ADVERTISEMENT

ಹೇಡಿಗಳನ್ನು ಯಾರೂ 'ಶಾಂತಿಪ್ರಿಯರು’ ಎನ್ನರು; ಸಹನೆಗೆ ಇವೆ ಎರಡು ಮುಖಗಳು

ರಮ್ಯಾ ಶ್ರೀಹರಿ
Published 20 ಸೆಪ್ಟೆಂಬರ್ 2019, 19:30 IST
Last Updated 20 ಸೆಪ್ಟೆಂಬರ್ 2019, 19:30 IST
ಯೋಗ
ಯೋಗ   

ಕೆಲವು ಗುಣ-ಸ್ವಭಾವಗಳು ನಮ್ಮ ಸಮಾಜದಲ್ಲಿ 'ಓವರ್-ರೇಟೆಡ್' - ಅದರ ಯೋಗ್ಯತೆಗಿಂತ ಹೆಚ್ಚಿನ ಪ್ರಾಮುಖ್ಯವನ್ನು ಪಡೆದವುಗಳಾಗಿವೆ. ಉದಾಹರಣೆಗೆ: ಹಿರಿಯರ ಮಾತನ್ನು ಪಾಲಿಸುವುದು, ವಿಧೇಯತೆ, ಮೃದುಭಾಷಿತ್ವ, ಯಾರೊಂದಿಗೂ ಜಗಳಾವಾಡದೆ, ಮನಸ್ತಾಪ ಮಾಡಿಕೊಳ್ಳದೆ ಎಲ್ಲರನ್ನು ಮೆಚ್ಚಿಸುವುದು, ತನ್ನ ಸುಖವನ್ನು ಮಕ್ಕಳಿಗಾಗಿ ತ್ಯಾಗ ಮಾಡುತ್ತಿದ್ದೇನೆ ಎಂದು ನಂಬುವುದು, ತನಗೂ ಬುದ್ಧಿ ಇದೆ ಎನ್ನುವುದನ್ನು ಮರೆತು ಪೆದ್ದು ಪೆದ್ದಾಗಿ ಆಡುವುದನ್ನು ಮುಗ್ದತೆ ಎಂದುಕೊಳ್ಳುವುದು; ಇನ್ನು ಇಂಥವೇ ನೂರಾರು. ತಾಳ್ಮೆ-ಸಹನೆಯೂ ಅಂಥದ್ದೇ, ವಿನಾ ಕಾರಣ ‘ಹೈಪ್’ ಆದದ್ದೇನೋ ಅನಿಸುತ್ತದೆ. ಅದರಲ್ಲೂ ಸಹನೆಗಂಟಿದ ಲಿಂಗತಾರತಮ್ಯವನ್ನು ಗ್ರಹಿಸಿದಾಗಂತೂ ಸಹನೆ ಎಂಬ ಪದದ ಬಗ್ಗೆಯೇ ಅಸಹನೆ ಉಂಟಾಗದಿರದು. ಗಂಡುಮಕ್ಕಳಿಗೆ 'ಸಹನ, ಕ್ಷಮಾ, ಭೂಮಿ' ಎಂಬಂತಹ ಹೆಸರುಗಳನ್ನು ಇಟ್ಟಿದ್ದು ನಾನಂತೂ ಕೇಳಿಲ್ಲ. 'ಹೆಣ್ಣಾಗಿ ಹುಟ್ಟಿದ್ದರಿಂದ ಸಹಿಸಿಕೊಳ್ಳಬೇಕು' ಎಂಬ ಮಾತಂತೂ ಹೆಣ್ತನಕ್ಕೇ ಅವಮಾನವೂ, ಮೈ ಉರಿಯುವಷ್ಟು ಕೋಪ ತರುವಂಥದ್ದೂ ಆಗಿದೆ.

ಸಹನೆ ತನ್ನಷ್ಟಕ್ಕೆ ತಾನೇ ಒಂದು ಒಳ್ಳೆಯ ಗುಣ ಎಂದೆನ್ನಿಸಿಕೊಳ್ಳುವ ಯೋಗ್ಯತೆ ಇಲ್ಲದ್ದು. ಪ್ರತಿರೋಧದ ಹಿನ್ನೆಲೆಯಲ್ಲಷ್ಟೇ ಸಹನೆಗೆ ಬೆಲೆ. ಕೈಲಾಗದವರನ್ನು, ಹೇಡಿಗಳನ್ನು ಯಾರೂ 'ಶಾಂತಿಪ್ರಿಯರು’, ‘ಸಹನಶೀಲರು' ಎನ್ನುವುದಿಲ್ಲ. ಸಹನೆಗೆ ಪ್ರತಿರೋಧದ ಜೊತೆ ಅಧಿಕಾರದ ನಂಟಿರುವುದರಿಂದಲೇ, ಅದು ಸದಾ ಎರಡು ವ್ಯಕ್ತಿಗಳ, ಎರಡು ಗುಂಪುಗಳ ನಡುವಿನ ಹಗ್ಗಜಗ್ಗಾಟವಾದ್ದರಿಂದಲೇ ರಾಜಕೀಯವಾಗಿಯೂ ಬಹು ಚರ್ಚಿತ ವಿಷಯ. ತಾಳ್ಮೆ, ಸಹನೆ, ಶಾಂತಿ, ಸಹಿಷ್ಣುತೆ ಬರೀ ಆತ್ಮಗುಣಗಳಷ್ಟೇ ಅಲ್ಲದೆ ರಾಜಕೀಯ ಲೇಪವುಳ್ಳ, ಸಾಮಾಜಿಕ ನಡುವಳಿಕೆಯ ದಿಕ್ಸೂಚಿಗಳಾಗಿವೆ. ಸಹಿಷ್ಣುತೆ ಎಂಬುದು ವೈವಿಧ್ಯತೆಯನ್ನು ತಾಳಿಕೊಳ್ಳುವ ಗುಣವಷ್ಟೇ ಅಲ್ಲದೆ ಅವಕಾಶವಂಚಿತರ, ಶೋಷಿತರ ಆಕ್ರೋಶವನ್ನು ಅರ್ಥಮಾಡಿಕೊಳ್ಳುವ ಹೃದಯವಂತಿಕೆಯೂ ಆಗಿದೆ. ಸಮಾನರಲ್ಲದವರು ಸಮಾನರಾಗುವ ಹಾದಿಯಲ್ಲಿ ಸವಲತ್ತುಗಳುಳ್ಳವರೇ ಹೆಚ್ಚು ಸಹನಶೀಲರಾಗಬೇಕಾಗುತ್ತದೆ. ಸಹನೆಯು ಶಕ್ತರಿಗೆ ಮಾತ್ರ ಸಾಧ್ಯವಾಗುವುದೇ ಅದರ ವಿಶೇಷತೆ. ಆದ್ದರಿಂದಲೇ ಅಶಕ್ತರನ್ನು ಪೊರೆಯುವ ಮಹತ್ತರ ಜವಾಬ್ದಾರಿಯನ್ನೂ ಸಹನಶೀಲರು ಹೊರಬೇಕಾಗುತ್ತದೆ.

ಹಾಗೆಯೇ ಸಹನೆ ಎಂಬ ಪದ ಅತಿ ದುರ್ಬಳಕೆಯಾಗುವುದೂ ಕುಟುಂಬದ ಚೌಕಟ್ಟಿನಲ್ಲಿಯೇ. 'ಅವರು ಎಷ್ಟಾದರೂ ನಿನ್ನ ತಂದೆ-ತಾಯಿಯಲ್ಲವೇ? ಒಡಹುಟ್ಟಿದರವರಲ್ಲವೇ?' ಇತ್ಯಾದಿ. ಹೀಗೆ ಕುಟುಂಬದಲ್ಲಿ ‘ಸಹನೆ’ ಎಂಬ ಹೆಸರಿನಡಿಯಲ್ಲಿ ವಿಷಪೂರಿತ ಸಂಬಂಧಗಳಲ್ಲಿ ಎಷ್ಟೋ ಜನ ನರಳುವವರಿದ್ದಾರೆ. ಸಹಿಸಿಕೊಂಡು ಮಹಾಸಾಧಕರೆನಿಸಿಕೊಳ್ಳುವ ಭ್ರಮೆಯಲ್ಲಿ ತಮ್ಮನ್ನು ತಾವೇ ಕಳಕೊಂಡವರೆಷ್ಟೋ, ಅನ್ಯಾಯವನ್ನು ಎದುರಿಸಲಾಗದೆ ಸಹಿಸಿ ಬಾಳುತ್ತಿರುವ ಆತ್ಮವಂಚಕರೆಷ್ಟೋ?

ADVERTISEMENT

ಹೀಗಾಗಿ ‘ಸಹನೆ’ ಎಂಬ ಪದದೊಟ್ಟಿಗೆ 'ಯಾರು, ಯಾರಿಗೆ, ಯಾವಾಗ, ಏಕೆ, ಎಷ್ಟು' ಎಂಬ ಪ್ರಶ್ನೆಗಳು ಸದಾ ತಳುಕು ಹಾಕಿಕೊಂಡಿರುವುದು ಸರಿಯೇ. ಎಲ್ಲವನ್ನೂ ಸಹಿಸಿಕೊಂಡಿದ್ದರೆ ಕ್ರಾಂತಿ, ಬದಲಾವಣೆ ಅಸಾಧ್ಯ, ಹಾಗೆಂದು ಎಲ್ಲವನ್ನೂ ವಿರೋಧಿಸಿದರೆ ಹೇಗೆ? ಬಿತ್ತಿದ ಬೀಜ ಮರವಾಗಿ ಫಲ ಕೊಡುವ ತನಕ ಶಾಂತರಾಗಿರಬೇಕಲ್ಲವೇ? ಬದುಕಿನಲ್ಲಿ ಏನೇ ಮಾಡಿದರೂ ಏನೊಂದೂ ಬದಲಾಗದ ಘಳಿಗೆಗಳಲ್ಲಿ ಸಹನೆಯೇ ಉಸಿರು, ತಾಳ್ಮೆಯೇ ಮಂತ್ರ. ನಮ್ಮನ್ನು ನಾವು ಸಹಿಸಿ ಬಾಳುವುದೇ ದೊಡ್ಡ ಸಾಧನೆ. ನಿಂತ ನೆಲ ನಡುಗಿ, ಹೊಸ ನೆಲ, ಹೊಸ ನೆಲೆಯ ಹುಡುಕಾಟದೊಟ್ಟಿಗೆ ಬರುವ ಅಗಾಧ ಆತಂಕಸಮುದ್ರವನ್ನು ಸಹನೆಯಿಂದಲೇ ಈಜಬೇಕು. ತಾಳ್ಮೆ, ಸಹನೆಯಿಲ್ಲದೆ ಕಲಿಕೆಯಾಗಲಿ, ಬೆಳವಣಿಗೆಯಾಗಲಿ, ಸಂಬಂಧಗಳ ಪೋಷಣೆಯಾಗಲಿ ಸಾಧ್ಯವಿಲ್ಲ. ಒಟ್ಟಿನಲ್ಲಿ ಬದುಕಿನ ಅನೇಕ ವಿಷಯಗಳಿಗೆ ಅನ್ವಯಿಸುವ 'ಮಧ್ಯಮ ಮಾರ್ಗ' ಸಹನೆಗೂ ಅನ್ವಯಿಸುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.