ADVERTISEMENT

ನಗು ಮೊಗೆದುಕೊಡುವ ಪುಸ್ತಕ

ಘನಶ್ಯಾಮ ಡಿ.ಎಂ.
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST
ನಗು ಮೊಗೆದುಕೊಡುವ ಪುಸ್ತಕ
ನಗು ಮೊಗೆದುಕೊಡುವ ಪುಸ್ತಕ   

‘ಇನ್ನು ನಕ್ಕರೆ ಅಕ್ಕಪಕ್ಕದವರು ನನ್ನನ್ನು ಹುಚ್ಚ ಎಂದುಕೊಂಡಾರು...’ ಎನಿಸಿ ಪುಸ್ತಕ ಮುಚ್ಚಿಟ್ಟೆ. ಆದರೂ ನಗು ತಡೆಯಲು ಆಗಲಿಲ್ಲ. ‘ಅತಿಥಿ ದೇವೋ ಭವ’ ಪುಸ್ತಕದಲ್ಲಿರುವ ಪ್ರಸಂಗಗಳು ಹಾಗಿವೆ. ಪುಸ್ತಕದುದ್ದಕ್ಕೂ ಲೇಖಕರು ತಮ್ಮ ದಡ್ಡತನವನ್ನು ತಾವೇ ಖುಷಿಯಿಂದ ಲೇವಡಿ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುತ್ತಲೇ ಓದುವವರ ಜೀವನದಲ್ಲೂ ನಡೆದಿರಬಹುದಾದ ಅಂಥದ್ದೇ ಪ್ರಸಂಗಗಳನ್ನು ಜಾಣತನದಿಂದ ಮೊಗೆಯುತ್ತಾರೆ.

‘ಓಹ್, ಟ್ರೇನ್ ತಪ್ಪಿಸಿಕೊಂಡವನು ನಾನೊಬ್ಬನೇ ಅಲ್ಲ. ಲಗೇಜ್ ಮರೆತವನು ನಾನೊಬ್ಬನೇ ಅಲ್ಲ’ ಎಂದು ಓದುಗರು ಚೆಲ್ಲುವ ನೆಮ್ಮದಿಯ ನಗೆಗೆ ಲೇಖಕರು ದೂರದಿಂದಲೇ ಸಾಕ್ಷಿಯಾಗುತ್ತಾರೆ. ಒಟ್ಟು 12 ಲಲಿತ ಪ್ರಬಂಧದಂಥ ಹಾಸ್ಯ ಲೇಖನಗಳಿರುವ ಈ ಪುಸ್ತಕದಲ್ಲಿ 68 ಹಾಳೆಗಳಿವೆ. ಸುಮ್ಮನೆ ತಿರುವಿಹಾಕಲೆಂದು ಪುಸ್ತಕ ಕೈಲಿ ಹಿಡಿದರೂ, ಕೊನೆಯವರೆಗೆ ಕೆಳಗಿಡಲು ಮನಸು ಬಾರದು.

ಉತ್ತಮ ವಾಗ್ಮಿ ಎಂದು ಹೆಸರು ಮಾಡಿರುವ ಡಾ. ಸ್ವಾಮಿರಾವ್‌ ಕುಲಕರ್ಣಿ ಅವರು ತಾವು ಸಭೆ-ಸಮಾರಂಭಗಳಿಗೆ ಅತಿಥಿಗಳಾಗಿ ಹೋಗಿದ್ದ ಅನುಭವಗಳಿಗೆ ಇಲ್ಲಿ ಅಕ್ಷರ ರೂಪ ಕೊಟ್ಟಿದ್ದಾರೆ. ‘ರೈಲಿನಲ್ಲಿ ಗೊರಕೆ ಕಾಟ- ಕಟ್ಟಿದ ದಂಡ’‍ ಅಧ್ಯಾಯವಂತೂ ಮನುಷ್ಯ ಅದೆಷ್ಟರ ಮಟ್ಟಿಗೆ ಪರಿಸ್ಥಿತಿಯ ಕೈಗೊಂಬೆ ಎಂಬುದನ್ನು ಸೋದಾಹರಣೆಯಾಗಿ ನಿರೂಪಿಸಿಬಿಡುತ್ತದೆ.

ADVERTISEMENT

‘... ಆತನ ಗೊರಕೆಯ ಶಬ್ದ ಘನ ಘೋರವಾಗಿತ್ತು. ಕೇವಲ ಗೊರಕೆಯಾದರೆ ಸಹಿಸಿಕೊಳ್ಳಬಹುದಿತ್ತು. ಗೊರಕೆಯ ನಡು ನಡುವೆ ಚಿತ್ರ ವಿಚಿತ್ರ ವಿವಿಧ ಪ್ರಾಣಿಗಳ ಕೂಗುಗಳು ಹೊರ ಬರುತ್ತಿದ್ದವು’. ‘ಒಮ್ಮೊಮ್ಮೆ ಗೊರಕೆಯಾತನ ಕೆಟ್ಟ ದನಿಗೆ, ಮಲಗಿದ ಎರಡು ವರ್ಷದ ಕೂಸು ಚಿಟ್ಟನೇ ಚೀರಿ ಅಳುತ್ತಿತ್ತು’.

ಇಂಥ ಇಂಪಾದ ಗೊರಕೆಯ ನಾದ ಕೇಳುತ್ತಿದ್ದ ಲೇಖಕರಿಗೆ ನಿದ್ದೆ ಸುಳಿಯಲು ಸಾಧ್ಯವೇ? ‘ನಿದ್ದೆ ದಿಕ್ಕಾಪಾಲಾಗಿ ಓಡಿತು. ಬೆಳಗು ಮುಂಜಾನೆ 5ಕ್ಕೆ ಎದ್ದೆ. ಎದ್ದೆ ಅಂದರೆ ನಿದ್ದೆಯಿಂದಲ್ಲ, ಮಲಗಿಕೊಂಡವ ಎದ್ದೆ ಅಷ್ಟೇ’. ಹೀಗೆ ಎದ್ದರೂ ಲೇಖಕರನ್ನು ನಿದ್ದೆ ಒಂದು ಆಟ ಆಡಿಸದೇ ಬಿಡಲಿಲ್ಲ. ಮಾಯದ ನಿದ್ದೆಯ ವಶವಾದ ಅವರಿಗೆ ಕಲಬುರ್ಗಿಯಲ್ಲಿ ಇಳಿಯಲು ಸಾಧ್ಯವೇ ಆಗುವುದಿಲ್ಲ. ಮುಂದಿನ ಶಹಾಬಾದ ನಿಲ್ದಾಣದಲ್ಲಿ ಇಳಿದು, ಟಿಕೆಟ್ ಕಲೆಕ್ಟರ್‌ಗೆ ದಂಡ ತುಂಬಿ ಅಂತೂ ಇಂತೂ ಮನೆ ತಲುಪುತ್ತಾರೆ.

‘ಒಂದು ತಿಂಗಳ ನಂತರ ಸಂದರ್ಭ ಬಂದಾಗ ರೈಲಿನ ಫಜೀತಿ ಹೇಳಿದೆ. ನಮಗೆ ಗೊತ್ತಿತ್ತು ಅಂದರು ನನ್ನ ಮಗ- ತಮ್ಮ. ಹೇಗೆ ನಾನು ಸುಳ್ಳಾಡಿದ್ದು ನಿಮಗೆ ಗೊತ್ತಾಯ್ತು? ಅಂದೆ. ‘ಮೊಬೈಲ್ ಸುಳ್ಳು ಹೇಳುವುದಿಲ್ಲವೆಂಬುದು ಗೊತ್ತಿತ್ತು’ ಅಂದರು. ನಾನು ಪೆಚ್ಚಾದೆ! ಸುಳ್ಳನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬ ಅರಿವಾಯಿತು’ ಎಂಬ ಸಾಲುಗಳೊಂದಿಗೆ ಈ ಪ್ರಬಂಧ ಮುಗಿಯುತ್ತದೆ.

ಓದುವಾಗ ನಗೆ ಉಕ್ಕಿದರೂ, ಪುಸ್ತಕ ಮುಚ್ಚಿಟ್ಟಾಗ ‘ಸುಳ್ಳನ್ನು ಮುಚ್ಚಿಡಲು ಸಾಧ್ಯವಿಲ್ಲ’ ಎಂಬ ಸಾಲು ಮತ್ತೆಮತ್ತೆ ನೆನಪಾಗುತ್ತಲೇ ಇರುತ್ತದೆ. ನಾವು ಬಸ್‌ ತಪ್ಪಿಸಿಕೊಂಡಾಗ, ರೈಲಿನಲ್ಲಿ ಲಗೇಜ್ ಕಳೆದುಕೊಂಡಾಗ ಹೇಳಿದ್ದ ಸುಳ್ಳುಗಳು ನೆನಪಾಗುತ್ತವೆ. ‘ತಂತ್ರಜ್ಞಾನ ಜನರಿಂದ ಸುಳ್ಳು ಹೇಳುವ ಸ್ವಾತಂತ್ರ್ಯವನ್ನೂ ಕಿತ್ತುಕೊಂಡಿದೆ’ ಎಂದು ಲೇಖಕರು ಮಂದದನಿಯಲ್ಲಿ ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆಯೇ? ಕೆಲ ಪ್ರಬಂಧಗಳಂತೂ ಸತ್ಯಕ್ಕೆ ‘ತಾಜಾ ಸತ್ಯ’ ಮತ್ತು ‘ಸತ್ಯ’ ಎಂಬ ಎರಡು ಆಯಾಮ ನೀಡಲು ಯತ್ನಿಸುತ್ತವೆ. ‘ರೈಲಿನ ಪೀಕಲಾಟ’ ಪ್ರಬಂಧದ ಕೊನೆಯ ಸಾಲುಗಳೂ ಈ ಮಾತಿಗೆ ಪುಷ್ಟಿ.

ಹಾಸ್ಯ ಲೇಪನದ ಶೈಲಿಯಲ್ಲಿಯೇ ಸಾಮಾನ್ಯ ಜನರ ಬದುಕಿನಲ್ಲಿರುವ ಮಾನವೀಯತೆಯ ಪಲುಕುಗಳನ್ನೂ ಇದು ಬಿಂಬಿಸುತ್ತದೆ. ಸೂಟ್‌ಕೇಸ್ ತಂದುಕೊಡುವ ಆಟೊ ಡ್ರೈವರ್, ಪ್ರಯಾಣಿಕರಿಗಾಗಿ ಕಾದಿದ್ದು ಬಸ್‌ ಹತ್ತಿಸಿಕೊಳ್ಳುವ ಕಂಡಕ್ಟರ್‌, ನಿಂತ ಕಾರಿಗೆ ಪೆಟ್ರೋಲ್ ತಂದುಕೊಡುವ ಸ್ಕೂಲ್ ಮೇಷ್ಟ್ರು ಇಂದಿಗೂ ಸಮಾಜದಲ್ಲಿ ಜೀವಂತವಾಗಿರುವ ಒಳಿತಿನ, ಜೀವನ ಪ್ರೀತಿಯ ಪ್ರತೀಕದಂತೆ ಭಾಸವಾಗುತ್ತಾರೆ.

ಮುದ್ರಾರಾಕ್ಷಸನ ಹಾವಳಿಗೂ ಅಲ್ಲಲ್ಲಿ ಸಾಕ್ಷಿಗಳಿವೆ. ಆದರೆ ಅದರಿಂದ ರಸಭಂಗವಾಗದು ಎನ್ನುವುದು ನೆಮ್ಮದಿಯ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.