ADVERTISEMENT

ಮಕ್ಕಳ ದಿನಾಚರಣೆ ವಿಶೇಷ: ಕೋವಿಡ್‌ ತಬ್ಬಲಿಗೆ ಸಮಾಜವೇ ಪೋಷಕ...

ಎಂ.ಎನ್.ಯೋಗೇಶ್‌
Published 14 ನವೆಂಬರ್ 2021, 2:35 IST
Last Updated 14 ನವೆಂಬರ್ 2021, 2:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಶ್ರಯದ ಅವಶ್ಯಕತೆಯುಳ್ಳ ಮಗುವಿಗೆ ಈ ಕೋರ್ಟ್‌ ಪೋಷಕ ಸ್ಥಾನದಲ್ಲಿ ನಿಲ್ಲುತ್ತದೆ...

ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ ಮಾತಿದು. ಮಕ್ಕಳ ರಕ್ಷಣೆಯ ವಿಚಾರದಲ್ಲಿ ಸಮಾಜದ ಜವಾಬ್ದಾರಿಯನ್ನು ಉನ್ನತ ನ್ಯಾಯಾಲಯ ಹಲವು ಬಾರಿ ನೆನಪಿಸಿದೆ.

ಬಾಲಕ, ಬಾಲಕಿಯರ ರಕ್ಷಣೆಯ ಬಗ್ಗೆ ‘ಭಾರತೀಯ ಉತ್ತರಾಧಿಕಾರತ್ವ ಅಧಿನಿಯಮ’ದಲ್ಲಿ ವಿಸ್ತೃತವಾದ ನಿಯಮಗಳಿವೆ. ಪೋಷಕರಿಂದ ತ್ಯಜಿಸಲ್ಪಟ್ಟ ಮಕ್ಕಳು, ಅಪಘಾತದಿಂದ ಮೃತಪಟ್ಟ, ವಿಚ್ಛೇದನ ಪಡೆದ ಪೋಷಕರ ಮಕ್ಕಳ ಆಶ್ರಯ ಹಾಗೂ ರಕ್ಷಣೆಗೆ ಕಾನೂನಾತ್ಮಕ ಪ್ರಕ್ರಿಯೆಗಳಿವೆ.

ADVERTISEMENT

ಆದರೆ, ಈ ಕೋವಿಡ್‌ ಸಂಕಷ್ಟದಲ್ಲಿ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ‘ತಬ್ಬಲಿ’ಯಾದ ಮಕ್ಕಳ ರಕ್ಷಣೆ ಹಾಗೂ ಆಶ್ರಯಕ್ಕೆ ಕಾನೂನಿಗೂ ಮೀರಿದ ಭಾವನಾತ್ಮಕ ಬಾಂಧವ್ಯ ಮುನ್ನೆಲೆಗೆ ಬಂದಿದೆ. ಈ ಮಕ್ಕಳ ಪೋಷಣೆಗಾಗಿ ಸರ್ಕಾರ ಪ್ರತಿ ತಿಂಗಳು ಹಣ ನೀಡುತ್ತದೆ, ಜೊತೆಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡುತ್ತದೆ ನಿಜ. ಆದರೆ, ಅದಕ್ಕೆ ಹೊರತಾಗಿ ಇಡೀ ಸಮಾಜ ಕೋವಿಡ್‌ ತಬ್ಬಲಿಯ ಪೋಷಣೆಗೆ ನಿಲ್ಲುತ್ತದೆ ಎಂಬ ಧ್ವನಿ ಹಲವು ಪ್ರಕರಣಗಳಲ್ಲಿ ಪ್ರತಿಧ್ವನಿಸುತ್ತಿದೆ.

ನಾಗಮಂಗಲ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಗು ಹುಟ್ಟಿದ 3ನೇ ದಿನಕ್ಕೆ ತಾಯಿ ಕೋವಿಡ್‌ಗೆ ಬಲಿಯಾದರು. 15 ದಿನದ ಹಿಂದೆಯಷ್ಟೇ ತಂದೆಯನ್ನೂ ಕೋವಿಡ್‌ ಬಲಿ ಪಡೆದಿತ್ತು. ಮಂಡ್ಯದ ಮಿಮ್ಸ್‌ ಆಸ್ಪತ್ರೆಯ ವೈದ್ಯರು ಹಸುಳೆಯನ್ನು ಕೋವಿಡ್‌ನಿಂದ ರಕ್ಷಿಸುವಲ್ಲಿ ಸಫಲರಾದರು. ಹುಟ್ಟಿದ ತಕ್ಷಣ ತಂದೆ–ತಾಯಿಯನ್ನು ಕಳೆದುಕೊಂಡ ಮಗುವಿಗಾಗಿ ಇಡೀ ಸಮಾಜ ಮಿಡಿಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಮಗುವನ್ನು ಕಾಣಲು ಬಂದರು, ಸಂರಕ್ಷಣೆ, ಪೋಷಣೆಯ ಎಲ್ಲಾ ವ್ಯವಸ್ಥೆ ಮಾಡಿಸಿದರು.

ಮಗುವನ್ನು ದತ್ತು ಪಡೆಯಲು ಹಲವರು ಮುಂದೆ ಬಂದಿದ್ದರು. ಸಂಬಂಧಿಗಳ ಇಚ್ಛೆಯಂತೆ ಮಗುವನ್ನು ದೊಡ್ಡಪ್ಪನ ಬಳಿ ಇರಿಸಲಾಯಿತು. ಈಗ ಮಗುವಿಗೆ 6 ತಿಂಗಳಾಗಿದ್ದು ಪೋಷಣೆ ಮುಂದುವರಿದಿದೆ. ತಬ್ಬಲಿ ಎಂಬ ಭಾವ ಮೂಡದಂತೆ ದೊಡ್ಡಪ್ಪ ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಮಗುವಿಗೆ ಇಡೀ ಗ್ರಾಮದ ಪ್ರೀತಿ ಸಿಕ್ಕಿದ್ದು ಎಲ್ಲರೂ ತಮ್ಮ ಸ್ವಂತ ಮಗುವಿನಂತೆಯೇ ಕಾಣುತ್ತಿದ್ದಾರೆ. ಆ ಪುಟಾಣಿ ಊರಿನ ಕಣ್ಮಣಿಯಾಗಿದ್ದಾಳೆ.

‘ಅಧಿಕಾರಿಗಳು, ವೈದ್ಯರು ಆಗಾಗ ಬಂದು ಮಗುವಿನ ಯೋಗಕ್ಷೇಮ ವಿಚಾರಿಸುತ್ತಾರೆ. 6 ತಿಂಗಳವರೆಗೂ ಪೌಡರ್‌ ಹಾಲು ಕುಡಿಸಿದ್ದೇವೆ. ಇನ್ನುಮುಂದೆ ಹಸುವಿನ ಹಾಲು ನೀಡುತ್ತೇವೆ. ಸ್ವಂತ ತಂದೆ–ತಾಯಿ ಪ್ರೀತಿ ನೀಡಲು ಯಾರಿಂದರೂ ಸಾಧ್ಯವಿಲ್ಲ. ಆದರೆ ಅಷ್ಟೇ ಪ್ರೀತಿ ಕೊಡಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಮಗುವಿನ ದೊಡ್ಡಪ್ಪ ಹೇಳುತ್ತಾರೆ.

ಅಜ್ಜಿ ಮನೆಯೇ ಖಾತ್ರಿ: ಹುಬ್ಬಳ್ಳಿಯ ಮಿಮ್ಸ್‌ ಆಸ್ಪತ್ರೆಯಲ್ಲಿ ಜೀವ ಬಿಟ್ಟ ಮಹಿಳೆಗೆ ಕೋವಿಡ್‌ ದೃಢಪಟ್ಟಿರಲಿಲ್ಲ. ನಂತರ ಕೋವಿಡ್‌ ಪಾಸಿಟಿವ್‌ ಎಂದು ಗೊತ್ತಾದ ಗಂಟೆಯೊಳಗೆ ಪ್ರಾಣ ಪಕ್ಷಿ ಹಾರಿಹೋಯಿತು. ವಾರದ ನಂತರ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮಹಿಳೆಯ ಪತಿಯೂ ಕೋವಿಡ್‌ಗೆ ಬಲಿಯಾದರು. ಅವರ 13 ವರ್ಷದ ಮಗನಿಗೆ ಕೋವಿಡ್‌ ಪರಿಣಾಮ ಗೊತ್ತಿತ್ತು, ದಿನಗಳು ಉರುಳಿದಂತೆ ಆತ ಸಹಜ ಸ್ಥಿತಿಗೆ ಬಂದಿದ್ದಾನೆ. ಆದರೆ, ಐದು ವರ್ಷದ ಮಗಳು ಏನೂ ತಿಳಿಯದ ಮುಗ್ಧೆ, ‘ದವಾಖಾನಿಯೊಳಗ ಅಪ್ಪ– ಅವ್ವ ಅದಾರ’ ಎನ್ನುತ್ತಿರುವ ಆ ಬಾಲಕಿ ತಂದೆ–ತಾಯಿಯ ನಿರೀಕ್ಷೆಯಲ್ಲೇ ಇದ್ದಾಳೆ. ಮೊದಲಿನಿಂದಲೂ ಅಜ್ಜಿ ಮನೆಯಲ್ಲೇ ಇದ್ದ ಈ ಇಬ್ಬರೂ ಮಕ್ಕಳಿಗೆ ಈಗ ಅದೇ ಶಾಶ್ವತವಾಗಿದೆ.

ಅಗಾಧ ಪ್ರೀತಿಯ ಗೊಂದಲ: ಮೈಸೂರಿನ ದಂಪತಿಗಳಿಬ್ಬರು ತಮ್ಮಿಬ್ಬರೂ ಮಕ್ಕಳ ಮದುವೆ ಮಾಡಿದ್ದಾರೆ. ಮಕ್ಕಳು ಅವರವರ ದಾರಿಯಲ್ಲಿದ್ದಾರೆ. ಆದರೆ ಈಗ ಆ ದಂಪತಿ ಮತ್ತೆ ಇಬ್ಬರು ಪುಟಾಣಿಗಳಿಗೆ ತಂದೆ–ತಾಯಿಯಾಗಿದ್ದಾರೆ. ತಂದೆಯ ತಂಗಿಯ ಮಕ್ಕಳ ಪೋಷಕರು ಕೋವಿಡ್‌ನಿಂದ ಮೃತಪಟ್ಟಿದ್ದು ಇಬ್ಬರೂ ಮಕ್ಕಳು ಇವರ ಪೋಷಣೆಯಲ್ಲಿದ್ದಾರೆ.

‘ಈ ಮಕ್ಕಳಿಗೆ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿ ತೋರಿಸುತ್ತಿದ್ದೇವೆ. ಆದರೂ ನಮ್ಮನ್ನು ಭಯ ಕಾಡುತ್ತಿದೆ. ಮಕ್ಕಳಿಗೆ ರೇಗಲು, ಗದರಲು ಭಯ. ಅವರ ತಂದೆ–ತಾಯಿ ಇದ್ದರೆ ಗದರುತ್ತಿದ್ದರೇ ಎಂಬ ಗೊಂದಲ ಕಾಡುತ್ತದೆ. ಮಕ್ಕಳು ಅತ್ತಾಗ ಅಕ್ಕಪಕ್ಕದ ಮನೆಯವರು ಏನಂದುಕೊಂಡಾರು ಎಂಬ ಭಯ ಕಾಡುತ್ತದೆ. ಪ್ರೀತಿ ಹೆಚ್ಚಾಗಿ ಈ ಗೊಂದಲ ಮೂಡಿರಬಹುದು’ ಎನ್ನುತ್ತಾರೆ ಆ ಪೋಷಕರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಕ್ಕಳಿಬ್ಬರ ಶೆಕ್ಷಣಿಕ ಜವಾಬ್ದಾರಿಯನ್ನು ಕಂಪನಿಯೊಂದು ವಹಿಸಿಕೊಂಡಿದೆ. ಬೆಂಗಳೂರಿನ ವಸತಿ ಶಾಲೆಯಲ್ಲಿದ್ದುಕೊಂಡು ಆ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಕೋವಿಡ್‌ನಿಂದ ತಂದೆ–ತಾಯಿಯನ್ನು ಕಳೆದುಕೊಂಡ ಪ್ರತಿ ಮಗುವಿನ ಹಿಂದೆಯೂ ಒಂದೊಂದು ಕತೆ ಇದೆ. ಜೀವ ತೆಗೆದ ಸೋಂಕಿಗೆ ಕರುಣೆ ಇಲ್ಲ ಎಂಬ ಭಾವ ಮನದಲ್ಲಿ ಮೂಡುತ್ತದೆ. ಇಡೀ ರಾಜ್ಯದಲ್ಲಿ 4,217 ಮಕ್ಕಳು ಕೋವಿಡ್‌ನಿಂದ ತೊಂದರೆ ಅನುಭವಿಸಿದ್ದಾರೆ. ಅವರಲ್ಲಿ 479 ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರೆ 3,725 ಮಕ್ಕಳು ತಂದೆ ಅಥವಾ ತಾಯಿಯನ್ನು (ಸಿಂಗಲ್‌ ಪೇರೆಂಟ್‌) ಕಳೆದುಕೊಂಡಿದ್ದಾರೆ. ತಂದೆ–ತಾಯಿ ಕಳೆದುಕೊಂಡ ಮಕ್ಕಳ ಲಾಲನೆ–ಪಾಲನೆಗೆ ಪ್ರತಿ ತಿಂಗಳು ಸರ್ಕಾರ ತಲಾ ₹ 3 ಸಾವಿರ ನೀಡುತ್ತದೆ. ಜೊತೆಗೆ ಇತರ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ರಾಜ್ಯದ 13 ಮಕ್ಕಳ ಪೋಷಣೆಗೆ ಅವರ ಸಂಬಂಧಿಕರು ಯಾರೂ ಮುಂದೆ ಬಂದಿಲ್ಲ. ಅವರನ್ನು ತ್ಯಜಿಸಲ್ಪಟ್ಟ ಮಕ್ಕಳು ಎಂದು ಪರಿಗಣಿಸಲಾಗಿದ್ದು ಬಾಲಮಂದಿರಗಳಲ್ಲಿ ಪೋಷಣೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.