ಗಂಧವತಿ
‘ಗಂಧವತಿ’ ನಾಟಕದ ವಸ್ತು ನಾಟ್ಯರಾಣಿ ಎಂದೇ ಪರಿಚಿತಳಾಗಿರುವ ಶಾಂತಲೆ ಮತ್ತು ಬಿಟ್ಟಿದೇವನನ್ನು ಕೇಂದ್ರೀಕರಿಸಿದೆ. ಚಾರಿತ್ರಿಕ ಸನ್ನಿವೇಶವನ್ನು ರಂಗರೂಪಕ್ಕೆ ಸಂಶೋಧನಾ ನೋಟದಲ್ಲಿ ಚಂದ್ರು ಕಾಳೇನಹಳ್ಳಿ ತಂದಿದ್ದಾರೆ. ಇತಿಹಾಸ ಪಠ್ಯ, ಸಿನಿಮಾ, ಜನಪದ, ವಾಸ್ತುಶಿಲ್ಪದ ಮೂಲಕ ಶಾಂತಲೆ–ವಿಷ್ಣುವರ್ಧನ ಬೇರೆ ಬೇರೆ ರೂಪದಲ್ಲಿ ಜನಮಾನಸದಲ್ಲಿ ನೆಲೆಗೊಂಡಿದ್ದಾರೆ. ಶಾಂತಲೆ ಮತ್ತು ವಿಷ್ಣುವರ್ಧನನ ಮೂಲಕ ಹೊಯ್ಸಳ ರಾಜವಂಶದ ಇತಿಹಾಸವನ್ನು ಕೃತಿಕಾರ ಇಲ್ಲಿ ಕಟ್ಟಿಕೊಡುತ್ತಾರೆ.
ನಾಟಕಕಾರರೇ ಇಲ್ಲಿ ಸೂತ್ರದಾರರಾಗಿ ರಾಜಮನೆತನದ ಆದಿ ಪುರುಷನ ಕಥೆಯನ್ನು ಹೇಳುತ್ತಾರೆ. ಅವರು ನಾಟಕದ ವಿಸ್ತರಣೆಯ ತಂತ್ರದಲ್ಲಿ ಸೂತ್ರದಂತೆಯೇ ಕಾಣಿಸುತ್ತಾರೆ. ಗತಕಾಲವನ್ನು ಚರಿತ್ರೆಯ ಕೃತಿಯೊಂದು ಅನುಸಂಧಾನ ಮಾಡುವ ಬಗೆಗಿಂತ, ಸೃಜನಶೀಲ ಕೃತಿಯೊಂದು ಹೇಗೆ ಭಿನ್ನವಾಗಿ ನಿರೂಪಿಸುತ್ತದೆ ಎನ್ನುವುದು ಕುತೂಹಲದ ಅಂಶ. ಅಂತಹ ಸವಾಲನ್ನು ಬಿಡಿಸುವ ಪ್ರಯತ್ನವನ್ನು ಚಂದ್ರು ಇಲ್ಲಿ ಮಾಡಿದ್ದಾರೆ.
ಧರ್ಮ ಎನ್ನುವುದು ಪಾಲಿಸುವವನ ಗುಣಧರ್ಮಕ್ಕೆ ಸಂಬಂಧಿಸಿದ ಸಂಗತಿಯಾಗಿತ್ತು. ವೈಷ್ಣವ, ಜೈನ, ಶೈವ ಮತಗಳನ್ನು ಅನುಯಾಯಿಗಳು ತಮ್ಮ ಒಲವು ನಿಲುವಿನ ಮೇಲೆ ನಿರ್ಧರಿಸುತ್ತಿದ್ದರು. ಇಲ್ಲಿ ರಾಜ ಬಿಟ್ಟಿದೇವ ಜೈನ ಧರ್ಮ ತ್ಯಜಿಸಿ ವೈಷ್ಣವನಾದ ಮೇಲೆ ವಿಷ್ಣುವರ್ಧನ ಆಗುತ್ತಾನೆ. ಸಹಜವಾಗಿ ಆತ ಸರ್ವಧರ್ಮ ಸಹಿಷ್ಣು ಕೂಡ. ಸರ್ವಧರ್ಮಗಳ ಸಾರವೂ ಒಂದೇ ಆಗಿತ್ತು ಅನ್ನುವ ಅಂಶವನ್ನು ಈ ನಾಟಕ ತೋರಿಸುತ್ತದೆ.
ಗಂಧವತಿ ಲೇ: ಡಾ. ಚಂದ್ರು ಕಾಳೇನಹಳ್ಳಿ ಪ್ರ: ಅನಿಕೇತನ, ಚನ್ನರಾಯಪಟ್ಟಣ ಮೊ: 9448868548 ಪು: 128 ರೂ: 150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.