ADVERTISEMENT

ಫೆಬ್ರುವರಿ 15 ವಿಶ್ವ ಏಕಾಂಗಿ ದಿನ: ಒಂಟಿತನಕ್ಕೂ ಒಂದು ದಿನ!

ಕೆ.ಎಸ್.ಗಿರೀಶ್
Published 15 ಫೆಬ್ರುವರಿ 2020, 11:54 IST
Last Updated 15 ಫೆಬ್ರುವರಿ 2020, 11:54 IST
   

‘ಬಿಕ್ಕಳಿಸುವ ಎದೆಯೊಳಗೆ
ನಗುತಲಿದೆ ಮಡಿದ ಕವನ‌
ಒಂಟಿತನದ ಗುರುವೇ ಒಲವೇ’

ಇದು ಕವಿಯೊಬ್ ಕಂಡುಕೊಂಡ ಸತ್ಯ. ಇದಕ್ಕೆ ಪೂರಕ ಎಂಬಂತೆ ಒಂಟಿತನದ ಜಾಗೃತಿ ದಿನವನ್ನು ಪ್ರೇಮಿಗಳ ದಿನದ ನಂತರದ ದಿನವಾಗಿ (ಫೆ. 15) ಇಂಗ್ಲೆಂಡ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಪ್ರೇಮ ವೈಫಲ್ಯದಿಂದ ಜರ್ಜರಿತವಾದ, ಒಂಟಿಯಾದ ಮನಸ್ಸಿಗೊಂದು ಸಾಂತ್ವನ ಹೇಳುವ ದಿನವಾಗಿಯೂ ಇದನ್ನು ಪರಿಗಣಿಸಲಾಗುತ್ತಿದೆ. ನೀವು ಒಂಟಿಯಲ್ಲ, ನೀವೊಬ್ಬರೇ ಒಂಟಿಯಲ್ಲ. ನಿಮ್ಮ ಹಾಗೇ ಅನೇಕರು ಈ ಭುವಿಯ ಮೇಲೆ ಒಂಟಿಯಾಗೇ ಇದ್ದಾರೆ ಎಂದು ಹೇಳಿ, ಒಂಟಿ ಅಂದುಕೊಂಡ ಮನಸ್ಸಿಗೊಂದು ಒಂದಿಷ್ಟು ಸಮಾಧಾನ ತರುವ ಪ್ರಯತ್ನ ಈ ದಿನಾಚರಣೆಯ ಹಿಂದಿದೆ.

ಒಂಟಿತನ ಇತ್ತೀಚೆಗೆ ನಮ್ಮ ಸಂಸ್ಕೃತಿಯಲ್ಲೂ ಮಗುಮ್ಮಾಗಿ ಪ್ರವೇಶ ಪಡೆದಿದೆ. ಪ್ರೇಮ ಸಂಬಂಧಗಳು ವಿಫಲಗೊಂಡಾಗ ಭಗ್ನ ಪ್ರೇಮಿಯ ಮನಸ್ಸಿನ ತವಕ, ತಲ್ಲಣಗಳನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ. ‘ಬಂಜೆ ಬೇನೆಯರಿಯಳೇ?’ ಎಂಬ ವಚನದ ಸಾಲಿನಂತೆ ಒಂಟಿತನದ ನೋವು ಅದನ್ನು ಅನುಭವಿಸಿದವರಿಗೇ ಗೊತ್ತು.

ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದವಳು/ನು ಬೇರೊಬ್ಬನ/ಳ ಕೈ ಹಿಡಿದು ಸಪ್ತಪದಿ ತುಳಿದು ಹೊರಟಾಗ ಒಬ್ಬಂಟಿಯಾಗಿ ಉಳಿದ ಹೃದಯ ಮರುಭೂಮಿಯಂತೆ ಕಾಣುತ್ತದೆ. ಅಲ್ಲೊಂದು ಮಳೆ ಬಂದು, ಹಚ್ಚ ಹಸಿರು ಮೂಡದೇ ಇದ್ದರಂತೂ ಇಡೀ ಬಾಳು ಒಂಟಿತನದ ದುನಿಯಾದಲ್ಲೇ ಕಳೆದು ಹೋಗುತ್ತದೆ.

ADVERTISEMENT

ಅನಿವಾರ್ಯವಾಗಿ ದಾಂಪತ್ಯ ಮುರಿದು ಬಿದ್ದಾಗ ಎದುರಾಗುವ ಒಂಟಿತನ ನಿಜಕ್ಕೂ ವರ್ಣಿಸಲು ಅಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಒಂಟಿತನವನ್ನು ಹೆಚ್ಚಿಸುತ್ತಿವೆ. ನಾಲ್ಕು ದಿನದ ಬದುಕಿನಲ್ಲಿ ಹೊಂದಿಕೆ ಎಂಬುದೇ ಕನಸಾಗಿರುವ ಈ ಹೊತ್ತಿನಲ್ಲಿ ಒಂಟಿತನ ಹಲವರಿಗೆ ಅನಿವಾರ್ಯವಾಗಿ ಕಾಡುತ್ತಿದೆ.

ಅರ್ಥ ಮಾಡಿಕೊಳ್ಳುವ ಒಂದು ಮನಸ್ಸಿಗಾಗಿ ಎಲ್ಲರೂ ಹಾತೊರೆಯುತ್ತಾರೆ.

ಅದೇ ಮನಸ್ಸು ಕಿರಿಕಿರಿಯಾದರೆ? ಬೇಡವೇ ಬೇಡ ಈ ಸಂಬಂಧ ಎಂದು ಕಡಿದುಕೊಳ್ಳುವುದಕ್ಕೆ ಸಹಿಸಿಕೊಳ್ಳುವ ಗುಣ ಕಾಣೆಯಾಗುತ್ತಿರುವುದೇ ಕಾರಣ ಎಂದು ಹಿರಿಯರು ಸುಲಭವಾಗಿ
ವಿಶ್ಲೇಷಿಸುತ್ತಾರೆ. ಆದರೆ, ಮನಸ್ಸಿನೊಳಗೆ ಅನುಭವಿಸುವ ಯಾತನೆಗಿಂತ ಒಂಟಿಯಾಗಿರುವುದೇ ಮೇಲು ಎಂದು ಅನ್ನಿಸಿದಾಗ ಅನಿವಾರ್ಯವಾಗಿ ಸಂಬಂಧ ಕಡಿದುಕೊಳ್ಳುವ ದಿಟ್ಟ ನಿರ್ಧಾರಕ್ಕೆ ಬರುತ್ತಾರೆ.

ಎಲ್ಲ ಇದ್ದರೂ ಏಕಾಂಗಿ!: ಒಂಟಿತನ ಕೇವಲ ಭಗ್ನ ಪ್ರೇಮಿಗಳು, ವಿಚ್ಛೇದಿತರಲ್ಲೇ ಇರುವುದಿಲ್ಲ. ಕುಟುಂಬದ ಸದಸ್ಯರಿದ್ದರೂ ಹಲವು ಮಂದಿ ಒಂಟಿತನದ ಬಂದಿಖಾನೆಯಲ್ಲೇ ಕಾಲದೂಡುತ್ತಿರುತ್ತಾರೆ. ಅರ್ಥ ಮಾಡಿಕೊಳ್ಳುವವರು ಸಿಗದಿದ್ದಾಗ, ನಮ್ಮ ಮಾತಿಗೆ, ಬಯಕೆಗೆ ಸ್ಪಂದನೆ
ವ್ಯಕ್ತವಾಗದೇ ಇದ್ದಾಗ ಅನಿವಾರ್ಯವಾಗಿ ಒಂಟಿತನದ ಕಡೆಗೆ ಮನಸ್ಸು ದೂಡುತ್ತದೆ. ‌
ಕೆಲವೊಮ್ಮೆ ಈ ಪರಿಯ ಒಂಟಿತನ ಮನಸ್ಸಿನ ಸಮಸ್ಯೆಯಾಗಿಯೂ ಪರಿಣಮಿಸಬಹುದು. ಖಿನ್ನತೆ ಯೆಂಬ ಪೆಡಂಭೂತ ಮನಸ್ಸಿನೊಳಗೆ ಆಕ್ರಮಿ ಸಿದಾಗ ಎಲ್ಲ ಇದ್ದರೂ ಯಾರೂ ಇಲ್ಲದವರಂತೆ ಹಳಹಳಿಸಬಹುದು.

ಕುಟುಂಬವೇ ಆಗಲಿ, ಕಚೇರಿಯೇ ಆಗಲಿ, ಸ್ನೇಹಿತರ ಬಳಗವೇ ಆಗಲಿ, ಎಲ್ಲರ ಭಾವನೆಗಳಿಗೂ ಒಂದಿಷ್ಟು ಬೆಲೆಕೊಟ್ಟಾಗ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು.

ಒಂಟಿತನದಲ್ಲೂ ಸುಖವಿದೆ!

ಒಂಟಿತನ ಅಸಾಧ್ಯವಾದ ಯಾತನೆ ನೀಡುತ್ತದೆ ಎಂಬುದು ಒಂದು ಕಡೆಯಾದರೆ, ಆ ಒಂಟಿತನದಲ್ಲೂ ಅದರದೇ ಆದ ಸುಖ ಇದೆ ಎಂಬುದು ಕೂಡ ಅನುಭವಿಸಿದವರಿಗೆ ಗೊತ್ತು.
ಬೇಕೆಂದ ಕಡೆ ಸುತ್ತಾಡುವ, ಬೇಕೆನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಇಲ್ಲಿದೆ.

ಮೊಬೈಲ್‌ನಲ್ಲಿ ಒಳ್ಳೆಯ ಸಂಗೀತ ಹಾಕಿಟ್ಟು, ನಿದ್ದೆಗೆ ಜಾರಿದ ಮೇಲೂ ಮೊಬೈಲ್‌ ಸ್ವಿಚ್‌ ಆಫ್‌ ಆಗುವವರೆಗೂ ಅದೇ ಸಂಗೀತವೇ ಆ ಮನಸ್ಸಿಗೆ ಎಷ್ಟೋ ಬಾರಿ ಜತೆಯಾಗಿರುತ್ತದೆ. ಇಂತಹ ಸುಖ ಜಂಟಿಯಾಗಿ ಇರುವಾಗ ಸಿಗದು ಎಂಬುದು ಅವರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.