ADVERTISEMENT

ದಲಿತರು ಮರೆತ ರಾಮಾನುಜ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST

ರಾಮಾನುಜರು ಬ್ರಾಹ್ಮಣ ಆಚಾರ್ಯತ್ರಯರಲ್ಲಿ ಒಬ್ಬರು. ಆಚಾರ್ಯತ್ರರು ಜಾತಿವಾದಿಗಳು, ದಲಿತ ವಿರೋಧಿಗಳು ಎಂದು ಇಂದಿಗೂ ಪರಿಭಾವಿಸಲಾಗಿದೆ. ಆದರೆ, ಒಂದು ಸಾವಿರ ವರ್ಷಗಳ ಹಿಂದೆಯೇ ರಾಮಾನುಜರು ದಲಿತರ ಪ್ರವೇಶಕ್ಕೆ ದೇಗುಲಗಳ ಬಾಗಿಲು ತೆರೆದ ಸತ್ಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಗತಕಾಲದ ಈ ಸಂಗತಿಗಳನ್ನು ಲೇಖಕ ಎನ್‌.ಕೆ. ಮೋಹನ್‌ರಾಂ ಅವರು ತಮ್ಮ ‘ದಲಿತರ ದೇವಸ್ಥಾನ ಪ್ರವೇಶದ ಸಾವಿರ ವರ್ಷ: ದಲಿತರು ಮರೆತ ರಾಮಾನುಜ’ ಕೃತಿಯಲ್ಲಿ ತೆರೆದಿಟ್ಟಿದ್ದಾರೆ.

ಐದು ಪತ್ರಿಕಾ ಬರಹಗಳ ಗುಚ್ಛವೇ ಈ ಕೃತಿ. ರಾಮಾನುಜರ ಕ್ರಾಂತಿಕಾರಿ ಹೆಜ್ಜೆಗುರುತುಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ಜತೆಗೆ, ಇಂದಿನ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ವಿಶ್ಲೇಷಣೆ ಇದೆ. ರಾಮಾನುಜರ ಕುರಿತ ಘಟನೆ, ಸಂಗತಿಗಳು ಮತ್ತೆ ಮತ್ತೆ ಪುನರಾವರ್ತನೆಯಾಗಿವೆ. ಆದರೆ, ಮೋಹನ್‌ರಾಂ ಅವರ ವಸ್ತುನಿಷ್ಠ ಬರವಣಿಗೆ, ಅ‍‍‍ಪರೂಪದ ಒಳನೋಟಗಳಿಂದ ಒಂದೇ ಗುಟುಕಿನಲ್ಲಿ ಕೃತಿಯು ಓದಿಸಿಕೊಂಡು ಹೋಗುತ್ತದೆ. ಓದುಗನ ಅರಿವು ವಿಸ್ತರಿಸುವುದು ಈ ಕೃತಿಯ ಹೆಚ್ಚುಗಾರಿಕೆ.

ರಾಮಾನುಜರು ದಲಿತರಿಗಾಗಿ ಮೇಲುಕೋಟೆಯಲ್ಲಿ ದೇವಸ್ಥಾನ ಕಟ್ಟಿಸಿದ್ದು, ದಲಿತರು ಮತ್ತು ಶೂದ್ರರ ಬಗ್ಗೆ ಅವರು ಒಲವು ತೋರಲು ಕಾರಣವಾದ ಅಂಶಗಳ ಕುರಿತು ಪ್ರಸ್ತಾಪಿಸಿದ್ದಾರೆ. ರಾಮಾನುಜ ಮತ್ತು ಬಸವಣ್ಣ ಅವರನ್ನು ವಿಶ್ಲೇಷಣೆಗೆ ಒಳಪಡಿಸುವ ಮೋಹನ್‌ರಾಂ ಓದುಗರಲ್ಲಿ ಬೆರಗು ಹುಟ್ಟಿಸುತ್ತಾರೆ.

ADVERTISEMENT

ರಾಮಾನುಜರ ಸಾಮಾಜಿಕ ಮಹತ್ವ ಅರಿಯಲು ಅವರ ಅನುಯಾಯಿಗಳು ಮುಂದಾಗಬೇಕು ಎಂಬುದು ಲೇಖಕರ ಆಶಯ. ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ. ದಲಿತರನ್ನು ದೇವಸ್ಥಾನದಿಂದ ಹೊರಗಿಡುತ್ತಿರುವವರಲ್ಲಿ ಬ್ರಾಹ್ಮಣರು ಮಾತ್ರವಲ್ಲ ಶೂದ್ರರು, ಹಿಂದುಳಿದವರೂ ಇದ್ದಾರೆ. ಇವರ ದೇವಸ್ಥಾನಗಳಿಗೆ ದಲಿತರ ಪ್ರವೇಶ ನಿಷಿದ್ಧ ಎಂಬುದು ಕಟು ವಾಸ್ತವ. ಹಾಗಾಗಿ ಪ್ರಗತಿಪರರು, ದಲಿತ ಚಿಂತಕರು, ಹೋರಾಟಗಾರರು ಓದಿ ಚರ್ಚಿಸಬೇಕಾದ ಕೃತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.