ಒಂದೇ ಏಟಿಗೆ ಎರಡು ಮೂರು ಕೆಲಸ ಮಾಡುವವನು ನಿಸ್ಸೀಮ ಎಂದುಕೊಂಡಿದ್ದೇವೆ. ಆದರೆ, ಮನೋವೈದ್ಯಕೀಯ ಸಂಗತಿಗಳು ನೆಮ್ಮದಿಯ ನಾಳೆಗೆ ಮಲ್ಟಿಟಾಸ್ಕಿಂಗ್ ಎಡರು ಎಂದೇ ಹೇಳುತ್ತಿವೆ. ಅದರಿಂದ ಕಳಚಿಕೊಂಡು ‘ಮೋನೊಟಾಸ್ಕಿಂಗ್’ಗೆ ಮರಳುವುದೇ ಸರಿ ದಾರಿ.
‘ಮಲ್ಟಿಟಾಸ್ಕಿಂಗ್’ ಅಥವಾ ಬಹುಕಾರ್ಯ ಎನ್ನುವುದು ಹೊಸಕಾಲದಲ್ಲಿ ಪದೇ ಪದೇ ಕಿವಿಮೇಲೆ ಬೀಳುವ ನುಡಿಗಟ್ಟು. ಜಗಜ್ಜಾಣರನ್ನು ಬಣ್ಣಿಸಲು ಕೂಡ ಇದನ್ನು ಉಪಯೋಗಿಸುವುದನ್ನು ನೋಡುತ್ತೇವೆ. ಒಂದೇ ಏಟಿಗೆ ಎರಡು ಮೂರು ಕೆಲಸ ಮಾಡುವವನ್ನು ಮಾದರಿ ಎನ್ನುವಂತೆ ತೋರಿಸುವವರ ಸಂಖ್ಯೆ ದೊಡ್ಡದು. ವೈದ್ಯ ವಿಜ್ಞಾನ ಮಾತ್ರ ಇದು ಸುಳ್ಳು ಎನ್ನುತ್ತಿದೆ.
‘ಮಲ್ಟಿಟಾಸ್ಕಿಂಗ್’ನಲ್ಲಿ ಎರಡು ಬಗೆ. ಒಂದು, ಒಂದಾದ ಮೇಲೆ ಒಂದರಂತೆ ಕೆಲಸಗಳನ್ನು ಮಾಡುವುದು. ಇನ್ನೊಂದು, ಏಕಕಾಲದಲ್ಲಿ ಎರಡು ಮೂರು ಕೆಲಸಗಳನ್ನು ಮಾಡುವುದು.
ಹಿಂದಿನ ಕಾಲದಲ್ಲಿ ಒಂದೇ ಸಲಕ್ಕೆ ಹಲವು ಕಾರ್ಯಗಳ ಮಾಡುವವರನ್ನು ಮೆಚ್ಚುತ್ತಿದ್ದರು. ಅದು ಸಮಯ ಉಳಿಸುವ ಜಾಣ್ಮೆ ಎಂಬ ಭಾವನೆ ಇತ್ತು. ಈ ಕಾಲಘಟ್ಟದಲ್ಲಿ ಒಂದೇ ಹೊತ್ತಿಗೆ ಎರಡು ಮೂರು ಕೆಲಸ ಮಾಡುವುದು ದೈಹಿಕ ಚಟುವಟಿಕೆಗೆ ಅಷ್ಟೆ ಸೀಮಿತವಾಗಿಲ್ಲ, ಮಾನಸಿಕವಾಗಿಯೂ ನಿಕಷಕ್ಕೆ ಒಡ್ಡುತ್ತಿದೆ. ಸಂಶೋಧನೆಗಳ ಪ್ರಕಾರ, ಜಗತ್ತಿನ ಶೇ 3ರಷ್ಟು ಜನರಿಗೆ ಮಾತ್ರ ಏಕಕಾಲದಲ್ಲಿ ಬಹುಕಾರ್ಯ ಮಾಡುವಂತಹ ಮೆದುಳಿನ ಸಾಮರ್ಥ್ಯ ಇರುತ್ತದೆ. ಉಳಿದವರೆಲ್ಲ ಕಾಲದ ಆಮಿಷಗಳ ಮಿಕಗಳು.
ಒಂದಾದ ಮೇಲೆ ಒಂದರಂತೆ ಸತತವಾಗಿ ಕೆಲಸ ಮಾಡುವುದನ್ನು ‘ಸೀಕ್ವೆನ್ಷುಯಲ್ ಮಲ್ಟಿಟಾಸ್ಕಿಂಗ್’ (ಸರಣಿ ಬಹುಕಾರ್ಯ ಎನ್ನಬಹುದು) ಎನ್ನುತ್ತೇವೆ. ಉದಾಹರಣೆಗೆ: ಒಲೆಯ ಮೇಲೆ ಬಾಣಲಿ ಇಟ್ಟು, ಅದು ಕಾಯುವಷ್ಟರಲ್ಲಿ ಒಗ್ಗರಣೆಗೆ ಬೇಕಾದ ಪದಾರ್ಥ ಹೊಂಚಿಕೊಳ್ಳುವುದು ಅಥವಾ ತರಕಾರಿ ಹೆಚ್ಚಿಕೊಳ್ಳುವುದು. ಏಕಕಾಲದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವುದನ್ನು ‘ಸೈಮಲ್ಟೇನಿಯಸ್ ಮಲ್ಟಿಟಾಸ್ಕಿಂಗ್’ (ಒಂದೇ ಸಲ ಬಹುಕಾರ್ಯಗಳನ್ನು ಮಾಡುವುದು) ಎಂದು ಕರೆಯುತ್ತೇವೆ. ಉದಾಹರಣೆಗೆ: ಟೀವಿ ನೋಡುತ್ತಾ ಬಟ್ಟೆ ಹೊಲಿಯುವುದು. ಇಂತಹ ಕೆಲಸ ಮಾಡುವಾಗ ಎರಡು ಜ್ಞಾನೇಂದ್ರಿಯಗಳು ಮೆದುಳಿಗೆ ಏಕಕಾಲದಲ್ಲಿ ಸಂದೇಶ ಕಳುಹಿಸುತ್ತಿರುತ್ತವೆ. ಮೆದುಳಿನಿಂದ ಅಂಗಾಂಗಗಳಿಗೆ ಮರುಸಂದೇಶವೂ ಹೋಗುತ್ತಿರುತ್ತದೆ. ಇವೆರಡೂ ಅಲ್ಲದೆ ‘ಸ್ವಿಚಿಂಗ್ ಟಾಸ್ಕ್ಸ್’ ಎಂಬ ಇನ್ನೊಂದು ಬಗೆಯ ಬಹುಕಾರ್ಯ ನಡೆಯುತ್ತದೆ. ಉದಾಹರಣೆಗೆ: ಅಡುಗೆ ಮಾಡುತ್ತಿರುವಾಗ, ಫೋನ್‌ನಲ್ಲಿ ಇನ್ಯಾವುದೋ ವಿಷಯದ ಚರ್ಚೆ ಮಾಡುತ್ತಾ ಅದಕ್ಕೆ ಸಂಬಂಧಿಸಿದ್ದನ್ನು ಮನಸ್ಸು ಹುಡುಕುವುದು. ಈ ರೀತಿಯ ಕೆಲಸಗಳು ಎರಡೇ ಇರಬೇಕು ಎಂದೇನೂ ಇಲ್ಲ. ಮೂರ್ನಾಲ್ಕು ಕೂಡ ಆಗಿರಬಹುದು.
ಟೀವಿ ನೋಡುತ್ತಲೇ ಕಾಳು ಬಿಡಿಸುವುದನ್ನು ಸಮಯ ಉಳಿಸುವ ಜಾಣತನ ಎಂದೇ ನಾವು ಮೆಚ್ಚುತ್ತೇವೆ. ಇನ್ನು ಕೆಲವರಿಗೆ ಟೀವಿ ಒಂದನ್ನೇ ನೋಡುವುದು ಬೋರು. ಹೀಗಾಗಿ ಅದೇ ಹೊತ್ತಿಗೆ ಇನ್ಯಾವುದೋ ಕೆಲಸ ಮಾಡಿದ ಸಮಾಧಾನ. ‘ಮಲ್ಟಿಟಾಸ್ಕಿಂಗ್’ನಿಂದ ಹಲವು ಕೆಲಸಗಳನ್ನು ಚಕಚಕನೆ ಮಾಡಿ ಮುಗಿಸುವುದರಿಂದ ಸಮಯ ಉಳಿಯುತ್ತದೆನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ, ಮಾನವವಿಜ್ಞಾನ ಪರಿಣತರು ಇದನ್ನು ಅಲ್ಲಗಳೆಯುತ್ತಾರೆ. ಮನುಷ್ಯನ ಮೆದುಳು ಏಕಕಾಲದಲ್ಲಿ ಒಂದು ಕೆಲಸವನ್ನು ಮಾತ್ರ ಮಾಡಲಷ್ಟೆ ರೂಪುಗೊಂಡಿದೆ ಎನ್ನುವ ಸತ್ಯವನ್ನು ಅವರು ಮುಂದಿಡುತ್ತಾರೆ.
ಯಾವುದೇ ಕೆಲಸವನ್ನು ನಾವು ಮೂರು ಹಂತಗಳಲ್ಲಿ ಮಾಡುತ್ತೇವೆ. ಮೊದಲನೆಯದು, ಪ್ರಕ್ರಿಯೆ ಅರ್ಥಾತ್ ಇಡೀ ಕೆಲಸದ ನಿರ್ವಹಣೆಯ ಕ್ರಮ. ಎರಡನೆಯದು, ಗುರಿ ನಿಗದಿಪಡಿಸುವುದು ಹಾಗೂ ಅದನ್ನು ಪ್ರಕ್ರಿಯೆಯ ಕಾಲಾವಧಿಯ ಬದಲಾವಣೆಗೆ ತಕ್ಕಂತೆ ಮಾರ್ಪಡಿಸುವುದು. ಮೂರನೆಯದು, ಮೊದಲ ಎರಡೂ ಹಂತಗಳನ್ನು ಸಾಧಿಸಲು ಮಾಡುವ ಸರಣಿ ಚಟುವಟಿಕೆಗಳು. ಬರೆಯುವುದನ್ನೇ ಉದಾಹರಣೆಯಾಗಿ ನೋಡೋಣ. ಹಾಳೆಯ ಮೇಲೆ ಏನನ್ನೋ ಬರೆಯಬೇಕು ಎನ್ನುವುದು ಒಟ್ಟಾರೆ ಪ್ರಕ್ರಿಯೆ. ಬರೆಯುವ ವಿಷಯ ಯಾವುದು ಎನ್ನುವುದು ನಿಗದಿಪಡಿಸಿಕೊಳ್ಳುವ ಗುರಿ. ಪೆನ್ನನ್ನು ಹೇಗೆ ಹಿಡಿಯಬೇಕು, ಎಲ್ಲಿಂದ ಬರೆಯಬೇಕು, ಯಾವ ಪದ ಹಾಕಬೇಕು ಎನ್ನುವುದೆಲ್ಲ ಚಟುವಟಿಕೆಗಳು. ನಿರ್ದಿಷ್ಟವಾದ ಕೆಲಸಕ್ಕೆ ಇರುವ ಈ ಹಂತಗಳಿಗೆ ಮೆದುಳು ಸಮರ್ಪಕವಾಗಿ ಸ್ಪಂದಿಸುತ್ತದೆ. ಹೀಗಾಗಿ ಬರವಣಿಗೆ ಮುಗಿಸಿದ ಮೇಲೆ ಮನಸ್ಸಿಗೆ ಸಮಾಧಾನ ಸಿಗುತ್ತದೆ.
ಒಂದು ವೇಳೆ ಬರೆಯುವುದರ ಜತೆಗೆ ಯಾರ ಜತೆಗೋ ಪದೇ ಪದೇ ಫೋನ್‌ನಲ್ಲಿ ಮಾತನಾಡುತ್ತೇವೆ ಎಂದಿಟ್ಟುಕೊಳ್ಳಿ. ಆಗ ಒಂದು ಗುರಿ ಹಾಗೂ ಪ್ರಕ್ರಿಯೆಯಿಂದ ಇನ್ನೊಂದಕ್ಕೆ ಜಿಗಿಯುತ್ತಾ ಇರಬೇಕಾಗುತ್ತದೆ. ಮೆದುಳು ಹೀಗೆ ತನ್ನ ಕಾರ್ಯವನ್ನು ಬದಲಿಸಬೇಕಾದಾಗ ಕೆಲವು ಮೈಕ್ರೊ ಸೆಕೆಂಡ್‌ಗಳಷ್ಟು ಕಾಲಾವಕಾಶವನ್ನು ಸಹಜವಾಗಿಯೇ ಬಯಸುತ್ತದೆ. ‘ಗೋಲ್ ಶಿಫ್ಟಿಂಗ್’ ಹಾಗೂ ‘ರೂಲ್ ಆ್ಯಕ್ಟಿವೇಷನ್’ ಎಂಬ ಎರಡು ಪ್ರಕ್ರಿಯೆಗಳಲ್ಲಿ ಮೆದುಳು ಗೊಂದಲಕ್ಕೆ ಬೀಳುತ್ತದೆ. ಅದಕ್ಕೇ ಎಷ್ಟೋ ಸಲ ನಾವು ಫೋನ್‌ನಲ್ಲಿ ಮಾತನಾಡಿದ್ದನ್ನೇ ಹಾಳೆಯ ಮೇಲೆ ಬರೆದುಬಿಡುತ್ತೇವೆ. ಅಡುಗೆ ಮಾಡುತ್ತಾ ಮಾತನಾಡಿದರೆ, ತಿನಿಸು ಮಾಡುತ್ತಿರುವ ಸಂಗತಿಯನ್ನೇ ಫೋನ್‌ನಲ್ಲಿ ಹೇಳಿಬಿಡಬಹುದು. ‘ರೂಲ್ ಆ್ಯಕ್ಟಿವೇಷನ್’ಗೆ ಕೆಲವು ಮೈಕ್ರೋಸೆಕೆಂಡ್ ವಿಳಂಬ ಇರುತ್ತದೆ. ಇದರಿಂದಲೇ ‘ಮಲ್ಟಿಟಾಸ್ಕಿಂಗ್’ ಸಮಸ್ಯಾತ್ಮಕ ಎನಿಸುವುದು.
ಕಾರ್ಪೊರೇಟ್ ವಲಯದಲ್ಲಿ ‘ಮಲ್ಟಿಟಾಸ್ಕಿಂಗ್’ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಕೆಲವು ವಿದ್ಯಾರ್ಥಿಗಳೂ ಇದರ ಬಗೆಗೆ ಸಂಶೋಧನೆಗಳನ್ನು ನಡೆಸಿದ್ದಾರೆ. ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ ಎನ್ನುವುದೊಂದೇ ಲಾಭ. ಉಳಿದಂತೆ ಬರೀ ನಷ್ಟಗಳೇ ಎನ್ನುವುದು ಆ ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಒಂದೇ ಹೊತ್ತಿಗೆ ಎರಡು ಮೂರು ಕೆಲಸ ಮಾಡುವುದರಿಂದ ಕುಶಲತೆ ರೂಢಿಸಿಕೊಳ್ಳಲಾಗದು. ಕಲಿಕೆಯಲ್ಲೂ ಹಿಂದುಳಿಯಬೇಕಾಗುತ್ತದೆ. ಒಂದು ನಿರ್ದಿಷ್ಟ ಕೆಲಸವನ್ನು ಮಾಡಿದಾಗ ಕುಶಲತೆಯ ಸುಧಾರಣೆ, ಹೊಸ ವಿಷಯಗಳ ಕಲಿಕೆ ಎರಡೂ ಸಾಧ್ಯ. ಸದಾ ಕಾಲ ‘ಮಲ್ಟಿಟಾಸ್ಕಿಂಗ್’ ಮಾಡುತ್ತಲೇ ಇದ್ದರೆ ಗಮನ ಕೇಂದ್ರೀಕರಿಸುವ ವಿಷಯದಲ್ಲೂ ಸಮಸ್ಯೆ ಉದ್ಭವವಾಗುತ್ತದೆ. ಬರೆಯಲು, ಕಲಿಯಲು ‘ಮಲ್ಟಿಟಾಸ್ಕಿಂಗ್’ ತೊಡಕೇ ಆಗಿ ಪರಿಣಮಿಸುತ್ತದೆ.
ಏಕಕಾಲದಲ್ಲಿ ಬಹುಕಾರ್ಯವನ್ನು ದೀರ್ಘಾವಧಿ ಮಾಡುವವರಲ್ಲಿ ಮರೆಗುಳಿತನ ಕಾಣಿಸಿಕೊಳ್ಳುತ್ತದೆ. ಯಾವ ಕೆಲಸದಲ್ಲೂ ಪರಿಣತಿ ಸಾಧಿಸುವುದು ಸಾಧ್ಯವಾಗುವುದಿಲ್ಲ. ಇದು ವೃತ್ತಿ ಬದುಕಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಾಲಕ್ರಮೇಣ ಕಚೇರಿಯಲ್ಲಿ ಕೊಟ್ಟ ಕೆಲಸವನ್ನು ಪೂರೈಸುವುದೇ ಕಷ್ಟವಾಗುತ್ತದೆ. ಯಾಕೆಂದರೆ, ಮರೆವು ತೀವ್ರವಾಗುತ್ತಾ ಹೋದಂತೆ ಗುರಿ ನಿಗದಿ ಕಷ್ಟವಾಗುತ್ತದೆ. ಆತಂಕ ಕೂಡ ಕಾಡತೊಡಗುತ್ತದೆ.
ಈ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿವೆ. ಮನೆಯಲ್ಲಿ ಕುಳಿತು ಎಲ್ಲರೂ ಒಟ್ಟಿಗೆ ಊಟ ಮಾಡುವಾಗಲೂ ಮೊಬೈಲ್‌ನಲ್ಲಿ ಏನನ್ನೋ ‘ಬ್ರೌಸ್’ ಮಾಡುವುದು ಸಹಜ ಎಂಬಂತಾಗಿದೆ. ವಾಯುವಿಹಾರಕ್ಕೋ, ಜಾಗಿಂಗ್‌ಗೋ ಹೋಗುವಾಗ ಕಿವಿಗೆ ‘ಹ್ಯಾಂಡ್ಸ್‌ಫ್ರೀ’ ಸಿಕ್ಕಿಸಿಕೊಂಡು ಸಂಗೀತ ಕೇಳಲು ಶುರುವಿಟ್ಟುಕೊಳ್ಳುತ್ತೇವೆ. ಹೀಗೆಲ್ಲ ಮಾಡುವುದು ರೂಢಿಯಾಗಿದ್ದರೂ ಸರಿಯಲ್ಲ. ತ್ಯಜಿಸುವುದೇ ನೆಮ್ಮದಿಗೆ ದಾರಿ.
ಮನೋವೈದ್ಯರು ಈಗ ಇಂತಹ ಬಹುಕಾರ್ಯದ ವ್ಯಾಧಿಯಿಂದ ಜನರು ಹೊರಬರಬೇಕು ಎಂದೇ ಸೂಚಿಸುತ್ತಾರೆ. ಜಗತ್ತಿನಲ್ಲಿ ಶೇ 47ರಷ್ಟು ಜನ ಏಕಕಾಲದಲ್ಲಿ ಒಂದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದೆ, ಎರಡು ಮೂರು ವಿಷಯಗಳ ಬಗೆಗೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ಮನೋವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ. ಮಕ್ಕಳಲ್ಲಿ ಕಲಿಕೆಯ ಸಾಮರ್ಥ್ಯ ಕುಂಠಿತಗೊಳ್ಳುವಲ್ಲಿ ಬಹುಕಾರ್ಯದ ಪರಿಣಾಮ ಇದ್ದೇ ಇರುತ್ತದೆ. ದೊಡ್ಡವರಲ್ಲಿ ಮರೆಗುಳಿತನ ವ್ಯಾಪಕವಾಗುವ ಸಾಧ್ಯತೆಗೂ ಇದೇ ಕಾರಣ. ಹೀಗಾಗಿ ಅಂದುಕೊಂಡ ಕೆಲಸಗಳನ್ನೆಲ್ಲ ವ್ಯವಸ್ಥಿತವಾಗಿ ಯೋಜಿಸಿ ಮಾಡಬೇಕು. ಎಲ್ಲಕ್ಕೂ ಸಮಯ ನಿಗದಿ ಮಾಡಿಕೊಳ್ಳಬೇಕು. ಯಾವುದೋ ಪುಸ್ತಕ ಓದಬೇಕಿದ್ದರೆ, ಏಕಾಂತಕ್ಕೆ ಮೊರೆಹೋಗಬೇಕು. ಟೀವಿಯಲ್ಲಿ ಹಾಡು ಬರುತ್ತಿರುವ ಕಡೆ ಕುಳಿತು ಓದಿದರೆ ಅದು ತಲೆಗೆ ಹತ್ತುವುದಿಲ್ಲ. ಸುಮಾರು 40ರಿಂದ 45 ನಿಮಿಷ ಒಂದು ವಿಷಯದ ಮೇಲೆ ನಮಗೆ ಸತತವಾಗಿ ಗಮನ ನೀಡಲು ಸಾಧ್ಯ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಆ ಅವಧಿಯಲ್ಲಿ ಗಮನ ಕೇಂದ್ರೀಕರಿಸಿ ನಿರ್ದಿಷ್ಟ ಕೆಲಸ ಮಾಡಬೇಕು. ಅದಾದ ಮೇಲೆ ಹತ್ತು ಹದಿನೈದು ನಿಮಿಷ ಮೆದುಳಿಗೆ ವಿಶ್ರಾಂತಿ ನೀಡಬೇಕು.
‘ಪೋಮೊಡೋರೊ ಟೆಕ್ನಿಕ್’ ಎನ್ನುವುದನ್ನು ಎಷ್ಟೋ ಜನ ಅನುಸರಿಸುತ್ತಿದ್ದಾರೆ. ನಿರ್ದಿಷ್ಟ ಕೆಲಸದ ಮೇಲೆ 20–25 ನಿಮಿಷ ಗಮನ ಕೇಂದ್ರೀಕರಿಸುವುದು, ಅದಾದ ಮೇಲೆ 15–20 ನಿಮಿಷದಷ್ಟು ವಿರಾಮ– ಇದು ‘ಪೋಮೊಡೋರೊ ಟೆಕ್ನಿಕ್’. ಹೀಗೆ ಮಾಡುವುದರಿಂದ ಕೆಲಸ ಅಚ್ಚುಕಟ್ಟಾಗಿ ಆಗುತ್ತದೆ. ಕಲಿಕೆ, ಕುಶಲತೆಯೂ ಹೆಚ್ಚಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ರುಜುವಾತಾಗಿರುವ ಸಂಗತಿ.
‘ಮಲ್ಟಿಟಾಸ್ಕಿಂಗ್’ನಿಂದ ‘ಮೋನೊಟಾಸ್ಕಿಂಗ್’ಗೇ ಮನುಷ್ಯ ಕ್ರಮೇಣ ಮರಳಬೇಕು ಎಂದೇ ವೈದ್ಯವಿಜ್ಞಾನ ಹೇಳುತ್ತಿದೆ.ಹೊರೆ ಹೊರುತ್ತಿರುವ ಮೆದುಳಿನ ಹಿತದ ದೃಷ್ಟಿಯಿಂದ ಇದು ತುಂಬಾ ಮುಖ್ಯ. ಅಷ್ಟೇ ಅಲ್ಲ, ಸೃಜನಶೀಲ ಪ್ರಕ್ರಿಯೆಯಲ್ಲಿ ಒಂದು ಲಯವಿದೆ. ಬಹುಕಾರ್ಯಗಳು ಆ ಲಯವನ್ನು ಕೆಡಿಸುತ್ತವೆ. ಇದನ್ನು ಸೃಜನಶೀಲ ಪ್ರತಿಬಂಧಕ ನಡೆ ಎಂದೇ ಹೇಳಬೇಕಾಗುತ್ತದೆ. ಆ ಲಯ ಕಂಡುಕೊಳ್ಳಲು ಒಂದು ಸಮಯದಲ್ಲಿ ಒಂದೇ ಕೆಲಸ ಮಾಡುವುದು ಲೇಸು.
(ಲೇಖಕರು ಮನೋತಜ್ಞೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.