ADVERTISEMENT

ಆಟಿಕೆಯ ಹುಲಿ!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:30 IST
Last Updated 14 ಸೆಪ್ಟೆಂಬರ್ 2019, 19:30 IST
   

ಹುಲಿಯನ್ನು ನಾವು ಯಾವುದೇ ಸಂದರ್ಭದಲ್ಲಾದರೂ ಮನೆಯೊಳಗೆ ಬಿಟ್ಟುಕೊಳ್ಳುತ್ತೇವೆಯೇ?! ಇದೆಂಥ ಪ್ರಶ್ನೆ ಎಂದು ಮೂಗು ಮುರಿಯಬೇಡಿ. ಹುಲಿಯನ್ನು ಮನೆಯೊಳಗೆ ಬಿಟ್ಟುಕೊಳ್ಳಲಂತೂ ಸಾಧ್ಯವಿಲ್ಲ! ಆದರೆ, ಆಟಿಕೆಯ ಹುಲಿಯನ್ನು ಮನೆಯೊಳಗೆ ತಂದಿಟ್ಟುಕೊಳ್ಳಲು ನಮಗೆ ತೊಂದರೆ ಏನೂ ಇರಲಿಕ್ಕಿಲ್ಲ. ಅಂದಹಾಗೆ, ಆಟಿಕೆಯ ಹುಲಿ ಅಂದರೆ, ಅದು ಪ್ಲಾಸ್ಟಿಕ್ಕಿನಿಂದ ಸಿದ್ಧಪಡಿಸಿದ ಆಟಿಕೆ ಅಲ್ಲ. ಅದು ಜೀವಂತ ಆಟಿಕೆ ಹುಲಿ. ಅರ್ಥಾತ್ ಟಾಯ್ಗರ್‌ (ಟಾಯ್‌ ಟೈಗರ್)!

ಟಾಯ್ಗರ್‌ ಅಂದರೆ ಬೆಕ್ಕಿನ ಒಂದು ತಳಿ. ಈ ತಳಿಯನ್ನು ಅಭಿವೃದ್ಧಿಪಡಿಸಿದ್ದು 1980ರ ದಶಕದಲ್ಲಿ. ಇದು ಬೆಕ್ಕು ಮತ್ತು ಹುಲಿಯ ಮಿಶ್ರಣದ ತಳಿ. ಟಾಯ್ಗರ್‌ ಬೆಕ್ಕುಗಳು ಮಧ್ಯಮ ಗಾತ್ರದ ತಲೆ, ಚಿಕ್ಕದಾದ ಹಾಗೂ ಗೋಲಾಕಾರದ ಕಿವಿಗಳು, ಉದ್ದನೆಯ ಮೂಗು ಹೊಂದಿವೆ. ಇವುಗಳ ಮೈತುಂಬಾ ರೋಮಗಳ ಹೊದಿಕೆ ಇದೆ. ಇದು ಈ ಬೆಕ್ಕುಗಳ ಕಿವಿ ಹಾಗೂ ಹಣೆ–ಕಿವಿಯ ನಡುವೆ ತುಸು ದಪ್ಪವಾಗಿದೆ.

ಈ ಬೆಕ್ಕುಗಳ ಬಾಲ ಸಪೂರ, ಉದ್ದ ಕೂಡ. ಇವುಗಳ ಮೈಮೇಲಿರುವ ಬಣ್ಣಗಳು ಹಾಗೂ ಗುರುತುಗಳು ಇದು ಭಿನ್ನವಾಗಿ ಕಾಣುವಂತೆ ಮಾಡಿವೆ. ಬೆಕ್ಕಿನ ಮೈಬಣ್ಣ ಕಂದು, ಕುಂಬಳಕಾಯಿ ಬಣ್ಣ ಅಥವಾ ಕಪ್ಪು ಆಗಿರುತ್ತದೆ. ಆದರೆ, ಗಾಢ ವರ್ಣದ ಪಟ್ಟೆಗಳು ಎದ್ದು ಕಾಣುವಂತೆ ಇರುತ್ತವೆ. ಈ ಪಟ್ಟೆಗಳು ಮೈಮೇಲೆ ಲಂಬವಾಗಿ ಹರಡಿಕೊಂಡಿವೆ. ಕತ್ತು, ಕಾಲುಗಳು ಮತ್ತು ಬಾಲದ ಭಾಗದಲ್ಲಿ ಸುತ್ತುಪಟ್ಟಿಯಂತೆ ಇವೆ. ಬೆಕ್ಕಿನ ಹೊಟ್ಟೆಯ ಭಾಗದಲ್ಲೂ ಈ ಪಟ್ಟೆಗಳು ಇರುತ್ತವೆ. ಬಾಲದ ತುದಿ ಹಾಗೂ ಇವುಗಳ ಪಂಜು ಕಪ್ಪು ಬಣ್ಣ ಹೊಂದಿವೆ.

ADVERTISEMENT

ಈ ಬೆಕ್ಕುಗಳು ಬಲಿಷ್ಠ ದೇಹ ಹೊಂದಿವೆ. ಇವುಗಳ ನಡಿಗೆಯಲ್ಲಿ ಗಾಂಭೀರ್ಯ ಇದೆ. ಇವು ಗಾಂಭೀರ್ಯದಿಂದ ನಡೆಯುವ ಹುಲಿಯನ್ನು ಹೋಲುತ್ತವೆ. ಈ ತಳಿಯ ಬೆಕ್ಕುಗಳು ಚುರುಕಾದ ಬುದ್ಧಿ ಹೊಂದಿವೆ, ಸದಾ ಎಚ್ಚರದಿಂದ ಇರುತ್ತವೆ. ಮನುಷ್ಯನ ಜೊತೆ ಸ್ನೇಹಭಾವದಿಂದ ಇರುತ್ತವೆ ಕೂಡ. ಇವುಗಳಿಗೆ ತರಬೇತಿ ನೀಡುವುದು ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.