ADVERTISEMENT

ಮೊದಲ ಓದು: ‘ಬಡಿಗವೃತ್ತಿ: ವೈಜ್ಞಾನಿಕ ಚಿಂತನೆ’. ವೈಜ್ಞಾನಿಕ ನೆಲೆಗಟ್ಟಿನ ಭರಪೂರ ಮಾಹಿತಿ

ಪ್ರಜಾವಾಣಿ ವಿಶೇಷ
Published 9 ಜುಲೈ 2023, 1:10 IST
Last Updated 9 ಜುಲೈ 2023, 1:10 IST
ಬಡಿಗವೃತ್ತಿ: ವೈಜ್ಞಾನಿಕ ಚಿಂತನೆ’
ಬಡಿಗವೃತ್ತಿ: ವೈಜ್ಞಾನಿಕ ಚಿಂತನೆ’   

ದೇಸಿ ಕೌಶಲವನ್ನೇ ವೃತ್ತಿ ಮಾಡಿಕೊಂಡವರು ಹಲವರಿದ್ದಾರೆ. ಈ ದೇಶಿಜ್ಞಾನವನ್ನು ಕುರಿತು ವಿದ್ವಾಂಸರಿಂದ ಬರೆಯಿಸುವ ‘ವಿಜ್ಞಾನಗಳ ಇತಿಹಾಸ ವಿಭಾಗ’ ಮಾಲೆಯಡಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೆಲವು ಗ್ರಂಥಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಒಂದು ‘ಬಡಿಗವೃತ್ತಿ: ವೈಜ್ಞಾನಿಕ ಚಿಂತನೆ’.

ವಿಶ್ವಕರ್ಮ ಎಂಬ ಪರಿಕಲ್ಪನೆಯಿಂದ ಹಿಡಿದು ಬಡಿಗ ವೃತ್ತಿ ಚಾರಿತ್ರಿಕವಾಗಿ ಬೆಳೆದು ಬಂದ ಬಗೆ, ನಗರ ಮತ್ತು ಗ್ರಾಮ ನಿರ್ಮಾಣಗಳಲ್ಲಿ ಈ ಕುಶಲಕರ್ಮಿಗಳ ಪಾತ್ರ, ದೇವಸ್ಥಾನ ನಿರ್ಮಾಣದ ಸೂಕ್ಷ್ಮಗಳು, ಯಂತ್ರಜ್ಞಾನ, ಪಚ್ಚೆ ಕೌಶಲಗಳು, ಮಾಪನಗಳು, ಮರ ಹಾಗೂ ಉಪಕರಣ ಸಂಸ್ಕೃತಿ ಹೀಗೆ ಕೃತಿಯು ಮಾಹಿತಿಯ ಕಣಜವಾಗಿದೆ. ಬಡಿಗವೃತ್ತಿಯ ಕುಶಲತೆ, ಇತಿಹಾಸ, ಕಾಲಾಂತರದಲ್ಲಿ ಈ ವೃತ್ತಿ ಹೇಗೆಲ್ಲ ಪರಿವರ್ತಿತವಾಯಿತು ಎನ್ನುವುದನ್ನು ಲೇಖಕರು ಅಧ್ಯಯನ ಆಕರಗಳನ್ನು ಆಧರಿಸಿ ದಾಖಲಿಸಿದ್ದಾರೆ. ಸುದೀರ್ಘವಾದ ಪ್ರಸ್ತಾವನೆಯು ಕೃತಿಯ ಆಂತರ್ಯಕ್ಕೆ ಬೆಳಕು ಚೆಲ್ಲುವಷ್ಟು ಗಟ್ಟಿಯಾಗಿದೆ. ಇತಿಹಾಸದ ಪುಟಗಳಲ್ಲಿ ಅಡಗಿರುವ ಕಲೆಯ ಭಾಗವಾದ ದೇಸಿ ಕೌಶಲದ ಅನೇಕ ಆಸಕ್ತಿಕರ ವಿವರಗಳು ಈ ಕೃತಿಯಲ್ಲಿವೆ.

‘ಸಂಸ್ಕೃತ ಮತ್ತು ಕನ್ನಡ ಮಹಾಭಾರತಗಳಲ್ಲಿ ಇಂದ್ರಪ್ರಸ್ಥ, ಅರಗಿನ ಮನೆ, ಮಯ ಸಭಾಂಗಣ ಮತ್ತು ನಗರ ರಚನೆ ಸಂದರ್ಭದಲ್ಲಿ ಮಯ ಮತ್ತು ಆತನ ಸಹೋದರರಾದ ಶಿಲ್ಪಿಗಳು ಮತ್ತು ಕಾಂಶ್ಯಕಾರರ ಉಲ್ಲೇಖಗಳಿವೆ. ಮಯ ಅಂದರೆ ಬಡಿಗ, ಈಗಾಗಲೇ ಗುರುತಿಸಿದಂತೆ ಬಡಿಗನನ್ನು ಭಾರತೀಯ ಸಾಹಿತ್ಯದಲ್ಲಿ ಧಾರುಕ ವರ್ಧಕಿ ಇತ್ಯಾದಿ ಪರ್ಯಾಯ ಹೆಸರುಗಳಿಂದ ಕರೆಯಲಾಗಿದೆ. ಮಯ ಅಥವಾ ಬಡಿಗನೆಂದರೆ ಸಕಲ ಕರ್ಮಗಳಿಂದ ಲೋಕೋಪಕಾರಿಯಾದವನು ಎಂದು ಅರ್ಥ. ಗ್ರಾಮ ಮತ್ತು ನಗರ ರಚನಾ ತಂತ್ರಜ್ಞಾನದಲ್ಲಿ ಬಡಿಗ ಹರಪ್ಪ ಸಂಸ್ಕೃತಿಗಿಂತ ಮೊದಲೇ ಪಳಗಿದವನಾಗಿದ್ದ.’–ಕೃತಿಯ ಮಾಹಿತಿಪೂರ್ಣತೆಗೆ ಈ ಸಾಲುಗಳು ಉದಾಹರಣೆಗಳಷ್ಟೆ. ಇತಿಹಾಸದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿ ಮನಸ್ಸಿನವರಿಗೆ ಇಂತಹ ಭರಪೂರ ಮಾಹಿತಿ ಈ ಕೃತಿಯಲ್ಲಿ ದೊರೆಯುತ್ತಾ ಹೋಗುತ್ತದೆ. ದೇಸಿ ಕಲೆ, ಇತಿಹಾಸದ ಅಧ್ಯಯನ ಮಾಡುವವರಿಗೆ ಆಕರಗ್ರಂಥವಾಗಬಲ್ಲ ಲಕ್ಷಣವೂ ಈ ಕೃತಿಗೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.