ಗದಗಿನ ಮೂವರು ಉತ್ಸಾಹಿ ಯುವಕರು ಮುತ್ತು ಕೃಷಿ ಕೈಗೊಂಡು ಯಶಸ್ಸು ಕಂಡಿದ್ದಾರೆ. ಈಗಾಗಲೇ ಉತ್ತಮ ಲಾಭಗಳಿಸಿರುವ ಇವರೊಂದಿಗೆ ಇಪ್ಪತ್ತೈದು ಮಂದಿ ಹೊಸದಾಗಿ ಸೇರಿಕೊಂಡಿದ್ದಾರೆ. ಇವರಿಂದಾಗಿ ಈ ಕೃಷಿಯತ್ತ ಆಸಕ್ತರು ಮುಖ ಮಾಡುತ್ತಿದ್ದಾರೆ.
ಗದಗ ನಗರದಿಂದ ಹಾತಲಗೇರಿ ಗ್ರಾಮಕ್ಕೆ ಹತ್ತು ನಿಮಿಷದ ಹಾದಿ. ಬೆಳಗಿನ ಎಳೆಬಿಸಿಲು ಮೈಚುರುಗುಟ್ಟಿಸುವ ಮೊದಲೇ ಅಲ್ಲಿಗೆ ತಲುಪಿದ್ದೆ. ಜಾನುವಾರುಗಳ ನೀರಡಿಕೆ ತಣಿಸಲು ರಸ್ತೆಬದಿಯಲ್ಲಿರಿಸಿದ್ದ ನೀರಿನ ತೊಟ್ಟಿ ಬಳಿ ಕುಕ್ಕರಗಾಲಿನಲ್ಲಿ ಕೂತು ಮಹಿಳೆಯೊಬ್ಬರು ಬಟ್ಟೆ ಒಗೆಯುತ್ತಿದ್ದರು. ಬೈಕ್‌ನ ವೇಗ ತಗ್ಗಿಸಿ, ‘ಕರಿ ಅವರ ಫಾರ್ಮ್ ಎಲ್ಲಿದೆ’ ಅಂತ ಕೇಳಿದೆ. ‘ಹಿಂಗೆ ಸ್ವಲ್ಪ ಮುಂದಕ್ ಹೋದ್ರೆ ಸಾಲಿ ಸಿಕ್‌ತೈತಿ. ಅಲ್ಲಿಂದ ಚೂರ್ ಮುಂದಕ್ ಹೋಗಿ, ಎಡಕ್ಕೆ ತಿರುಕ್ಕಳಿ’ ಅಂದರು.
ಮಹಿಳೆ ಹೇಳಿದ ಗುರುತುಗಳ ಜಾಡು ಹಿಡಿದು ಸಾಗಿದೆ. ಜಾಗ ಸಿಕ್ಕಿತು. ಅಲ್ಲಿಂದ ಕಾಲುದಾರಿಯಲ್ಲಿ ಹೋಗಬೇಕಿದ್ದ ಕಾರಣ ಬೈಕ್ ಅಲ್ಲೇ ನಿಲ್ಲಿಸಿ ಎದೆಯೆತ್ತರಕ್ಕೆ ಬೆಳೆದಿದ್ದ ಜೋಳದಗಿಡಗಳನ್ನು ಪಕ್ಕಕ್ಕೆ ಸರಿಸುತ್ತ ಮುಂದೆ ಸಾಗಿದೆ. ನಿಮಿಷ ಕಳೆಯುವುದರೊಳಗೆ ಜೋಳದ ಹೊಲ ಮುಗಿಯಿತು. ಅಲ್ಲಿಂದ ಮುಂದಕ್ಕೆ ಇಪ್ಪತ್ತು ಹೆಜ್ಜೆ ಹಾಕುವಷ್ಟರಲ್ಲಿ ಕ್ವಾರಿ ಕಂಡಿತು.
ಒಂದು ಎಕರೆಯಷ್ಟಿರುವ ಕ್ವಾರಿ ಅದು. ನೀರಿನ ಒರತೆ ಹೆಚ್ಚಾದ ಕಾರಣಕ್ಕಾಗಿ ಎಂಟ್ಹತ್ತು ವರ್ಷಗಳ ಹಿಂದೆಯೇ ಕ್ವಾರಿ ಬಂದ್ ಆಗಿತ್ತು. 55 ಅಡಿಗಳಷ್ಟು ಆಳವಿದ್ದು, ಅಲ್ಲಿ ಸಹಜವಾಗಿಯೇ ಉತ್ತಮ ಖನಿಜಾಂಶವಿರುವ ನೀರು ತುಂಬಿಕೊಂಡಿತ್ತು. ಇಲ್ಲಿನ ಸಮೃದ್ಧ ನೀರಿನತ್ತ ಕಣ್ಣುನೆಟ್ಟ ಪ್ರಿನ್ಸ್ ವೀರ್, ಕೃಷ್ಣ ಜಾಲಮ್ಮನವರ ಮತ್ತು ವೀರೇಶ್ ಹಿರೇಮಠ 2021ರಲ್ಲಿ ಮುತ್ತು ಕೃಷಿ ಆರಂಭಿಸಿ ಯಶ ಕಂಡಿದ್ದಾರೆ.
ವೀರ್ ಮತ್ತು ಗೆಳೆಯರು ಒಟ್ಟಿಗೆ ಎಂಬಿಎ ಪದವಿ ಪಡೆದಿದ್ದಾರೆ. ಸ್ಫುರದ್ರೂಪಿ ವೀರ್ ಸಿನಿಮಾಮೋಹಿ. ಇದೇ ಕಾರಣಕ್ಕೆ ಓದು ಮುಗಿದ ತಕ್ಷಣ ಬೆಂಗಳೂರು ಬಸ್ ಹತ್ತಿದರು. ಗಾಂಧಿನಗರ ಅಡ್ಡಾಡಿ ಅವಕಾಶ ಗಿಟ್ಟಿಸಿಕೊಂಡರು. 15 ಸಿನಿಮಾಗಳಲ್ಲಿ ಸಹ ಕಲಾವಿದರಾಗಿ ಕಾಣಿಸಿಕೊಂಡರು. ಕಿರುತೆರೆಯಲ್ಲೂ ನಸೀಬು ಪರೀಕ್ಷಿಸಿದರು. ಅಷ್ಟರಲ್ಲಿ ಎರಡು ವರ್ಷ ಕಳೆದಿತ್ತು. ಇನ್ನೇನು ಸಿನಿಹಾದಿ ಮತ್ತೊಂದು ಹಂತಕ್ಕೆ ಹೋಗುತ್ತಿದೆ ಅನ್ನುವಾಗ ಕೋವಿಡ್ ಕಾಲಿಟ್ಟಿತು. ಲಾಕ್‌ಡೌನ್ ಘೋಷಣೆ ಆಯಿತು. ಅನಿವಾರ್ಯವಾಗಿ ಊರಿಗೆ ಹಿಂದಿರುಗಿದರು. ಗೆಳೆಯರಾದ ಕೃಷ್ಣ ಮತ್ತು ವೀರೇಶ ಗದಗದಲ್ಲೇ ಉದ್ಯಮ ನಡೆಸುತ್ತಿದ್ದರು. ವೀರ್ ಮತ್ತೆ ಚಡ್ಡಿ ದೋಸ್ತ್‌ಗಳ ಜತೆ ಸೇರಿಕೊಂಡರು.
ಕೃಷ್ಣ ಅವರ ಮಾವ ಪ್ರಕಾಶ್ ಕರಿ ಮತ್ತು ಸಹೋದರರಿಗೆ ಸೇರಿದ್ದ ಕ್ವಾರಿ ಬಳಿ ಮೂವರು ಗೆಳೆಯರು ಆಗಾಗ ಸೇರುತ್ತಿದ್ದರು. ಊರಲ್ಲಿದ್ದುಕೊಂಡೇ ಉದ್ಯಮದ ಜತೆಗೆ ಹೊಸದೇನು ಮಾಡಬಹುದು ಎಂದು ಚರ್ಚಿಸುತ್ತಿದ್ದರು. ಆಗ ಕ್ವಾರಿ ಮತ್ತು ನೀರು ಅವರ ಗಮನ ಸೆಳೆಯಿತು. ನಿಸರ್ಗದತ್ತವಾಗಿ ಇಲ್ಲಿ ಇಷ್ಟೊಂದು ನೀರಿದೆ. ಮೀನು ಕೃಷಿ ಮಾಡಬಹುದೇ ಎಂಬ ಯೋಚನೆ ಸುಳಿಯಿತು. ಆದರೆ, ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಆ ಯೋಚನೆಯನ್ನು ಅಲ್ಲಿಗೆ ಬಿಟ್ಟರು. ಅಂತರ್ಜಾಲ ತಡಕಾಡಿದಾಗ ಮುತ್ತು ಕೃಷಿ ಬಗ್ಗೆ ತಿಳಿದು, ಅದರತ್ತ ಮುಖ ಮಾಡಿದರು.
‘ಮೀನು ಕೃಷಿ ಮಾಡಿದರೆ ಹೆಚ್ಚು ಶ್ರಮ ಬೇಕು. ಕ್ವಾರಿಯಲ್ಲಿ 50 ಅಡಿ ಆಳದಷ್ಟು ನೀರು ಇರುವುದರಿಂದ ಬಲೆ ಹಾಕಿ ಮೀನು ಹಿಡಿಯುವುದು ಕಷ್ಟ. ಈ ಕಾರಣಕ್ಕೆ ಇಲ್ಲಿ ಬೇರೆ ಏನು ಮಾಡಬಹುದು ಅಂತ ಯೋಚಿಸುವಾಗ ಮುತ್ತು ಕೃಷಿ ಬಗ್ಗೆ ಹೊಳೆಯಿತು. ದಕ್ಷಿಣ ಭಾರತದಲ್ಲಿ ಮುತ್ತು ಕೃಷಿ ಮಾಡಿದವರ ಸಂಖ್ಯೆ ತುಂಬ ಕಡಿಮೆ ಇದೆ. ನೈಸರ್ಗಿಕ ಕಾರಣಕ್ಕಾಗಿಯೇ ಪಶ್ಚಿಮ ಬಂಗಾಳದಲ್ಲಿ ಮುತ್ತು ಕೃಷಿ ಜಾಸ್ತಿ ಇದೆ. ನಮ್ಮ ಬಳಿ ಕೂಡ ಅಂತಹದ್ದೊಂದು ಜಾಗ ಇದ್ದಿದ್ದರಿಂದ, ಕ್ವಾರಿಗೆ ವರ್ಷಕ್ಕೆ ₹1 ಲಕ್ಷದಂತೆ ಲಾವಣಿ ಮಾಡಿಕೊಂಡು ಮುತ್ತು ಕೃಷಿ ಆರಂಭಿಸಿದೆವು’ ಎಂದು ವೀರ್ ಹೇಳಿದರು.
ಮುತ್ತು ಕೃಷಿ ಮಾಡಬೇಕು ಅಂತ ನಿರ್ಧರಿಸಿದ ಮೇಲೆ ಮೂವರು ಸ್ನೇಹಿತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿದರು. ಕ್ವಾರಿಯ ನೀರು ಪರೀಕ್ಷೆ ಮಾಡಿಸಿದರು. ಮುತ್ತು ಕೃಷಿ ಆರಂಭಿಸುವ ಯೋಚನೆ ಮಾಡಿದಾಗ ಇದರ ಬಗ್ಗೆ ಅವರಿಗೆ ಹೇಳಿಕೊಡಲು ಇಲ್ಲಿ ಅನುಭವಿಗಳು ಯಾರೂ ಇರಲಿಲ್ಲ. ಹಾಗಾಗಿ, ಆರಂಭಕ್ಕೂ ಮುನ್ನ ಮುತ್ತು ಕೃಷಿಗೆ ಸಂಬಂಧಿಸಿದ ವಿಡಿಯೊ ನೋಡಿ ಸ್ವಲ್ಪಮಟ್ಟಿಗೆ ತಿಳಿದುಕೊಂಡರು. ಇಲ್ಲೂ ಮುತ್ತು ಕೃಷಿ ಮಾಡಬಹುದು ಅಂತ ಅನ್ನಿಸಿದ ತಕ್ಷಣವೇ ಪಶ್ಚಿಮ ಬಂಗಾಳದ ಕಂಪನಿವೊಂದನ್ನು ಸಂಪರ್ಕಿಸಿದರು. ಮಾತುಕತೆ ಫಲಪ್ರದವಾಯಿತು. ‘ನೀವು ಮುತ್ತು ಕೃಷಿ ಮಾಡಿ; ಅವುಗಳನ್ನು ನಾವು ಖರೀದಿಸುತ್ತೇವೆ’ ಎಂಬ ಕಂಪನಿಯವರ ಭರವಸೆಯ ಮಾತುಗಳನ್ನು ನಂಬಿ ಮುತ್ತು ಕೃಷಿ ಆರಂಭಿಸಿಯೇ ಬಿಟ್ಟರು.
2021ರಲ್ಲಿ ಮೊದಲ ಪ್ರಯತ್ನವಾಗಿ ತಲಾ ₹2 ಲಕ್ಷದಂತೆ ₹6 ಲಕ್ಷ ಹೂಡಿಕೆ ಮಾಡಿ, 18 ಸಾವಿರ ಕಪ್ಪೆಚಿಪ್ಪು ತರಿಸಿದರು. ಕಂಪನಿಯವರೇ ಬಂದು ಸರ್ಜರಿ ಮಾಡಿ, ಅವುಗಳ ನಿರ್ವಹಣೆಯ ವಿಧಾನವನ್ನೂ ಹೇಳಿಕೊಟ್ಟು ಹೋದರು. ಒಂದು ವರ್ಷ ಆಯಿತು. ಅದರ ಮೇಲೆ ಇನ್ನೂ ಆರು ತಿಂಗಳು ಕಳೆಯಿತು. ಅಕ್ಕಪಕ್ಕದ ಜನರು ಬಂದು, ‘ಏನ್ರೋ ಹುಡುಗ್ರಾ, ₹6 ಲಕ್ಷ ನೀರಿಗೆ ಹಾಕ್ಬಿಟ್ರಲ್ಲಾ’ ಅಂತ ಹೇಳಿ ನಕ್ಕರು. ‘ನೀರಿನ್ಯಾಗ್ ರೊಕ್ಕ ಹಾಕಿದ್ರೆ ಹೆಂಗ್ ವಾಪಸ್ ಬರ್‌ತೈತಿ’ ಅಂತ ಅಣಕಿಸಿದರು. ಎರಡು ವರ್ಷ ಕಳೆದ ಮೇಲೆ ಅವರಿಗೆ ₹15 ಲಕ್ಷ ಹಣ ಬಂತು. ಈ ಸುದ್ದಿ ಕೇಳಿ ಕುಹುಕವಾಡಿದವರು ದಂಗಾದರು. ಆಮೇಲೆ, ಹೆಚ್ಚಿನವರಿಗೆ ಮುತ್ತು ಕೃಷಿ ಮೇಲೆ ನಂಬಿಕೆ ಬಂತು. ಎರಡನೇ ಸುಗ್ಗಿಯಲ್ಲೂ ₹35 ಲಕ್ಷ ಹೂಡಿಕೆ ಮಾಡಿ ₹70 ಲಕ್ಷ ಗಳಿಸಿದರು. ಈಗ ಇವರ ಜತೆಗೆ ಇನ್ನೂ 23 ಮಂದಿ ಸೇರಿಕೊಂಡಿದ್ದಾರೆ. ಈ ವರ್ಷ ₹75 ಲಕ್ಷ ಮೌಲ್ಯದ 1.30 ಲಕ್ಷ ಕಪ್ಪೆಚಿಪ್ಪು ಹಾಕಿದ್ದು, ₹1.50 ಕೋಟಿ ಹಣದ ನಿರೀಕ್ಷೆಯಲ್ಲಿದ್ದಾರೆ.
ಮುತ್ತು ಕೃಷಿಯಲ್ಲಿ ಕಪ್ಪೆಚಿಪ್ಪುಗಳಿಗೆ ಸರ್ಜರಿ ಮಾಡುವುದು ಮುಖ್ಯ ಪ್ರಕ್ರಿಯೆ. ಸರ್ಜರಿ ಮಾಡಿ, ಉಪಚರಿಸಿದ ನಂತರ ಬೇಕಾದ ಆಕಾರದಲ್ಲಿ ಮುತ್ತು ಬೆಳೆಯುವಂತೆ ಮಾಡಬಹುದು. ಕಪ್ಪೆಚಿಪ್ಪಿನೊಳಗೆ ಸರ್ಜರಿ ಮೂಲಕ ಬಿತ್ತಿದ ಆ ಚಿಕ್ಕ ವಸ್ತುವೇ ಶಿವ, ಪಾರ್ವತಿ, ಗಣೇಶನ ಆಕೃತಿಗಳು, ಅಕ್ಷರ-ಸಂಖ್ಯೆಗಳ ವಿನ್ಯಾಸಗಳು ಮುತ್ತಾಗಿ ಬೆಳೆಯುತ್ತವೆ. ಕಂಪನಿಯವರು ಖರೀದಿಸಿದ ಬಳಿಕ ಕುಶಲಿಗಳಿಗೆ ಕೊಟ್ಟು, ಅದನ್ನು ಮತ್ತಷ್ಟು ನಾಜೂಕುಗೊಳಿಸಿ ಹೆಚ್ಚಿನ ಬೆಲೆಗೆ ಮಾರುತ್ತಾರೆ.
ವೀರ್ ಮತ್ತು ಅವರ ಗೆಳೆಯರು ಕಂಪನಿಯ ಮಾರ್ಗದರ್ಶನದಂತೆ ಮುತ್ತು ಕೃಷಿ ಮಾಡಲು ಕ್ವಾರಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ 10 ಮಿಲಿಮೀಟರ್ ದಾರ ಕಟ್ಟಿದ್ದಾರೆ. ಬಳಿಕ ಆ ದಾರಕ್ಕೆ ಮತ್ತೆ 2 ಮಿಲಿಮೀಟರ್ ದಾರ ಹಾಕಿ, 20 ಕಪ್ಪೆಚಿಪ್ಪುಗಳನ್ನು ಕಟ್ಟಿ ಎಳೆಗಳ ರೀತಿಯಲ್ಲಿ ಜೋತು ಬಿಟ್ಟಿದ್ದಾರೆ. ಈ ದಾರಗಳು ನೀರಿನ ಮೇಲಿನಿಂದ ನಾಲ್ಕೈದು ಅಡಿ ಆಳದವರೆಗೆ ನೇತಾಡುತ್ತಿರುತ್ತವೆ. ಜಾಸ್ತಿ ಆಳಕ್ಕೆ ಹೋದಂತೆ ಆಮ್ಲಜನಕ ಪೂರೈಕೆ ಆಗುವುದಿಲ್ಲ. ಹಾಗಾಗಿ, ಕಪ್ಪೆಚಿಪ್ಪುಗಳು ತೇಲುವಂತೆ ಮಾಡಲು ದಾರಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿದ್ದಾರೆ. ಆಭರಣ ತಯಾರಿಕೆಗೆ ಹೆಚ್ಚು ಬಳಕೆಯಾಗುವ ಡಿಸೈನರ್ ಮುತ್ತುಗಳನ್ನು ಇವರು ಬೆಳೆಸುತ್ತಿದ್ದಾರೆ.
ಪ್ರತಿ ಹದಿನೈದು ದಿನಕ್ಕೊಮ್ಮೆ ನೀರಿನ ಪಿಎಚ್, ಟಿಡಿಎಸ್, ಅಮೋನಿಯಂ ಮಟ್ಟವನ್ನು ಪರಿಶೀಲಿಸಬೇಕು. ಏರುಪೇರಾಗಿದ್ದಲ್ಲಿ ಅದರ ಸಮತೋಲನಕ್ಕಾಗಿ ಆಕಳ ಸಗಣಿ, ಸಾಸಿವೆ ಹಿಂಡಿ, ಶೇಂಗಾ ಹಿಂಡಿ, ಅರಿಸಿನ, ಸುಣ್ಣ, ಉಪ್ಪು, ಕ್ಯಾಲ್ಸಿಯಂ, ವಿಟಮಿನ್‌ಗಳನ್ನು ಆಹಾರವಾಗಿ ನೀಡಬೇಕು. ಕೆಲವು ರಾಸಾಯನಿಕಗಳನ್ನು ಸಹ ತಕ್ಕಮಟ್ಟಿಗೆ ಸೇರಿಸುತ್ತಾರೆ.
‘ಒಂದು ಕಪ್ಪೆಚಿಪ್ಪಿಗೆ ₹60 ವೆಚ್ಚ ಮಾಡಿದರೆ, ಬೆಳೆಸಿದ ನಂತರ ಕಂಪನಿಯವರು ನಮ್ಮಿಂದ ಅದನ್ನು ₹230 ಕೊಳ್ಳುತ್ತಾರೆ. ಅಸಲಿನ ಜತೆಗೆ ಎರಡು ಪಟ್ಟು ಹೆಚ್ಚು ಲಾಭ ಸಿಗುತ್ತದೆ. ಆದರೆ, ನಾವು ಶೇಕಡ 50 ರಷ್ಟು ನಷ್ಟ ಅಂದುಕೊಂಡೇ ಕೃಷಿ ಮಾಡುತ್ತೇವೆ. ಇದರಲ್ಲಿ ₹100ಕ್ಕೆ ₹300 ಬರುವುದು ಬೇಡ. ₹200 ಬಂದರೆ ಸಾಕು. ಹಾಕಿದ ಬಂಡವಾಳ ಡಬಲ್ ಆಗುತ್ತದೆ’ ಎಂದು ಲಾಭ ನಷ್ಟದ ಲೆಕ್ಕಾಚಾರ ಮುಂದಿಡುತ್ತಾರೆ ಯುವಕರು.
ವೀರ್ ಮತ್ತು ಗೆಳೆಯರು ಹೇಳಿಕೊಳ್ಳುವಂತೆ, ಇವರು ಮುತ್ತು ಕೃಷಿ ಆರಂಭಿಸಿದಾಗ ದಕ್ಷಿಣ ಭಾರತದಲ್ಲೇ ಯಾರು ಇಂತಹ ಪ್ರಯತ್ನ ಮಾಡಿರಲಿಲ್ಲವಂತೆ. ದಕ್ಷಿಣದಲ್ಲಿ ಈಗಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾರೂ ಮುತ್ತು ಕೃಷಿ ಮಾಡುತ್ತಿಲ್ಲವಂತೆ. ಕಳೆದ ವರ್ಷ ಬೆಂಗಳೂರು ಭಾಗದಲ್ಲಿ ಒಂದು ಪ್ರಯತ್ನ ನಡೆಯಿತು. ಅದು ಫಲಪ್ರದವಾಗಿಲ್ಲ. ಕರಾವಳಿ ಭಾಗದಲ್ಲಿ ಕೆಲವರು ಸಣ್ಣದಾಗಿ ಮುತ್ತು ಕೃಷಿ ಮಾಡುತ್ತಿರುವುದನ್ನು ಗುರುತಿಸಿರುವುದಾಗಿ ತಿಳಿಸಿದರು.
ಮುತ್ತು ಕೃಷಿಗೆ ಸರ್ಕಾರದ ನೆರವು ಅಗತ್ಯವಾಗಿ ಬೇಕಿದೆ ಎಂಬುದು ಕೃಷಿಕರ ಅಭಿಪ್ರಾಯ. ಮುತ್ತು ಕೃಷಿ ಮಾಡುವವರಿಗೆ ಸರ್ಕಾರದಿಂದ ಸಬ್ಸಿಡಿ, ಪ್ರೋತ್ಸಾಹಧನ, ವಿಮೆ, ಸುರಕ್ಷತಾ ಪರಿಕರಗಳು ಸೇರಿದಂತೆ ಇನ್ನಿತರ ಸೌಲಭ್ಯಗಳು ಸಿಗಬೇಕು. ಆದರೆ, ಮುತ್ತು ಕೃಷಿಕರಿಗೆ ಸರ್ಕಾರದಿಂದ ಈವರೆಗೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಮೀನುಗಾರಿಕೆ ಇಲಾಖೆಯವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಶಾಲಾ, ಕಾಲೇಜು ಅಥವಾ ಆಸಕ್ತರಿಗೆ ಮುತ್ತು ಕೃಷಿ ಬಗ್ಗೆ ತಿಳಿಸಿಕೊಡಲು ಇವರನ್ನೇ ಕರೆದುಕೊಂಡು ಹೋಗುತ್ತಾರಂತೆ.
‘ಮುತ್ತು ಕೃಷಿಯಲ್ಲಿ ಯಶಸ್ವಿಯಾಗಿ ನಾಲ್ಕು ವರ್ಷ ಪೂರ್ಣಗೊಳಿಸಿದ್ದರೂ ಇಂದಿಗೂ ಅನೇಕ ಸವಾಲುಗಳಿವೆ. ಮುಂದೆ ಕಂಪನಿಯವರು ಮುತ್ತುಗಳನ್ನು ಕೊಳ್ಳುತ್ತಾರೆಯೋ ಇಲ್ಲವೋ ಎಂಬ ಆತಂಕ ಇದ್ದೇ ಇರುತ್ತದೆ. ಹಾಗಾಗಿ, ಸರ್ಕಾರವೇ ಮುತ್ತುಗಳನ್ನು ಖರೀದಿಸುವುದು, ವಿಮೆ, ಪ್ರೋತ್ಸಾಹಧನ ಕೊಟ್ಟರೆ ಹೆಚ್ಚಿನ ಅನುಕೂಲ ಆಗಲಿದೆ. ಇಲ್ಲವಾದರೆ, ಹೂಡಿಕೆ ಮಾಡಲು ಜನರು ಹೆದರುತ್ತಾರೆ’ ಎಂದು ಕೃಷ್ಣ ಜಾಲಮ್ಮನವರ ಹೇಳುತ್ತಾರೆ.
ಮುತ್ತು ಕೃಷಿಯಲ್ಲಿ ಲಾಭ ಇದೆ ಅಂತ ಗೊತ್ತಾದರೆ, ಆಸಕ್ತರಿಗೆ ಅನುಕೂಲ ಆಗುತ್ತದೆ. ಅವರ ಮನೆಯವರೂ ಒಂದಿಷ್ಟು ಹಣದ ಮುಖ ನೋಡುತ್ತಾರೆ ಎಂಬುದು ಈ ಯುವಕರ ಯೋಚನೆಯಾಗಿದೆ. ಅದಕ್ಕಾಗಿ, ಇವರು ಮೂವರಷ್ಟೇ ಅಲ್ಲದೇ ಆಸಕ್ತಿಯಿಂದ ಬಂದವರನ್ನೆಲ್ಲಾ ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ.
‘ಮುತ್ತು ಕೃಷಿಕರು ಹೆಚ್ಚಾದಂತೆ ಸ್ಪರ್ಧೆ ಹೆಚ್ಚಬಹುದು ಎಂಬ ಕಾರಣಕ್ಕೆ ಕೆಲವರು, ‘ಕೆಜಿಎಫ್ ರೀತಿ ಬಂಗಾರ ತೆಗೆಯುವ ಜಾಗ ಇಟ್ಟುಕೊಂಡಿದ್ದೀರಿ. ಯಾಕ್ ಮಂದಿಗೆ ಹೇಳಿ ಕೊಡ್ತೀರಾ. ಎಲ್ರಿಗೂ ಹೇಳಿದರೆ ನಿಮ್ಗೇನು ಲಾಭ’ ಅಂತ ಬೈಯ್ಯುತ್ತಾರೆ. ಆದರೆ, ಇಲ್ಲಿ ಪೂರೈಕೆದಾರರೇ ಕಡಿಮೆ ಇದ್ದಾರೆ. ಪ್ರತಿ ವರ್ಷ ಸಾವಿರಾರು ಕೋಟಿಗಳ ಲೆಕ್ಕದಲ್ಲಿ ಮುತ್ತುಗಳು ಹೊರ ದೇಶಗಳಿಂದ ಭಾರತಕ್ಕೆ ಆಮದಾಗುತ್ತದೆ. ಬೇಡಿಕೆ ಹೆಚ್ಚಿರುವ ಕಾರಣ ಮುತ್ತು ಕೃಷಿಯ ಭವಿಷ್ಯವೂ ಚೆನ್ನಾಗಿದೆ. ಇನ್ನೂ ಹತ್ತು ವರ್ಷ ಮುತ್ತಿನ ಮಾರುಕಟ್ಟೆ ಮಿಸುಕಾಡುವುದಿಲ್ಲ. ದಕ್ಷಿಣದ ಮಹಿಳೆಯರು ಚಿನ್ನದ ಆಭರಣ ಇಷ್ಟಪಡುತ್ತಾರೆ. ಉತ್ತರದ ಕೆಲವು ರಾಜ್ಯಗಳಲ್ಲಿ ಮುತ್ತಿನ ಆಭರಣಗಳ ಬಳಕೆ ಹೆಚ್ಚಿದೆ. ಹಾಗಾಗಿ, ಮುತ್ತುಗಳಿಗೆ ಹೆಚ್ಚಿನ ಬೇಡಿಕೆಯಂತೂ ಇದ್ದೇ ಇದೆ’ ಎನ್ನುತ್ತಾರೆ ಯುವಕರು.
ದುಡ್ಡು, ಜಾಗ, ನೀರು ಎಲ್ಲವೂ ಇದೆ. ಆದರೆ, ದಿನವೂ ಬಂದು ದುಡಿಯಲು ಸಮಯ ಇಲ್ಲ ಎನ್ನುವವರಿಗೆ ಮುತ್ತು ಕೃಷಿ ಬಗ್ಗೆ ಆಸಕ್ತಿ ಬಂದರೆ, ಇಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡು ಅವರಿಗೆ ತರಬೇತಿ ಕೊಡಿಸಿ ಸರಳವಾಗಿ ಈ ಕೃಷಿ ಮಾಡಬಹುದು ಎಂಬುದು ಪ್ರಿನ್ಸ್ ವೀರ್ ಮತ್ತು ಗೆಳೆಯರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.