ADVERTISEMENT

ಒಳನೋಟ: ನೂರು ಕಥೆ, ನೂರಾರು ತಿವಿತ

ಅಭಿಲಾಷ್ ಪಿ.ಎಸ್‌.
Published 27 ನವೆಂಬರ್ 2021, 19:30 IST
Last Updated 27 ನವೆಂಬರ್ 2021, 19:30 IST
ಒಂದು ಮತ್ತು ನೂರು ಕಥೆಗಳು
ಒಂದು ಮತ್ತು ನೂರು ಕಥೆಗಳು   

ಇಲ್ಲಿ ಯಾವ ಕಥೆಗಳಿಗೂ ಶೀರ್ಷಿಕೆಯಿಲ್ಲ! ಕಥೆಯ ಸಂಖ್ಯೆಯೇ ಇವಕ್ಕೆ ನಾಮಧೇಯ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯೇಕೆ ಎನ್ನುವಂತೆ ಇಲ್ಲಿ ಅರ್ಧ ಪುಟದಲ್ಲೇ ಹೇಳಬೇಕಾಗಿರುವುದನ್ನು ಹೇಳಿ, ತಿವಿಯಬೇಕಾಗಿರುವುದನ್ನು ತಿವಿದು ಮುಗಿಯುವ ಕಥೆಗಳಿವೆ. ಆಗೊಮ್ಮೆ ಈಗೊಮ್ಮೆ ಮೂರ್ನಾಲ್ಕು ಪುಟಗಳಷ್ಟು ಬೆಳೆದ ಕಥೆಗಳೂ ಇವೆ. ಒಂದರ್ಥದಲ್ಲಿ ಒಂದಿಷ್ಟು ಪಂಚತಂತ್ರ, ಪುರಾಣ, ಇತಿಹಾಸ, ಉಪನಿಷತ್‌ ಎಲ್ಲವನ್ನೂ ತಮ್ಮದೇ ಕಲ್ಪನೆಯಲ್ಲಿ ಹದವಾಗಿ ಹುರಿದು, ಸಮಕಾಲೀನ ವಸ್ತು, ವಿಷಯಗಳನ್ನು ಕಥಾ ಸಂಕಲನದಲ್ಲಿ ಹಿಡಿದಿಟ್ಟು ಒಗ್ಗರಣೆ ಹಾಕಿ ಕೊಟ್ಟಿದ್ದಾರೆ ಪ್ರೊ.ಕೆ.ಈ. ರಾಧಾಕೃಷ್ಣ.

ಈ ಘಾಟು ಒಮ್ಮೊಮ್ಮೆ ‘ಯೋಚನೆ’ಯ ಕೆಮ್ಮು ತರಿಸುತ್ತದೆ. ಅಂದಹಾಗೆ ಈ ಒಗ್ಗರಣೆ ಡಬ್ಬಿಯ ಹೆಸರು ‘ಒಂದು ಮತ್ತು ನೂರು ಕಥೆಗಳು’. ಇದರೊಳಗೆ ಘಾಟು ಹೆಚ್ಚಿಸುವ, ಚಿಟಿಕೆಯಷ್ಟೇ ಹಾಕಿದರೂ ಖಾರ ಹೆಚ್ಚಿಸುವ ಒಂದಿಷ್ಟು ಮಸಾಲೆಗಳಿವೆ. ಮತ್ತಷ್ಟು ತಡಕಾಡಿದರೆ ಆರು ಮೂಲೆಗಳಲ್ಲಿ ಅಡಗಿ ಕುಳಿತ ಗಾಂಧೀಜಿ ಎದ್ದು ಕುಳಿತು ಕಥೆ ಹೇಳಲು ಆರಂಭಿಸುತ್ತಾರೆ. ಪಂಚತಂತ್ರದ ಪ್ರಾಣಿಪಕ್ಷಿಗಳು ಗೂಡು ಮಾಡಿಕೊಂಡಿವೆ. ಪುರಾಣ–ಇತಿಹಾಸದ ಘಮಲೂ ಇಲ್ಲಿದೆ.

ಹಾಗೆಂದು ಇದು ಮಕ್ಕಳ ಕಥೆಯೇ? ಹೌದು... ಅಲ್ಲ... ಎನ್ನುವ ಎರಡೂ ಉತ್ತರ ಓದಿದ ಬಳಿಕ ಎದುರಿಗಿರುತ್ತದೆ. ಸಾಮಾನ್ಯವಾಗಿ ಹೇಳುವ ಮಾತು, ಅನ್ನ ಬೆಂದಿದೆಯೇ ಎನ್ನುವುದನ್ನು ತಿಳಿಯಲು ಒಂದಕ್ಕಿ ಕಾಳು ನೋಡಿದರೆ ಸಾಕು. ಇಲ್ಲೂ ಅಷ್ಟೆ. ನರಿಯ ಗುಂಪೊಂದು ಕಾಡಿನ ರಾಜರುಗಳಾಗಲು ಸಿಂಹ, ಹುಲಿಯ ಬಣ್ಣ ಹಚ್ಚಿದ ‘ಒಂದನೆಯ ಕಥೆ’. ಈ ಕಥೆಯನ್ನೊಮ್ಮೆ ವಿಧಾನಸೌಧ, ಸಂಸತ್‌ನಲ್ಲಿ ಕುಳಿತಿರುವನಮ್ಮನ್ನಾಳುವವರಿಗೆ ಹೇಳೋಣ ಎಂದೆನಿಸಿದರೆ, ಅವರ ಬಾಯಿಯಿಂದ ನಮಗೆಲ್ಲರಿಗೂ ಈ ಕಥೆ ಹೇಳಿಸಿದರೆ ಸೂಕ್ತ ಎಂದು ಮತ್ತೊಮ್ಮೆ ಎನಿಸಿಬಿಡುತ್ತದೆ. ಮಗದೊಮ್ಮೆ ಮಕ್ಕಳಿಗೊಂದು ನೀತಿಪಾಠದಂತೆ ಅನಿಸಿಬಿಡುತ್ತದೆ. ಹೀಗಾಗಿಯೇ ಇಲ್ಲಿ ನೂರು ಮತ್ತೊಂದು ಕಥೆ ಇದ್ದರೂ, ನೂರಾರು ತಿವಿತಗಳು ಇರುವುದು ಓದಿನ ಕ್ಷಣಕ್ಷಣಕ್ಕೂ ಅರಿವಿಗೆ ಬರುತ್ತದೆ.

ADVERTISEMENT

ಶೀರ್ಷಿಕೆ ಇಲ್ಲದ ಕಥೆಗಳೇ ಎಂದೊಮ್ಮೆ ಆಶ್ಚರ್ಯವಾಗಿ ನಿಮಿಷದೊಳಗೆ ಓದಿ ಮುಗಿಸಿದಾಗ, ಇವುಗಳಿಗೆ ಶೀರ್ಷಿಕೆಯ ಅಗತ್ಯವೂ ಇಲ್ಲ ಎನಿಸುತ್ತದೆ. ಆದರೆ ನೂರ ಒಂದನೆಯ ಕಥೆ ಸ್ವಲ್ಪ ಭಿನ್ನ. ಇಲ್ಲಿ ಶೀರ್ಷಿಕೆ ಸಂಖ್ಯೆಯ ರೂಪ ಪಡೆಯದೆ ಅಕ್ಷರ ರೂಪಕ್ಕೆ ಮರಳಿದೆ. ‘ನೂರ ಒಂದನೆಯ ಕಥೆ’ ವೆಂಕಪ್ಪ–ಕಿಟ್ಟಪ್ಪನ ನಡುವೆ ನಡೆಯುವ ಶರೀರ ಒಗೆಯುವ ಸಂಭಾಷಣೆಯ ಕಥೆ. ಈ ಕೃತಿಯಲ್ಲಿ ಹೇಗೆ ಪ್ರತಿ ಕಥೆಗೂ ಹಲವು ಆಯಾಮಗಳಿವೆಯೋ ಅದೇ ರೀತಿ ಈ ಕಥೆಗೂ ಇವೆ. ಇಲ್ಲಿ ‘ಒಗೆದರೆ’ ಎನ್ನುವ ಅಕ್ಷರ ಚಿಗುರಿನಂತೆ ಒಂದಕ್ಕೊಂದು ಬೆಳೆದು ಒಳಾರ್ಥ ಕಲ್ಪಿಸುತ್ತಾ ‘ಅ–ಕ್ಷರ’ ಪ್ರಪಂಚವನ್ನೇ ತೆರೆದಿದೆ.

ಸಂಕ್ಷಿಪ್ತತೆ ಇಲ್ಲಿ ದೊಡ್ಡ ಕಾದಂಬರಿಯ ಕೆಲಸ ಮಾಡಿ ಸುಮ್ಮನೆ ಕುಳಿತಿದೆ. ಇಲ್ಲಿನ ಎಲ್ಲ ಕಥೆಗಳೂ ವೈಯಕ್ತಿಕ ಮತ್ತು ಸಾಮಾಜಿಕ ತಿಳಿವಳಿಕೆಯನ್ನು ಮೂಡಿಸುತ್ತಾ ಮುನ್ನಡೆಯುತ್ತವೆ. ಒಂದಲ್ಲಾ ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾ ಸಾಗುತ್ತವೆ. ಮಕ್ಕಳಿಗೆ ಓದಿ ಹೇಳುವ ಮುನ್ನ ನಾವೊಮ್ಮೆ ಓದಿ ಬದಲಾಗಬೇಕಾಗದ ಅವಶ್ಯಕತೆ ಇರುವುದನ್ನೂ ಅವುಗಳು ಅರಹುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.