ADVERTISEMENT

ಮೊದಲ ಓದು | ಉರಿಯುಂಡ ಕರ್ಪೂರ ವಿಜಯಾ ದಬ್ಬೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 22:41 IST
Last Updated 16 ಆಗಸ್ಟ್ 2025, 22:41 IST
ನೆನಪಿನಂಗಳದಲ್ಲಿ ವಿಜಯಾ ದಬ್ಬೆ (ಸಂ: ಸಬಿಹಾ ಭೂಮಿಗೌಡ) 
ನೆನಪಿನಂಗಳದಲ್ಲಿ ವಿಜಯಾ ದಬ್ಬೆ (ಸಂ: ಸಬಿಹಾ ಭೂಮಿಗೌಡ)    

ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಕ್ಕೆ ತಾತ್ವಿಕ ಚೌಕಟ್ಟು ಹಾಕಿಕೊಟ್ಟವರಲ್ಲಿ ವಿಜಯಾ ದಬ್ಬೆ ಅಗ್ರಗಣ್ಯರು. ಸ್ತ್ರೀವಾದವು ಮೊಳಕೆಯೊಡುತ್ತಿದ್ದ ಕಾಲಘಟ್ಟದಲ್ಲಿ ಅವರು ಬಿತ್ತಿದ ಮೌಲ್ಯಗಳು ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ವಿಮರ್ಶೆಯ ಸ್ವರೂಪ ಹಾಗೂ ಸ್ತ್ರೀ ಸಂಸ್ಕೃತಿಯ ಪುನರ್ ರಚನೆಗೆ ಸ್ಪಷ್ಟ ಹಾದಿಯನ್ನು ಕಲ್ಪಿಸಿವೆ. ಸೌಮ್ಯ ಸ್ವಭಾವ, ಮೆಲುದನಿಯ ಮೂಲಕವೇ ಸ್ತ್ರೀವಾದವನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಿದ್ದ ಚಿಂತಕಿ ವಿಜಯಾ ದಬ್ಬೆ ಅವರ ಹೋರಾಟದ ಬದುಕನ್ನು ‘ನೆನಪಿನಂಗಳದಲ್ಲಿ ವಿಜಯಾ ದಬ್ಬೆ’ ಕೃತಿ ಬಿಚ್ಚಿಡುತ್ತದೆ. ವಿಜಯಾ ಅವರ ಚಿಂತನೆಗಳಿಂದ ಪ್ರಭಾವಿತರಾದ, ಅಲ್ಪಕಾಲದ ಒಡನಾಡಿ ಲೇಖಕಿ ಸಬಿಹಾ ಭೂಮಿಗೌಡ ಅವರು ಸಂಗ್ರಹಿಸಿರುವ ಈ ಕೃತಿಯಲ್ಲಿ ವಿಜಯಾ ಅವರ ಒಡನಾಡಿಗಳು, ಚಳವಳಿಯ ಸಂಗಾತಿಗಳು, ವಿದ್ಯಾರ್ಥಿಗಳು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

35 ಬರಹಗಳಿರುವ ಈ ಕೃತಿಯಲ್ಲಿ  ಕನ್ನಡ ಸಾಹಿತ್ಯ ಕಲಿಕೆಗೆ ಹೊಸ ದೃಷ್ಟಿ ನೀಡಿದ್ದ ವಿಜಯಾ ಅವರ ಚಿಂತನೆಗಳು ಹರಳುಗಟ್ಟಿವೆ. ಮುಖ್ಯವಾಗಿ ನಮ್ಮ ನೆಲಕ್ಕೆ ಹೊಂದುವಂಥ ಸ್ತ್ರೀವಾದ ತಾತ್ವಿಕತೆ ಕಟ್ಟುವಲ್ಲಿ ಅವರು ವಹಿಸಿದ್ದ ಎಚ್ಚರ, ವಾಸ್ತವ ದೃಷ್ಟಿಕೋನ ಹೇಗಿದ್ದವು ಎಂಬುದನ್ನು ಅವರ ನಿಕಟವರ್ತಿಗಳು  ನೆನಪಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಸಮತಾ ಅಧ್ಯಯನ ಕೇಂದ್ರ, ಶಕ್ತಿಧಾಮದ ಸ್ಥಾಪನೆಗೆ ಕಾರಣಕರ್ತರಾಗಿದ್ದ ವಿಜಯಾ ಅವರ ತಾತ್ವಿಕ ಚಿಂತನೆಗಳು ಕನ್ನಡ ಸಾಹಿತ್ಯ, ಮಹಿಳಾ ಚಳವಳಿ, ಕರ್ನಾಟಕ ಲೇಖಕಿಯರ ಸಂಘವಷ್ಟೇ ಅಲ್ಲದೇ, ಮುಂದಿನ ತಲೆಮಾರಿನ ಲೇಖಕಿಯರಿಗೆ ತೋರಿದ ಸ್ಪಷ್ಟ ಹಾದಿಯನ್ನೂ ಕೃತಿ ಮನಗಾಣಿಸುತ್ತದೆ. ಕರ್ಪೂರವು ತನ್ನನ್ನು ದಹಿಸಿಕೊಳ್ಳುತ್ತಲೇ ಸುತ್ತಲಿನ ಜಗತ್ತಿಗೆ ಪರಿಮಳ ಬೀರುತ್ತಾ ಕರಗುವ ಪರಿಯಂತೆ ವಿಜಯಾ ಅವರ ಬದುಕು– ಬರಹ ಇಲ್ಲಿ ಚಿತ್ರಣವಾಗಿದೆ. ನೋವು, ನಿರಾಸೆಯ ನಡುವೆಯೂ ಅದಮ್ಯ ಜೀವನ ಪ್ರೀತಿಯ ಪ್ರತೀಕವಾಗಿದ್ದ ವಿಜಯಾ ದಬ್ಬೆ ಇಹಲೋಕ ತೊರೆದಿದ್ದರೂ, ಅವರ ತಾತ್ವಿಕ ಚಿಂತನೆಗಳಿಗೆ ಸಾವಿಲ್ಲ ಎಂಬುದನ್ನು ಕೃತಿ ಪ್ರತಿಪಾದಿಸುತ್ತದೆ. 

ಕೃತಿ: ನೆನಪಿನಂಗಳದಲ್ಲಿ ವಿಜಯಾ ದಬ್ಬೆ 

ADVERTISEMENT

ಸಂ: ಸಬಿಹಾ ಭೂಮಿಗೌಡ

ಪ್ರ: ಸಮತಾ ಅಧ್ಯಯನ ಕೇಂದ್ರ (ರಿ), ಮೈಸೂರು

ಪು:282

ಬೆ: ₹300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.