ADVERTISEMENT

ಕಥನ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:45 IST
Last Updated 9 ಮೇ 2020, 19:45 IST
ಲೋಕಾಂತದ ಕಾವು
ಲೋಕಾಂತದ ಕಾವು   

60ಕ್ಕೂ ಹೆಚ್ಚು ಸಣ್ಣ, ದೊಡ್ಡ ಕವಿತೆಗಳ ಸಂಕಲನ. ಅವುಗಳಲ್ಲಿ ಎರಡು ಲಾವಣಿ ಮಾದರಿಯ ನೀಳ್ಗವಿತೆಗಳು. ಕವಿಯ ಮೊದಲ ಕವನ ಸಂಕಲನವಿದು ಎನ್ನುವ ಕಾರಣಕ್ಕಾಗಿಯೋ ಏನೋ 136 ಪುಟಗಳ ಪೈಕಿ ಸುಮಾರು 30 ಪುಟಗಳು ಮುನ್ನುಡಿ, ಸಹೃದಯರ ಟಿಪ್ಪಣಿ ಮತ್ತು ಕವಿಯ ಸ್ವಗತಕ್ಕೆ ಮೀಸಲಾಗಿವೆ. ಮೂಲತಃ ಸಂಶೋಧಕರಾಗಿರುವ, ಕನ್ನಡಕ್ಕೆ ಸಾಕಷ್ಟು ಭಾಷಾಂತರಗಳನ್ನು ಕೊಟ್ಟಿರುವ ಮೋಹನ್‌ ಕುಂಟಾರ್‌ ಇಲ್ಲಿಯ ಕವಿತೆಗಳಲ್ಲಿ ಅರಳಿದ್ದಾರೆ, ನರಳಿದ್ದಾರೆ ಮತ್ತು ಸಿಟ್ಟಿಗೆದ್ದೂ ಇದ್ದಾರೆ. ಈ ಕವಿತೆಗಳ ಮೇಲೆ ನವ್ಯದ ಪ್ರಭಾವವಿದೆ ಅಂದುಕೊಂಡರೂ ನವೋದಯದ ಶೈಲಿಯ ಕವಿತೆಗಳೇ ಹೆಚ್ಚು. ಕವಿ ತನಗೆ ಕಂಡದ್ದನ್ನೆಲ್ಲ ಕವಿತೆಯ ಛಂದಸ್ಸಿಗೆ ಒಗ್ಗಿಸಲು ಶ್ರಮ ಪಟ್ಟಿದ್ದಾರೆ. ಹಾಗೆ ಪಟ್ಟಿರುವ ಶ್ರಮ ಅಲ್ಲಲ್ಲಿ ಕೆಲವು ಕವಿತೆಗಳಲ್ಲಿ ಮಾತ್ರ ಬೆವರಹನಿಯಂತೆ ಮಿಂಚಿದೆ. ಹೆಚ್ಚಿನ ಕವಿತೆಗಳು ಮಹತ್ವಾಕಾಂಕ್ಷೆಯಿಂದ ಆರಂಭವಾಗಿ ಮಧ್ಯೆ ಮುಗ್ಗರಿಸುತ್ತವೆ.

’ಮುಗ್ಧ ಜನರ ಅಳುವಿನಲ್ಲಿ/ ತುಂಬಿದೊಲವ ಕಣ್ಣಿನಲ್ಲಿ/ ಮುಗುಳುಮುಖದ ನಗುವಿನಲ್ಲಿ ಹೊಮ್ಮುತಿತ್ತು ಕವಿತೆ‘ ಎಂದು ಭಾವಗೀತೆಯ ಧಾಟಿಯಲ್ಲಿ ಬರೆದಂತೆಯೇ, ’ಹದ್ದುಗಳ ಹದ್ದುಬಸ್ತಿನಲ್ಲಿ ಇಡಲಾಗದೆ/ ಜೀಕುತ್ತಿವೆ ಗದ್ದುಗೆಗಳು/ ಸದಾಚಾರದ ನುಡಿಹೇಳಿ/ ಅತ್ಯಾಚಾರದ ಗುಡಿಕಟ್ಟುವ/ ಸೋಗಲಾಡಿ ಪರಿವಾರಗಳು‘ ಎಂದು ಬಂಡಾಯದ ಧ್ವನಿಯನ್ನೂ ಹೊರಡಿಸುವ ಈ ಕವಿ, ಬರೆದದ್ದೆಲ್ಲವೂ ಕವಿತೆ ಆಗುವುದಿಲ್ಲ ಎನ್ನುವುದನ್ನು ನೆನಪಿಡುವುದು ಒಳ್ಳೆಯದು. ಹಾಗೆ ನೋಡಿದರೆ, ’ಚೆಲುವ ಚಂದ್ರಾಮ‘ ಮತ್ತು ’ಪರೆಯರ ಕುವರಿ‘ ಎನ್ನುವ ಕೊನೆಯಲ್ಲಿರುವ ಎರಡು ಕಥನಕಾವ್ಯಗಳು ಕವಿಯ ಹೊಸ ಸಾಧ್ಯತೆಗಳ ಕುರಿತು ಆಶಾವಾದ ಹುಟ್ಟಿಸುವಂತಿವೆ.

ಲೋಕಾಂತದ ಕಾವು (ಕವನ ಸಂಕಲನ)
ಲೇ: ಮೋಹನ್‌ ಕುಂಟಾರ್‌
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ
ಮೊ: 94810 42400

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.