ADVERTISEMENT

ಪ್ರಣಯ್‌ ಪಾಟೀಲ್‌ ಸಂದರ್ಶನ: ರಾಯಬಾಗ್‌ ಪೌಳ್ಯಾಗ ಕುಂತು ಬರ್ದೇನ್ರಿ ಯುರೋಪಿನ ಕತಿ

ಸಂಧ್ಯಾ ಹೆಗಡೆ
Published 30 ಏಪ್ರಿಲ್ 2022, 19:30 IST
Last Updated 30 ಏಪ್ರಿಲ್ 2022, 19:30 IST
ಪ್ರಣಯ್‌ ಪಾಟೀಲ
ಪ್ರಣಯ್‌ ಪಾಟೀಲ   

ಕನ್ನಡ ಮಣ್ಣಿನಲ್ಲಿ ಮೊಳೆತ ‘ಬರ್ಗಂಡಿ ವಿಂಟರ್ಸ್ ಇನ್ ಯುರೋಪ್’ ಎಂಬ ಇಂಗ್ಲಿಷ್ ಕಾದಂಬರಿ ವಿದೇಶದಲ್ಲಿ ಬಿಡುಗಡೆಯಾಗಿ, ಪಾಶ್ಚಾತ್ಯ ಓದುಗರ ಭಾವಕೋಶದ ತಂತಿ ಮೀಟಿದೆ. ಸಾಹಿತ್ಯ ಕ್ಷೇತ್ರಕ್ಕೆ ಈಗಷ್ಟೇ ಪಾದವೂರಿದ ಕುಂದಾನಗರಿ ಬೆಳಗಾವಿಯ ಪ್ರಣಯ್ ಪಾಟೀಲ ಈ ಕಾದಂಬರಿಯ ರಚನೆಕಾರ. ಅಮೆರಿಕದ ಅಮೆಝಾನ್ ಬೆಸ್ಟ್ ಸೆಲ್ಲರ್ ಬುಕ್‌ಗಳಲ್ಲಿ 18ನೇ ಸ್ಥಾನ ಪಡೆದು, ದೇಸಿ ಸಾಹಿತ್ಯಾಸಕ್ತರ ಕುತೂಹಲವನ್ನು ಬಡಿದೆಬ್ಬಿಸಿದ ಅವರ ಈ ಚೊಚ್ಚಲ ಕೃತಿ ಬೆಂಗಳೂರಿನಲ್ಲಿ ಮೇ 7ರಂದು ಬಿಡುಗಡೆಯಾಗಲಿದೆ. ‘ನಾನ್ ಬೆಳಗಾವಿಯೊಳಗ ಇರೂದ್ರಿ, ಹುಟ್ಟಿದ್ದು ಬೆಂಗಳೂರಿನಾಗ, ಸ್ಕೂಲಿಂಗ್ ಡೆಹರಾಡೂನ್‌ದಾಗ, ಎಂಜಿನಿಯರಿಂಗ್ ಜರ್ಮನಿದಾಗ ಮಾಡೇನ್ರಿ’ ಎನ್ನುತ್ತ ಅಪ್ಪಟ ದೇಸಿ ಭಾಷೆಯಲ್ಲಿ ಮಾತನಾಡಿದ ಪ್ರಣಯ್, ತಮ್ಮ ‘ಕೋವಿಡ್‌ ಕೂಸು’ ಜನಿಸಿದ್ದು ಹೇಗೆ, ಬರವಣಿಗೆಯ ತುಡಿತ ಶುರುವಾಗಿದ್ದು ಹೇಗೆ ಎಂಬುದನ್ನು ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಹಂಚಿಕೊಂಡರು.

***

ಸಾಹಿತ್ಯ ಕ್ಷೇತ್ರಕ್ಕೆ ಧುತ್ತನೆ ಪ‍್ರವೇಶಿಸಿ ಚಕಿತಗೊಳಿಸಿದಿರಲ್ಲ...

ADVERTISEMENT

ಅದು ಹೆಂಗಾತು ನಂಗೂ ಗೊತ್ತಿಲ್ರಿ, 2020ರ ಮೊದಲ ಲಾಕ್‌ಡೌನ್ ಸಂದರ್ಭ, ಮನ್ಯಾಗ್ ಕುಂತು ಮಾನಸಿಕ ಆಗಾಕ್ ಹತ್ತಿತ್‌ರೀ. ಬರಕೋತ್ ಕುಂತ್ರ ಪಾಡಾಕ್ಕೇತಿ ಅನಸ್ತು. ಬರಿಲಿಕ್ಕೆ ಶುರು ಮಾಡಿದಾಗ್ ಮನಸ್ಸಿಗೆ ಏನೋ ಹಿತ ಆತು. ಮೊದಲ ಎರಡು ಚಾಪ್ಟರ್ ಮೊಬೈಲ್‌ನಾಗ ಟೈಪ್ ಮಾಡ್ದೆ. ಎದೆಯೊಳಗಿನ ಹೊಯ್ದಾಟ, ಕೊರಳುಬ್ಬಿದ ಭಾರ ಇಳಿದ ಅನುಭವ ಆತು. ಮಾನಸಿಕ ಸ್ಥಿತಿ ಬೆಟರ್ ಆತು. ಹಾಂಗೆ ಬರಕೊಂತ 300 ಪುಟ ದಾಟಿ ಅದೇ ಒಂದು ಕಾದಂಬರಿಯಾಗಿ ಮೂಡಿಬಂತು ನೋಡ್ರಿ.

ರಾಯಬಾಗ್‌ನ ಪೌಳಿಯಲ್ಲಿ ಕುಳಿತು ಬರೆದ ಕಾದಂಬರಿ ಯುರೋಪ್ ದಾರಿ ಹಿಡಿದಿದ್ದು ಹೇಗೆ?

ಪ್ರಥಮ ಪ್ರಯೋಗದ ಪ್ರಕಟಣೆಗೆ ಸಣ್ಣ ಪ್ರಕಾಶಕರನ್ನೇ ಹುಡುಕಿದೆ. ಯುನೈಟೆಡ್ ಕಿಂಗ್‌ಡಮ್‌ನ ಕ್ರಿಸ್ಟಲ್ ಪೀಕ್ ಪಬ್ಲಿಷರ್‌ನವ್ರು ಒಪ್ಪಂದ ಮಾಡ್ಕೊಂಡು 1,200 ಪೌಂಡ್ ಅಂದರೆ ಸುಮಾರು 1.2 ಲಕ್ಷ ರೂಪಾಯಿ ನನ್ ಅಕೌಂಟ್‌ಗೆ ಕ್ರೆಡಿಟ್ ಮಾಡಿದ್ರು. ಸಾಮಾಜಿಕ ಸೇವೆ ನಾನು ನೆಚ್ಚಿದ ಕ್ಷೇತ್ರ, ಪುಸ್ತಕದಿಂದ ಗಳಿಸಿದ್ದನ್ನ ದಾನಕ್ಕ ಕೊಡ್ಬೇಕಂತ ನಿರ್ಧಾರ ಮಾಡಿ, ನ್ಯೂಯಾರ್ಕ್‌ನ ಸೇಂಟ್ ಜ್ಯೂಡ್ಸ್‌ ಚಿಲ್ಡ್ರನ್ಸ್‌ ರಿಸರ್ಚ್ ಹಾಸ್ಪಿಟಲ್‌ಗೆ ಅದನ್ನ ಒಪ್ಪಿಸಿದೆ. ಅಲ್ಲಿ ಭಾಳ್ ಬೇಗ ಕಾದಂಬರಿ ಕ್ಲಿಕ್ ಆತ್ರಿ, ಹಂಗ ನಮ್ಮೂರಿನಲ್ಲಿ ಈ ನಾವೆಲ್ ಬಿಡುಗಡೆ ಮಾಡಬೇಕ್ ಅನ್ಕೊಂತಿದ್ದಾಗ್ ರಾಜದೀಪ್‌ ಸರ್‌ದೇಸಾಯಿ ಅವರನ್ನು ಭೇಟಿಯಾದೆ. ಸ್ನೋಬಾಲ್ ಎಫೆಕ್ಟ್ ಅಂತಾರಲ್ಲ ಹಂಗ, ಯಾವುದೂ ಯೋಜಿತ ಅಲ್ಲ, ಒಂದಕ್ಕೊಂದ್ ಬೆಸೆದು ಸೇತು ಆದ್ವು.

ಪಾಶ್ಚಾತ್ಯ ಓದುಗನಲ್ಲಿ ಈ ಕಾದಂಬರಿ ಕಿಚ್ಚು ಹಚ್ಚಬಹುದೆಂಬ ನಿರೀಕ್ಷೆ ಇತ್ತಾ?

2006ರಿಂದ 2011ರ ಮಟ ಜರ್ಮನಿದಾಗ್ ಇದ್ದೆ. ಅಲ್ಲಿ ನನ್ ಫ್ರೆಂಡ್ಸ್‌ ಕೆಲವ್ರು ಡ್ರಗ್ಸ್‌ನಿಂದ ಭಾಳ್ ತೊಂದ್ರಿ ಅನುಭವಿಸಿದ್ರು. ಕೆಲವೊಬ್ರು ಜೀವಾನೇ ಕಳಕೊಂಡ್ರು, ಇದು ಹಳೆ ಕತಿ. ನಾಳೆಕ್ ಭೇಟಿಯಾಗ್ಬಹುದು ಅನ್ಕೊಂಡಿದ್ ಸ್ನೇಹಿತರನ್ನೂ ಕೋವಿಡ್‌ದಾಗಿನ ದುರಿತ ಕಾಲದೊಳಗ ಕಳಕೊಂಡ್ವಿ. ಈ ಸಂಕಟಗಳನ್ನ ಸಹಿಸ್ಕೊಳ್ಳಾಕ ಮನಸ್ಸಿಗೆ ಭಾಳ್ ಕಷ್ಟ ಆತ್ರಿ. ನೆನಪುಗಳ ಮೆರವಣಿಗೆ ಸಾಲುಸಾಲಾಗಿ ಬರಾಕ್‌ ಹತ್ವು ಮತ್ತು ಕಾಲ್ಪನಿಕ ಕಾದಂಬರಿ ಹುಟ್ಟಿಗೆ ಕಾರಣವಾದ್ವು.

ಜೀವ ಹಿಂಡುವ ಡ್ರಗ್ಸ್ ಅಮಲಿನ ದುಷ್ಪರಿಣಾಮ, ಪ್ರೀತಿ– ಪ್ರಣಯ, ಭೂತದ ಕತಿ, ವಾಮಾಚಾರ, ಪುನರ್ಜನ್ಮ, ಹೀಗೆ ಎಲ್ಲವೂ ಇಣುಕಿರುವ ಕಾದಂಬರಿ ಸುಖಾಂತ್ಯದಲ್ಲಿ ಲೀನವಾಗ್ತೈತಿ. ನಾಯಕ ಜೇಸ್ ಮತ್ತು ನಾಯಕಿ ಯಾಸ್ಮಿನ್ ಪಾತ್ರಗಳ ನೇರ ನಿರೂಪಣೆಯನ್ನ ಹಲವಾರು ಓದುಗರು ಮೆಚ್ಚಿಕೊಂಡಿದ್ದಾರಿ. ಓದುಗರು ಹೇಗೆ ಸ್ವೀಕರಿಸಬಹುದು ಎಂದು ಬರೆಯೋವಾಗ ಯೋಚಿಸಿರ್ಲಿಲ್ಲ, ಆದ್ರ ನನ್ನ ಒಳಗನ್ನ ನಿರಾಳಗೊಳಿಸಿದ್ದು ‘ಬರ್ಗಂಡಿ ವಿಂಟರ್ಸ್’.

ಕನ್ನಡ ಓದುಗರು ಈ ಕಾದಂಬರಿಯ ನಿರೀಕ್ಷೆಯಲ್ಲಿದ್ದಾರೆ...

ನಮ್ ಭಾಗದಾಗ್ ಭಾಳ್ ಮಂದಿ ಕನ್ನಡದಾಗ್ ಕೇಳಾಕ್ ಹತ್ತಾರ. ಬೆಳಗಾವಿ ಆಡುಗನ್ನಡ ಮಾತ್ರ ನನ್ಗ ಗೊತ್ರಿ. ಕನ್ನಡ ಕಲ್ಕೊಂಡ್ ಭಾಷಾಂತರ ಮಾಡೋ ವಿಚಾರ ಐತಿ. ಯಾಕಂದ್ರ ಕಾದಂಬರಿಯ ಮೂಲ ಆಶಯ ಜೋಪಾನ ಆಗಿರ್ಬೇಕಲ್ರಿ. ನಮ್ಮಲ್ಲೂ ಡ್ರಗ್ಸ್ ಮಾಫಿಯಾ ಭಾಳ್ ಆಗೈತಿ, ಯುವಕರು ಈ ಜಾಲದೊಳಗ ಸಿಕ್ಕಿ ಒದ್ದಾಡಕ್ಕತ್ತಾರ್.

ಬರೆಯುವ ಗೀಳು ಚಿಕ್ಕಂದಿನಿಂದ ಬಂದಿದ್ದಾ ?

ಐದನೇ ಕ್ಲಾಸಿನಾಗ್ ಇದ್ದಾಗ ಸಣ್ಣ ಕತೆಗಳನ್ನ ಬರೆದಿದ್ದೆ. ಆಗ ನಮ್ ಹೆಡ್‌ಮಾಸ್ಟರ್ ಶಹಭಾಷ್‌ಗಿರಿ ಕೊಟ್ಟಿದ್ರು. ಅದೇ ಮೊದಲ ಪ್ರೇರಣೆ, ಆಮ್ಯಾಕ್ ನಾನ್ ಎಲ್ಲೇ ಹೋಗ್ಲಿ ಆ ಪರಿಸರದ ವಿಶೇಷಗಳನ್ನ ದಾಖಲಿಸುವ ಹವ್ಯಾಸ ರೂಢಿ ಮಾಡ್ಕೊಂಡಿದ್ದೆ. ನೋಟ್ಸ್‌ನಲ್ಲಿ ದಾಖಲಾಗಿದ್ದ ಜರ್ಮನಿಯ ಅನುಭವಗಳು ಈ ಕಾದಂಬರಿ ಬರೀವಾಗ ರೀಲ್‌ನಂತೆ ಬಿಚ್ಚಿಕೊಳ್ಳಾಕತ್ವು.

ಇಷ್ಟದ ಲೇಖಕರು ಯಾರು ?

ಇತಿಹಾಸ, ಮ್ಯಾಜಿಕ್, ಫ್ಯಾಂಟಸಿ ಇಷ್ಟಪಟ್ಟು ಓದುವ ಪುಸ್ತಕಗಳು. ರಸ್ಕಿನ್‌ ಬಾಂಡ್‌ ಅವರ ‘room on the roof’ ಕೃತಿಯನ್ನು ಹೈಸ್ಕೂಲ್‌ನಲ್ಲಿದ್ದಾಗಲೇ ಓದಿದ್ದೆ. ಅಮೆರಿಕನ್ ಲೇಖಕ ರಾಬರ್ಟ್ ಲ್ಯೂಡ್ಲಮ್, ರಸ್ಕಿನ್ ಬಾಂಡ್ ಹೀಗೆ ಅನೇಕ ಲೇಖಕರ ಪುಸ್ತಕಗಳು ಓದುವ ಗೀಳನ್ನು ಬೆಳೆಸಿವೆ. ರೊಮ್ಯಾಂಟಿಕ್ ಕೃತಿಗಳನ್ನ ಹೆಚ್ಚು ಓದಿಲ್ರಿ..

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯದಲ್ಲಿದ್ದವರು, ರಾಜಕೀಯ ಮತ್ತು ಸಾಹಿತ್ಯ ತದ್ವಿರುದ್ಧ ಧ್ರುವಗಳಲ್ಲವೇ ?

ಕೃಷಿ ಮತ್ತು ಶಿಕ್ಷಣ ನನಗ ಎರಡು ಕಣ್ಣಿದ್ದಂಗ. ಇವನ್ನ ಬಿಟ್ ನಾನಿಲ್ರಿ. ಅದಕ್ಕ ಓದು ಮುಗಿಸಿ ಹೊಳ್ಳಿ ರಾಯಬಾಗದಾಗ್ ಬಂದು ಸೆಟಲ್ ಆಗಿದ್ದು. ಬೆಕ್ಕೇರಿಯಲ್ಲಿ ಕಬ್ಬು ಬೆಳಿತೇವಿ, ಬೆಳಗಾವ್‌ದಾಗ ನಾವೇ ನಡೆಸುವ ಶಾಲೆಗಳು ಅದಾವ. ಊರಿಗೆ ಬಂದು ರಾಜಕೀಯಕ್ಕೆ ಸೇರಿ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನೂ ಆದ ಅನುಭವ ಆತು. ಈ ರೇಜಿಗೆ ಹುಟ್ಟಿಸುವ ರಾಜಕೀಯಕ್ಕೆ ಮತ್ತೆ ಹೋಗಾಂಗಿಲ್ಲ. ಸೇವೆದಾಗೂ ಪ್ರಚಾರ ಬಯಸುವವರು ಈ ರಾಜಕೀಯ ಮಂದಿ.

ಒತ್ತರಿಸಿ ಬರುವ ಸಂಚಾರಿ ಭಾವಗಳು, ಅಕ್ಷರದಲ್ಲಿ ಸ್ಥಾಯಿಯಾಗುವುದೇ ಸಾಹಿತ್ಯ. ಈ ಆಪ್ತಭಾವಗಳು ಮುಕ್ತವಾಗಿದ್ದರೆ, ಅವುಗಳನ್ನ ಮುಕ್ತವಾಗಿ ಬರೆಯಲು ಬಿಟ್ಟರೇನೇ ಚಂದ. ಯಾಕಂದ್ರ ನಮ್ಮೊಳಗೆ ಹೆಪ್ಪುಗಟ್ಟುವ ಭಾವಗಳು ತೀರಾ ಖಾಸಗಿ ಸ್ವತ್ತು. ಅದಕ್ಕ ನಾವು ಮೋಸ ಮಾಡಬಾರ್ದು ಅಲ್ಲಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.