ಒಂದು ಕಡೆ ಹರಕೆ ಹಾಗೂ ಧಾರ್ಮಿಕ ಆಚರಣೆ, ಮತ್ತೊಂದು ಕಡೆ ವಾಣಿಜ್ಯೀಕರಣ - ಇವುಗಳ ನಡುವೆ ಯಕ್ಷಗಾನ ಕಲೆಯ ಅಂದಗೆಡುತ್ತಿದೆ ಎಂಬ ಕೂಗುಗಳೆಲ್ಲವೂ ಕಳೆದೊಂದು ಶತಮಾನದಿಂದ ಕೇಳಿಬರುತ್ತಲೇ ಇದೆ, ಚರ್ಚೆಯೂ ಆಗುತ್ತಿದೆ, ಸಾಕಷ್ಟು ಬರಹಗಳೂ ಬಂದಿವೆ. ಒಂದು ಕಲೆಯು ಒಂದು ಪ್ರದೇಶಕ್ಕೆ, ಆವರಣಕ್ಕೆ ಸೀಮಿತವಾಗಿದ್ದಾಗ, ಕಲೆಯನ್ನು ಬೆಳೆಸಿದ ಸಮಾಜವೇ (ಅಂದರೆ ಪ್ರೇಕ್ಷಕರು) ಕಲೆಯ ಅಂದ-ಚೆಂದ, ಸರಿತಪ್ಪಿನ ಮಾನದಂಡಗಳನ್ನು ಸೃಷ್ಟಿಸಿರುತ್ತದೆ. ಆದರೆ ಕಲೆಯನ್ನು ಕಟ್ಟಿದ ಸಮಾಜವೇ ಪಲ್ಲಟಕ್ಕೊಳಗಾಗಿ, ಕಲೆಯಲ್ಲಿ ಬದಲಾವಣೆ ಕಂಡುಬಂದಾಗ, ಈ ಮಾನದಂಡಗಳೂ ಬದಲಾಗುತ್ತಿರುತ್ತವೆ ಎಂಬ ಮಾತಿನಿಂದಲೇ ಕೃತಿ ಪುರಪ್ಪೇಮನೆ ಅವರು ತಮ್ಮ ಪುಸ್ತಕದ ಬಗೆಗೆ ಸ್ಥೂಲ ನೋಟವನ್ನು ನೀಡಿದ್ದಾರೆ.
ಯಕ್ಷಗಾನದ ಜನಪ್ರಿಯ, ಹರಕೆ ಮತ್ತು ಪರಿಷ್ಕೃತ - ಹೀಗೆ ಮೂರು ರೂಪಗಳ ನಡುವಿನ ಸಂಘರ್ಷವು ಹೊಸ ಮಾನದಂಡಗಳನ್ನು ಸೃಷ್ಟಿಸಿಕೊಳ್ಳುತ್ತಿವೆ ಎಂಬ ಅನಿಸಿಕೆಯೊಂದಿಗೆ, ವೃತ್ತಿಪರ ಕಲಾವಿದರಿಗಿಂತ ಭಿನ್ನವಾಗಿ, ವೃತ್ತಿಪರ ಪ್ರೇಕ್ಷಕಿಯಾಗಿ ಯಕ್ಷಗಾನವನ್ನು ಕಂಡ ಬಗೆಯನ್ನು ಅವರು ವಿವರಿಸಿದ್ದಾರೆ. ಹಿರಿಯ ಕಲಾವಿದರನ್ನು ಮತ್ತು ಸಂಘಟಕರನ್ನು ಮಾತನಾಡಿಸಿ, ತಮ್ಮ ಅನುಭವವನ್ನೂ ಸೇರಿಸಿ, ಒಂದು ಕಲೆಯ ಬೆಳವಣಿಗೆಯನ್ನೂ, ಅದು ಸಾಗಿ ಬಂದ ಹಾದಿಯನ್ನೂ ಸರಿಯೋ ತಪ್ಪೋ ಎಂಬ ಜಿಜ್ಞಾಸೆಯಿಂದ ಮತ್ತು ಸಂಶೋಧನಾ ದೃಷ್ಟಿಯಿಂದ ವಿವರಿಸಿದ್ದಾರೆ.
ರಂಜನೆಯೆನ್ನುವುದು ಇರಬೇಕಾದರೆ ರಂಜನೆಯಿಲ್ಲದ್ದೂ ಇರಬೇಕಾಗುತ್ತದೆ ಎಂಬ ಅವರ ಮಾತು ಚಿಂತನೆಗೆ ಹಚ್ಚುತ್ತದೆ. ಹಿಂದಿನ ಮತ್ತು ಇಂದಿನ ಕಾಲದಲ್ಲಿ ವಿರಾಮ ಮತ್ತು ಕೆಲಸಕ್ಕಿರುವ ಅಂತರ, ಅದು ಈಗ ಬದಲಾದ ಬಗೆಯೊಂದಿಗೆ ಯಕ್ಷಗಾನದ ಸ್ಥಿತ್ಯಂತರ ಕುರಿತು ಬೆಳಕು ಚೆಲ್ಲಲಾಗಿದೆ. ಈ ಪುಸ್ತಕದಲ್ಲಿರುವ 23 ಲೇಖನಗಳಲ್ಲಿ, ಯಕ್ಷಗಾನವು ಜಾನಪದವೋ, ಶಾಸ್ತ್ರೀಯವೋ ಎಂಬ ಜಿಜ್ಞಾಸೆಯಿದೆ, ಪ್ರೇಕ್ಷಕಾನುಸಂಧಾನವಿದೆ, ಮಡಿವಂತಿಕೆಯ ರಂಗಸ್ಥಳದಲ್ಲಿ ಹೊಸ ಪ್ರಸಂಗಗಳ ಗ್ರಹಿಕೆಯಿದೆ, ರಾಮಾಂಜನೇಯ, ಭಾರ್ಗವ ವಿಜಯ ಮತ್ತು ಬೇಡರ ಕಣ್ಣಪ್ಪ- ಈ ಮೂರು ಪ್ರಸಂಗಗಳ ಪ್ರದರ್ಶನದ ಅವಲೋಕನವೂ ಇದೆ.
ವೃತ್ತಿಪರ ಪ್ರೇಕ್ಷಕಿಯ ಟಿಪ್ಪಣಿಗಳು
ಲೇ: ಕೃತಿ ಆರ್. ಪುರಪ್ಪೇಮನೆ
ಪ್ರ: ಅಹರ್ನಿಶಿ ಪ್ರಕಾಶನ
ಸಂ: 9449174662
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.