ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ ವೆಂಕಟೇಶ್‌: ಗ್ರಾಮೀಣ ಮಕ್ಕಳ ಪಾಲಿನ ಅನ್ನದಾತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:14 IST
Last Updated 1 ಜನವರಿ 2022, 6:14 IST
ವೆಂಕಟೇಶ್‌
ವೆಂಕಟೇಶ್‌   

ಕೆರೆಯ ನೀರನ್ನು ಕೆರೆಗೇ ಚೆಲ್ಲಿ ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು ವೆಂಕಟೇಶ್‌. ಮೂಲತಃ ಅವರದು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣ. ಅಲ್ಲಿಯೇ ಅವರದ್ದು ಸಣ್ಣ ಹೋಟೆಲ್ ಇದೆ. ಈ ಕಾಯಕದ ಜತೆಗೆ ಕೈಲಾದ ಮಟ್ಟಿಗೆ ಮತ್ತೊಬ್ಬರಿಗೆ ನೆರವಾಗಬೇಕು ಎಂಬುದು ಅವರ ಹಂಬಲ. ಅಕ್ಷರಶಃ ಅವರು ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ಅನ್ನದಾತ. ಓದಲು ನಗರಕ್ಕೆ ಬರುವ ಹಳ್ಳಿಯ ಮಕ್ಕಳಿಗೆ ₹ 10ಕ್ಕೆ ಉಪಾಹಾರ ನೀಡುತ್ತಿದ್ದಾರೆ.

ಕಾರ್ತಿಕ್ ಟಿಫನ್ ಸೆಂಟರ್‌ನಲ್ಲಿ ನಿತ್ಯವೂ ನೂರಾರು ವಿದ್ಯಾರ್ಥಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. 12 ವರ್ಷಗಳಿಂದಲೂ ಅವರ ಈ ಸೇವೆಯು ವ್ಯತ್ಯಯಗೊಂಡಿಲ್ಲ.

ಅವರ ಹುಟ್ಟೂರು ಗುಬ್ಬಿ ತಾಲ್ಲೂಕಿನ ಗೋಳೇನಹಳ್ಳಿ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಎಸ್ಸೆಸ್ಸೆಲ್ಸಿ ನಂತರ ವಿದ್ಯಾಭ್ಯಾಸ ಮುಂದುವರಿಸಲು ಅವರಿಗೆ ಸಾಧ್ಯವಾಗಿಲ್ಲ. ಉದ್ಯೋಗ ಅರಸಿ ತಿಪಟೂರಿಗೆ ಬಂದು ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ 15 ವರ್ಷ ದುಡಿದರು. ನಂತರ ಚಿಕ್ಕದಾಗಿ ಸ್ವಂತ ಹೋಟೆಲ್ ಆರಂಭಿಸಿದರು. ವಿದ್ಯಾಭ್ಯಾಸದ ಸಮಯದಲ್ಲಿ ತಾವು ಅನುಭವಿಸಿದ ಕಷ್ಟ ನೆನಪಿಗೆ ಬಂತು. ಹಸಿವು ಮಕ್ಕಳ ಓದಿಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಹೋಟೆಲ್‌ನಲ್ಲಿ ಅತ್ಯಲ್ಪ ಹಣ ಪಡೆದು ಊಟ, ತಿಂಡಿ ನೀಡಲು ಆರಂಭಿಸಿದರು. ‌

ADVERTISEMENT

ಆರಂಭದಲ್ಲಿ ಹೋಟೆಲ್‌ಗೆ ಬರುತ್ತಿದ್ದ ಮಕ್ಕಳ ಸಂಖ್ಯೆ 50ರಿಂದ 100 ಇತ್ತು. ದಿನ ಕಳೆದಂತೆ ಸಂಖ್ಯೆ ಹೆಚ್ಚುತ್ತಾ ಹೋಯಿತು. ಈಗ ನಿತ್ಯ 250ರಿಂದ 300 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹಸಿವಿನಿಂದ ಬಳಲಿ ಬಂದು ತಿಂಡಿ ತಿಂದ ನಂತರ ಅವರ ಮುಖದಲ್ಲಿ ಅರಳುವ ನಗು ಕಂಡಾಗ ವೆಂಕಟೇಶ್‌ ಮೊಗದಲ್ಲಿಯೂ ಸಾರ್ಥಕತೆಯ ಭಾವ ಇಣುಕುತ್ತದೆ.

ಹೆಸರು: ವೆಂಕಟೇಶ್
ಊರು: ತಿಪಟೂರು
ಕ್ಷೇತ್ರ: ಸಮಾಜ ಸೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.