ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ಮತ್ತು ಪಾನೀಯಗಳು
ಲೇ: ಡಾ. ಎನ್ ನಂದೀಶ್ವರ
ಪು: 238; ಬೆ: ರೂ. 295
ಪ್ರ: ಪೂರ್ಣಚಂದ್ರ ತೇಜಸ್ವಿ ಪ್ರಕಾಶನ, ಸಿದ್ದಪ್ಪ ಲೇಔಟ್, ಬಾಲಾಜಿನಗರ, ಸಿರಾ ನಗರ, ತುಮಕೂರು ಜಿಲ್ಲೆ– 572125
ಅಡುಗೆಮನೆ ಎಂದೊಡನೆ ನೆನಪಾಗುವುದು ಅಮ್ಮ, ಅಕ್ಕ ಮತ್ತು ನಂತರ ಹೆಂಡತಿ. ಹೊಟ್ಟೆ ತುಂಬಿಸಿ ಶಕ್ತಿ ನೀಡುವ ಆಹಾರ ರುಚಿಕಟ್ಟಾಗಿದ್ದರೆ ಖುಷಿ. ಸೂರ್ಯನ ಬೆಳಕಿನಲ್ಲಿ ಭೂಮಿಯ ಮೇಲೆ ಬದುಕುವ ಯಾವುದೇ ಪ್ರಾಣಿಗೆ ಗಾಳಿ, ನೀರು ಮತ್ತು ಆಹಾರ ಅತ್ಯಾವಶ್ಯಕ ಜೀವಶಕ್ತಿಗಳು. ಮನುಷ್ಯನ ಆಹಾರ ಪದ್ಧತಿಯಲ್ಲಿ ಅವನ ಬದುಕಿನ ವಿಕಾಸದ ವಿವಿಧ ಹಂತಗಳನ್ನು ಗುರುತಿಸಲು ಅವಕಾಶಗಳಿವೆ. ಆದ್ದರಿಂದ ಆಹಾರದ ವಿಷಯವನ್ನು ಜ್ಞಾನದ ಒಂದು ವಿಶಿಷ್ಟ ಶಾಖೆಯೆಂದು ಪರಿಗಣಿಸುವುದು ಅನಿವಾರ್ಯ. ಆಹಾರದ ವಿಷಯವು ಸಂಶೋಧನೆಯ ವಸ್ತುವಾಗಬಹುದೆ ಎಂಬ ಪ್ರಶ್ನೆ ಯಾರನ್ನಾದರೂ ಕೆಣಕಬಹುದು.
ಸಂಶೋಧನೆಯ ವ್ಯಾಪ್ತಿ ಹೆಚ್ಚುತ್ತಿರುವಾಗ ಪ್ರತಿಯೊಂದು ಕಾಲಘಟ್ಟದ ಆಹಾರ ಪದ್ಧತಿಯ ಬಗ್ಗೆಯೂ ವಿಶ್ಲೇಷಿಸಬೇಕಾದ ಸಂದರ್ಭ ಬಂದಿದೆ. ಈಗ ಉಪಸಂಸ್ಕೃತಿಗಳ ಅಧ್ಯಯನಕ್ಕೆ ತೊಡಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಂದು ಉಪಸಂಸ್ಕೃತಿಯ ಆಚಾರ, ವಿಚಾರಗಳ ಬಗೆಗೂ ಅಧ್ಯಯನ ಮಾಡಬೇಕಾಗಿದೆ. ರಾಷ್ಟ್ರವ್ಯಾಪ್ತಿಯಿಂದ ರಾಜ್ಯವ್ಯಾಪ್ತಿಗೆ ಬಂದ ಸಂಶೋಧನೆ, ಪ್ರಾದೇಶಿಕ ವ್ಯಾಪ್ತಿಯನ್ನೂ ದಾಟುತ್ತಿದೆ. ಸಂಶೋಧನೆಗೆ ಅವಕಾಶಗಳು ಹೆಚ್ಚುತ್ತಿದ್ದಂತೆ ವೈವಿಧ್ಯಮಯ ವಿಷಯಗಳು ಸಂಶೋಧಕರನ್ನು ಆಕರ್ಷಿಸುತ್ತಿವೆ. ಹೀಗೆ ಡಾ. ಎನ್. ನಂದೀಶ್ವರ ಅವರನ್ನು ಆಕರ್ಷಿಸಿರುವ ವಿಷಯ ‘ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ಮತ್ತು ಪಾನೀಯಗಳು’.
ಸೂಪಶಾಸ್ತ್ರ ಕುರಿತು ಸಂಶೋಧನೆ ಆಗಿದೆ. ನಮ್ಮ ಪ್ರಾಚೀನರಲ್ಲಿ ಹಲವರು ಸೂಪಶಾಸ್ತ್ರದ ಬಗ್ಗೆಯೇ ಕೃತಿಗಳನ್ನು ಬರೆದಿದ್ದಾರೆ. ಕೆಲವು ವಿದ್ವಾಂಸರು ತಮ್ಮ ಶಾಸ್ತ್ರಗ್ರಂಥಗಳಲ್ಲಿ ಸೂಪಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಶದವಾಗಿ ದಾಖಲಿಸಿದ್ದಾರೆ. ಅಡುಗೆ ಎಂದ ತಕ್ಷಣ ಮೂಗುಮುರಿಯುವ ಸಂದರ್ಭದಲ್ಲಿ ಅಡುಗೆಯು ಬದುಕಿನ ಅವಿಭಾಜ್ಯ ಮತ್ತು ಅನಿವಾರ್ಯ ಅಂಗ ಎಂಬ ಸತ್ಯವನ್ನು ಮರೆಯುವಂತಿಲ್ಲ.
ಪ್ರಸ್ತುತ ಪ್ರಸ್ತಾಪಿಸುತ್ತಿರುವ ಕೃತಿಯು ಪಿಎಚ್.ಡಿ., ಪದವಿಗಾಗಿ ಸಲ್ಲಿಸಿದ ಪ್ರೌಢಪ್ರಬಂಧವಾದ ಕಾರಣ ಅದಕ್ಕೆ ಅವಶ್ಯಕವಾದ ಕ್ರಮವನ್ನು ಅನುಸರಿಸಿ ಕೃತಿಯು ಒಂಬತ್ತು ಅಧ್ಯಾಯಗಳಲ್ಲಿ ರಚಿತವಾಗಿದೆ. ಲೇಖಕರು ತಮ್ಮ ಸಂಶೋಧನೆಗೆ ಜಾನಪದ ಆಕರಗಳನ್ನೂ ಗಮನಿಸಿರುವುದು ವಿಶೇಷ. ಚಾವುಂಡರಾಯನ ‘ಲೋಕೋಪಕಾರ’ದಿಂದ ಆರಂಭಿಸಿ. ವಿದೇಶೀ ಪ್ರವಾಸಿಗಳ ಪ್ರವಾಸಕಥನಗಳನ್ನೂ ಒಳಗೊಂಡಂತೆ ಬಹುತೇಕ ಸಾಹಿತ್ಯ ಕೃತಿಗಳು ಮತ್ತು ಶಾಸನಗಳೂ ಇಲ್ಲಿ ಆಕರಗಳಾಗಿವೆ. ಮಂಗರಸನ ‘ಸೂಪಶಾಸ್ತ್ರ’ ಮೂರನೇ ಸೋಮೇಶ್ವರನ ‘ಮಾನಸೋಲ್ಲಾಸ’ ಮತ್ತು ಕೆಳದಿ ಬಸವರಾಜನ ‘ಶಿವತತ್ವ ರತ್ನಾಕರ’ ಕೃತಿಗಳು ಲೇಖಕರ ಕೃತಿರಚನೆಗೆ ಅವಶ್ಯಕವಾದ ಸಾಮಗ್ರಿಗಳನ್ನು ಒದಗಿಸಿವೆ.
ಬಗೆಬಗೆಯ ಆಹಾರವನ್ನು ಹೇಗೆ ತಯಾರಿಸಬೇಕು ಎಂದು ಮಾತ್ರವಲ್ಲದೆ, ಯಾವಯಾವ ವಸ್ತುಗಳನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬ ಬಗ್ಗೆಯೂ ‘ಸೂಪಶಾಸ್ತ್ರ’ ತಿಳಿವಳಿಕೆ ನೀಡುತ್ತದೆ. ಇವುಗಳ ಅರಿವು ಖಚಿತವಾಗಿದ್ದಾಗ ಆಹಾರಪದ್ಧತಿಯಲ್ಲಿ ಅವಶ್ಯಕ ಮಾರ್ಪಾಟುಗಳನ್ನು ಮಾಡಿಕೊಳ್ಳಬಹುದು. ಭಾರತದಲ್ಲಿ ಬದುಕು ರೂಪುಗೊಂಡಾಗಿನಿಂದ ಆಹಾರ ಪದ್ಧತಿ ಬೆಳೆದುಬಂದ ಬಗೆಗೆ ಲೇಖಕರು ಮಾಹಿತಿಗಳನ್ನು ಒದಗಿಸಿದ್ದಾರೆ. ‘ಭಕ್ಷ್ಯಗಳು’ ಎಂದೇ ಒಂದು ಅಧ್ಯಾಯವಿದ್ದು ಅಲ್ಲಿ ಸಿಹಿ ಮತ್ತು ಖಾರದ ಭಕ್ಷ್ಯಗಳ ಪರಿಚಯವಾಗುತ್ತದೆ. ಭಕ್ಷ್ಯಗಳೆಂದರೆ ತಿನ್ನಲು ಯೋಗ್ಯವಾದ ಆಹಾರ ಪದಾರ್ಥ ಎಂದು ಸ್ಪಷ್ಟಪಡಿಸಿ, ‘ಸೂಪಶಾಸ್ತ್ರ’, ‘ಲೋಕೋಪಕಾರ’ ಮತ್ತು ‘ಲಿಂಗಪುರಾಣ’ಗಳಲ್ಲಿ ಉಲ್ಲೇಖಗೊಂಡಿರುವ ಆಹಾರ ಪದಾರ್ಥಗಳು ಮತ್ತು ಅವುಗಳ ತಯಾರಿಕಾ ವಿಧಾನವನ್ನು ವಿವರಿಸಲಾಗಿದೆ.
ಮನುಷ್ಯನ ಬದುಕಿನಲ್ಲಿ ಮಾಂಸಾಹಾರವೂ ಮುಖ್ಯವಾಗಿದೆ. ವಿದೇಶೀ ಪ್ರವಾಸಿಗಳ ಪ್ರವಾಸ ಕಥನದಲ್ಲಿ ಪ್ರಸ್ತಾಪಿತವಾಗಿರುವ ಮಾಂಸಾಹಾರ, ಮತ್ತು ಅವರು ಅರಮನೆಗಳಲ್ಲಿ ಕಂಡಿದ್ದ ಆಹಾರ ಪದಾರ್ಥಗಳ ಬಗ್ಗೆ ಕುತೂಹಲದ ವಿಚಾರಗಳಿವೆ. ತಿನ್ನುವ ಆಹಾರ ಮಾತ್ರವಲ್ಲದೆ ಕುಡಿಯುವ ಪಾನೀಯಗಳೂ ಇಲ್ಲಿ ಅಧ್ಯಯನಕ್ಕೊಳಗಾಗಿವೆ. ಕಾಲಕ್ಕೆ ತಕ್ಕಂತೆ ಮತ್ತು ಅಗತ್ಯಕ್ಕೆ ತಕ್ಕಂತೆ ಎಷ್ಟು ನೀರನ್ನು ಕುಡಿಯಬೇಕು ಎಂಬ ಬಗ್ಗೆ ಶಾಸ್ತ್ರಗ್ರಂಥಗಳು ಪ್ರಸ್ತಾಪಿಸಿರುವ ವಿಚಾರಗಳು ಸಾಮಾನ್ಯ ಓದುಗನಿಗೆ ಪ್ರಿಯವಾಗದಿರಬಹುದು; ಆದರೆ ಸಮಾಜಶಾಸ್ತ್ರದ ವಿದ್ಯಾರ್ಥಿಯ ಕಣ್ಣುತಪ್ಪಿಸಲು ಸಾಧ್ಯವಿಲ್ಲ. ಪಾನೀಯ ವರ್ಗದಲ್ಲಿ ಮದ್ಯವೂ ಸೇರಿರುವುದು ಕುತೂಹಲದ ವಿಷಯ. ತಿನ್ನುವ ಆಹಾರ ಮತ್ತು ಕುಡಿಯುವ ಪಾನೀಯಗಳ ಜೊತೆಗೆ ತಾಂಬೂಲದ ಬಗೆಗೂ ತಿಳಿಸಿರುವ ಲೇಖಕರು ತಾಂಬೂಲಪ್ರಿಯರಿಗೆ ಖುಷಿ ನೀಡಿದ್ದಾರೆ.
ಊಟ ತಯಾರಿಸುವುದು ಒಂದು ಘಟ್ಟವಾದರೆ, ಅದನ್ನು ಬಳಸುವುದು ಮತ್ತೊಂದು ಘಟ್ಟ. ಆಹಾರ ಇರುವುದೇ ಬಳಕೆಗೆಂದು. ಆ ಬಳಕೆಗೊಂದು ಕ್ರಮವಿದೆ. ಊಟವನ್ನು ಬಡಿಸುವ, ತಿನ್ನುವ ಕ್ರಮಗಳೂ ಸಂಸ್ಕೃತಿಯ ಪ್ರತಿಬಿಂಬಗಳು. ಉಪಚರಿಸುವುದೂ ಒಂದು ಕಲೆ. ಕೆಲವು ಭಕ್ಷ್ಯಭೋಜ್ಯಗಳು ಎಲ್ಲ ಸಂದರ್ಭಗಳಿಗೂ ಸಲ್ಲುವುದಿಲ್ಲ. ಮತ್ತು ಕೆಲವು ಆಹಾರ ಪದಾರ್ಥಗಳು ನಿಶ್ಚಿತ ಸಂದರ್ಭಗಳಲ್ಲಿ ಪ್ರಮುಖವಾಗುತ್ತವೆ. ಈ ವಿಚಾರಗಳೂ ಇಲ್ಲಿ ಚರ್ಚಿತವಾಗಿವೆ. ಅಡುಗೆ ಮಾಡುವವರ ಲಕ್ಷಣಗಳೂ ಈ ಅಧ್ಯಯನದಲ್ಲಿ ಗಮನ ಸೆಳೆದಿದೆ. ನಮ್ಮ ಕವಿಗಳು ಮತ್ತು ಪ್ರವಾಸಿಗಳು ಶ್ರೀಮಂತರ ಭೋಜನ ವ್ಯವಸ್ಥೆಯನ್ನು ಮಾತ್ರ ತಿಳಿದಿದ್ದಾರೆ. ಮಧ್ಯಮ ಮತ್ತು ಸಾಮಾನ್ಯ ವರ್ಗದ ಆಹಾರದ ಚಿತ್ರ ಇಲ್ಲಿ ದೊರೆಯುವುದಿಲ್ಲ ಎಂಬ ವಿಷಯದತ್ತ ಲೇಖಕರು ಗಮನ ಸೆಳೆದಿರುವುದು ವಿಶೇಷ. ಶೂದ್ರಾನ್ನವೆಂದು ಹೇಳಲಾದ ಬಡವರ ಆಹಾರ ಮತ್ತು ಕನಕದಾಸರನ್ನು ಹೊರತುಪಡಿಸಿ, ರಾಗಿಯಂತಹ ಪ್ರಮುಖ ಧಾನ್ಯದ ಬಗ್ಗೆಯೂ ಶಾಸ್ತ್ರಕೃತಿಗಳಿರಲಿ ಸಾಹಿತ್ಯ ಕೃತಿಗಳೂ ಪ್ರಸ್ತಾಪಿಸದಿರುವುದನ್ನೂ ಲೇಖಕರು ಗಮನಿಸಿದ್ದಾರೆ.
ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರವಲ್ಲದೆ ದೃಶ್ಯ ಮಾಧ್ಯಮವೂ ಅಡುಗೆಯ ಬಗೆಗೆ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ, ಶಾಸ್ತ್ರ ಮತ್ತು ಸಾಹಿತ್ಯ ಕೃತಿಗಳನ್ನಾಧರಿಸಿದ ಈ ಕೃತಿ ಭೋಜನಪ್ರಿಯರಿಗೆ ಖುಷಿ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.