ಮವೆಂದು ಹೇಗೆ ಕರೆಯಲಿ? ಹೇಗೆ ಭಾವಿಸಲಿ? ಈ ವಿಷಯದಲ್ಲಿ ನನ್ನನ್ನು ದೇಶದ್ರೋಹಿ ಎಂದು ಕರೆಯುವುದಾದರೆ ಅದಕ್ಕೆ ನನ್ನ ವಿಷಾದವಿಲ್ಲ’– ಅಂಬೇಡ್ಕರ್ ಅವರ ಈ ನೋವಿನ ನುಡಿಗಳಲ್ಲಿ ದೇಶಪ್ರೇಮ ಮತ್ತು ದೇಶದ್ರೋಹದ ಪರಿಕಲ್ಪನೆಗೆ ಒಂದು ಹೊಸ ಆಯಾಮ ಸೇರ್ಪಡೆಯಾಗಿದೆ. ಧರ್ಮದೃಷ್ಟಿಯ ಹೊಸ ಅಂಶವೊಂದು ಕಾಣುತ್ತಿದೆ. ‘ನೀವು ಈ ಧರ್ಮದವರಾಗಿ ಎನ್ನುವಾಗ ಆ ಧರ್ಮವು ಜನರನ್ನು ಸಮಾನವಾಗಿ ಒಳಗೊಳ್ಳುವಂತಿರಬೇಕು. ನೀವು ದೇಶಪ್ರೇಮಿಗಳಾಗಿ ಎಂದು ಹೇಳಿದರೆ ಸಾಲದು, ಜನರೆಲ್ಲರನ್ನೂ ದೇಶವೊಂದು ಸಮಾನವಾಗಿ ಕಾಣುವ ಮಾನವೀಯ ಸಮಾಜ ಬೇಕು’ ಎಂಬ ಒತ್ತಾಸೆ ಅಂಬೇಡ್ಕರ್ ಅವರ ಮಾತುಗಳ ಸಾರವಾಗಿದೆ.

ಜಾತಿ ಧರ್ಮಗಳ ಕಾರಣಕ್ಕೆ ತುಳಿತಕ್ಕೊಳಗಾಗುತ್ತಿರುವವರನ್ನು ಸಮಾನ ಜೀವಿಗಳೆಂದು ಅಪ್ಪಿಕೊಳ್ಳದ ಸಮಾಜದಲ್ಲಿ ಧರ್ಮ ಮತ್ತು ದೇಶಪ‍್ರೇಮದ ಪಾಠ ಮಾಡುವುದರ ವಿಪರ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಭೂಗೋಳ ಭಾರತದಲ್ಲಿ ಬದುಕುತ್ತಿರುವ ಸರ್ವ ಶೋಷಿತರಿಗೆ ಸಾಮಾಜಿಕ, ಆರ್ಥಿಕ ಸಮಾನತೆಯ ಆತ್ಮವಿಶ್ವಾಸ ಮೂಡಿಸಿ ಒಳಗೊಂಡರೆ ಅವರ ಪರಕೀಯ ಪ್ರಜ್ಞೆ ಮಾಯವಾಗುತ್ತದೆ, ಈ ದೇಶ ನಮ್ಮದು, ಈ ಧರ್ಮ ನಮ್ಮದು ಎಂಬ ಭಾವನೆ ತಾನಾಗಿ ಮೂಡುತ್ತದೆ. ‘ನಮ್ಮ ದೇಶ ಬದುಕಿರುವುದೇ ದೀನರ ಜೋಪ‍ಡಿಗಳಲ್ಲಿ. ದೀನ ದಲಿತರಿಗೆ ದಯೆ ತೋರುವುದು ನಮ್ಮ ಗುರಿ. ದೀನ ದಲಿತರ ಮನೆ ಬಾಗಿಲಿಗೆ ನೆಮ್ಮದಿ, ನೀತಿ, ಧರ್ಮ ಬರುವಂತೆ ಮಾಡುವನು ಇಲ್ಲಿ ಮಡಿಯುವೆನು’ (ಕೃತಿ ಶ್ರೇಣಿ–6) ಎಂದು ವಿವೇಕಾನಂದರು ಘೋಷಿಸಿದ್ದಕ್ಕೂ ಅಂಬೇಡ್ಕರ್ ಅವರ ನೋವಿನ ನುಡಿಗಳಿಗೂ ಅಂತರ್ ಸಂಬಂಧವಿದೆ. ಇವತ್ತಿಗೂ ಪ್ರಸ್ತುತವಾಗುವ ಸನ್ನಿವೇಶವಿದೆ.

ಉದಾಹರಣೆಗೆ ಹೇಳುವುದಾದರೆ, ಎರಡು ವರ್ಷಗಳ ಹಿಂದಿನ ಒಂದು ಮಾಹಿತಿಯಂತೆ ನಮ್ಮ ದೇಶದಲ್ಲಿ ಒಂದು ಕೋಟಿ 78 ಲಕ್ಷದ 286 ಜನರು ಕೈಯಲ್ಲಿ ಮಲ ಎತ್ತುತ್ತಿದ್ದಾರೆ. 8 ಕೋಟಿ 82 ಲಕ್ಷದ 271 ಜನರು ಊರ ಹೊರಗೆ ತಳ್ಳುಗಾಡಿಗಳಲ್ಲಿ ಮಲ ಹಾಯಿಸುತ್ತಾರೆ. ಈ ವರ್ಷ ಸಫಾಯಿ ಕರ್ಮಚಾರಿರಾಷ್ಟ್ರೀಯ ಆಯೋಗ ತಿಳಿಸಿದಂತೆ ಪ್ರತಿ 5 ದಿನಕ್ಕೆ ಒಬ್ಬರಂತೆ ಸಫಾಯಿ ಕರ್ಮಚಾರಿಗಳು ಸಾಯುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 1,340 ಜನ ಸಫಾಯಿ ಕರ್ಮಚಾರಿಗಳು ದುರ್ಮರಣ ಹೊಂದಿದ್ದಾರೆ. 2014 ರಿಂದ 2018ರೊಳಗೆ 1,929 ಪೌರ ಕಾರ್ಮಿಕರು ಸತ್ತಿದ್ದಾರೆ. ಈ ಸಾವುಗಳ ಜೊತೆಗೆ ಕೈನಲ್ಲಿ ಮಲ ಎತ್ತುವವರೇ ಕೋಟಿಗೂ ಹೆಚ್ಚು ಜನರಿದ್ದಾರೆಂಬುದು ನಮ್ಮ ಸಾಮಾಜಿಕ ಅಸಮಾನತೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಸಮಾಜ ಸಂಕಲ್ಪದಲ್ಲಿ ದೇಶಪ್ರೇಮ ಮತ್ತುರಾಷ್ಟ್ರೀಯವಾದದ ಬೇರುಗಳಿವೆ. ಸಮಾನತಾವಾದಕ್ಕೂರಾಷ್ಟ್ರೀಯವಾದಕ್ಕೂ ಅಂತರ್‌ಸಂಬಂಧವಿದೆ. ಭಾರತದ ಭೂಗೋಳ ಭದ್ರತೆ ಎಷ್ಟು ಮುಖ್ಯವೋ ಭಾರತೀಯರ ಬದುಕಿನ ಭದ್ರತೆಯೂ ಅಷ್ಟೇ ಮುಖ್ಯ, ಬಹುಮುಖ್ಯ.

ಮತ್ತೊಂದು ಮುಖ್ಯಮಾತು:ರಾಷ್ಟ್ರೀಯ ವಾದವೆಂದರೆ ಧಾರ್ಮಿಕ ಮೂಲಭೂತವಾದವಲ್ಲ. ಏಕನಾಯಕತ್ವ, ಏಕಧರ್ಮ, ಏಕ ಸಂಸ್ಕೃತಿ ಆಧಾರಿತ ಸಿದ್ಧಾಂತವಲ್ಲ. ಬಹುತ್ವ ಭಾರತದ ಬದ್ಧತೆಯಲ್ಲೇರಾಷ್ಟ್ರೀಯವಾದದ ಸಾರವಿದೆ. ಇದು ನಮ್ಮ ಸಂವಿಧಾನದ ಸಾಕ್ಷಿಪ್ರಜ್ಞೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.