ADVERTISEMENT

ಬಹುತ್ವದ ಮಹತ್ವ ಸಾರುವ ‘ಸಣ್ತಿಮ್ಮಿ’

ಮೊದಲ ಓದು

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 5:55 IST
Last Updated 8 ಜುಲೈ 2018, 5:55 IST
   

ಇದು. ಸರಸ್ವತಿ ಬರೆದಿರುವ ಆರು ಏಕಾಂಕಗಳ ಪುಸ್ತಕ ‘ಸಣ್ತಿಮ್ಮಿ ಪುರಾಣ’. ದೃಶ್ಯವಾಗಿ ಕಣ್ಮುಂದೆ ಬಂದಿದ್ದ ಸಣ್ತಿಮ್ಮಿ ಇಲ್ಲಿ ಅಕ್ಷರ ರೂಪದಲ್ಲಿ ಓದುಗರ ಮನ ತಟ್ಟುತ್ತಾಳೆ. ‘ಪುರಾಣ’ಗಳಲ್ಲಿ ವಾಸ್ತವದ ಕಥೆಗಳನ್ನು ದಾಟಿಸುತ್ತಾ, ಶೋಷಿತರ ಧ್ವನಿಯಂತೆ ಪ್ರತಿಭಟಿಸುತ್ತಾ, ಮಹಿಳಾ ಪರ ಹೋರಾಟಗಾರ್ತಿಯಾಗಿ ಸಣ್ತಿಮ್ಮಿಯನ್ನು ಕಣ್ಮುಂದೆ ನಿಲ್ಲಿಸುತ್ತಾರೆ ಸರಸ್ವತಿ. ಆಯಾ ಕಾಲಘಟ್ಟದಲ್ಲಿನ ಘಟನೆಗಳಿಗೆ ಪ್ರತಿಯಾಗಿ ಅನಕ್ಷರಸ್ಥೆ ಸಣ್ತಿಮ್ಮಿ ಹೇಳುವ ಮಾತುಗಳು ಅಕ್ಷರಸ್ಥರ ಎದೆಗೆ ಚುಚ್ಚುತ್ತವೆ.

ಪುಸ್ತಕದಲ್ಲಿನ ಮೊದಲನೇ ಏಕಾಂಕ ‘ರಾಮಾಯ್ಣ’. ಚಾಮರಾಜನಗರ ಹಾಗೂ ತುಮಕೂರು ಶೈಲಿಯ ಕನ್ನಡವನ್ನು, ಅದರ ಸೊಗಡನ್ನು ಸಮರ್ಥವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ರಾಮಾಯಣದ ಕಥೆ ಹೇಳುವ ಜತೆ ಜತೆಗೆ ಪ್ರಸ್ತುತ ಘಟನೆಗಳ ಹಾಗೂ ಸ್ಥಳಗಳ ಹೋಲಿಕೆ ಬೆರಗು ಮೂಡಿಸುತ್ತದೆ. ವ್ಯವಸಾಯ ಮಾಡುತ್ತಿದ್ದ ಜನಕ ಮಹಾರಾಜನನ್ನು ಉದ್ದೇಶಿಸಿ ಹೇಳುವಾಗ, ‘ಇಗೀನ್‌ ಇದಾನ್‌ಸೋದ್‌ ಮಾರಾಜ್ರುಗಳು ಕುಡ್ದ್‌ನೀರ್‌ ಅಲ್ಲಾಡ್ದಂತ ಕಾರ್‌ನಾಗೆ ಕುಂತ್ಕಂಡು ವಟ್ಟೆ ಬೆಳಸ್ಕಂಡವ್ರಲ್ಲ ಅಂಗಲ್ಲ. ಆಗ ರಾಜ್‌ಮಾರಾಜ್ರುಗೋಳುನು ಉಳ್ಮೆ ಮಾಡೋರು, ಕಸರತ್‌ ಮಾಡೋರು..’ ಎಂಬ ವಾಕ್ಯ ಇದಕ್ಕೆ ಸಾಕ್ಷಿ.ಮಹಾಪ್ರಾಣಗಳ ಬಳಕೆ ಇಲ್ಲದ ಇಂತಹ ಸಾಲುಗಳು ಓದನ್ನು ಸರಾಗವಾಗಿಸುವಲ್ಲಿಯೂ ಯಶಸ್ವಿಯಾಗುತ್ತವೆ !

ಪುರುಷರ ಶೌರ್ಯ, ಹಮ್ಮು–ಬಿಮ್ಮುಗಳ ಬಗ್ಗೆ ಹೇಳುತ್ತಲೇ, ಮಹಿಳೆಯರ ಅಂತರಂಗದ ತಳಮಳಗಳನ್ನು ಸೀತೆಯ ಮೂಲಕ ಬಹಿರಂಗ ಪಡಿಸುತ್ತಾಳೆ ಸಣ್ತಿಮ್ಮಿ. ಬಿಲ್ಲು ಎತ್ತಿ ಬಾಣ ಹೂಡಿದವನಿಗೆ ತನ್ನ ಮಗಳನ್ನು ಕೊಡುತ್ತೇನೆ ಎಂದ ತನ್ನ ತಂದೆ ಜನಕ ಮಹಾರಾಜನ ಕುರಿತು ಸೀತೆ ಹೇಳೋದು ಕೇಳಿ.. ‘ಬದ್ಕೀನ ಬಯ್ಕೆ ಬವ್ಣೆ ಬಾರವರೊನ್ಗೆ ಮದ್ವೆ ಮಾಡ್ಸಾದ್ಬುಟ್ಟು ಬಿಲ್ಲು ಬಾಣದ ಬಾರವತ್ತೋನ್ಗೆ ಮದ್ವೆ ಮಾಡಿಸ್ತೀನಿ ಅಂತಾನೆ. ಕೇಳೋರ್ಯಾರು ಎಣ್‌ ಮಕ್ಳನಾ? ಎಂತೋನ್ಬೇಕು ನಿಂಗೆ ಅಂತವ?’.

ADVERTISEMENT

ಬಹುತೇಕ ಎಲ್ಲರಿಗೂ ಗೊತ್ತಿರುವ ರಾಮಾಯಣ ಕಥೆಯನ್ನು ಹಿಂಗೂ ಹೇಳಬಹುದಾ ಎನ್ನುವ ಪ್ರಶ್ನೆ ಈ ಅಂಕವನ್ನು ಓದಿದಾಗ ಎದುರಾಗದೇ ಇರದು. ರಾಮ ವನವಾಸ ಮುಗಿಸಿ ಬರುವವರೆಗೆ ಅವನ ಪಾದರಕ್ಷೆಗಳನ್ನು ಸಿಂಹಾಸನದ ಮೇಲಿಟ್ಟು ರಾಜ್ಯಭಾರ ಮಾಡುತ್ತೀನಿ ಎಂದು ಭರತ ಹೇಳಿದಾಗ, ‘ನೀನ್‌ ಬರಗಂಟ ನಿನ್ ಮೆಟ್ನ ಸಿಮ್ಮಾಸ್ನುದ್ಮ್ಯಾಕೆ ಇಡ್ತಿನೆ ವರ್ತು ನಾನ್‌ ಕುಂತ್ಕಳಲ್ಲ ಅಂದ ಬರ್ತ. ಈಗವ್ರೆ ನೋಡು ಬಿಟ್ರು ಸಾಕು ಗಬುಕ್ನೆ ಇಡ್ಕಳಕೆ, ಅಂಗೈ ಅಗ್ಲ ಜಮೀನ್ಗೆ ಕೋಲ್ಟು ಕಚೇರಿ ಅಂತವ ವಡ್ದಾಡಿ ಕಡ್ದಾಡೋ ಅಣ್‌ ತಮ್ಗೋಳು’ ಎನ್ನುತ್ತಾ ಈಗಿನ ರಾಜಕಾರಣಿಗಳಿಗೆ ಸಣ್ತಿಮ್ಮಿ ಚಾಟಿ ಬೀಸುತ್ತಾಳೆ.

‘ದೇವರು’ ಎಂದು ಪರಿಗಣಿಸುವ ರಾಮ–ಲಕ್ಷ್ಮಣರನ್ನು ‘ಸಾಮಾನ್ಯ’ರಂತೆಯೇ ಕಂಡು ಮಾತನಾಡುವ ಸಣ್ತಿಮ್ಮಿ, ಶೂರ್ಪನಖಿಯ ಮೂಗು ಕೊಯ್ದ ಸಹೋದರರ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಾಳೆ. ‘ಲೇ ತಲಲ್ಟೆ ಯಾರು ನಿಮ್ಮವ್ವ ಅಪ್ಪ, ಕೊಡು ನಿಮ್ಮನೆ ಅಡ್ರೆಸ್ಸು ಬುಟ್‌ ಬತ್ತಿನಿ ಅಂತ ಬುದ್ದಿಯೋಳಿ ಕಳ್ಸಾದ್ಬುಟ್ಟು ಅವಳ ಬೆನ್ನಿನ್ಮ್ಯಾಲೆ, ಮೂಗು, ಮಲೆ ಕುಯ್ದು ಕಾಗೆ ಮಾಡು ಅಂತ ಬರ್ದು ಲಚ್ಮಣನ್‌ ತಾವ್‌ ಕಳ್ಸಿದ್‌ ಸೈಯ್ಯಾ? ಇವ್ನು ಬರ್ದ ಅಂತ ಲಚ್ಮಣ ಮಾಡಿದ್ದು ಸೈಯ್ಯಾ’ ಎಂದು ಸಣ್ತಿಮ್ಮಿ ಪ್ರಶ್ನಿಸುತ್ತಾಳೆ.

ದೇಶದಲ್ಲಿ ರಾಮಮಂದಿರ ಪರ–ವಿರೋಧದ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಹುಟ್ಟಿದ ಈ ‘ಸಣ್ತಿಮ್ಮಿ ರಾಮಾಯ್ಣ’ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ತಿವಿಯುತ್ತಲೇ ಹೋಗುತ್ತದೆ.

ಅದೇ ರೀತಿ, ಗೋಹತ್ಯೆ ನಿಷೇಧದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬರೆದ ಅಂಕ ‘ದನಿನ್‌ ಚಮ್ಡುದ್‌ ಮೆಟ್‌ ಮೆಟ್ಕಂಡ್ರೆ ಗ್ವಾಮಾತೆ ತುಳ್ದಂಗಲ್ವಾ’. ಸಣ್ತಿಮ್ಮಿ ಮತ್ತು ಸರೋಜಕ್ಕ ಎಂಬ ಪಾತ್ರಗಳ ನಡುವೆ ನಡೆಯುವ ಸಂಭಾಷಣೆ ಗೋವನ್ನು ನಂಬಿ ಬದುಕುವವರ ಬವಣೆ, ರಾಜಕೀಯ ಪಕ್ಷಗಳ ಕೆಸರೆರಚಾಟವನ್ನು ಹೇಳುತ್ತಾ ಹೋಗುತ್ತದೆ.

ಗೋಹತ್ಯೆ ಮಾಡಬಾರದು ಎಂಬ ಪತ್ರಕ್ಕೆ ಸಹಿ ಹಾಕು ಎಂದು ಸಣ್ತಿಮ್ಮಿ ಬಳಿ ಬಂದ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಿಗೆ ಅವರು ಕೊಡುವ ಉತ್ತರ ಹೀಗಿದೆ.. ‘ಏಯ್‌ ತಲಲ್ಟೆ, ದನಾವ ನೆನ್ನ ಮನ್ನಿಂದಾವ ಕುಯ್‌ತಿರಾದು ? ದನಿನಿಂದ ಏನೇನ್‌ ಪ್ರಯೋಜ್ನ ಅಂತ ನಂಗೆ ಏಳಾಕ್‌ ಬತ್ತೀರಾ, ಯಾವತ್ತಾದ್ರುವೆ ಕೈಯಾಗ್‌ ಸೆಗ್ಣಿ ಎತ್ತಿದಿಯಾ? ಸೆಗ್ಣಿ ಮಕ್ರಿ ತಲೆ ಮ್ಯಾಲೊತ್ಕೋಂಡೋಗಿ ತಿಪ್ಗೆ ಆಕಿದಿಯಾ ? ದನ ಸತ್ರೆ ಎಳ್ದಾಕಕೆ ಅವರಟ್ಟಿಗೆ ಕರತರೆ, ಇನ್ಯಾವಗರ ವೋದ್ರೆ ಅಚಅಚ ಅಂತ ನಾಯೋಡಿಸ್‌ದಂಗೋಡಿಸ್ತರೆ. ನಿಮ್ಮಯ್ಯ ಒಬ್ನೆ ಎತ್‌ ದುಡ್ದಂಗೆ ದುಡಿತಾನೆ ವಲ್ದಾಗೆ, ನೀನ ಎಲ್ಡ್‌ ಅಕ್ಸ್ರ ಕಲ್ತ್‌ಕಂಡೆ ಅಂತವ ಮಣ್ಣಿಗೆ ಕೈ ಇಕ್ದೆ ಬಿಳೆ ಬಟ್ಟೆ ಉಟ್ಕಂಡು ತಿರ್ಗಾಡೋನು ಬೆಳ್ಗಾಗೆದ್ದು ದನಮುಟ್ಟಿ ಕಣ್ಗೊತ್ಗಳೊ ನಂಗೆ ಏಳಕ್‌ ಬತ್ತಿಯಾ ದನ ಗ್ವಾಮಾತೆ ಅಂತವ...’.

ಪ್ರೀತಿ–ಪ್ರೇಮದ ಬಗ್ಗೆ ‘ಲವ್‌ ಪುರಾಣ’ ಅಂಕದಲ್ಲಿ ಮಾತನಾಡಿರುವ ಸಣ್ತಿಮ್ಮಿ, ‘ಎಲ್ಲ ಮೈನೊಳ್ಗು ಒಂದೊಂದು ಇಸ್ಮಯ ಲೋಕ ಅದೆ. ಮಿಡಿಯೋದೊಂದೆ ಅದರ ಧರ್ಮ’ ಎನ್ನುತ್ತಾಳೆ. ‘ಪ್ರೀತಿ ಮೈಯಿ ಮನಸೆಂಬೊ ಲೋಕದ ನಡುವಿನ ಸೇತ್ವೆ ಇದ್ದಂಗೆ.. ಕಾಪಾಡೋದು/ಜ್ವಾಪಾನ ಮಾಡೋದೊಂದೆ ಅದರ ಧರ್ಮ. ಅದು ಅಲ್ಲೆಲ್ಲೊ ಇಲ್ಲ, ನಿಮ್ಮೊಳ್ಗೆ, ನಿಮ್ಮೆದೆ ವಳ್ಗೆ ಅದೆ ಕಂಡ್ಕಬೇಕಾ’ ಎಂದು ತಿಳಿಹೇಳುತ್ತಾಳೆ.

ಬೆಂಗಳೂರಿನಲ್ಲಿ 1996ರಲ್ಲಿ ಅಮಿತಾಬ್‌ ಬಚ್ಚನ್‌ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಸೌಂದರ್ಯ ಸ್ಪರ್ಧೆಯ ವಿವಾದದ ಕುರಿತೂ ಮಾತನಾಡಿರುವ ಸಣ್ತಿಮ್ಮಿ ‘ಆ ತಾಯಿ ಕೊಟ್ ಮೈನ ಅದೆಂಗೈತೊ ಅಂಗ್‌ ಇಟ್ಕಾಳದ್‌ ಬುಟ್ಟು...’ ಅಂಕದಲ್ಲಿ ವಿವರಣೆ ನೀಡಿದ್ದಾರೆ.

ದಲಿತರ ಮೇಲೆ ನಡೆಯುತ್ತಿರುವ ಶೋಷಣೆಯ ಕುರಿತು ‘ಬುದ್ದಾಯಣ’ ಹೇಳುತ್ತದೆ. ಬೇರೆ ಧರ್ಮದಲ್ಲಿ ತಮ್ಮನ್ನು ನೋಡುವ ರೀತಿಗೂ, ಬೌದ್ಧಧರ್ಮದಲ್ಲಿ ತಮ್ಮನ್ನು ನೋಡುತ್ತಿರುವ ಪರಿಗೂ ಇರುವ ವ್ಯತ್ಯಾಸದ ಬಗ್ಗೆ ಹೀಗೆ ಮಾತನಾಡುತ್ತಾಳೆ ಸಣ್ತಿಮ್ಮಿ...‘ದ್ಯಾನ ವಟ್ಗೆ ಮಾಡ್ಸ ಅಂಗೆ ಎಲ್ಲಾರ್ಗೂ ವಂದೆ ತರ್ದ ತಟ್ಟೆನಾಗೆ, ವಂದೆ ತವ ಉಣ್ಣಾಕಾಕೋರು. ನಾನುವೆ ಮಂಜ್‌ನಾತ್ನು, ಯಂಟ್ರೋಣ್‌ಸಾಮಿ ಅಂತೆಲ್ಲ ಸ್ಯಾನೆ ದೇವ್ರು ತಿರ್ಗಿದಿನಿ, ನಮ್ಕೆಲ್ಲ ದ್ಯಾವ್ರು ದೂರ, ಜತೇಲಿ ಬದ್ಕೊ ಜನ್ಗುಳು ದೂರ, ವಟ್ಗೆ ಕುಂತು ಉಣ್ಣಂಗಿಲ್ಲ, ಮುಟ್ಟಿ ಮಾತಾಡಂಗಿಲ್ಲ..’.

‘ಬುದ್ಧನ ಕತ್ಗುಳ್ನಾ, ಅಲ್ಲಿರೊ ಗುರುಗಳು ಬೋ ಚೆಂದಾಗೆ ಯೋಳ್ತರೆ. ಎಮ್ಮೆ ತೊಳ್ಯೊ ಹುಡಗ, ಕೊಲ್ಗಾರ, ಚೌರ ಮಾಡೋನು, ಏಲ್‌ ಬಾಚೋನು, ಕಂದನ್ನ ಕಳ್ಕಂಡು ಕಂಗಾಲಾದ ತಾಯಿ, ಮನೆಮಂದಿನೆಲ್ಲ ಕಳ್ಕಂಡು ತಲ್ಕೆಟ್ಟ ಹೆಂಗ್ಸು, ನಾಯಕಸಾನಿ, ರಾಜ್‌ಮಾರಾಜ್ಗೋಳು... ಯಾರ್ಯಾರಿಗೆ ಸಂದವ್ನೆ ಆ ವಯ್ಯ! ಇಂತೋರ್ಗಿಲ್ಲ ಅನ್ನಂಗಿಲ್ಲ...’

ಪ್ರತಿ ಸಾಲು ಓದುವಾಗಲೂ ‘ಹೌದು’ ಎನಿಸುವ, ಚಿಂತನೆಗೆ ಹಚ್ಚುವ ರೀತಿಯಲ್ಲಿ ‘ಸಣ್ತಿಮ್ಮಿ’ಗೆ ಜೀವ ತುಂಬಿದ್ದಾರೆ ದು. ಸರಸ್ವತಿ. ಒಂದೇ ಉಸಿರಿಗೆ ಓದಿ ಮುಗಿಸುವ ರೀತಿಯಲ್ಲಿರುವ ಈ ಪುಸ್ತಕವನ್ನು ಹೊನ್ನಾವರ ಕವಲಕ್ಕಿಯ ಕವಿ ಪ್ರಕಾಶನ ಹೊರತಂದಿದೆ. ಬೆಲೆ ₹80.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.