ADVERTISEMENT

ಗಾರುಡಿಗ ಭಾಷೆ, ಅಲೌಕಿಕ ಕಥನ

ಬಿ.ಎಂ.ಹನೀಫ್
Published 31 ಮೇ 2020, 4:13 IST
Last Updated 31 ಮೇ 2020, 4:13 IST
ಅಕಥ ಕಥಾ (ಪುಸ್ತಕ ವಿಮರ್ಶೆ)
ಅಕಥ ಕಥಾ (ಪುಸ್ತಕ ವಿಮರ್ಶೆ)   

2012ರಲ್ಲಿ ಮೊದಲ ಕಥಾ ಸಂಕಲನ ‘ಹೊಳೆ ಬದಿಯ ಬೆರಗು’ ಹೊರತಂದ ಕೇಶವ ಮಳಗಿ, ಅದಾಗಿ ಎಂಟು ವರ್ಷಗಳ ಬಳಿಕ ಎರಡನೇ ಕಥಾ ಸಂಕಲನ ‘ಅಕಥ ಕಥಾ’ವನ್ನು ಓದುಗರ ಕೈಗಿತ್ತಿದ್ದಾರೆ. ಸಂಕಲನದಲ್ಲಿ ಹೊಸ ಕಥೆಗಳೆಂದು ಇರುವುದು ಐದು. ಹಿಂದಿನ ಸಂಕಲನದಲ್ಲಿದ್ದ ಮೂರು ಕಥೆಗಳನ್ನು ಇದಕ್ಕೆ ಸೇರಿಸಲಾಗಿದೆ. ಹಿಂದಿನ ಕಥೆಗಳನ್ನು ಓದದಿದ್ದವರಿಗೆ, ಮಳಗಿಯವರ ಒಟ್ಟು ಕಥಾಶಯಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಹಕಾರಿ ಆಗುವುದರಿಂದ ಇದು ಒಂದರ್ಥದಲ್ಲಿ ಒಳ್ಳೆಯದೇ ಆಯಿತು.

ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ಕಥೆ ಬರೆಯುವ ಮಳಗಿ ಅವರ ಕಥೆಗಳು ಉದ್ದೀಪಿಸುವ ಜೀವನಮೌಲ್ಯಗಳನ್ನು ಒಟ್ಟಾಗಿ ಗ್ರಹಿಸಲು ಇದು ನೆರವಾಗಿದೆ.’ಕಥೆಗಳೇ ಜೀವನಧರ್ಮ, ಅರ್ಥ ಮತ್ತು ಮೋಕ್ಷ‘ ಎಂದು ಗಟ್ಟಿಯಾಗಿ ನಂಬಿಕೊಂಡಿರುವ ಮಳಗಿ, ಈ ಸಂಕಲನಕ್ಕೆ ಇಟ್ಟಿರುವ ಹೆಸರೇ ಕುತೂಹಲಕರ. ಇಲ್ಲಿರುವ ಕಥೆಗಳಲ್ಲಿ ತಾನು ಎಲ್ಲವನ್ನೂ ಹೇಳಲಿಕ್ಕೆ ಆಗಿದೆಯೋ ಇಲ್ಲವೋ; ಅಥವಾ ಹೇಳಿದ್ದಕ್ಕಿಂತ ಮಿಗಿಲಾದದ್ದು ಇನ್ನೇನೋ ಇದೆಯೋ ಎನ್ನುವ ಅವರ ಅತೃಪ್ತಿಯನ್ನೇ ಅದು ಸೂಚಿಸುವಂತಿದೆ.

ಸಂಕಲನದ ಟೈಟಲ್‌ ಕಥೆ ’ಅಕಥ ಕಥಾ‘ದ ಪ್ರಮೋದ ಇದಕ್ಕೆ ಒಳ್ಳೆಯ ಉದಾಹರಣೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ’ ತುಡಿಯುವ ಪ್ರಮೋದ, ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ, ಕೊನೆಗೆ ಒಂದು ಅನುಭವದಿಂದ ಇನ್ನೊಂದು ಅನುಭವಕ್ಕೆ ತೆರೆದುಕೊಳ್ಳುವ ಬೆರಗನ್ನು ಮಳಗಿ ಕಣ್ಣಿಗೆ ಕಟ್ಟುವಂತೆ ತೆರೆದಿದ್ದಾರೆ. ಅದಕ್ಕೆ ತದ್ವಿರುದ್ಧ ಪಾತ್ರ ಸಲೋನಿ. ಅಧ್ಯಾತ್ಮದ ಅನುಭವ ಮತ್ತು ದಾಖಲೀಕರಣವೂ ವ್ಯಾಪಾರವಾಗುವ ವೈರುಧ್ಯ.

ADVERTISEMENT

ಆಕಾಶದಲ್ಲಿ ನಿಧಾನಕ್ಕೆ ತೇಲಾಡುವ ಸಮುದ್ರಹಕ್ಕಿಯೊಂದು ಒಮ್ಮಿಂದೊಮ್ಮೆಲೆ ನೀರಿಗೆ ನುಗ್ಗಿ ಮೀನನ್ನು ಎತ್ತಿಕೊಂಡು ಮೇಲಕ್ಕೆ ಚಿಮ್ಮುವಂತೆ ಈ ಕಥೆ ಶೋಧದ ವಿಶಿಷ್ಟ ಅನುಭವವೊಂದನ್ನು ನಮ್ಮದಾಗಿಸುತ್ತದೆ. ಹುಡುಕಾಟ ಅಥವಾ ಶೋಧ ಮಳಗಿಯ ಕಥೆಗಳ ಸ್ಥಾಯೀಭಿತ್ತಿಯೂ ಹೌದು. ಆದರೆ ಅದು ಬಹಿರಂಗದ್ದಲ್ಲ, ಅಂತರಂಗದ ಶೋಧ. ಅಂತರಂಗವನ್ನೂ ದಾಟಿದ ಇನ್ಯಾವುದೋ ಅನೂಹ್ಯ ಚೈತನ್ಯದ ಶೋಧ.

‘ಹೊಳೆಬದಿಯ ಬೆಳಗು’ ಕಥೆಯಲ್ಲೂ ಈ ಶೋಧ ಇನ್ನೊಂದು ಬಗೆಯಲ್ಲಿ ವ್ಯಕ್ತವಾಗುತ್ತದೆ. ಬಾಬಣ್ಣ ಸಂಸಾರದಲ್ಲಿ ಅನುಭವಿಸಿದ ದುಃಖಗಳನ್ನೆಲ್ಲ ನೀಗಿಸಿಕೊಳ್ಳಲು ಬಾಬಾ ಆಗಿ ಅಲೆದಾಡುತ್ತಿದ್ದರೆ, ಚಂದ್ರವ್ವ ಕಣ್ಮರೆಯಾಗಿರುವ ಗಂಡನನ್ನು ಹುಡುಕಿಕೊಡು ಎಂದು ಬೇಡಲು ಮೌನೇಶನ ಜಾತ್ರೆಗೆ ಬಂದಿದ್ದಾಳೆ. ಮೊಮ್ಮಗನನ್ನು ಜೀತದಿಂದ ಬಿಡಿಸಿಕೊಳ್ಳಲು ಬೇಕಾದ ಹಣವನ್ನು ಭಿಕ್ಷೆ ಎತ್ತಿಯಾದರೂ ಗಳಿಸಲು ಜಾತ್ರೆಗೆ ಬಂದ ಚೊಂಚ ಹನುಮವ್ವಳದು ಇನ್ನೊಂದು ಬಗೆಯ ಶೋಧ. ಈ ಮೂವರೂ ಒಬ್ಬರಿಗೊಬ್ಬರು ಆತುಕೊಂಡು ಓಡಾಡುತ್ತಾರೆ. ಜಾತ್ರೆಯ ಜೊತೆಗೆ ಮನುಷ್ಯನ ಜೀವಜಾತ್ರೆಯ ಮಿಂಚುಗಳನ್ನು ಹೊಳೆಯಿಸುವ ಅಪೂರ್ವ ಕಥೆಯಿದು.

ಸಂಕಲನದ ಪ್ರಭಾವಶಾಲಿ ಕಥೆ ‘ಅತಿಲೋಕ ಸುಂದರಿ’. 2012ರ ಈ ಕಥೆ ವಲಸೆ ಕಾರ್ಮಿಕರಾದ ಅವ್ವ–ಮಗಳ ಜೀವಾಂತಿಕ ಸಂದಿಗ್ಧವನ್ನು ಬಳ್ಳಾರಿ ಭಾಗದ ಗಡಸುಕನ್ನಡದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಬೆನೆವಿಟ್ಜನ ನಾಟಕಗಳಲ್ಲಿ ಬರುವಂತಹ ಅತಿನಾಟಕೀಯ ಭಾಷೆಯ ಗಾರುಡಿಗ ಪರಿಣಾಮ ಇಲ್ಲಿ ವಿಸ್ಮಯ ಹುಟ್ಟಿಸುವಂತಿದೆ.

ಕಥೆಯ ಕೊನೆಯಲ್ಲಂತೂ ಬೆಳಕಿರದ ಕುರುಡಿ ಕಣ್ಣಿನಲ್ಲಿ ನೀರು ಹರಿದಂತೆ ಓದುಗನೂ ತೇವವಾಗುತ್ತಾನೆ. ‘ಬಾರೋ ಗೀಜಗ’ದ ಪ್ರೊಫೆಸರ್‌ ಕದಂ ಮತ್ತು ನೀಲಾಂಜನಾ ಚೊಟರ್ಜಿ, ಕನ್ಯಾಗತದ ವಾಸುದೇವ, ‘ಮಾಘಮಾಸದ ಇಳಿಸಂಜೆ’ಯ ಕಥಾನಾಯಕ ಎಲ್ಲರದ್ದೂ ಹುಡುಕಾಟವೇ. ಸಾಮಾನ್ಯವಾಗಿ ಸುದೀರ್ಘ ವಿವರಗಳ ಮೂಲಕ ಕಥೆ ಹೇಳುವ ಮಳಗಿ, ‘ಮಾಘಮಾಸ..’ದಲ್ಲಿ ಮೂರೇ ಪುಟಗಳಲ್ಲಿ ಹೊಳೆಯಿಸುವ ಮಿಂಚು ಅಪರೂಪದ್ದು.

ಹಾಗೆ ನೋಡಿದರೆ ಇಲ್ಲಿರುವ ಎಲ್ಲ ಕಥೆಗಳಿಗೂ ಅಂತರ್‌ ಸಂಬಂಧವಿದೆ. ಮೂರ್ತ– ಅಮೂರ್ತಗಳ ನಡುವೆ ಜೀಕುತ್ತಾ ಲೌಕಿಕವನ್ನು ಮೀರಿದ ಯಾವುದೋ ಇನ್ನೊಂದನ್ನು ಶೋಧಿಸುವ ಎಲ್ಲ ಕಥೆಗಳಲ್ಲಿ ಜಾತ್ರೆ, ಪಯಣ ಮತ್ತೊಬ್ಬ ಸಾಧು ಪದೇ ಪದೇ ಕಾಣಿಸಿಕೊಳ್ಳುವುದು ಇದನ್ನೇ ಸೂಚಿಸುವಂತಿದೆ. ವಿವರಗಳಲ್ಲೇ ಮುಳುಗಿ ಕಥೆಯೇ ಕಳೆದುಹೋದಂತೆ ಅನ್ನಿಸುವ ‘ವೈಶಾಖದ ದಿನಗಳ’ಲ್ಲೂ ಪಯಣದ ಅನುಭಾವ ಎದ್ದುಕಾಣುತ್ತದೆ. ಕಲಾವಿದರಾದ ಆರ್‌. ನಾಗರಾಜ್‌ ಮತ್ತು ನಾಗರಾಜ್‌ ರೋಣುರು, ಇಲ್ಲಿರುವ ಎಲ್ಲ ಕಥೆಗಳ ಜೀವಬಸಿದು ತೋರುವಂತಹ ರಕ್ಷಾಕವಚ ಮತ್ತು ರೇಖೆಗಳನ್ನು ರೂಪಿಸಿದ್ದಾರೆ.

ಅಕಥ ಕಥಾ
(ಕಥಾ ಸಂಕಲನ)
ಲೇಖಕ: ಕೇಶವ ಮಳಗಿ
ಪ್ರಕಾಶನ: ಸಂಗಾತ ಪುಸ್ತಕ
ಮೊಬೈಲ್: 9341757653

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.