ADVERTISEMENT

ಸ್ಟ್ಯಾಂಡ್ ಅಪ್ ಕಾಮಿಡಿ

ಎಂ.ಎಸ್.ವಿದ್ಯಾ
Published 28 ಮಾರ್ಚ್ 2020, 19:30 IST
Last Updated 28 ಮಾರ್ಚ್ 2020, 19:30 IST
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ದಸರೆಯಲ್ಲಿ ಜನಪದ ಸಿರಿ ವಾಗ್ಮಿ ಸುಧಾ ಬರಗೂರು ಮಾತನಾಡಿದರು- PHOTO / SAVITHA B R
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ದಸರೆಯಲ್ಲಿ ಜನಪದ ಸಿರಿ ವಾಗ್ಮಿ ಸುಧಾ ಬರಗೂರು ಮಾತನಾಡಿದರು- PHOTO / SAVITHA B R   

ಇಂಗ್ಲಿಷ್‌ ಮೋಹದ ಹೊಸ ಪೀಳಿಗೆಯಲ್ಲಿ stand up comedyಗೆ ವಿಶಿಷ್ಟ ಸ್ಥಾನವಿದೆ. ಅಲ್ಲಿನ ಕಾಮಿಡಿಯನ್ನರು ವಿಶ್ವವಿಖ್ಯಾತರು. ಅದೀಗ ಕನ್ನಡದಲ್ಲೂ ಫೇಮಸ್ಸೇ. ಕನ್ನಡದಲ್ಲೂ ಕಾಮಿಡಿ ಮಾತಿನ ಮಲ್ಲರ ದೊಡ್ಡ ಪಡೆಯೇ ಇದೆ. ಕನ್ನಡ ನಾಡಿನ ಮೂಲೆ ಮೂಲೆಗಳಲ್ಲೂ ಈ ಹಾಸ್ಯೋತ್ಸವ ಮಲ್ಲರು ‘ಸ್ಟಾರ್‌ ವ್ಯಾಲ್ಯೂ’ ಪಡೆದಿದ್ದಾರೆ.

ಜನಸಮೂಹದ ಮುಂದೆ ನಿಂತು ಅವರಲ್ಲೊಬ್ಬರಂತೆ ನಟಿಸುತ್ತಲೇ ಮಾತಿನ ಹೊಳೆ ಹರಿಸುವ ವಿಶಿಷ್ಟ ವಿದ್ಯೆ– ಸ್ಟ್ಯಾಂಡ್ ಅಪ್ ಕಾಮಿಡಿ. ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾದದ್ದು ದೆಹಲಿ, ಮುಂಬೈಗೆ ಬರಲು ತಡವಾಗಲಿಲ್ಲ. ಅಲ್ಲಿಂದ ದಕ್ಷಿಣಕ್ಕೂ ಬಂತು. ಆದರೆ, ದಕ್ಷಿಣದವರಲ್ಲಿ ಇದೇನೂ ಹೊಸತಲ್ಲ ಎನ್ನುತ್ತದೆ ಚರಿತ್ರೆ.

16-17ನೇ ಶತಮಾನದಲ್ಲಿ ‘ಚಾಕ್ಯಾರ್‌ಕೂತು’ ಎನ್ನುವ ಕಲಾಪ್ರಕಾರ ತಿರುವನಂತಪುರಂ, ದಕ್ಷಿಣ ಕೇರಳದಲ್ಲಿ ಜನಪ್ರಿಯವಾಗಿತ್ತು. ಈಗಿನ ಸ್ಟ್ಯಾಂಡ್ ಅಪ್ ಕಾಮಿಡಿಯ ಎಲ್ಲ ಗುಣಲಕ್ಷಣಗಳನ್ನೂ ಹೊಂದಿತ್ತು. ಇಲ್ಲಿ ಮಾತುಗಾರನ ಸೃಜನಶೀಲತೆ ಮತ್ತು ಪ್ರಯೋಗಶೀಲತೆಗೆ ಹೆಚ್ಚು ಒತ್ತು.

ADVERTISEMENT

ಯಕ್ಷಗಾನ ಬಯಲಾಟದಲ್ಲಿ ಹಾಸ್ಯಗಾರ ಆಗಿರುವ ‘ಹನುಮನಾಯಕ’ನ ವಿನೋದವೂ ಸ್ಟ್ಯಾಂಡ್‌ ಅಪ್‌ ಹಾಸ್ಯವೇ. ಪೌರಾಣಿಕ, ಐತಿಹಾಸಿಕ ಕಥೆಗಳ ಮಧ್ಯೆಯೇ ಸಮಕಾಲೀನ ವಿಷಯಗಳನ್ನು ವ್ಯಂಗ್ಯ ಮಾಡುವ ಕಲೆ ಅವನಿಗೆ ಕರತಲಾಮಲಕ. ಹಿಂದಿ, ಮರಾಠಿ, ಗುಜರಾತಿ, ತಮಿಳು ಭಾಷೆಗಳ ಜಾಯಮಾನದಲ್ಲಿ ಹುದುಗಿರುವ ಹಾಸ್ಯಪ್ರಜ್ಞೆಗೆ ಹೋಲಿಸಿದರೆ ಕನ್ನಡದಲ್ಲಿ ಹಾಸ್ಯ ಕಡಿಮೆಯೇ. ಆದರೆ, ನಾಲ್ಕೈದು ದಶಕಗಳಿಂದ ಕನ್ನಡದಲ್ಲಿ ಹಾಸ್ಯವಾಚಾಳಿಗಳ ಜನಪ್ರಿಯತೆ ಹೆಚ್ಚಿದೆ. ಹಾಸ್ಯೋತ್ಸವ, ಹರಟೆಗಳು ಈಗ ಸಾಂಸ್ಕೃತಿಕ ಕಾರ್ಯಕ್ರಮದ ಅವಿಭಾಜ್ಯ ಅಂಗ. ಎಂ.ಎಸ್‌. ನರಸಿಂಹಮೂರ್ತಿ, ವೈ.ಎನ್‌. ಗುಂಡೂರಾವ್‌, ಡುಂಡಿರಾಜ್‌, ಗಂಗಾವತಿ ಪ್ರಾಣೇಶ್, ರಿಚರ್ಡ್‌ ಲೂಯಿಸ್‌, ಸುಧಾ ಬರಗೂರು, ಕೃಷ್ಣೇಗೌಡ, ಅಸಾದುಲ್ಲಾ ಬೇಗ್‌– ಹೀಗೆ ಕನ್ನಡದ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್ನರ ಪಟ್ಟಿ ದೊಡ್ಡದಿದೆ.

ಹಿಂದಿಯ ಪ್ರಖ್ಯಾತ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಜಾನಿ ಲಿವರ್‌. 1986ರಲ್ಲಿ ಈತ ಶುರು ಮಾಡಿದ ಕಾಮಿಡಿ ಸ್ಟ್ಯಾಂಡ್‌ ಅಪ್‌ ಇವತ್ತು ಹಿಂದಿಯಲ್ಲಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಈಗ ಕುನಾಲ್‌ ಕಾಮ್ರಾ ಬಹುದೊಡ್ಡ ಹೆಸರು. ಪ್ರಭುತ್ವವನ್ನು ಎದುರು ಹಾಕಿಕೊಂಡು ಜನಪ್ರಿಯತೆ ಏರಿಸಿಕೊಂಡವರಲ್ಲಿ ಈತ ಪ್ರಮುಖ. ಅಮಿತ್‌ ಟಂಡನ್‌, ಕಪಿಲ್‌ ಶರ್ಮಾ ಎಲ್ಲರೂ ಮಹಾತಾರೆಯರು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಸಂಸದ ಶಶಿ ತರೂರ್‌ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿರುವುದು ವಿಶೇಷ.

ನಾಟಕಗಳಿಗೂ ಸ್ಟ್ಯಾಂಡ್‌ ಅಪ್ ಕಾಮಿಡಿಗಳಿಗೂ ಸಾಕಷ್ಟು ವ್ಯತ್ಯಾಸಗಳುಂಟು. ನಾಟಕಗಳಲ್ಲಿ ಹಾಸ್ಯ ಪಾತ್ರ ಮಾಡುವವನು ಒಂದು ಪಾತ್ರಕ್ಕೆ ಜೀವ ಕೊಡುತ್ತಾ ಮಾತುಗಳನ್ನು ಕಲಿತು ಪ್ರೇಕ್ಷಕರನ್ನು ನಗಿಸುತ್ತಾನೆ. ಆದ್ರೆ ಸ್ಟ್ಯಾಂಡ್‌ ಅಪ್ ಕಾಮಿಡಿಯಲ್ಲಿ ನಗಿಸುವಾತ (ಪರ್‌ಫಾರ್ಮರ್‌) ಏಕಪಾತ್ರದಲ್ಲಿ ಅಭಿನಯಿಸುತ್ತಲೇ ಪ್ರೇಕ್ಷಕರ ಜೊತೆ ಸಂಭಾಷಣೆಯ ಭ್ರಮೆ ಹುಟ್ಟಿಸುತ್ತಾನೆ.ಕನ್ನಡ ವೃತ್ತಿರಂಗಭೂಮಿಯ ಪ್ರಮುಖ ಮಾತುಗಾರ ಮಾಸ್ಟರ್ ಹಿರಣ್ಣಯ್ಯ. ಇವರದು ನಾಟಕವಲ್ಲ, ಏಕವ್ಯಕ್ತಿ ಪ್ರದರ್ಶನ ಎನ್ನುವವರೂ ಇದ್ದಾರೆ. ಮಾತೇ ಬಂಡವಾಳವಾದರೂ ಅವರ ಜನಪ್ರಿಯತೆ ದೊಡ್ಡದು.

ಸ್ಟ್ಯಾಂಡ್‌ ಅಪ್‌ ಕಾಮಿಡಿಯ ವೈಶಿಷ್ಟ್ಯಗಳಲ್ಲಿ ಒಂದು– ತಮ್ಮನ್ನು ತಾವೇ ಹಾಸ್ಯ ಮಾಡಿಕೊಂಡು ನಗುವುದು. ಹೀಗೆ ಮಾಡಿದಾಗ ಪ್ರೇಕ್ಷಕರಿಗೆ ತಮ್ಮನ್ನು ಹಾಸ್ಯ ಮಾಡಿದರೂ ನೋವುಂಟಾಗುವುದಿಲ್ಲ.ಹಾಸ್ಯ ಕಲಾವಿದನಿಗೆ ಸಮಯ ಸ್ಫೂರ್ತಿ, ಭಾಷೆಯ ಮೇಲೆ ಹಿಡಿತ, ವಿಷಯಜ್ಞಾನ ಎಲ್ಲವೂ ಮುಖ್ಯ.

ಇಂಗ್ಲಿಷ್‌ನಸ್ಟ್ಯಾಂಡ್‌ ಅಪ್ ಕಾಮಿಡಿಯಲ್ಲಿ ಒಬ್ಬ ಪೀಠಿಕೆ ಹಾಕುತ್ತಾನೆ. ನಂತರ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಕಲಾವಿದರು ಭಾಗವಹಿಸುತ್ತಾರೆ. ಕೆಲವರು ತಂಡಗಳನ್ನು ಮಾಡಿಕೊಂಡಾಗ ನಾಲ್ಕರಿಂದ ಆರು ಜನ ಇರುತ್ತಾರೆ.

ನೆರೆದಿರುವ ಪ್ರೇಕ್ಷಕರು ಯಾವ ಅಕ್ಷರದಿಂದ ಪ್ರಾರಂಭ ಮಾಡಿ ಎನ್ನುತ್ತಾರೋ ಅದರಿಂದ ಪ್ರಾರಂಭಿಸಿ ಮುಂದುವರಿಸುವುದು; ಹಾಗೆ ಅಕ್ಷರಗಳನ್ನು ಬಳಸಿಕೊಳ್ಳುತ್ತಲೇ ಕಥೆ ಕಟ್ಟುವಂತಹ ಪ್ರತಿಭೆ ಒಬ್ಬ ಸ್ಟ್ಯಾಂಡ್‌ ಅಪ್‌ ಕಲಾವಿದನಿಗೆ ಇರಬೇಕು.ಕೆಲವು ಸಲ ವಿಷಯವನ್ನು ಪ್ರೇಕ್ಷಕರೇ ಸೂಚಿಸುತ್ತಾರೆ.ಸಂಭಾಷಣೆಗಳನ್ನು ಚೀಟಿಯಲ್ಲಿ ಬರೆದು ವೇದಿಕೆಯಲ್ಲಿಟ್ಟಿರುತ್ತಾರೆ. ಇಬ್ಬರು ಕಲಾವಿದರು ಅದನ್ನ ಬಳಸಿಕೊಂಡು ಪಾತ್ರ, ಸ್ಥಳ, ಸನ್ನಿವೇಶ ಸೃಷ್ಟಿಸಬೇಕು. ಸಂಭಾಷಣೆ ಮೂಲಕ ಹಾಸ್ಯದ ಹೊಳೆ ಹರಿಸುತ್ತಾರೆ. ಇದು ದೊಡ್ಡ ಸವಾಲೇ ಸರಿ.

ಬೆಂಗಳೂರಿನಲ್ಲಿ ತಳವೂರಿರುವ ಹಿಂದಿ, ಇಂಗ್ಲಿಷ್ ಭಾಷೆಗಳ ಸ್ಟ್ಯಾಂಡ್‌ ಅಪ್‌ಗಳಿಗೆ ಸ್ಪರ್ಧೆ ನೀಡುವಂತೆ ಈಗ ಕನ್ನಡದ ಸ್ಟ್ಯಾಂಡ್‌ ಅಪ್‌ ಕಾಮಿಡಿ ತಂಡಗಳೂ ಇವೆ. ಲೋಲ್‌ಬಾಗ್, ನಮ್ದುಕೆ, ರಾಸ್ಯಂ, ವನ್ ಅಂಡ್ ಹಾಫ್, ಮಯೂರ್– ಹೀಗೆ ಈ ಜನಪ್ರಿಯ ತಂಡಗಳ ಹೆಸರೂ ವಿಭಿನ್ನ. ‘ಓಪನ್ ಮೈಕ್’ ಮಾದರಿಯಲ್ಲಿ ಈ ತಂಡಗಳು ಹೊಸಬರನ್ನು ವೇದಿಕೆಗೆ ಆಹ್ವಾನಿಸಿ, ಪ್ರಯೋಗಕ್ಕೆ ಒಡ್ಡಿಕೊಳ್ಳುವ ಅವಕಾಶ ನೀಡುವುದಿದೆ. ಯಶಸ್ವಿಯಾದವರು ಮುಂದೆ ಸ್ವಂತ ಕಾರ್ಯಕ್ರಮ ನೀಡುತ್ತಾರೆ. ರಂಗಭೂಮಿಯಿಂದ ಸುಂದರ್ ವೀಣಾ ಇತ್ತೀಚೆಗೆ ಸ್ಟ್ಯಾಂಡ್‌ ಅಪ್ ಕಾಮಿಡಿಗೆ ಪ್ರವೇಶ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ಸ್ಟ್ಯಾಂಡ್‌ ಅಪ್ ಕಲಾವಿದೆಯರ ಸಂಖ್ಯೆ ಏಕೆ ಕಡಿಮೆಯಿದೆ? ಪ್ರಾಯಶಃ ಹಾಸ್ಯಕ್ಕೂ ಆಶ್ಲೀಲತೆಗೂ ತೆಳುವಾದ ಗೆರೆಯಿರುವುದು ಒಂದು ಕಾರಣ ಇರಬಹುದು. ನಮ್ಮ ಹೆಣ್ಣುಮಕ್ಕಳು ಬೆಳೆದಿರುವ ಪರಿಸರ, ಮನೋವೈಜ್ಞಾನಿಕವಾಗಿ, ಸಾಮಾಜಿಕವಾಗಿ ವಿವಿಧ ಕಟ್ಟುಪಾಡುಗಳು, ಹಾಸ್ಯಪ್ರಜ್ಞೆಯನ್ನು ಬೆಳೆಸುವಲ್ಲಿ ಬೇಕಾಗುವ ಲೌಕಿಕ ವ್ಯವಹಾರದ ಸಂಪರ್ಕ ಕೊರತೆ ಕಾರಣ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.