ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಲೇಖಕ ಮಾಲತೇಶ ಅಂಗೂರರು ‘ಕಾಡು–ಮೇಡು’ ಕೃತಿ ಪ್ರಕಟಿಸಿದ್ದಾರೆ. ವನ್ಯಜೀವಿಗಳು ಮತ್ತು ಕಾಡಿನ ಕುರಿತು ಒಂದಷ್ಟು ಮಾಹಿತಿ ಹೊಂದಿರುವ ಲೇಖನಗಳ ಪುಸ್ತಕ ಇದಾಗಿದೆ.
ಒಟ್ಟು 32 ಲೇಖನಗಳಿದ್ದು, ಹಾವೇರಿ ಸುತ್ತಮುತ್ತಲಿನ ಕಾಡು, ವನ್ಯಜೀವಿಗಳ ಸಮಸ್ಯೆಯತ್ತ ದೃಷ್ಟಿ ಹಾಯಿಸುತ್ತದೆ. ‘ಪ್ರಾಣಿಗಳಿಗೂ ಬಾಯಾರಿಕೆ ಉಂಟು’ ಎಂಬ ಲೇಖನ ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆ ಎಷ್ಟಿದೆ ಎಂಬುದನ್ನು ವಿವರಿಸುತ್ತದೆ. ಬಹುತೇಕ ಲೇಖನಗಳಲ್ಲಿ ಚಿತ್ರಗಳಿಗೂ ಆದ್ಯತೆ ನೀಡಲಾಗಿದ್ದು, ಪ್ರಾಣಿ ಪ್ರಪಂಚದ ಚಿತ್ರಗಳು ಕೂಡ ಸುಂದರವಾಗಿವೆ. ಹೀಗಾಗಿ ಇದನ್ನು ಚಿತ್ರ–ಬರಹ ಕೃತಿ ಎನ್ನಬಹುದು.
‘ಕೆಂದಳಿಲು ಹಾರಿತು’ ಎಂಬ ಲೇಖನದಲ್ಲಿ ಲೇಖಕರು ಕೆಂದಳಿನ ವಿಸ್ಮಯ ಜಗತ್ತಿನ ಪರಿಚಯ ಮಾಡಿಕೊಡುತ್ತಾರೆ. ಬೇಟೆಗಾರರ ದುರಾಸೆಗೆ ಈ ಅಳಿಲುಗಳು ಆಹಾರವಾಗಿ, ಅವುಗಳ ಚರ್ಮ ಸಂಪಾದನೆ ಮಾರ್ಗವಾಗಿ ಹೇಗೆ ಇಡೀ ಸಂತತಿಯೇ ನಾಶವಾಗುತ್ತಿದೆ ಎಂಬ ವಾಸ್ತವದ ಅರಿವು ಮೂಡಿಸುವ ಕಾಳಜಿ ಇಲ್ಲಿ ಕಾಣಿಸುತ್ತದೆ. ಬಹುತೇಕ ಲೇಖನಗಳು ಹಾವೇರಿ ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಕುರಿತಾಗಿವೆ.
ರಾಣೇಬೆನ್ನೂರಿನಲ್ಲಿರುವ ಕೃಷ್ಣಮೃಗ ಅಭಯಾರಣ್ಯದ ಅವ್ಯವಸ್ಥೆಯ ಕುರಿತು ಲೇಖಕರು ಒಂದು ಲೇಖನದಲ್ಲಿ ಮಾತನಾಡುತ್ತಾರೆ. ಚಂದ್ರಗುತ್ತಿ ಬೆಟ್ಟ ಏರುವ ಮೂಲಕ ಓದುನಿಗೆ ಆ ಪರಿಸರದ ಸುತ್ತಲಿನ ಪರಿಚಯ ಮಾಡಿಕೊಡುತ್ತಾರೆ. ಮುಟ್ಟಿದರೆ ಮುನಿ ಸಸ್ಯವನ್ನು ಪರಿಚಯಿಸಿಕೊಡುತ್ತ ಸಸ್ಯಲೋಕದ ವಿಸ್ಮಯಗಳನ್ನು ತೆರೆದಿಡುತ್ತಾರೆ. ಏಡಿ ತಿನ್ನುವ ಬೂದು ಬಣ್ಣದ ಮುಂಗುಸಿ ಪ್ರಪಂಚ ಒಂದು ಬಗೆಯ ಅಚ್ಚರಿಯ ಮಾಹಿತಿ ಕಣಜವಾಗಿದೆ. ರಾಣೆಬೆನ್ನೂರಿನ ಓರ್ವ ವ್ಯಕ್ತಿ ಮನೆಯೆದುರು ಬಿದ್ದಿದ್ದ ಕಾಗೆಗೆ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸದ ಘಟನೆ ಬಹಳ ಸ್ವಾರಸ್ಯಕರವಾಗಿದೆ. ಜತೆಗೆ ಪಶು–ಪಕ್ಷಿಗಳ ಕುರಿತಾಗಿ ಮನುಷ್ಯನಿಗೆ ಇರಬೇಕಾದ ಕಾಳಜಿ ಮತ್ತು ಪ್ರಜ್ಞೆಯನ್ನೂ ತಿಳಿಸಿಕೊಡುತ್ತದೆ. ಸಿಹಿ ನೀರಿನ ಏಡಿಗಳ ವಿಶಿಷ್ಟ ಪ್ರಪಂಚದ ಪರಿಚಯ ಮಾಡಿಸುತ್ತಾರೆ. ಒಟ್ಟಾರೆಯಾಗಿ ಪಶು–ಪಕ್ಷಿ–ಕಾಡು–ಪ್ರಾಣಿಗಳ ಜಗತ್ತಿನ ಕುರಿತಾಗಿ ಸ್ಥೂಲ ಪರಿಚಯ ನೀಡುವ ಕೃತಿಯಲ್ಲಿ ನಾವು ಹೇಗೆ ಇವುಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕೆಂಬುದು ತಿಳಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.